ರಾಮಕುಂಜ: ಶ್ರೀ ಮಹಾಗಣಪತಿ ಸೇವಾ ಸಮಿತಿ ರಾಮಕುಂಜ-ಕೊಯಿಲ ಇದರ ವತಿಯಿಂದ ರಾಮಕುಂಜ ಗಣೇಶನಗರ ಶ್ರೀ ಮಹಾಗಣಪತಿ ಓಂ ಕ್ರೀಡಾಂಗಣದ ದಿ.ಆರ್ವಾರ ಸುಬ್ಬಣ್ಣ ಶೆಟ್ಟಿ ನಿರ್ಮಿತ ಶ್ರೀ ಮಹಾಗಣಪತಿ ಕಟ್ಟೆಯಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.2 ಮತ್ತು 3ರಂದು ನಡೆಯಿತು.
ಸೆ.2ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, ಶ್ರೀ ದೇವರಿಗೆ ರಜತ ಕಡಗ, ದಾಡೆ ಸಮರ್ಪಣೆ ಮಾಡಲಾಯಿತು. ಬಳಿಕ ದ್ವಾದಶ ನಾಳಿಕೇರ ಗಣಯಾಗ, ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಸ್ಪರ್ಧೆಗಳು,ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ,ಬಳಿಕ ತುಳು ನಾಟಕ ನಡೆಯಿತು.
ಸೆ.3ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೊಕ್ಕಡ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ರೈಯವರು ಧಾರ್ಮಿಕ ಉಪನ್ಯಾಸ ನೀಡಿದರು. ಪ್ರಗತಿಪರ ಕೃಷಿಕ ಚಂದಪ್ಪ ಗೌಡ ಬದೆಂಜ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿ ಸಂಚಾಲಕ ಗುರುಪ್ರಸಾದ್ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭ ಉತ್ಸವದ ಅಂಗವಾಗಿ ನಡೆದ ವಿವಿಧ ಸರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಿತಿ ಕೋಶಾಧಿಕಾರಿ ಹರೀಶ್ ಬರಮೇಲು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಸಮಿತಿ ಅಧ್ಯಕ್ಷ ದಿವಾಕರ ರಾವ್ ಸ್ವಾಗತಿಸಿದರು. ಗೌರವಸಲಹೆಗಾರ ಪದ್ಮಪ್ಪ ಗೌಡ ವಂದಿಸಿದರು. ಸದಾಶಿವ ಶೆಟ್ಟಿ ಮಾರಂಗ ನಿರೂಪಿಸಿದರು. ಬಳಿಕ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ ನಡೆದು ಶ್ರೀ ದೇವರ ಶೋಭಾಯಾತ್ರೆ ಗಣೇಶನಗರ, ಶಾರದಾನಗರ, ಗೋಕುಲನಗರ ಮಾರ್ಗವಾಗಿ ಕೆಮ್ಮಾರದ ತನಕ ಸಾಗಿ ಕೆಮ್ಮಾರದಲ್ಲಿ ಕಟ್ಟೆಪೂಜೆ ಬಳಿಕ ಶ್ರೀ ಮಹಾಗಣಪತಿ ದೇವರ ಜಲಸ್ಥಂಭನ ನಡೆಯಿತು.