ಪುತ್ತೂರು: ನಗರಸಭಾ ವ್ಯಾಪ್ತಿಯ ಕಲ್ಲಿಮಾರ್ ಎಂಬಲ್ಲಿ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಬೈಕ್ ಸವಾರ ಗಾಯಗೊಂಡಿರುವ ಘಟನೆ ಸೆ.7ರಂದು ನಡೆದಿದೆ. ಪುತ್ತೂರಿನಿಂದ ಪರ್ಲಡ್ಕ ಕಡೆಗೆ ಹೋಗುತ್ತಿದ್ದ ಬೈಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೈಕ್ ಬಿದ್ದ ಸ್ಥಳದ ರಸ್ತೆ ಬದಿಯಲ್ಲಿ ಪೊದರುಗಳು ಆವೃತವಾಗಿದ್ದು ಅದು ಬೈಕ್ ಸವಾರನ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಬೈಕ್ ಚರಂಡಿಗೆ ಬಿದ್ದಿರುವುದಾಗಿ ತಿಳಿದು ಬಂದಿದೆ.
ಬೈಕ್ ಸವಾರ ಬೈಕ್ನಿಂದ ಕೆಳಕ್ಕೆ ಎಸೆಯಲ್ಪಟ್ಟಿದ್ದು ಬೈಕ್ ಮಾತ್ರ ಅದೃಷ್ಟವಶಾತ್ ಅವರ ಮೇಲೆ ಬೀಳದೆ ಗಿಡಗಂಟಿಗಳ ಮಧ್ಯೆ ಸಿಲುಕಿಕೊಂಡಿತ್ತು. ಬೈಕ್ ಸವಾರನ ಸೊಂಟಕ್ಕೆ ಗಾಯವಾಗಿದ್ದು ಅವರನ್ನು ಅಟೋ ರಿಕ್ಷಾ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಅಪಘಾತ ನಡೆದ ಸ್ಥಳ ಅಪಾಯಕಾರಿಯಾಗಿದ್ದು ಇನ್ನಷ್ಟು ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.