ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
- ಹೆತ್ತವರನ್ನು ಗೌರವದಿಂದ ಕಾಣುವುದು ಮೇರಿ ಮಾತೆಗೆ ಸಲ್ಲುವ ಗೌರವ-ವಂ|ಲ್ಯಾರಿ
ಪುತ್ತೂರು: ಮಾನವನಾಗಿ ಹುಟ್ಟಿದ ಮೇಲೆ ಹೆತ್ತವರಿಗೆ ಪ್ರೀತ್ಯಾದರ ಹಾಗೂ ಗೌರವ ನೀಡಿದಾಗ ಸಮಾಜದಲ್ಲೂ ಗೌರವ ಸಿಗುತ್ತದೆ. ಆ ನಿಟ್ಟಿನಲ್ಲಿ ಪ್ರಭು ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಹೆತ್ತವರನ್ನು ಗೌರವ ಭಾವನೆಯಿಂದ ಕಾಣುವುದು ಮೇರಿ ಮಾತೆಗೆ ಸಲ್ಲುವ ಗೌರವವಾಗಿದೆ ಎಂದು ಮಾಯಿದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋರವರು ಹೇಳಿದರು.
ಅವರು ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಸೆ.೮ರಂದು ಆಚರಿಸಲ್ಪಡುವ ಪ್ರಭು ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ `ಮೊಂತಿ ಫೆಸ್ತ್-ಕುಟುಂಬದ ಹಬ್ಬ’ ಆಚರಣೆಯ ಸಂದರ್ಭ ಮಾದೆ ದೇವುಸ್ ಚರ್ಚ್ನಲ್ಲಿ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಿದರು. ತಾಯಿ ಎನ್ನುವ ಎರಡಕ್ಷರದಲ್ಲಿ ಬಹಳಷ್ಟು ತ್ಯಾಗದ ಚಿಂತನೆಯಿದೆ. ತಾಯಿ ಎನಿಸಿಕೊಂಡವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಯಿಂದ ಸಲಹುತ್ತಾರೆ ಎನ್ನುವುದು ನಮ್ಮ ನಮ್ಮ ತಾಯಿಯ ಮುಖ ನೋಡಿದಾಗ ತಿಳಿಯುತ್ತದೆ. ನಮ್ಮ ತಾಯಿಯ ಸ್ಥಾನದಲ್ಲಿ ಪ್ರಭು ಯೇಸುಕ್ರಿಸ್ತರ ತಾಯಿ ಮರಿಯಮ್ಮರವರನ್ನು ಕಾಣುತ್ತೇವೆ. ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯು ಜೀವನದಲ್ಲಿ ಬಂದಂತಹ ಯಾವುದೇ ಕಷ್ಟಗಳಿಗೆ ಅಂಜುವ ಬದಲು ಹೂವಿನಂತೆ ಅರಳಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಆದ್ದರಿಂದಲೇ ಮೇರಿ ಮಾತೆಯು ನಮ್ಮೆಲ್ಲರ ತಾಯಿ ಎಂದು ಕರೆಸಿಕೊಂಡದ್ದಾಗಿದೆ. ಮೇರಿ ಮಾತೆಯಲ್ಲಿರುವ ಧನಾತ್ಮಕ ಚಿಂತನೆಯು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದ ಅವರು ಮೇರಿ ಮಾತೆಯನ್ನು ಕುಟುಂಬದ ಮಾತೆ ಎಂದು ಪೂಜಿಸಲಾಗುತ್ತಿದ್ದು ಈ ಹಬ್ಬ ಕುಟುಂಬದ ಸಾಮರಸ್ಯವನ್ನು ಹೇಳುತ್ತದೆ. ಮೇರಿ ಮಾತೆಯು ಸಾಧಾರಣ ಸ್ತ್ರೀ ಆಗಿರದೆ ದೇವರ ಅಪ್ಪಣೆಯಂತೆ ಯೇಸು ಕ್ರಿಸ್ತನನ್ನು ತನ್ನ ಪುತ್ರನಾಗಿ ಜನಿಸಲು ಸಂಪೂರ್ಣ ಒಪ್ಪಿಗೆ ಸೂಚಿಸಿ ದೇವರ ಆಜ್ಞೆಯನ್ನು ಪಾಲಿಸಿದ ಮೇರಿ ಮಾತೆಯು ಕ್ರೈಸ್ತ ಬಾಂಧವರಿಗೆ ಆದರ್ಶಪ್ರಾಯರಾಗಿದ್ದಾರೆ. ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಹೊಸ ಅಕ್ಕಿ ಊಟವನ್ನು ಸೇವನೆ ಮಾಡುವ ಮೂಲಕ ಕುಟುಂಬವು ಸಮೃದ್ಧಿಗೊಳ್ಳುವುದು ಎಂದ ಅವರು ಯಾರು ಹೆತ್ತವರನ್ನು ಪೂಜಿಸುತ್ತಾರೋ, ಅವರನ್ನು ಗೌರವದಿಂದ ಕಾಣುತ್ತಾರೋ, ಅವರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಾರೋ ಆವಾಗ ಮೇರಿ ಮಾತೆಗೆ ನಿಜಕ್ಕೂ ನಮನ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಪ್ರಧಾನ ಧರ್ಮಗುರು ವಂ|ಅಲ್ಫ್ರೆಡ್ ಜಾನ್ ಪಿಂಟೊರವರು ದಿವ್ಯ ಬಲಿಪೂಜೆಯ ನೇತೃತ್ವ ವಹಿಸಿದ್ದು, ಭತ್ತದ ತೆನೆಗಳನ್ನು ಶುದ್ಧೀಕರಿಸಿ, ಆಶೀರ್ವಚಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಚರ್ಚ್ ಸ್ಯಾಕ್ರಿಸ್ಟಿಯನ್ ಬ್ಯಾಪ್ಟಿಸ್ಟ್ ತಾವ್ರೊ, ಗಾಯನ ಮಂಡಳಿ ಸದಸ್ಯರು, ವೇದಿ ಸೇವಕರು, ವಿವಿಧ ವಾಳೆಯ ಗುರಿಕಾರರು ಸಹಕರಿಸಿದರು.
ಮರೀಲ್ ಚರ್ಚ್:
ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ನಲ್ಲಿ ಬೆದ್ರಾಳ-ಕಾಡುಮನೆ ಪರಿಸರದ ಕ್ರೈಸ್ತ ಬಾಂಧವರು ಹೊಸ ಧಾನ್ಯಗಳ, ಭತ್ತದ ತೆನೆಯ ಜೊತೆಗೆ ಭಕ್ತಿ ಮೆರವಣಿಗೆ ಮೂಲಕ ಚರ್ಚ್ಗೆ ಆಗಮಿಸಿದರು. ಬಳಿಕ ಚರ್ಚ್ನ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್ರವರು ಭಕ್ತಾಧಿಗಳು ತಂದ ಭತ್ತದ ತೆನೆಗಳಿಗೆ ಪವಿತ್ರ ಜಲ ಸಂಪ್ರೋಕ್ಷಿಸಿ ಶುದ್ಧೀಕರಿಸಿ ಆಶೀರ್ವಚಿಸಿದರು. ಸಂತ ಫಿಲೋಮಿನಾ ಕಾಲೇಜ್ನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ವಂ|ರಿತೇಶ್ ರೊಡ್ರಿಗಸ್ ಹಬ್ಬದ ಸಂದೇಶ ನೀಡಿದರು. ಭಕ್ತಾದಿಗಳಿಂದ ಒಟ್ಟುಗೂಡಿದ ಕಾಣಿಕೆಯನ್ನು ವರ್ಷಂಪ್ರತಿಯಂತೆ ಏಲಂ ಮಾಡಿ ಅದರಲ್ಲಿ ಬಂದ ಹಣವನ್ನು ಸಂತ ವಿನ್ಸೆಂಟ್ ಪಾವ್ಲ್ ಸಭಾಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಮರೀಲ್ ಚರ್ಚ್ ವ್ಯಾಪ್ತಿಯ ೨೩ ಮಂದಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಪ್ರೊ.ಎಡ್ವಿನ್ ಡಿ’ಸೋಜ, ಕಾರ್ಯದರ್ಶಿ ಲಿಗೋರಿ ಸೆರಾವೋ, ಚರ್ಚ್ ಪಾಲನಾ ಸಮಿತಿಯ ಸದಸ್ಯರು, ವಾಳೆ ಗುರಿಕಾರರು ಸಹಕರಿಸಿದರು.
ಬನ್ನೂರು ಚರ್ಚ್:
ಬನ್ನೂರು ಸಂತ ಅಂತೋನಿ ಚರ್ಚ್ನಲ್ಲಿ ಚರ್ಚ್ನ ಪ್ರವೇಶ ದ್ವಾರದಲ್ಲಿನ ಮರಿಯಮ್ಮರವರ ಗ್ರೊಟ್ಟೊ ಬಳಿಯಲ್ಲಿ ಭತ್ತದ ತೆನೆಗಳಿಗೆ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ ಪವಿತ್ರ ಜಲ ಸಂಪ್ರೋಕ್ಷಿಸಿ ಆಶೀರ್ವಚಿಸಿ, ಹಬ್ಬದ ಸಂದೇಶ ನೀಡಿದರು. ಬಳಿಕ ಭತ್ತದ ತೆನೆಗಳ ಜೊತೆಗೆ ಭಕ್ತಿ ಮೆರವಣಿಗೆಯ ಮೂಲಕ ಪ್ರವೇಶ ದ್ವಾರದಿಂದ ಕ್ರೈಸ್ತ ಬಾಂಧವರು ಚರ್ಚ್ನ ಒಳ ಪ್ರವೇಶಿಸಿದರು. ವಂ|ಡೊನಾಲ್ಡ್ ಡಿ’ಸೋಜ ಸಹ ಬಲಿಪೂಜೆಯಲ್ಲಿ ಭಕ್ತಾಧಿಗಳೊಂದಿಗೆ ಪಾಲ್ಗೊಂಡರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಇನಾಸ್ ಗೊನ್ಸಾಲ್ವಿಸ್, ಕಾರ್ಯದರ್ಶಿ ವಿಲ್ಮಾ ಗೊನ್ಸಾಲ್ವಿಸ್, ಗಾಯನ ಮಂಡಳಿ, ಪಾಲನಾ ಸಮಿತಿ ಸದಸ್ಯರು, ವಾಳೆ ಗುರಿಕಾರರು ಸಹಕರಿಸಿದರು.
ಕಬ್ಬು ವಿತರಣೆ:
ಜೀವನದುದ್ದಕ್ಕೂ ಬಾಳಿನಲ್ಲಿ ಸಿಹಿಯು ಮನೆ ಮಾಡಲಿ ಎಂದು ಸಿಹಿಯ ಪ್ರತೀಕವಾದಂತಿರುವ ಕಬ್ಬನ್ನು ಹಬ್ಬದ ಸಂದರ್ಭದಲ್ಲಿ ಹೂವು ತಂದ ಮಕ್ಕಳಿಗೆ ಆಯಾ ಚರ್ಚ್ನಲ್ಲಿ ವಿತರಿಸುವುದು ಸಂಪ್ರದಾಯವಾಗಿದೆ. ಅದರಂತೆ ಮಾದೆ ದೇವುಸ್ ಚರ್ಚ್ನಲ್ಲಿ ಕಬ್ಬುಗಳ ಪ್ರಾಯೋಜಕತ್ವ ವಹಿಸಿದ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಸಂಘ ಹಾಗೂ ಮರೀಲು ಸೇಕ್ರೆಡ್ ಹಾರ್ಟ್ ಚರ್ಚ್, ಬನ್ನೂರಿನ ಸಂತ ಅಂತೋನಿ ಚರ್ಚ್ನಲ್ಲಿ ಹೂವು ತಂದ ಮಕ್ಕಳಿಗೆ ಕಬ್ಬನ್ನು ವಿತರಿಸಲಾಯಿತು.
ಸಿಎಲ್ಸಿ ಸಂಘಟನೆಯಿಂದ ಮಹತ್ತರ ಹೆಜ್ಜೆ…
ಹಬ್ಬದ ಸಲುವಾಗಿ ಮಾಯಿದೆ ದೇವುಸ್ ಚರ್ಚ್ನ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್ಸಿ)ಯು ಮಹತ್ತರ ಹೆಜ್ಜೆಯನ್ನಿಟ್ಟಿದೆ. ಚರ್ಚ್ ವ್ಯಾಪ್ತಿಯಲ್ಲಿನ ೪೬ ಫಲಾನುಭವಿ ಕುಟುಂಬವನ್ನು ಗುರುತಿಸಿ ಅವರಿಗೆ ಹಬ್ಬಕ್ಕೆ ಬೇಕಾದ ಸಿರಿಧಾನ್ಯಗಳು ಮತ್ತು ವಿವಿಧ ತರಕಾರಿ ವಸ್ತುಗಳನ್ನು ವಿತರಿಸಿ ಹಬ್ಬಕ್ಕೆ ವಿಶೇಷ ಮೆರುಗನ್ನು ತಂದಿತ್ತರು. ಮಾತ್ರವಲ್ಲದೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಪುತ್ತೂರು ವಾಳೆಯಲ್ಲಿನ ಎಲಿಜ್ ಡಿ’ಸೋಜರವರ ಆರೋಗ್ಯದ ವೆಚ್ಚವಾಗಿ ರೂ.೧೦ ಸಾವಿರ ಮೊತ್ತವನ್ನು ಈ ಸಂದರ್ಭದಲ್ಲಿ ವಿತರಿಸಲಾಗಿಯಿತು. ಸಿಎಲ್ಸಿ ಸಂಘದ ಸದಸ್ಯರೇ ಹಣವನ್ನು ಹೊಂದಿಸಿಕೊಂಡು ಈ ಭಾವೈಕ್ಯತೆಯ ಕಾರ್ಯವನ್ನು ಮೆರೆದಿದ್ದಾರೆ. ಸಂಘದ ನಿರ್ದೇಶಕ ವಂ|ಆಲ್ಪ್ರೆಡ್ ಜಾನ್ ಪಿಂಟೋ, ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಸಂತ ವಿನ್ಸೆಂಟ್ ಪಾವ್ಲ್ ಸಭಾದ ಲಾರೆನ್ಸ್ ಲೋಬೋ, ಸಿಎಲ್ಸಿ ಅಧ್ಯಕ್ಷ ಮಾರ್ಟಿನ್ ಡಿ’ಸೋಜ ಸಹಿತ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಮೊಂತಿ ಫೆಸ್ತ್-ಕುಟುಂಬದ ಹಬ್ಬ ಆಚರಣೆಯು ಒಂಭತ್ತು ದಿವಸದ ಹಿಂದೆಯೇ ಆರಂಭಗೊಂಡಿದ್ದು, ಕರಾವಳಿಯ ಎಲ್ಲಾ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಯ ಜೊತೆಗೆ ಪುಟ್ಟ ಮಕ್ಕಳು ಮೇರಿ ಮಾತೆಗೆ ಹೂಗಳನ್ನು ಅರ್ಪಿಸುವ ಕಾರ್ಯ ಪ್ರಾರಂಭಗೊಂಡಿತ್ತು. ಆಯಾ ಚರ್ಚ್ಗಳಲ್ಲಿ ಪುಟ್ಟ ಮಕ್ಕಳು ಪ್ರಕೃತಿಯಲ್ಲಿ ದೊರೆಯುವ ಚೆಂದದ ಹೂಗಳನ್ನು ಹೆಕ್ಕಿ, ಆರಿಸಿ ಬುಟ್ಟಿಯಲ್ಲಿ ಸೊಗಸಾಗಿ ಜೋಡಿಸಿ ಚರ್ಚ್ಗೆ ಬಂದು ತಾವು ತಂದ ಹೂಗಳನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ಮೇರಿ ಮಾತೆಗೆ ಅರ್ಪಿಸುವುದು ಸಂಪ್ರದಾಯವಾಗಿದೆ. ಅದರಂತೆ ಮಕ್ಕಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೇರಿ ಮಾತೆಗೆ ಹಬ್ಬದ ದಿನದಂದು ಹೂವುಗಳನ್ನು ಅರ್ಪಿಸಲಾಯಿತು.
ಹಬ್ಬದ ಇನ್ನೊಂದು ವಿಶೇಷವೆಂದರೆ ‘ಹೊಸ ಅಕ್ಕಿ ಊಟ’ ನವ ದಂಪತಿಗಳಿಗೆ, ಒಂದು ವರ್ಷ ತುಂಬುವ ಮಗುವಿಗೆ ಈ ಹಬ್ಬ ಇನ್ನೂ ವಿಶೇಷವಾಗಿದೆ. ಪೂರ್ವಿಕರಿಂದಲೇ ಅಚರಿಸುವ ಈ ಹಬ್ಬವು ತನ್ನದೇ ವಿಶಿಷ್ಟ ಸಂಸ್ಕೃತಿಯಿಂದ, ಸಂಪ್ರದಾಯವನ್ನು ಎತ್ತಿ ಹಿಡಿಯಲಾಗುತ್ತದೆ. ಚರ್ಚುಗಳಲ್ಲಿ ಭಕ್ತಿಪೂರ್ವಕವಾಗಿ ತೆನೆಯನ್ನು ಮೆರವಣಿಗೆಯ ಮೂಲಕ ದೇವಾಲಯದ ಒಳಗೆ ತಂದು ಧರ್ಮಗುರುಗಳಿಂದ ಆಶೀರ್ವಾದದ ಬಳಿಕ ಮನೆಗೆ ತಂದು ಮೇಣದ ಭತ್ತಿಯನ್ನು ಉರಿಸಿ ಆ ಭತ್ತದ ತೆನೆಯನ್ನು ಬೆಸಸಂಖ್ಯೆ ಆಧಾರದಲ್ಲಿ ಪುಡಿಮಾಡಿ ಹಾಲು ಅಥವಾ ಪಾಯಸದಲ್ಲಿ ಸೇರಿಸಿ ಮನೆಯ ಎಲ್ಲಾ ಸದಸ್ಯರು ಸೇವಿಸುತ್ತಾರೆ. ಅಂದಿನ ಹಬ್ಬದ ಎಲ್ಲಾ ಅಡುಗೆ ರುಚಿಗಳು ಸಸ್ಯಾಹಾರವಾಗಿದ್ದು ಸಾಂಬಾರು ಅಥವಾ ಪದಾರ್ಥಗಳು ಬೆಸ ಸಂಖ್ಯೆ ಆಧಾರದಲ್ಲಿ ಇರುತ್ತದೆ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುತ್ತದೆ. ಹೀಗೆ ಕೌಟುಂಬಿಕ ಸಾಮರಸ್ಯವನ್ನು ಈ ಹಬ್ಬದ ಮೂಲಕ ಸಾರಲಾಗುತ್ತದೆ.
1960 ರ 1961. 1962 ಕೊರಳ ಹೊಸ ಧಾನ್ಯ ಹೊಸ ಹಬ್ಬ ಯಾವ.ದಿನ ತಿಳಿಸುವಿರಾ