HomePage_Banner
HomePage_Banner
HomePage_Banner
HomePage_Banner

ಕಿಲ್ಲೆ ಮೈದಾನದ 62ನೇ ವರ್ಷದ ಮಹಾ ಗಣೇಶೋತ್ಸವ: ವೈಭವದ ಶೋಭಾಯಾತ್ರೆಯೊಂದಿಗೆ ಸಂಪನ್ನ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಜೀತ್ ಸ್ಟುಡಿಯೊ

  • 7 ದಿನವೂ 5 ಬಗೆಯ ನೈವೇಧ್ಯ
  • 7 ದಿವಸದಲ್ಲಿ 1ಲಕ್ಷ ಅಪ್ಪ ಸೇವೆ
  • 50 ಸಾವಿರ ಮಂದಿಗೆ ಅನ್ನಪ್ರಸಾದ ವಿತರಣೆ
  • 50 ಕ್ಕೂ ಮಿಕ್ಕಿ ತುಲಾಭಾರ ಸೇವೆ
  • 7ನೇ ದಿನ ವಿಶೇಷ ಹಾಲು ಸೇಮಿಗೆ ಪಾಯಸ

ಪುತ್ತೂರು: ಶ್ರೀ ದೇವತಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಸೆ.2ರಿಂದ 7ದಿವಸಗಳಿಂದ ಪೂಜೆ ಸ್ವೀಕರಿಸಿದ ಮಹಾಗಣಪತಿಯ ಶೋಭಾಯಾತ್ರೆ ಸೆ.8ರಂದು ಸಂಜೆ ವೈಭವದಿಂದ ನಡೆಯಿತು. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ 62ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದಲ್ಲಿ ನಿತ್ಯ ಸಾವಿರಾರು ಮಂದಿಯಿಂದ ಶ್ರೀ ಮಹಾಗಣಪನಿಗೆ ವಿವಿಧ ಸೇವೆಗಳನ್ನು ನೀಡುತ್ತಿದ್ದರು.

ಸೆ.8ರಂದು ಬೆಳಿಗ್ಗೆ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ಭರತನಾಟ್ಯ ಮತ್ತು ‘ಶಬರಿಮಲೆ ಸ್ವಾಮಿ ಅಯ್ಯಪ್ಪ’ ನೃತ್ಯ ರೂಪಕ ಪ್ರದರ್ಶನ ಗೊಂಡಿತ್ತು. ಮಧ್ಯಾಹ್ನ ವಿಶೇಷ ಉತ್ಸವ ಬಲಿ, ಮಹಾಪೂಜೆಯ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಡಿಂಡಿಮ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಣ್ಮನ ಸೆಳೆಯುವ ಸುಂದರ ರಥದಲ್ಲಿ ವಿರಾಜಮಾನರಾಗಿ ಕುಳಿತ ಶ್ರೀ ಗಣೇಶನ ವಿಗ್ರಹದ ಶೋಭಾಯಾತ್ರೆ ಆರಂಭದ ಮುನ್ನ ಬೆಳಿಗ್ಗೆ ಅರ್ಚಕ ವೇ.ಮೂ. ಸುಬ್ರಹ್ಮಣ್ಯ ಹೊಳ್ಳ ಅವರ ನೇತೃತ್ವದಲ್ಲಿ 108 ಕಾಯಿ ಗಣಪತಿ ಹವನ ನಡೆಯಿತು.

ಮಧ್ಯಾಹ್ನ ಗಣಪತಿ ಹವನದ ಪೂರ್ಣಾಹುತಿ ಬಳಿಕ ಪಲ್ಲಪೂಜೆ ನಡೆಯಿತು. ತುಳಸಿ ಕ್ಯಾಂಟರಿಂಗ್‌ನ ಹರೀಶ್ ಭಟ್ ಪಾಕತಜ್ಞರಾಗಿದ್ದರು. ಇದೇ ಸಂದರ್ಭದಲ್ಲಿ ಚೆಂಡೆ, ವಾದ್ಯ, ಶ್ಲೋಕದಲ್ಲಿ ಉತ್ಸವ ಬಲಿ ನಡೆಯಿತು. ರಾತ್ರಿಯೂ ಉತ್ಸವ ಬಲಿಯ ನಂತರ ದೈವ ದೇವರ ಭೇಟಿ, ರಕ್ತೇಶ್ವರಿ -ಪಂಜುರ್ಲಿ ದೈವದ ಭೂತಕೋಲ, ಅಕರ್ಷಕ ಸುಡುಮದ್ದು ಪ್ರದರ್ಶನದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ನೆಲ್ಲಿಕಟ್ಟೆ ಯುವಕ ವೃಂದದ ವತಿಯಿಂದ ಮೆರವಣಿಗೆ ಮೂಲಕ ತಂದ ಹಾರವನ್ನು ಮಹಾಗಣಪತಿಗೆ ಅರ್ಪಣೆಯ ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಗಣೇಶನ ವಿಗ್ರಹದ ವಿಸರ್ಜನ ಶೋಭಾಯಾತ್ರೆಯು ಕಿಲ್ಲೆ ಮೈದಾನದಿಂದ ಹೊರಟು ಕೋರ್ಟ್ ರಸ್ತೆ, ಮುಖ್ಯ ರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಕಚೇರಿ, ರಾಧಾಕೃಷ್ಣ ಮಂದಿರ, ಬೊಳುವಾರು ಮೂಲಕ ಸಂಚರಿಸಿ ಮಂಜಲ್ಪಡ್ಪು ಕೆರೆಯಲ್ಲಿ ಮಹಾಗಣೇಶ ವಿಗ್ರಹದ ವಿಜರ್ಸನೆ ನಡೆಯಿತು. ಶೋಭಾಯಾತ್ರೆಯುದ್ಧಕ್ಕೂ ಪುರೋಹಿತರಿಂದ ವೇದ ಘೋಷ ಮಂತ್ರಗಳು, ಸಂಗೀತ ನೃತ್ಯ, ಕೀಲು ಕುದುರೆ, ಕೇರಳದ ಚೆಂಡೆ ನೃತ್ಯ, ಹುಲಿ ವೇಷಧಾರಿಗಳ ನೃತ್ಯ, ತಾಲೀಮು ಪ್ರದರ್ಶನಗಳು, ಅಲ್ಲಲ್ಲಿ ಭಾರೀ ಸಿಡಿಮದ್ದು ಪ್ರದರ್ಶನ, ಮಂಗಳವಾದ್ಯ ಘೋಷ ವಿಶೇಷ ಆಕರ್ಷಣೆ ನೀಡಿತ್ತು.

ಉತ್ಸವ ಬಲಿ: ಶ್ರೀ ಮಹಾಗಣಪತಿಯ ಉತ್ಸವ ಮೂರ್ತಿಯ ಬಲಿ ಉತ್ಸವ ಮಧ್ಯಾಹ್ನ ಮತ್ತು ರಾತ್ರಿ ನಡೆಯಿತು. ಕಲ್ಲಡ್ಕದ ಅನಂತ ಬಲ್ಲಕ್ಕರಾಯ ಅವರು ಬ್ರಹ್ಮವಾಹಕರಾಗಿ ಉತ್ಸವ ನೆರವೇರಿಸಿದರು. ಚೆಂಡೆ, ಸರ್ವವಾದ್ಯ, ಶಂಖ, ಭಜನೆಯಲ್ಲಿ ಬಲಿ ಉತ್ಸವ ನಡೆಯಿತು.

7 ದಿನವೂ 5 ಬಗೆಯ ನೈವೇಧ್ಯ: ಶ್ರೀ ಮಹಾಗಣಪತಿಗೆ ನಿತ್ಯ ೫ ಬಗೆಯ ನೈವೇಧ್ಯ ಮಾಡಲಾಗುತ್ತಿದ್ದು, ೭ ದಿನಗಳು ಬೇರೆ ಬೇರೆ ಬಗೆಯ ನೈವೇಧ್ಯ ನಡೆಯುತ್ತಿದ್ದು, ಸೆ.೮ರಂದು ಶೋಭಾಯಾತ್ರೆಯ ದಿನ ಕಡ್ಲೆ, ಕೇನೆ, ವಿಶೇಷವಾಗಿ ಹಾಲು ಸೇಮಿಗೆ ಪಾಯಸ ಮಾಡಲಾಯಿತು.

7 ದಿವಸದಲ್ಲಿ 1ಲಕ್ಷ ಅಪ್ಪ ಸೇವೆ: ಗಣಪತಿಗೆ ಪ್ರಿಯವಾದ ಅಪ್ಪ ಸೇವೆಯನ್ನು ಗಣಪತಿಯ ದರುಶನ ಪಡೆದ ಭಕ್ತರು ಮಾಡುತ್ತಿದ್ದರು. ಪ್ರತಿ ದಿನದೇವತಾ ಸಮಿತಿ ಕಾರ್ಯಕರ್ತರು ಅಪ್ಪ ಪ್ಯಾಕೇಟ್ ಮಾಡುತ್ತಿದ್ದರು. ಒಟ್ಟು 7 ದಿನಗಳಲ್ಲಿ 1ಲಕ್ಷ ಅಪ್ಪ ಸೇವೆ ಆಗಿದೆ ಎಂದು ದೇವತಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟಿ ಮಾಹಿತಿ ನೀಡಿದ್ದಾರೆ.

50 ಸಾವಿರ ಅನ್ನಪ್ರಸಾದ ವಿತರಣೆ : 7 ದಿವಸಗಳಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯುತ್ತಿದ್ದು, ಅನ್ನಪ್ರಸಾದ ವಿತರಣೆ ಕಾರ್ಯವು ನಿತ್ಯ ರಾತ್ರಿಯ ತನಕವೂ ನಡೆಯುತ್ತಿತ್ತು. ಉದ್ಯೋಗಸ್ಥರು, ದೂರದ ಊರಿನಲ್ಲಿರುವವರು ಮಧ್ಯಾಹ್ನ ವೇಳೆ ಅನ್ನಪ್ರಸಾದ ಸ್ವೀಕರಿಸಲು ಬರಲು ಕಷ್ಟಸಾಧ್ಯ ಎಂದಾಗ ರಾತ್ರಿಯೂ ಅನ್ನಪ್ರಸಾದ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ ಭಕ್ತರು ರಾತ್ರಿಯೂ ಕೂಡಾ ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸುತ್ತಿದ್ದು, ಒಟ್ಟು 7 ದಿವಸಗಳಲ್ಲಿ ಸುಮಾರು ೫೦ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ.

7ನೇ ದಿನ ವಿಶೇಷ ಹಾಲು ಸೇಮಿಗೆ ಪಾಯಸ: ಶ್ರೀ ಮಹಾಗಣಪನಿಗೆ ನಿತ್ಯ ಬಗೆ ಬಗೆಯ ನೈವೇದ್ಯದ ಜೊತೆಗೆ ೭ನೇ ದಿನ ವಿಶೇಷ ಹಾಲು ಸೇಮಿಗೆ ಪಾಯಸದಲ್ಲಿ ನೈವೇದ್ಯ ಸಮರ್ಪಣೆ ಮಾಡಲಾಯಿತು. ಭಕ್ತರಿಗೂ ಮಧ್ಯಾಹ್ನ ಅನ್ನಪ್ರಸಾದ ವಿತರಣೆ ವೇಳೆ ಹಾಲು ಸೇಮಿಗೆ ಪಾಯಸ ವಿತರಿಸಲಾಯಿತು. ಹಾಲು ಸೇಮಿಗೆ ಪಾಯಸ ಪ್ರಸಾದವನ್ನು ಭಕ್ತರು ಬಾಟಲಿಗಳಲ್ಲಿ ತುಂಬಿಸಿ ಮನೆಗೆ ಕೊಂಡೊಯ್ಯುತ್ತಿರುವುದು ಕಂಡು ಬಂತು.

50ಕ್ಕೂ ಮಿಕ್ಕಿ ತುಲಾಭಾರ ಸೇವೆ: ಸೆ.2ರಿಂದ ಆರಂಭಗೊಂಡ ಮಹಾಗಣಪತಿಗೆ 7 ದಿನಗಳಲ್ಲೂ ಬೆಳಿಗ್ಗೆ ಭಕ್ತರಿಂದ ತುಲಾಭಾರ ಸೇವೆ ನಡೆದಿದೆ. ಒಟ್ಟು 7 ದಿನಗಳಲ್ಲಿ ಸುಮಾರು 50ಕ್ಕೂ ಅಧಿಕ ತುಲಾಭಾರ ಸೇವೆ ನಡೆದಿದ್ದು, ಇದರ ಜೊತೆಗೆ ನೂರಾರು ಮಂದಿ ಹರಕೆ ರೂಪದಲ್ಲಿ ಗಂಟೆಗಳನ್ನು, ಬೆಳ್ಳಿಯ ವಸ್ತುಗಳನ್ನು ಸಮರ್ಪಣೆ ಮಾಡಿದ್ದಾರೆ.

ಅನ್ನಪ್ರಸಾದವೇ ವಿಶೇಷ
ಕಿಲ್ಲೆ ಮೈದಾನದ ಶ್ರೀ ಮಹಾಗಣೇಶೋತ್ಸವದ ಎಲ್ಲಾ ಧಾರ್ಮಿಕ ವಿಧಿ ವಿದಾನಗಳನ್ನು ಸಂಪ್ರದಾಯದಂತೆ ನಡೆಸಲಾಗುತ್ತದೆ. ಪ್ರತಿ ನಿತ್ಯ ಶ್ರೀ ದೇವರಿಗೆ 5 ಬಗೆ ನೈವೇದ್ಯ, ಕೊನೆಯ ದಿನ ವಿಶೇಷ ಹಾಲು ಸೇಮಿಗೆ ಪಾಯಸ ನೈವೇದ್ಯ ಮಾಡಲಾಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸುವುದೇ ಇಲ್ಲಿನ ವಿಶೇಷ –ಎನ್.ಸುಧಾಕರ್ ಶೆಟ್ಟಿ, ಅಧ್ಯಕ್ಷರು  ಶ್ರೀ ದೇವತಾ ಸಮಿತಿ, ಪುತ್ತೂರು

 

ಶೋಭಾಯಾತ್ರೆಯು ದೈವಗಳ ಸಾರಥ್ಯದಲ್ಲಿ ಪುತ್ತೂರು ನಗರದ ಪ್ರಮುಖ ಬೀದಿಗಳಲ್ಲಿ ಆರತಿ – ಹಣ್ಣು ಕಾಯಿಗಳನ್ನು ಸ್ವೀಕರಿಸುತ್ತಾ ಪ್ರಾತಃ ಕಾಲ ಕಲ್ಲೇಗವನ್ನು ತಲುಪಿತು. ಶ್ರೀ ಗಣೇಶನ ವಿಗ್ರಹವನ್ನು ಬಾವಿಯಲ್ಲಿ ವಿಸರ್ಜನೆಗೊಳಿಸುವ ಮೊದಲು ಶ್ರೀ ಪಂಜುರ್ಲಿ ದೈವಕ್ಕೆ ಮತ್ತು ರಕ್ಷಕ ದೈವಕ್ಕೆ ಅಗೇಲು ಸೇವೆಯನ್ನು ನೀಡಲಾಯಿತು. ಅಗೇಲು ಸೇವೆಯ ಬಳಿಕ ಶ್ರೀ ಮಹಾಗಣಪತಿ ದೇವರ ವಿಗ್ರಹವನ್ನು ಸೆ.9 ರಂದು ಮುಂಜಾನೆ 5.30 ಗಂಟೆಗೆ  ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.