Home_Page_Advt
Home_Page_Advt
Breaking News

ಸ್ಟೆನ್ಸಿಲ್ ಬ್ಲೇಡ್ ಬಳಸಿ 3 ನಿಮಿಷ 12 ಸೆಕೆಂಡ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ರಚನೆ, ನೆಲ್ಯಾಡಿಯ ಪರೀಕ್ಷಿತ್‌ರಿಂದ ವಿಶ್ವದಾಖಲೆ

ನೆಲ್ಯಾಡಿ: ಕಪ್ಪು ಹಾಗೂ ಬಿಳಿ ಪೇಪರ್ ಮತ್ತು ಸ್ಟೆನ್ಸಿಲ್ ಬ್ಲೇಡ್ ಬಳಸಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು 3 ನಿಮಿಷ 12 ಸೆಕೆಂಡ್‌ಗಳಲ್ಲಿ ರಚಿಸುವ ಮೂಲಕ ನೆಲ್ಯಾಡಿಯ ಪರೀಕ್ಷಿತ್(18ವ.)ರವರು ವಿಶ್ವದಾಖಲೆ ಬರೆದಿದ್ದಾರೆ.


ಕಪ್ಪು ಹಾಗೂ ಬಿಳಿಪೇಪರ್‌ಗಳು, ಒಂದು ಸ್ಟೆನ್ಸಿಲ್ ಬ್ಲೇಡ್, ಗಮ್ ಟೇಪ್, ಸ್ಟ್ಯಾಂಡ್ ಮತ್ತು ಬೋರ್ಡ್ ಪರಿಕರಗಳನ್ನು ಕೈಯಲ್ಲಿಟ್ಟುಕೊಂಡು ಪೇಪರ್ ಕಟ್ಟಿಂಗ್ ಪೋಟ್ರೈಟ್ ಸ್ಟೆನ್ಸಿಲ್ ಆರ್ಟ್ ಕಲೆಯಲ್ಲಿ ಪರೀಕ್ಷಿತ್ ಈ ಸಾಧನೆ ಮಾಡಿದ್ದಾರೆ. ಈ ಪರಿಕರಗಳನ್ನು ಬಳಸಿಕೊಂಡು ಪರೀಕ್ಷಿತ್‌ರವರು ಸೆ.20, 2019ರಂದು ಮನೆಯಿಂದಲೇ ಆನ್‌ಲೈನ್ ಮೂಲಕ ಲೈವ್ ಆಗಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು 3 ನಿಮಿಷ 12 ಸೆಕೆಂಡ್‌ನಲ್ಲಿ ರಚಿಸಿದ್ದರು. ಉತ್ತರಪ್ರದೇಶದಲ್ಲಿ ಮುಖ್ಯ ಕಚೇರಿ ಹೊಂದಿರುವ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮುಖ್ಯಸ್ಥರಾದ ಪಂಕಜ್ ಕಟ್‌ವಾಣಿಯವರು ಆನ್‌ಲೈನ್‌ನಲ್ಲಿಯೇ ಪರೀಕ್ಷಿತ್‌ರವರ ಕಲೆಯ ಚಮತ್ಕಾರವನ್ನು ವೀಕ್ಷಣೆ ಮಾಡಿದ್ದರು. 3 ನಿಮಿಷ 12 ಸೆಕೆಂಡ್‌ಗಳಲ್ಲಿ ಸ್ಟೆನ್ಸಿಲ್ ಬ್ಲೇಡ್ ಬಳಸಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಬಿಡಿಸಿರುವುದು ವಿಶ್ವದಾಖಲೆಯಾಗಿದೆ. ಪರೀಕ್ಷಿತ್‌ರವರ ಈ ಸಾಧನೆಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಸಂಸ್ಥೆಯವರು ಕಳುಹಿಸಿಕೊಟ್ಟಿದ್ದಾರೆ. ಈ ಹಿಂದೆ ಪರೀಕ್ಷಿತ್‌ರವರ ಹಿರಿಯ ಸಹಪಾಠಿ, ತುಮಕೂರು ನಿವಾಸಿ ಚಂದನ್ ಸುರೇಶ್‌ರವರು ಸಹ ಇದೇ ಕಲೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಇವರು ೫.೦೬ ಸೆಕೆಂಡ್‌ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನು ಬಿಡಿಸಿ ದಾಖಲೆ ಬರೆದಿದ್ದರು.

ಚಿತ್ರ ಬಿಡಿಸುವಲ್ಲಿ ಪರಿಣತ:

ಪರೀಕ್ಷಿತ್ ಕಲೆಯಲ್ಲಿ ಪರಿಣತರಾಗಿದ್ದಾರೆ. ಫೈರ್ ಆರ್ಟ್ (ಬೆಂಕಿಯ ದೀವಟಿಗೆ ಯನ್ನು ಪೇಪರ್‌ಗೆ ಹಿಡಿದು ಅದರ ಮೂಲಕ ಭಾವಚಿತ್ರ ಬಿಡಿಸುವ ಕಲೆ), ಪ್ರಿಂಟ್ ವರ್ಕ್, ಗಿಟಾರ್ ವಾದನ, ಭರತನಾಟ್ಯ, ಪಾಶ್ಚಾತ್ಯ ನೃತ್ಯ, ನಾಟಕ, ಮೈಮ್ ಶೋ, ಸಂಗೀತ ಉಪಕರಣಗಳ ಶಬ್ದವನ್ನು ಬಾಯಿಯಲ್ಲೆ ನುಡಿಸುವ ಬೀಟ್ ಬಾಕ್ಸ್ , ಕ್ರಿಯೇಟಿವ್ ಆರ್ಟ್, ಎರಡೂ ಕೈಗಳಲ್ಲಿ ಚಿತ್ರ ಬಿಡಿಸುವ ಕಲೆ, ಅಷ್ಟಾವಧಾನ, ಸಂಜ್ಞೆಯ ಮೂಲಕ ಹೇಳಲಾದ ದೂರವಾಣಿ ಸಂಖ್ಯೆಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡಿ ಅಸಂಖ್ಯಾತ ದೂರವಾಣಿ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಕಲೆ, ಬಡಗು ತಿಟ್ಟಿನ ಯಕ್ಷಗಾನದಲ್ಲಿ ಮರದ ಕಾಲುಗಳನ್ನು ಬಳಸಿ ನೃತ್ಯ ಮುಂತಾದ ಹಲವಾರು ಅದ್ಬುತ ಕಲೆಗಳ ಮೂಲಕ ತಮ್ಮ ಸಾಧನೆ ತೋರಿಸಿದ್ದಾರೆ. ಪ್ರಸ್ತುತ ಪರೀಕ್ಷಿತ್‌ರವರು ಮಂಗಳೂರಿನ ಬಿಡಿಪಿಎಸ್ ಸಂಸ್ಥೆಯಲ್ಲಿ ಇಂಟಿರಿಯರ್ ಡಿಸೈನ್ ತರಬೇತಿ ಪಡೆಯುತ್ತಿದ್ದಾರೆ.

ವಿದ್ಯಾಭ್ಯಾಸ:

ಪರೀಕ್ಷಿತ್‌ರವರು ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಕುಂಡಡ್ಕ `ದಕ್ಷ ನಿಲಯ’ ನಿವಾಸಿ, ಕೃಷಿಕ ಶ್ರೀಧರ್ ಹಾಗೂ ಗೃಹಿಣಿ ಸುಧಾಮಣಿ ದಂಪತಿ ಪುತ್ರ. ಈತನ ಸಹೋದರಿ ದಕ್ಷ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ೭ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಪರೀಕ್ಷಿತ್‌ರವರ ಅಜ್ಜ ಜನಾರ್ದನ ಶೆಟ್ಟಿ ಹಾಗೂ ಅಜ್ಜಿ ಮೀನಾಕ್ಷಿಯವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಎಲ್‌ಕೆಜಿಯಿಂದ ೯ನೇ ತರಗತಿಯವರೆಗೆ ನೆಲ್ಯಾಡಿಯ ಜ್ಞಾನೋದಯ ಬೆಥನಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ೧೦ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಪಡೆದಿದ್ದಾರೆ. ಮೈಮ್ ಶೋ, ನೆರಳು ಬೆಳಕಿನ ಸಂಯೋಜನೆಯ ಪ್ರಸಿದ್ದ ಕಲಾವಿದರಾದ ಗೋಪಾಡ್ಕರ್‌ರವರ ಅಧ್ಯಯನ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಗೋಪಾಡ್ಕರ್‌ರವರ ತಂಡದೊಂದಿಗೆ ಚಿತ್ರಕಲೆ ಮತ್ತಿತರ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಗೆ ಪರೀಕ್ಷಿತ್‌ಗೆ ಸೂಕ್ತ ವೇದಿಕೆಯೂ ಲಭಿಸಿತು. ಉತ್ತರ ಕರ್ನಾಟಕದ ಹಲವಾರು ಪ್ರಸಿದ್ದ ಕಾರ್ಯಕ್ರಮಗಳಲ್ಲಿ ತನ್ನ ಆಸಕ್ತಿಯ ಸ್ಟೆನ್ಸಿಲ್ ಆರ್ಟ್‌ಗಳನ್ನು ಪ್ರದರ್ಶಿಸುವ ಅವಕಾಶ, ಪ್ರೋತ್ಸಾಹವೂ ಪರೀಕ್ಷಿತ್‌ಗೆ ಲಭಿಸಿದ್ದು ಹೆಚ್ಚಿನ ಅನುಕೂಲ ಮಾಡಿಕೊಟ್ಟಿತ್ತು.

ಸಹಪಾಠಿಯಿಂದಲೇ ಪ್ರೇರಣೆ
ಸ್ಟೆನ್ಸಿಲ್ ಆರ್ಟ್‌ನಲ್ಲಿ ವಿಶ್ವದಾಖಲೆ ಮಾಡಲು ಗೋಪಾಡ್ಕರ್ ಅಧ್ಯಯನ ಕೇಂದ್ರದಲ್ಲಿ ಸೀನಿಯರ್ ಆಗಿದ್ದ ತುಮಕೂರಿನ ಚಂದನ್ ಸುರೇಶ್‌ರವರೇ ನನಗೆ ಪ್ರೇರಣೆಯಾಗಿದ್ದಾರೆ. ಅವರಿಂದಲೇ ತರಬೇತಿ ಪಡೆದುಕೊಂಡಿದ್ದೇನೆ. ಸ್ಟೆನ್ಸಿಲ್ ಬ್ಲೇಡ್ ಬಳಸಿ ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸಿದ್ದಾನೆ. ಇದೇ ಕಲೆಯಲ್ಲಿ ಇನ್ನಷ್ಟೂ ಸಾಧನೆ ಮಾಡಬೇಕೆಂದು ನಿರ್ಧರಿಸಿದ್ದಾನೆ -ಪರೀಕ್ಷಿತ್, ವಿಶ್ವದಾಖಲೆ ಬರೆದ ಬಾಲಕ

ಅಪರೂಪದ ಕಲೆ
ಸ್ಟೆನ್ಸಿಲ್ ಆರ್ಟ್ ಅಪರೂಪದ ಕಲೆಯಾಗಿದೆ. ಫಾಸ್ಟರ್ ಮೇಕಿಂಗ್ ಆಫ್ ಪೋಟ್ರೈಟ್ ಪೇಪರ್ ಕಟ್ಟಿಂಗ್ ಸ್ಟೆನ್ಸಿಲ್ ಎಂಬುದು ಯಾವುದೇ ಬಣ್ಣದ ಪೆನ್ಸಿಲ್‌ಗಳ ಸಹಾಯವಿಲ್ಲದೆ ಬರೇ ಪೇಪರ್ ಮತ್ತು ಬ್ಲೇಡಿನ ಸಹಾಯದಿಂದ ತಯಾರಿಸುವ ಚಿತ್ರವಾಗಿದೆ. ಪರೀಕ್ಷಿತ್‌ರವರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ಥಳದಲ್ಲೇ ಮಹಾನ್ ವ್ಯಕ್ತಿಗಳ, ಅತಿಥಿಗಳ ಭಾವಚಿತ್ರವನ್ನು ಕ್ಷಣಾರ್ಧದಲ್ಲಿ ವೇದಿಕೆಯಲ್ಲೇ ರಚಿಸಿ ತಮ್ಮ ಚಮತ್ಕಾರದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೂರಾರು ಕಡೆಗಳಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿ ಜನಮನ್ನಣೆಯೂ ಪಡೆದುಕೊಂಡಿದ್ದಾರೆ. ತನ್ನ ಕಲಾಪ್ರತಿಮೆಗೆ ದ.ಕ.ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಸಂಘದಿಂದ ಸನ್ಮಾನ, ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. [email protected]

    ಪ್ರಪಂಚದ ಅತ್ಯಂತ ನಿರುಪಯುಕ್ತ ವಸ್ತುವಿನ ಚಿತ್ರಕ್ಕೆ ಈತ ತನ್ನ ಕಲೆಯನ್ನ ಬಳಸಿ ಯಶಸ್ವಿ ಆದ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.