HomePage_Banner
HomePage_Banner

ಗುಜಿರಿ ಕಾರು ಇದ್ದರೂ ಕಾರ್ಡ್ ರದ್ದು…! ದಿಢೀರನೆ ರದ್ದಾಗುತ್ತಿರುವ ಬಿಪಿಎಲ್ ಕಾರ್ಡು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ಸಿಶೇ ಕಜೆಮಾರ್

ಪುತ್ತೂರು: ನವೆಂಬರ್ ಒಂದರಿಂದ ರಾಜ್ಯದಾದ್ಯಂತ ಆಹಾರ ಇಲಾಖೆಯ ವತಿಯಿಂದ ಬಿಪಿಎಲ್ ಪಡಿತರ ಕಾರ್ಡುದಾರರ ಸರ್ವೆ ಕಾರ್ಯ ನಡೆಯುತ್ತಿದೆ. ಅನರ್ಹರಿಗೆ ಬಿಪಿಎಲ್ ಕಾರ್ಡು ನೀಡಲಾಗಿದೆ, ಕೆಲವರು ಅಕ್ರಮವಾಗಿ ಕಾರ್ಡು ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಅಕ್ರಮವಾಗಿ ಬಿಪಿಎಲ್ ಕಾರ್ಡು ಹೊಂದಿದವರು ಕಾರ್ಡನ್ನು ಸ್ವಯಂಪ್ರೇರಿತವಾಗಿ ರದ್ದು ಮಾಡಿ ಎಂದು ಇಲಾಖೆ ಎರಡು ತಿಂಗಳ ಗಡುವನ್ನು ವಿಧಿಸಿತ್ತು. ಗಡು ಅವಧಿ ಮುಗಿದ ಬಳಿಕ ಇಲಾಖೆಯೇ ನೇರ ಕಾರ್ಯಾಚರಣೆಗೆ ಇಳಿದಿದೆ. ಕಾರ್ಯಚರಣೆ ವೇಳೆ ಕೆಲವು ಅಕ್ರಮ ಬಿಪಿಎಲ್ ಕಾರ್ಡು ಪತ್ತೆಯಾದರೆ ಮತ್ತೆ ಕೆಲವರು ತಾವಾಗಿಯೇ ರದ್ದು ಮಾಡಿಸಿಕೊಂಡಿದ್ದಾರೆ ಮತ್ತೆ ಕೆಲವರಿಗೆ ದಂಡವನ್ನು ಹಾಕುವ ಕೆಲಸ ನಡೆಯುತ್ತಿದೆ. ಇದೆಲ್ಲದರ ನಡುವೆ ನಾಗರಿಕರಲ್ಲಿ ಗೊಂದಲವೂ ಸೃಷ್ಟಿಯಾಗಿದೆ.

ಏನಿದು ಗೊಂದಲ?: ಗ್ರಾಮೀಣ ಜನತೆಗೆ ಬಿಪಿಎಲ್ ಪಡಿತರ ಕಾರ್ಡು ಹೊಂದಿರಬೇಕಾದಲ್ಲಿ ಇರಬೇಕಾದ ಮಾನದಂಡದ ಬಗ್ಗೆ ಮಾಹಿತಿ ಇಲ್ಲ. ಆಯಾ ಗ್ರಾಮದ ನ್ಯಾಯಬೆಲೆ ಅಂಗಡಿಯ ಮೂಲಕ ಅಥವಾ ಗ್ರಾಪಂ ಮೂಲಕ ಮಾನದಂಡದ ಮಾಹಿತಿಯನ್ನು ತಿಳಿಸುವ ಕಾರ್ಯ ನಡೆದಿಲ್ಲ, ಇಲಾಖೆಯ ವತಿಯಿಂದಲೂ ನಡೆದಿಲ್ಲ. ಅಕ್ಕಪಕ್ಕದ ಮನೆಯವರ ಕಾರ್ಡು ತನ್ನಿಂತಾನೆ ರದ್ದಾಗುತ್ತಿರುವುದು ಮತ್ತು ಅವರು ದಂಡ ಕಟ್ಟುವುದರಿಂದ ಜನ ಆತಂಕಗೊಂಡಿದ್ದಾರೆ. ನಮ್ಮ ಕಾರ್ಡು ರದ್ದಾಗಲಿದೆಯೇ ಎಂಬ ಅನುಮಾನವೂ ಅವರನ್ನು ಕಾಡುತ್ತಿದೆ. ಇದಕ್ಕೆಲ್ಲಾ ಇಲಾಖೆಯ ಮಾಹಿತಿಯ ಕೊರತೆಯೇ ಕಾರಣವಾಗಿದೆ ಎನ್ನುವುದು ಗ್ರಾಮಸ್ಥರು ಆಕ್ರೋಶ.

ಬಿಪಿಎಲ್ ಕಾರ್ಡ್‌ಗೆ ಮಾನದಂಡ: ಬಿಪಿಎಲ್ ಕಾರ್ಡು ಹೊಂದಿರಬೇಕಾದ ಅರ್ಹ ಕುಟುಂಬಗಳಿಗೆ ಬೇಕಾದ ಮಾನದಂಡವನ್ನು ಇಲಾಖೆಯೇ ಸಿದ್ದಪಡಿಸಿದೆ.. ಅವುಗಳಲ್ಲಿ

1) ಸರಕಾರಿ, ಅರೆ ಸರಕಾರಿ ಹುದ್ದೆಯಲ್ಲಿರುವ ಕುಟುಂಬ 2) ಆದಾಯ ತೆರಿಗೆ ಪಾವತಿಸುವ ಕುಟುಂಬ 3) ನಾಲ್ಕು ಚಕ್ರದ ಖಾಸಗಿ ವಾಹನವನ್ನು ಹೊಂದಿರುವ ಕುಟುಂಬ 5) ವಾರ್ಷಿಕವಾಗಿ 1.20 ಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬ 6) 3 ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಇರುವ ಕುಟುಂಬ- ಇಷ್ಟು ಸೌಲಭ್ಯ ಇರುವ ಕುಟುಂಬಕ್ಕೆ ಬಿಪಿಎಲ್ ಕಾರ್ಡು ಪಡೆಯುವ ಹಕ್ಕು ಇಲ್ಲ. ಇವರ ಬಳಿ ಬಿಪಿಎಲ್ ಕಾರ್ಡು ಇದ್ದಲ್ಲಿ ಅದು ಅಕ್ರಮ ಎಂದು ಇಲಾಖೆ ಪರಿಗಣಿಸುತ್ತದೆ. ಕೃಷಿಯಲ್ಲಿ ವಾರ್ಷಿಕ ಆದಾಯವನ್ನು ಸ್ಥಳೀಯ ಗ್ರಾಮದ ಗ್ರಾಮಕರಣಿಕರು ಇಲಾಖೆಗೆ ಮಾಹಿತಿ ನೀಡುತ್ತಾರೆ. ಗ್ರಾಮಕರಣಿಕರ ಮಾಹಿತಿ ಆಧರಿಸಿ ಕುಟುಂಬದ ಆದಾಯವನ್ನು ಇಲಾಖೆ ಪರಿಗಣಿಸಲಿದೆ. 1.20  ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕೃಷಿ ಕುಟುಂಬದ ಬಿಪಿಎಲ್ ಕಾರ್ಡು ಖಂಡಿತವಾಗಿಯೂ ರದ್ದಾಗಲಿದೆ.

ಯಾರಿಗೆ ಆತಂಕ ಬೇಡ: ರಿಕ್ಷಾ ಚಾಲಕರು, ಒಂದು ಟೂರಿಸ್ಟ್ ವಾಹನ ಹೊಂದಿದವರು, ಮೂರು ಚಕ್ರದ ಟೂರಿಸ್ಟ್ ವಾಹನಗಳಾದ ಆಫೆ, ಹಾಗೂ ಆಪೆ ಮಾದರಿಯ ಇತರೆ ವಾಹನಗಳು, ಅಂಗನವಾಡಿ ನೌಕರರು, ಶಾಲಾ ಬಿಸಿಯೂಟದ ನೌಕರರು ಬಿಪಿಎಲ್ ಕಾರ್ಡು ಹೊಂದಿರಬಹುದು. ಆದರೆ ಅವರಲ್ಲಿ ನಾಲ್ಕು ಚಕ್ರದ ವಾಹನ ಇರಬಾರದು. ಕೆಲವರಲ್ಲಿ ನಾಲ್ಕರಿಂದ ಐದು ಸ್ವಂತ ರಿಕ್ಷಾ ಹೊಂದಿದ್ದರೂ ತಕ್ಷಣಕ್ಕೆ ಅವರಿಗೆ ಯಾವುದೇ ಆತಂಕ ಇಲ್ಲ. ಸರಕಾರದಿಂದ ಬಂದಿರುವ ಸದ್ಯದ ಸುತ್ತೋಲೆಯನ್ನು ಆಟೋ ರಿಕ್ಷಾ ಹಾಗೂ ಇತರೆ ಮೂರು ಚಕ್ರದ ವಾಹನಗಳನ್ನು ಮಾನದಂಡವಾಗಿ ಪರಿಗಣಿಸಿಲ್ಲ.

ದಂಡ ಹೇಗೆ?: ಕಾರ್ಡುದಾರರು ನಾಲ್ಕು ಚಕ್ರದ ಖಾಸಗಿ ವಾಹನವನ್ನು ಹೊಂದಿದ್ದಲ್ಲಿ ವಾಹನ ನೋಂದಣಿಯಾದ ದಿನಾಂಕದಿಂದ ಪಡಿತರ ಮೂಲಕ ಪಡೆದ ಅಕ್ಕಿಯನ್ನು ತಾಳೆ ಹಾಕಿ ದಂಡ ವಿಧಿಸಲಾಗುತ್ತದೆ. ಓಪನ್ ಮಾರುಕಟ್ಟೆಯಲ್ಲಿ ಅಕ್ಕಿಗೆ ಇರುವ ದರದಂತೆ ಕಿಲೋ ಅಕ್ಕಿಗೆ 29 ರೂನಂತೆ ಕುಟುಂಬದ ಯಜಮಾನ ಇಲಾಖೆಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ದಂಡ ಪಾವತಿ ಮಾಡದೇ ಇದ್ದಲ್ಲಿ ಏನು ಶಿಕ್ಷೆ ಎಂಬುದನ್ನು ಸುತ್ತೋಲೆಯಲ್ಲಿ ತಿಳಿಸಿಲ್ಲವಾದ್ದರಿಂದ ಶಿಕ್ಷೆಯ ಬಗ್ಗೆ ಇಲಾಖೆ ಸದ್ಯಕ್ಕೆ ಯವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ರೇಶನ್ ಮೂಲಕ ವಿತರಣೆಯಾದ ಅಕ್ಕಿಯ ಗುಣಮಟ್ಟವನ್ನು ಖಾತ್ರಿಪಡಿಸಿ ಇಲಾಖೆ ದಂಡವನ್ನು ವಿಧಿಸುತ್ತಿದೆ.

ಗುಜಿರಿ ಕಾರು ಇದ್ದರೂ ರದ್ದಾಗುತ್ತೆ ಕಾರ್ಡ್: ನಾಲ್ಕು ಚಕ್ರದ ವಾಹನ ಎಂದು ಸುತ್ತೋಲೆಯಲ್ಲಿ ನಮೂದಾಗಿರುವ ಕಾರಣ ಬಿಪಿಎಲ್ ಕಾರ್ಡು ಹೊಂದಿದ ಕುಟುಂಬದಲ್ಲಿ 20 ಸಾವಿರದ ಗುಜಿರಿ ಕಾರು ಇದ್ದರೂ ಕಾರ್ಡು ಕ್ಯಾನ್ಸಲ್ ಆಗಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದು ಇಲಾಖೆಯ ಸ್ಪಷ್ಟ ನಿಲುವು ಆಗಿದೆ. ಈಗೀಗಾ 20 ರಿಂದ 30 ಸಾವಿರಕ್ಕೆ ಹಳೆಯ 800 ಕಾರು ಸಿಗುತ್ತದೆ. ಆದ್ದರಿಂದ ಹೆಚ್ಚಿನ ಜನರಲ್ಲಿ ಕಾರು ಇದ್ದೇ ಇರುತ್ತದೆ. ಗುಜಿರಿ ಕಾರು ಇರೋದೇ ಕಾರ್ಡ್ ರದ್ದತಿಗೆ ಕಾರಣವಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಕೃಷಿ ಭೂಮಿ ಇದ್ದರೂ ರದ್ದು: ಕೆಲವರಿಗೆ ನಾಲ್ಕು ಚಕ್ರದ ಸ್ವಂತ ವಾಹನ ಇಲ್ಲದೇ ಇದ್ದು ಅಪಾರ ಕೃಷಿ ಭೂಮಿಯನ್ನು ಹೊಂದಿದ ಕುಟುಂಬ ಇದ್ದು ಅಂತಹ ಕುಟುಂಬದ ವಾರ್ಷಿಕ ಆದಾಯವನ್ನು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯವರು ಪರಿಶೀಲನೆ ಮಾಡಲಿದ್ದು ಇಂತಹ ಕುಟುಂಬಕ್ಕೆ ಕಾರು ಇಲ್ಲದೇ ಇದ್ದರೂ ಜಾಗವನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಜಾಗದಲ್ಲಿ ಅಡಿಕೆ ತೋಟವಿದ್ದು ಅವರ ವಾರ್ಷಿಕ ಆದಾಯ 1 ಲಕ್ಷ 20 ಸಾವಿರಕ್ಕಿಂತ ಹೆಚ್ಚಿದ್ದರೆ ಅಂತವರ ಕಾರ್ಡ್ ರದ್ದಾಗಲಿದೆ.

ದೊಡ್ಡ ಮನೆ ಇದ್ದರೂ ಕಾರ್ಡ್ ರದ್ದು: ಕೃಷಿಭೂಮಿ, ನಾಲ್ಕು ಚಕ್ರದ ವಾಹನ ಸೇರಿದಂತೆ 1 ಸಾವಿರ ಚದರ ಅಡಿ ವಿಸ್ತೀರ್ಣಕ್ಕಿಂತ ದೊಡ್ಡದಾದ ಮನೆ ಹೊಂದಿದ್ದರೂ ಅಂತವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಆದರೆ ಇದು ಪೇಟೆಯಲ್ಲಿ ವಾಸಿಸುವ ಜನರಿಗೆ ಮಾತ್ರ ಅನ್ವಯವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಇಲಾಖೆ ಸುತ್ತೊಲೆಯಲ್ಲಿ ತಿಳಿಸಿದೆ. ಸಾಧಾರಣವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ 1 ಸಾವಿರಕ್ಕಿಂತ ಹೆಚ್ಚು ಚದರ ಅಡಿ ವಿಸ್ತೀರ್ಣದ ಮನೆಯನ್ನೆ ಹೊಂದಿದ್ದಾರೆ.

ರದ್ದಾದರೆ ಏನು ಮಾಡಬಹುದು: ನಾಲ್ಕು ಚಕ್ರದ ವಾಹನ ಇದ್ದ ಕುಟುಂಬದ ಕಾರ್ಡು ರದ್ದಾದಲ್ಲಿ. ವಾಹನವನ್ನು ಮಾರಾಟ ಮಾಡಿದ ಬಗ್ಗೆ ದಾಖಲೆಯನ್ನು ಇಲಾಖೆಗೆ ಸಲ್ಲಿಸಿದರೆ ಮತ್ತೆ ಬಿಪಿಎಲ್ ಕಾರ್ಡು ಪಡೆಯುವುದಕ್ಕೂ ಇಲಾಖೆ ಅವಕಾಶವನ್ನು ಕಲ್ಪಿಸಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನೆಗೆ ಬರುತ್ತೆ ಸಾವಿರಾರು ರೂಪಾಯಿಗಳ ದಂಡದ ನೋಟೀಸ್ನಾಗರಿಕರಲ್ಲಿ ಗೊಂದಲ
ಆಹಾರ ಇಲಾಖೆಯ ನಿರ್ದೇಶನದಂತೆ ಬಿಪಿಎಲ್ ಪಡಿತರದಾರರ ಸರ್ವೆ ಕಾರ್ಯ ನಡೆಯುತ್ತಿದೆ. ಅನರ್ಹರು ಕಾರ್ಡು ಪಡೆದುಕೊಂಡಿದ್ದಲ್ಲಿ ಅದನ್ನು ರದ್ದು ಮಾಡಲಾಗುತ್ತದೆ. ಮಾನದಂಡವೇ ಇಲಾಖೆಗೆ ಪ್ರಮುಖ ಅಸ್ತ್ರವಾಗಿ ಪರಿಗಣಿಸಲಾಗಿದೆ. ಅನರ್ಹರು ಯಾರಾದರೂ ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಕೂಡಲೇ ಅದನ್ನು ರದ್ದು ಮಾಡಿಕೊಳ್ಳಬೇಕು. ರದ್ದು ಮಾಡದೇ ಇದ್ದ ಕಾರ್ಡ್‌ದಾರರಿಗೆ ದಂಡ ಕಟ್ಟಲು ನೋಟೀಸ್ ನೀಡಲಾಗುತ್ತಿದೆ ಸರಸ್ವತಿ, ಪುತ್ತೂರು ಆಹಾರ ಇಲಾಖೆಯ ಅಧಿಕಾರಿ

ಆತಂಕದಲ್ಲಿ ನಾಗರಿಕರು
ಬಿಪಿಎಲ್ ಕಾರ್ಡ್‌ಗೆ ಅರ್ಹರಾಗಿರುವ ನಾಗರೀಕರಲ್ಲೂ ಒಂದು ರೀತಿಯ ಆತಂಕ ಆರಂಭವಾಗಿದೆ. ಬಿಪಿಎಲ್ ಕಾರ್ಡ್ ಇದ್ದರೆ ಸರಕಾರದ ಅದೆಷ್ಟೋ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಬಿಪಿಎಲ್ ಕಾರ್ಡ್‌ಗೆ ಒಂದಿಷ್ಟು ಸಹಾಯದ ಮಾನ್ಯತೆ ಇದೆ. ಬಿಪಿಎಲ್ ಕಾರ್ಡ್ ತೋರಿಸಿದರೆ ಚಿಕಿತ್ಸೆಯಲ್ಲಿ ವಿಶೇಷ ರಿಯಾಯಿತಿ ಪಡೆಯಬಹುದಾಗಿದೆ. ಇದೀಗ ದಿಢೀರ್ ಆಗಿ ಕಾರ್ಡ್ ರದ್ದುಗೊಳ್ಳುತ್ತಿರುವುದರಿಂದ ತೀರಾ ಬಡ ನಾಗರೀಕರಲ್ಲೂ ಆತಂಕ ಶುರುವಾಗಿದೆ. ಆರ್ಥಿಕವಾಗಿ ಬಡವನಾಗಿದ್ದು ಇಪ್ಪತ್ತು ಮೂವತ್ತು ಸಾವಿರದ ಕಾರನ್ನು ಹೇಳಿಕೊಂಡು ಆತ ಕಾರ್ಡ್ ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ. ಲಕ್ಷಗಟ್ಟಲೆ ಬೆಲೆಬಾಳುವ ದ್ವಿಚಕ್ರ ವಾಹನ ಇದ್ದವರಿಗೆ,ಆಪೆ, ರಿಕ್ಷದಂತಹ ಮೂರ್‍ನಾಲ್ಕು ವಾಹನ ಇದ್ದವರಿಗೆ ಯಾವುದೇ ಕಾನೂನು ಇಲ್ಲ. ಆದರೆ ನಾಲ್ಕು ಚಕ್ರದ ನಲವತ್ತು ಸಾವಿರದ ಕಾರು ಇದ್ದವರಿಗೆ ಕಾನೂನು ಇದು ಎಷ್ಟು ಸರಿ ಎನ್ನುವುದು ನಾಗರೀಕರ ಪ್ರಶ್ನೆಯಾಗಿದೆ. ಸರಕಾರ,ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ.

ಆಹಾರ ಇಲಾಖೆ ಹೊರಡಿಸಿರುವ ಮಾನದಂಡ ಅವೈಜ್ಞಾನಿಕವಾಗಿದೆ. ಕೇವಲ ನಾಲ್ಕು ಚಕ್ರದ ವಾಹನವನ್ನೇ ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಮಾನದಂಡ ಸರಿಯಲ್ಲ. ಹೆಚ್ಚಿನ ಜನರಲ್ಲಿ ಹಳೇಯ ಕಡಿಮೆ ದರದ ಕಾರು ಇದೆ. ಹಾಗಂತ ಅವರ ವಾರ್ಷಿಕ ಆದಾಯ ಬಹಳ ಕಡಿಮೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದು ಸರಿಯಾದ ಮಾನದಂಡ ಅಲ್ಲ. ಈ ಬಗ್ಗೆ ಸರಕಾರ ಪರಿಶೀಲನೆ ಮಾಡಬೇಕಾಗಿದೆ – ಕೆ.ಎಂ. ಹನೀಫ್ ರೆಂಜಲಾಡಿ, ಸಾಮಾಜಿಕ ಕಾರ್ಯಕರ್ತರು

About The Author

Related posts

3 Comments

  1. ರಾಜು ಮಾಧವ್

    ಅಪ್ಪನ ಹೆಸರಲ್ಲಿ ರೇಶನ್ ಕಾರ್ಡ್ ಬಿಪಿಎಲ್ ಇದ್ದು ಮಗನ ಹೆಸರಲ್ಲಿ ಕಾರ್ ಇದ್ದರೆ ಬಿಪಿ ಲ್ ಕಾರ್ಡ್ ರದ್ದು ಆಗುತ್ತಾ?

    Reply
  2. ಕೆ.ಎಂ

    ಅವೈಜ್ನಾನಿಕ ನಿಯಮ..ಕಾರು ಇರೋರು ಎಲ್ಲರೂ ರೀಮಂತರಲ್ಲ…ಬೈಕ್ ಇರೋರೆಲ್ಲ ಬಡವರಲ್ಲ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.