ಪುತ್ತೂರು: ಇಲ್ಲಿನ ನಗರಸಭಾ ವ್ಯಾಪ್ತಿಯ ರಸ್ತೆ ಅವ್ಯವಸ್ಥೆ ಕುರಿತು ಸುದ್ದಿ ಯೂ ಟ್ಯೂಬ್ ಚಾನೆಲ್ ಮಾಡಿದ್ದ ವರದಿಗೆ ನಗರಸಭೆ ಸ್ಪಂದಿಸಿದೆ.
ಅರುಣಾ ಚಿತ್ರಮಂದಿರದ ಬಳಿಯಿಂದ ಸಾಲ್ಮರದವರೆಗಿನ ಎಪಿಎಂಸಿ ರಸ್ತೆಯಲ್ಲಿರುವ ಮಾರ್ಗದಲ್ಲಿ ಹೊಂಡ ಗುಂಡಿಗಳಿಂದಾಗಿ ವಾಹನ ಸವಾರರು, ಪ್ರಯಾಣಿಕರು ಮತ್ತು ಪಾದಚಾರಿಗಳು ಸಂಕಷ್ಟ ಪಡುತ್ತಿರುವ ಬಗ್ಗೆ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಹಲವು ಬಾರಿ ಮನವಿ ಮಾಡಿದ್ದರೂ, ಪತ್ರಿಕೆಗಳಲ್ಲಿ ಪ್ರಕಟ ಆಗಿದ್ದರೂ ರಸ್ತೆ ದುರಸ್ತಿ ಮಾಡಿಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ರಿಕ್ಷಾ ಚಾಲಕರು, ಸ್ಥಳೀಯ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದರು. ನರಕ ಮಾರ್ಗದ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆಯ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಈ ಕುರಿತಾಗಿ ಸುದ್ದಿ ಚಾನೆಲ್ ನಲ್ಲಿ ಪ್ರಸಾರವಾದ ವರದಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಜನರ ಆಗ್ರಹಕ್ಕೆ ಮತ್ತು ಸುದ್ದಿ ವರದಿಗೆ ಸ್ಪಂದಿಸಿರುವ ನಗರಸಭಾ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಜನಾಗ್ರಹಕ್ಕೆ ಸ್ಪಂದನೆ ನೀಡಿದ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮತ್ತು ಸಿಬ್ಬಂದಿಗಳಿಗೆ, ಮುತುವರ್ಜಿ ವಹಿಸಿದ ಸ್ಥಳೀಯ ಸದಸ್ಯರಾದ ಶಕ್ತಿ ಸಿನ್ಹಾ ಮತ್ತು ಪ್ರೇಮ್ ಕುಮಾರ್ ರವರಿಗೆ ಹಾಗೂ ಹಲವಾರು ವರ್ಷದ ಸಮಸ್ಯೆಯ ಪರಿಹಾರಕ್ಕೆ ಕೈ ಜೋಡಿಸಿ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಿದ ಸುದ್ದಿ ಬಳಗಕ್ಕೆ ಅಭಾರಿ ಆಗಿದ್ದೇವೆ ಎಂದು ವರ್ತಕರು ಹಾಗೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಸುದ್ದಿ ಯೂ ಟ್ಯೂಬ್ ಚಾನೆಲ್ ಮಾಡಿದ್ದ ವರದಿ .. 👇