- ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ಕ್ರಮ: ಎಸ್ಪಿ
- ಕೇಂದ್ರಸ್ಥಾನದಲ್ಲಿರಲು ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಆದೇಶ
- ಶಾಲಾ ಕಾಲೇಜುಗಳಿಗೆ ರಜೆ ಜ ಮದ್ಯ ಮಾರಾಟ ನಿಷೇಧ
ಪುತ್ತೂರು: ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಕುರಿತ ಐತಿಹಾಸಿಕ ತೀರ್ಪು ಸುಪ್ರೀಂ ಕೋರ್ಟ್ನಲ್ಲಿ ಪ್ರಕಟವಾಗಲು ಕ್ಷಣಗಣನೆ ಆರಂಭಗೊಂಡಿದೆ. ನ.9ರಂದು ಬೆಳಿಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಲಿದೆ ಎಂದು ವ್ಯಾಪಕವಾಗಿ ಪ್ರಚಾರವಾಗಿದೆ.ಈ ನಿಟ್ಟಿನಲ್ಲಿ ದೇಶಾದ್ಯಂತ ಹೈ ಎಲರ್ಟ್ ಘೋಷಿಸಲಾಗಿದೆ. ಪುತ್ತೂರು ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.ಮುಂಜಾಗೃತಾ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ನ.೯ರಂದು ರಜೆ ಘೋಷಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಜಮೀನು ವಿವಾದದ ಕುರಿತು ಇತ್ತೀಚೆಗೆ ವಿಚಾರಣೆ ಮುಕ್ತಾಯಗೊಳಿಸಿದ್ದು, ತೀರ್ಪು ಕಾಯ್ದಿರಿಸಿತ್ತು.ದಶಕಗಳಿಗೂ ಹಳೆಯದಾದ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ವಯೋನಿವೃತ್ತಿ ಹೊಂದಲಿರುವ ನವೆಂಬರ್ ೧೭ಕ್ಕೂ ಮುನ್ನವೇ ಪ್ರಕಟಿಸುವ ನಿರೀಕ್ಷೆ ಇತ್ತು.ಕೊನೆಗೂ ಇಡೀ ದೇಶದ ಜನತೆ ನಿರೀಕ್ಷಿಸುವ ತೀರ್ಪು ಪ್ರಕಟವಾಗುವ ಮುಹೂರ್ತ ಒದಗಿ ಬಂದಿದೆ.
ಎಲ್ಲೆಡೆ ಕಟ್ಟೆಚ್ಚರ: ಪೊಲೀಸ್ ಭದ್ರತೆ ಹೆಚ್ಚಳ: ಎಸ್ಪಿ
ಅಯೋಧ್ಯೆ ತೀರ್ಪು ಪ್ರಕಟ. ನ.10ರಂದು ಈದ್ ಮಿಲಾದ್ ಆಚರಣೆ ಹಿನ್ನಲೆಯಲ್ಲಿ ಪುತ್ತೂರು, ಕಡಬ, ಉಪ್ಪಿನಂಗಡಿ, ವಿಟ್ಲ ಸೇರಿದಂತೆ ದ.ಕ.ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.ಹೆಚ್ಚುವರಿಯಾಗಿ ರಾಜ್ಯ ಮೀಸಲು ಪೊಲೀಸ್ ಪಡೆಯ ೫ ತುಕಡಿಯನ್ನು ಕರೆಸಿಕೊಳ್ಳಲಾಗಿದೆ.ಜೊತೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಸನ್ನದ್ಧಗೊಳಿಸಲಾಗಿದೆ.ಒಟ್ಟಾರೆ ಯಾವುದೇ ಅಹಿತಕರ ಘಟನೆಗಳಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.ಮುಂದಿನ ಪರಿಸ್ಥಿತಿಯನ್ನು ನೋಡಿಕೊಂಡು ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಯಂತಹ ಕ್ರಮಕೈಗೊಳ್ಳುವ ಕುರಿತು ತೀರ್ಮಾನಿಸಲಾಗುವುದು ಎಂದು ಎಸ್ಪಿಯವರು ‘ಸುದ್ದಿ’ಗೆ ತಿಳಿಸಿದ್ದಾರೆ.
ಕೇಂದ್ರಸ್ಥಾನದಲ್ಲಿರುವ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಆದೇಶ: ತೀರ್ಪು ಯಾರ ಪರವಾಗಿಯೇ ಬಂದರೂ ತೀರ್ಪನ್ನು ಗೌರವಿಸಿ ಸಮಾಜದಲ್ಲಿ ಶಾಂತಿ ಸಾಮರಸ್ಯ, ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಅಗತ್ಯ ಕ್ರಮಕೈಗೊಳ್ಳುವ ಅನಿವಾರ್ಯತೆ ಇರುವುದರಿಂದ ಡಿವೈಎಸ್ಪಿ, ಪೊಲೀಸ್ ವೃತ್ತ ನಿರೀಕ್ಷಕರು, ತಹಸಿಲ್ದಾರ್ ಸೇರಿದಂತೆ ಉಪವಿಭಾಗದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಹಿರಿಯ ಉಪವಿಭಾಗಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿಯವರು ಆದೇಶಿಸಿದ್ದಾರೆ.ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಎಲ್ಲರೂ ಗೌರವಿಸಬೇಕಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಈ ವಿಚಾರದಲ್ಲಿ ಯಾವುದೇ ರೀತಿಯ ತಪ್ಪು ಸಂದೇಶಗಳನ್ನು ಹರಡಿ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಈಗಾಗಲೇ ತೀರ್ಮಾನಿಸಲಾಗಿದೆ.ನಾಗರಿಕರು ಯಾವುದೇ ರೀತಿಯ ವದಂತಿ, ತಪ್ಪು ಸಂದೇಶಗಳಿಗೆ ಕಿವಿಕೊಡದೆ ಶಾಂತಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಹಿರಿಯ ಉಪವಿಭಾಗಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿಯವರು ಮನವಿ ಮಾಡಿದ್ದಾರೆ.
ಶಾಲಾ,ಕಾಲೇಜುಗಳಿಗೆ ರಜೆ: ಅಯೋಧ್ಯೆ ವಿವಾದದ ತೀರ್ಪು ಪ್ರಕಟವಾಗಲಿರುವ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ನ.೯ರಂದು ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳ ತನಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮದ್ಯ ಮಾರಾಟ ನಿಷೇಧ:
ತೀರ್ಪು ಪ್ರಕಟ ಹಿನ್ನಲೆಯಲ್ಲಿ ನ.9ರಂದು ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ.
ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ:
ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಸಾಮಾಜಿಕ ಜಾಲ ತಾಣಗಳ ಮೇಲೆ ತೀವ್ರ ನಿಗಾ ಇರಿಸಿದೆ.ವಾಟ್ಸ್ಆಪ್, ಫೇಸ್ ಬುಕ್, ಟ್ವೀಟರ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಯಾವುದೇ ಸುಳ್ಳು ಸಂದೇಶ, ವದಂತಿಗಳನ್ನು ಹರಡಿz ಆದಲ್ಲಿ ತಕ್ಷಣ ಕಠಿಣ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಇಲಾಖೆ ಹದ್ದಿನ ಕಣ್ಣಿರಿಸಿದೆ.