Home_Page_Advt
Home_Page_Advt
Home_Page_Advt

ಕುರಿಯದಲ್ಲಿ ಡಬಲ್ ಮರ್ಡರ್ – ಮಹಿಳೆ ಗಂಭೀರ: ಬೆಚ್ಚಿಬೀಳಿಸಿದ ಕೃತ್ಯ!

  • ಕುರಿಯ ಗ್ರಾಮದ ಹೊಸಮಾರು ಎಂಬಲ್ಲಿ ನಡೆದ ಭೀಭತ್ಸ ಘಟನೆ-ಬೆಚ್ಚಿ ಬಿದ್ದ ಗ್ರಾಮಸ್ಥರು
  • ಕೊಗ್ಗು ಸಾಹೇಬ್, ಸಮೀಹಾ ಕೊಲೆ, ಖತೀಜಾಬಿ ಕೊಲೆಯತ್ನ
  • ಕೊಲೆಯ ಸುತ್ತ ಹತ್ತಾರು ಸಂಶಯ
                ಶೇಖ್ ಕೊಗ್ಗು ಸಾಹೇಬ್                                                        ಸಮೀಹಾ

ಪುತ್ತೂರು: ಮನೆಯೊಳಗಿದ್ದ ಮೂವರ ಮೇಲೆ ಕತ್ತಿಯಿಂದ ಬರ್ಬರವಾಗಿ ಕಡಿದ ಪರಿಣಾಮ ಮನೆ ಯಜಮಾನ ವೃದ್ಧ ಮತ್ತವರ ಮೊಮ್ಮಗಳು ಹತ್ಯೆಗೀಡಾದ ಮತ್ತು ಕತ್ತಿಯೇಟಿನಿಂದ ಗಂಭೀರ ಗಾಯಗೊಂಡು ರಕ್ತದ ಮಡುವಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ಧೆಯನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನ.19ರಂದು ನಡೆದಿದೆ.

ಕುರಿಯ ಗ್ರಾಮದ ಹೊಸಮಾರು ಎಂಬಲ್ಲಿ ಘಟನೆ ನಡೆದಿದ್ದು ಹೊಸಮಾರು ನಿವಾಸಿ ಶೇಕ್ ಕೊಗ್ಗು ಸಾಹೇಬ್(75.ವ) ಹಾಗೂ ಅವರ ಮೊಮ್ಮಗಳು, ಮುರ ಎಂ.ಪಿ.ಎಂ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಸಮೀಹಾ ಬಾನು(15.ವ) ಕೊಲೆಯಾದ ದುರ್ದೈವಿಗಳು.ಶೇಕ್ ಕೊಗ್ಗು ಸಾಹೇಬರ ಪತ್ನಿ ಖದೀಜಾಬಿ (65.ವ) ಅವರು ದುಷ್ಕರ್ಮಿಗಳ ಕತ್ತಿಯೇಟಿನಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಹೊರಳಾಡಿಕೊಂಡಿದ್ದವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕುತ್ತಿಗೆಗೆ ಕಡಿದು ಭೀಕರವಾಗಿ ಕೊಂದರು…!

ಶೇಖ್ ಕೊಗ್ಗು ಸಾಹೇಬ್ ಮತ್ತು ಸಮೀಹಾ ಬಾನು ಇಬ್ಬರ ದೇಹದ ಮೇಲೂ ಕತ್ತಿ ಅಥವಾ ತಲವಾರಿನಿಂದ ಕಡಿದ ಗಂಭೀರ ಗಾಯಗಳಿವೆ.ತಲೆ,ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಕಡಿಯಲಾಗಿದೆ. ಬಾಲಕಿಯ ಕೈ ಬೆರಳುಗಳನ್ನು ಹಾಗೂ ಶೇಖ್ ಕೊಗ್ಗು ಸಾಹೇಬರ ಕೈಯ ಬೆರಳುಗಳನ್ನು ಕತ್ತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.ದೇಹದ ಇನ್ನಿತರ ಭಾಗಗಳಿಗೂ ತಲವಾರು ಅಥವಾ ಕತ್ತಿಯಿಂದ ಕಡಿದ ಗಂಭೀರ ಸ್ವರೂಪದ ಗಾಯಗಳಿವೆ.ಇಬ್ಬರ ದೇಹಗಳೂ ಒಂದೇ ಕಡೆ ಇತ್ತು. ರಾತ್ರಿ ವೇಳೆ ಘಟನೆ ನಡೆದಿದ್ದರೆ ಒಂದೇ ಕಡೆ ಮೂವರು ಮಲಗಿರುವ ಸಾಧ್ಯತೆಯಿದ್ದುದರಿಂದ ಮೃತದೇಹಗಳು ಒಟ್ಟಿಗೆ ಇದ್ದಿರಬಹುದು.ರಾತ್ರಿಯಲ್ಲದ ಹೊತ್ತಿನಲ್ಲಿ ಕೊಲೆ ನಡೆದಿದ್ದರೆ, ಕೊಲೆ ನಡೆಸಿ ಎರಡೂ ದೇಹಗಳನ್ನು ಒಂದೇ ಕಡೆ ಹಾಕಿರುವ ಸಾಧ್ಯತೆ ಇದೆ.ಕೊಲೆಗಡುಕರಿಗೆ ಹೆದರಿ ಮುಂಬಾಗಿಲು ತೆರೆಯಲು ಮುಂದಾಗುವ ವೇಳೆ ಅಲ್ಲೇ ಕಡಿದು ಕೊಲೆ ಮಾಡಿ ಹಿಂಬದಿ ಬಾಗಿಲ ಮೂಲಕ ನಿರ್ಗಮಿಸಿರುವ ಸಾಧ್ಯತೆಯೂ ಇದೆ.ಆದರೆ ಬಾಗಿಲಿನಲ್ಲಿ ಯಾವುದೇ ರಕ್ತದ ಕಲೆಗಳು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದು ಮುಂಭಾಗದ ಬಾಗಿಲಿಗೆ ಒಳಗಿನಿಂದ ಬೀಗ ಮತ್ತು ಚಿಲಕವನ್ನು ಹಾಕಿತ್ತು ಎಂದು ಶೇಕ್ ಕೊಗ್ಗು ಸಾಹೇಬರ ಪುತ್ರ ಮಾಹಿತಿ ನೀಡಿದ್ದಾರೆ.ಕೊಲೆ ನಡೆಸಿದ ಆರೋಪಿಗಳು ಹಿಂಬಾಗಿಲ ಮೂಲಕ ಹೊರಗಡೆ ತೆರಳಿದ್ದಾರೆ.ಹಿಂಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿತ್ತು.ಬಾಗಿಲು ಎಲ್ಲಿಯೂ ಮುರಿದ ಲಕ್ಷಣಗಳು ಕಂಡು ಬಂದಿಲ್ಲ.ಮನೆಯೊಳಗಿದ್ದವರು ಬಾಗಿಲು ತೆಗೆದ ಬಳಿಕವೇ ಆರೋಪಿಗಳು ಒಳಪ್ರವೇಶಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದ್ದು ಪರಿಚಿತರೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.ಮೃತದೇಹದ ಬಳಿಯೇ ತಲೆದಿಂಬು ಹಾಗೂ ಬೆಡ್‌ಶೀಟ್ ಪತ್ತೆಯಾಗಿದೆ.ಗಾಯಗೊಂಡಿರುವ ಖದೀಜಾಬಿಯವರು ಮೃತದೇಹದ ಬಳಿಯೇ ಕಾಲು ಮುಂದಕ್ಕೆ ಚಾಚಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.ಇವರ ಮುಖದ ಭಾಗಕ್ಕೆ ಗಂಭೀರ ಏಟು ತಗುಲಿ ಮುಖದ ಮಾಂಸ ನೇತಾಡುತ್ತಿತ್ತು.ರಕ್ತಸ್ರಾವದಿಂದ ಬಳಲಿದ್ದ ಅವರು ಮಾತನಾಡಲು ಅಶಕ್ತರಾಗಿದ್ದರು ಎಂದು ಅವರ ಪುತ್ರ ರಜಬ್ ಶೇಖ್ ಯಾನೆ ರಝಾಕ್ ಮಾಹಿತಿ ನೀಡಿದ್ದಾರೆ.

ಯಾವಾಗ ಕೊಲೆ ನಡೆಯಿತು…?: ಕುರಿಯ ಗ್ರಾಮದ ಹೊಸಮಾರು ನಿವಾಸಿ ಶೇಖ್ ಕೊಗ್ಗು ಸಾಹೇಬರು ತನ್ನ ಪತ್ನಿ ಖದೀಜಾಬಿ, ಮೊಮ್ಮಗಳು ಸಮೀಹಾಬಾನು ಮತ್ತು ನವ ವಿವಾಹಿತೆ ಕಿರಿ ಸೊಸೆ ಶಿಫಾ ಬಾನು ಜೊತೆ ಮನೆಯಲ್ಲಿ ವಾಸ್ತವ್ಯವಿದ್ದರು.ಇವರ ಮೂವರು ಗಂಡು ಮಕ್ಕಳ ಪೈಕಿ ಇಬ್ಬರು ಬೇರೆ ಕಡೆ ಮನೆ ಮಾಡಿ ವಾಸ್ತವ್ಯವಿದ್ದಾರೆ.ನ.೧೮ರಂದು ಹಿರಿಯ ಮಗ ರಝಾಕ್ ಯಾನೆ ರಜಬ್ ಸಾಹೇಬ್ ತಾಯಿಗೆ ಕರೆ ಮಾಡಿದ್ದರು. ತಾಯಿಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪದೇ, ಪದೇ ಕರೆ ಮಾಡಿದರೂ ಸ್ವಿಚ್ ಆಫ್ ಬರುತ್ತಿದ್ದುದರಿಂದ ಆತಂಕಗೊಂಡ ರಜಬ್ ನ.೧೯ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮುಂಬಾಗಿಲು ಒಳ ಭಾಗದಿಂದ ಚಿಲಕ ಹಾಕಿತ್ತು. ಮನೆಯ ಹಿಂಬಾಗಿಲು ತೆರೆದಿತ್ತು.ಅದರ ಮೂಲಕ ಒಳಗೆ ಬಂದು ನೋಡಿದಾಗ ತಂದೆ ಕೊಗ್ಗು ಸಾಹೇಬ್ ಮತ್ತು ಸಮೀಹಾ ಬಾನು ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದರು.ತಾಯಿ ಖತೀಜಾಬಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಈ ಭೀಭತ್ಸ ದೃಶ್ಯ ಕಂಡು ರಜಬ್ ಆಘಾತಕ್ಕೊಳಗಾಗಿ ಸ್ಥಳೀಯರಿಗೆ ಮಾಹಿತಿ ನೀಡಿದರು.ತಕ್ಷಣವೇ ಹಲವಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು.ಬಳಿಕ ಖದೀಜಾಬಿಯವರನ್ನು ಸ್ಥಳೀಯರು ಸೇರಿ ಮಮ್ಮು ಎಂಬವರ ಆಟೋದಲ್ಲಿ ಕರೆದೊಯ್ದು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದರು.ಕೊಲೆಯಾದ ಕೊಗ್ಗು ಸಾಹೇಬರುಮೂವರು ಗಂಡು ಮಕ್ಕಳು ಹಾಗೂ ಪುತ್ರಿಯರಾದ ಫಾತಿಮಾ ಹಾಗೂ ಸಕೀಲಾ ಬಾನುರವರನ್ನು ಅಗಲಿದ್ದಾರೆ.

ಎರಡು ತಿಂಗಳಿಂದ ಅಜ್ಜಿ ಮನೆಯಲ್ಲಿ ವಾಸವಾಗಿದ್ದ ಸಮೀಹಾ: ಸಮೀಹಾ ತನ್ನ ಚಿಕ್ಕಮ್ಮನ ಮನೆಯಿಂದ ಮುರದ ಎಂ.ಪಿ.ಎಂ ಸ್ಕೂಲಿಗೆ ತೆರಳುತ್ತಿದ್ದರು. ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಈಕೆ ಕಳೆದ ಎರಡು ತಿಂಗಳಿನಿಂದ ಕುರಿಯ ಹೊಸಮಾರಿನಲ್ಲಿರುವ ತನ್ನ ಅಜ್ಜ ಶೇಖ್ ಕೊಗ್ಗು ಸಾಹೇಬರ ಮನೆಯಿಂದ ಶಾಲೆಗೆ ತೆರಳುತ್ತಿದ್ದರು.ಅಜ್ಜಿಗೆ ಬಿದ್ದು ಕೈ ನೋವಾಗಿದ್ದ ಕಾರಣ ಮತ್ತು ಮನೆಯಲ್ಲಿ ಕಿರಿ ಸೊಸೆ ಒಬ್ಬಳೇ ಇರುವ ಕಾರಣ ಕೊಗ್ಗು ಸಾಹೇಬ್‌ರವರು ಸಮೀಹಾರನ್ನು ಮನೆಗೆ ಕರೆಸಿಕೊಂಡಿದ್ದರು.ನ.೧೮ರಂದು ಆಕೆ ಶಾಲೆಗೂ ತೆರಳಿರಲಿಲ್ಲ. ಸೋಮವಾರ ಯಾಕೆ ಶಾಲೆಗೆ ತೆರಳಲಿಲ್ಲ ಎಂಬುವುದು ಸಂಶಯಕ್ಕೆ ಕಾರಣವಾಗಿದೆ.ಸಮೀಹಾ ನ.18ರಂದು ಬೆಳಿಗ್ಗೆ ಮನೆಯ ಜಗಲಿಯಲ್ಲಿ ಕುಳಿತ್ತಿದ್ದುದನ್ನು ಗಮನಿಸಿರುವುದಾಗಿ ಸ್ಥಳೀಯ ಕೆಲವರು ಹೇಳಿಕೊಂಡಿದ್ದರು.ಕೊಗ್ಗು ಸಾಹೇಬರು ನ.17 ರಂದು ಸ್ಥಳೀಯ ಮಸೀದಿಗೂ ಬಂದಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.ನ.೧೮ರಂದು ಸಮೀಹಾ ಮನೆಯ ಜಗಲಿಯಲ್ಲಿ ಕುಳಿತಿದ್ದರೆನ್ನುವುದು ನಿಜವೇ ಆಗಿದ್ದಲ್ಲಿ ನ.18ರಂದು ಅಪರಾಹ್ನದ ಬಳಿಕ ಇಲ್ಲವೇ ನ.೧೭ರಂದು ರಾತ್ರಿ ಕೃತ್ಯ ನಡೆದಿರುವ ಸಾಧ್ಯತೆಯಿದೆ.

ಗಂಭೀರ ಸ್ಥಿತಿಯಲ್ಲಿ ಕೊಗ್ಗು ಸಾಹೇಬರವರ ಪತ್ನಿ ಖದೀಜಮ್ಮ

ಮನೆಯ ವಿದ್ಯುತ್ ಫ್ಯೂಸ್ ನಾಪತ್ತೆ: ಮನೆಯೊಳಗೆ ಕೊಲೆಗಾರರು ಪ್ರವೇಶ ಮಾಡುವ ಮುನ್ನ ಮನೆಯ ಹೊರಭಾಗದ ಗೋಡೆಯಲ್ಲಿದ್ದ ವಿದ್ಯುತ್ ಫ್ಯೂಸನ್ನು ತೆಗೆದಿದ್ದಾರೆ.ಅಕ್ಕಪಕ್ಕದಲ್ಲಿ ಯಾವ ಮನೆಗಳೂ ಇಲ್ಲದ ಕಾರಣ ಏನೇ ನಡೆದರೂ ತಕ್ಷಣಕ್ಕೆ ಗೊತ್ತಾಗಲು ಅಸಾಧ್ಯವಾಗಿದೆ.ರಸ್ತೆ ಬದಿಯಲ್ಲೇ ಮನೆ ಇದ್ದರೂ ಘಟನೆ ನಡೆದ ವಿಚಾರ ಯಾವ ಸಾರ್ವಜನಿಕರ ಗಮನಕ್ಕೂ ಬಂದಿರಲಿಲ್ಲ.ಮನೆಯೊಳಗೆ ಕತ್ತಲೆಯಿದ್ದ ಕಾರಣ ಪೊಲೀಸರು ವಿದ್ಯುತ್ ಸ್ವಿಚ್ ಹಾಕಿದಾಗ ಬಲ್ಬ್ ಉರಿಯುತ್ತಿರಲಿಲ್ಲ.ಹೊರಗೆ ಬಂದು ಪೊಲೀಸರು ಪರಿಶೀಲಿಸುವಾಗ ಮೈನ್ ಫ್ಯೂಸ್ ಇರಲಿಲ್ಲ.ಎಲ್ಲಿ ಹುಡುಕಾಡಿದರೂ ಫ್ಯೂಸ್ ದೊರೆಯದ ಕಾರಣ ಪೊಲೀಸರು ಬಳಿಕ ಫ್ಯೂಸ್ ತರಿಸಿ ಸಿಕ್ಕಿಸಿದರು. ಮನೆಯೊಳಗೆ ಪ್ರವೇಶಿಸಿದ್ದ ದುಷ್ಕರ್ಮಿಗಳು ಫ್ಯೂಸ್ ತೆಗೆದು ಮನೆಯೊಳಗೆ ಪ್ರವೇಶಿಸಿದರೇ..? ಅಥವಾ ಕರೆಂಟ್ ಹೋದಾಗ ಮನೆಮಂದಿ ಹೊರಗೆ ಬಂದ ವೇಳೆ ದುಷ್ಕರ್ಮಿಗಳು ಒಳಪ್ರವೇಶಿಸಿದರೇ ಎಂಬುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ.

ತವರು ಮನೆಗೆ ತೆರಳಿ ಬಚಾವಾದ ನವವಧು…!: ಶೇಕ್ ಕೊಗ್ಗು ಸಾಹೇಬರ ಕಿರಿಯ ಮಗ ರಿಯಾರhಗೆ ಒಂದೂವರೆ ತಿಂಗಳ ಹಿಂದೆ ವಿವಾಹವಾಗಿತ್ತು.ಮೂರು ವಾರಗಳ ಹಿಂದೆಯಷ್ಟೆ ರಿಯಾರh ಅವರು ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದಾರೆ.ಪತಿ ವಿದೇಶಕ್ಕೆ ತೆರಳಿದ ಬಳಿಕವೂ ಗಂಡನ ಮನೆಯಲ್ಲೇ ವಾಸವಾಗಿದ್ದ ನವವಧು ರಿಯಾಝ್ರವರ ಪತ್ನಿ ಶಿಫಾ ಕೆಲ ದಿನಗಳ ಹಿಂದೆ ತನ್ನ ತವರು ಮನೆಗೆ ತೆರಳಿದ್ದರು.ತವರು ಮನೆಗೆ ತೆರಳಿದ ಕಾರಣ ಆಕೆ ಬಚಾವಾಗಿದ್ದಾಳೆ ಎಂದು ಸ್ಥಳೀಯರು ಮಾತನಾಡುತ್ತಿದ್ದರು.

ಶ್ವಾನ, ಬೆರಳಚ್ಚು ತಜ್ಞರ ಆಗಮನ: ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.ಶ್ವಾನ ಮನೆಯಿಂದ ೧೦೦ ಮೀ. ದೂರದವರೆಗೆ ಸಾಗಿ ಅಲ್ಲಿರುವ ಬಳ್ಳಮಜಲು ಮಸೀದಿ ಬಳಿಯಿರುವ ಮನೆಯೊಂದರ ಜಗಲಿಯತನಕ ತೆರಳಿದೆ. ಬಳಿಕ ಶ್ವಾನ ಮುಂದಕ್ಕೆ ತೆರಳದೆ ಮನೆಯ ಕಡೆ ಮರಳಿದೆ. ಬಳಿಕ ಮಸೀದಿಯ ಬಳಿಯಿದ್ದ ನೀರಿನ ಬಕೆಟ್ ಬಳಿ ಪರಿಶೀಲನೆ ನಡೆಸಿ ಬಳಿಕ ಮಸೀದಿಯ ಒಳಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.ಬಳಿಕ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಚಿನ್ನಾಭರಣ ದೋಚಿದ ಮಾಹಿತಿಯಿಲ್ಲ: ಮನೆಯಲ್ಲಿರುವ ಯಾವುದೇ ವಸ್ತುಗಳಿಗೆ ಹುಡುಕಾಟ ನಡೆಸಿದ ಬಗ್ಗೆ ಕುರುಹು ಕಂಡು ಬಂದಿಲ್ಲ.ಚಿನ್ನದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಬಾಲಕಿ ಸಮೀಹಾ ಬಾನು ದೇಹದಲ್ಲಿ ಚಿನ್ನದ್ದು ಎನ್ನಲಾದ ಚೈನ್ ಇತ್ತು. ಹಾಗೂ ಗಂಭೀರ ಗಾಯಗೊಂಡಿರುವ ಖದೀಜಾಬಿರವರ ಕಿವಿಯಲ್ಲಿ ಬೆಂಡೋಲೆ ಹಾಗೆಯೇ ಇದೆ.ಕೊಲೆಯಾದ ಬಾಲಕಿ ಮತ್ತು ಗಾಯಗೊಂಡಿರುವ ಖದೀಜಾಬಿರವರ ಮೈಮೇಲಿರುವ ಚಿನ್ನವನ್ನು ದೋಚಿರುವ ಬಗ್ಗೆಯೂ ಮೇಲ್ನೋಟಕ್ಕೆ ಯಾವುದೇ ಮಾಹಿತಿ ಕಂಡು ಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಸತ್ತಿವೇಲು `ಸುದ್ದಿ’ಗೆ ತಿಳಿಸಿದ್ದಾರೆ.

ಓರ್ವ ಪೊಲೀಸ್ ವಶ

ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಟ್ಟತ್ತಾರು ನಿವಾಸಿ ಕರೀಂ ಸಾಹೇಬ್(೨೮ವ.)ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಇಬ್ಬರು ಸೇರಿ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಇನ್ನೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಚಿನ್ನಕ್ಕಾಗಿ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆನ್ನಲಾಗುತ್ತಿದೆಯಾದರೂ ಇದರ ಖಚಿತತೆ ಬಗ್ಗೆ ಪೊಲೀಸರು ತನಿಖೆ ತೀವ್ರ ಗೊಳಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆರೋಪಿ: ಶಂಕಿತ ಆರೋಪಿ ಕರೀಂ ಸಾಹೇಬ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಲ್ಲಿಂದಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕೈನೋವೆಂದು ಹೇಳಿಕೊಂಡು ನ.೧೮ರಂದು ಆಸ್ಪತ್ರೆಗೆ ಬಂದಿದ್ದ ಕರೀಂನನ್ನು ತಪಾಸಣೆ ನಡೆಸಿದ ವೈದ್ಯರು ಕೈಮೂಳೆ ಮುರಿತಕ್ಕೊಳಗಾಗಿರುವುದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತಿಳಿಸಿದ್ದರು.ನ.೧೯ರಂದು ಬರುವುದಾಗಿ ಹೇಳಿ ಹೊರಟು ಬಂದಿದ್ದ ಕರೀಂ ಅದರಂತೆ ನ.೧೯ರಂದು ಆಸ್ಪತ್ರೆಗೆ ದಾಖಲಾಗಿದ್ದರು.ಅಲ್ಲಿಂದಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಂಡ ಹಲ್ಲೆ ನಡೆಸಿತ್ತು ಎಂದು ಹೇಳಿದ್ದ ಕರೀಂ: ಕರೀಂ ಅವರ ಕೈಯಲ್ಲಿ ಗಾಯವಿರುವುದನ್ನು ಗಮನಿಸಿದ್ದ ಕಟ್ಟತ್ತಾರಿನ ಸ್ಥಳೀಯರು ಈ ಬಗ್ಗೆ ವಿಚಾರಿಸಿದ ಸಂದರ್ಭ ತನಗೆ ನಾಲ್ಕಾರು ಮಂದಿ ಸೇರಿ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದರು.ಈ ಕುರಿತು ಪೊಲೀಸರಿಗೆ ದೂರು ನೀಡೋಣ ಎಂದು ಪ್ರತ್ಯುತ್ತರ ನೀಡಿದಾಗ ಬೇಡ ಬೇಡ ಪೊಲೀಸ್ ದೂರು ನೀಡೋದು ಬೇಡ’ ಎಂದು ಕರೀಂ ತಿಳಿಸಿದ್ದ ಎನ್ನುವ ಮಾಹಿತಿ ಲಭಿಸಿದೆ.

ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಜನ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮನೆ ಬಳಿ ಸಾವಿರಕ್ಕೂ ಮಿಕ್ಕಿ ಜನ ಜಮಾಯಿಸಿದ್ದರು.ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು. ಮನೆಯ ಕಡೆ ಸಾರ್ವಜನಿಕರು ಹಾಗೂ ಮಾಧ್ಯಮ ವರದಿಗಾರರಿಗೂ ತೆರಳದಂತೆ ತಡೆ ಒಡ್ಡಿದ್ದರು.ಸ್ಥ ಳದಲ್ಲಿ ಸೇರಿದ್ದ ಜನರು ಧರ್ಮಭೇದ ಮರೆತು ಕೊಲೆಯಾದ ಶೇಖ್ ಕೊಗ್ಗು ಸಾಹೇಬರ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದರು.ಪಶುವಿನಂತಹ ವ್ಯಕ್ತಿಯನ್ನು ಕೊಲೆ ಮಾಡಿದ್ರಲ್ಲಾ, ಇವರನ್ನು ಯಾಕೆ ಕೊಲೆ ಮಾಡಿದ್ರು, ಆ ಬಾಲೆ ಏನು ಮಾಡಿತ್ತು ಎಂದು ಸೇರಿದ್ದ ಪ್ರತಿಯೊಬ್ಬರು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ಘಟನೆ ನಡೆದಿರುವುದು ಯಾವಾಗ ಎಂಬುದು ಸ್ಪಷ್ಟವಾಗಿಲ್ಲ.  ಆದಿತ್ಯವಾರ ರಾತ್ರಿಯಿಂದ ಸೋಮವಾರ ರಾತ್ರಿಯ ನಡುವೆ ಘಟನೆ ಆಗಿರುವ ಸಾಧ್ಯತೆ ಇದೆ.ಪ್ರಾಥಮಿಕ ತನಿಖೆ ನಡೆಸಿದ್ದು ಕೆಲವು ಕುರುಹುಗಳು ಪತ್ತೆಯಾಗಿದೆ, ಚಿನ್ನಾಭರಣ ಕಳವು ಆಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು.ಘಟನೆಯ ಬಗ್ಗೆ ಕೂಲಂಕುಶ ತನಿಖೆ ನಡೆಸಲಾಗುತ್ತಿದೆ. ಬೆರಳಚ್ಚು, ಶ್ವಾನ ಕರೆಸಲಾಗಿದೆ. ಆರೋಪಿಗಳ ಪತ್ತೆಗೆ ಶೀಘ್ರ ಕ್ರಮಕೈಗೊಳ್ಳಲಾಗುವುದು.
-ಬಿ.ಎಂ.ಲಕ್ಷ್ಮೀಪ್ರಸಾದ್, ದ.ಕ.ಎಸ್ಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಭೇಟಿ, ಸಂಪ್ಯ ಠಾಣಾ ಎಸ್‌ಐ ಸಕ್ತಿವೇಲುರವರಿಂದ ಪರಿಶೀಲನೆ

ಖತೀಜಾಬಿಯವರು ಚೇತರಿಸಿಕೊಂಡರೆ ಪೂರ್ಣ ಮಾಹಿತಿ: ತಲವಾರು ದಾಳಿಯಿಂದ ಗಂಭೀರ ಗಾಯಗೊಂಡಿರುವ ವೃದ್ಧೆ ಖದೀಜಾಬಿಯವರು ಆಸ್ಪತ್ರೆಗೆ ದಾಖಲಾಗಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ. ವೃದ್ಧೆ ಚೇತರಿಸಿಕೊಂಡ ಬಳಿಕ ಘಟನೆಯ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರನ್ನು ‘ಸುದ್ದಿ’ ನಾವು ಊಟ ಮಾಡಿ ಜೊತೆಯಾಗಿ ಮಲಗಿದ್ದೆವು, ನನಗೆ ಎಚ್ಚರವಾಗಿ ನೋಡುವಾಗ ರಕ್ತ ಬರುತ್ತಿತ್ತು’ ಯಾವಾಗಲೂ ಬೇಗ ಏಳುತ್ತಿದ್ದ ಮೊಮ್ಮಗಳು ಇನ್ನೂ ಯಾಕೆ ಎದ್ದಿಲ್ಲ ಎಂದು ನೋಡಿದಾಗ ಆಕೆ ಮೃತಪಟ್ಟಿದ್ದಳು. ಎಂದಷ್ಟೇ ತಿಳಿಸಿದ್ದಾರೆ. ಎರಡು-ಮೂರು ದಿನಗಳೊಳಗೆ ಇವರು ಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯಿದ್ದು ಬಳಿಕ ಎಲ್ಲ ವಿಚಾರಗಳೂ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಜ್ಜನ ವ್ಯಕ್ತಿ ಕೊಗ್ಗು ಸಾಹೇಬ್: ಶೇಖ್ ಕೊಗ್ಗು ಸಾಹೇಬ್ ಅವರು ಸಜ್ಜನ ವ್ಯಕ್ತಿಯಾಗಿದ್ದು ಸ್ಥಳೀಯವಾಗಿ ಉತ್ತಮ ವ್ಯಕ್ತಿಯೆಂದೇ ಗುರುತಿಸಿಕೊಂಡಿದ್ದಾರೆ.ನಿತ್ಯ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಅವರು ಎಲ್ಲರೊಂದಿಗೆ ಉತ್ತಮವಾಗಿ ಬೆರೆಯುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಇಂತಹ ವ್ಯಕ್ತಿಗಳನ್ನು ಯಾಕೆ ಕೊಂದರು ಎನ್ನುವುದು ನಾಗರಿಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಪೊಲೀಸ್ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್, ಎಡಿಷನಲ್ ಎಸ್ಪಿ ಡಾ|ವಿಕ್ರಂ ಆಮ್ಟೆ, ಎಎಸ್ಪಿ ಸೈದುಲ್ ಅದಾವತ್, ಡಿವೈಎಸ್‌ಪಿ ದಿನಕರ ಶೆಟ್ಟಿ, ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ನಗರ ಠಾಣಾ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ, ಪುತ್ತೂರು ಗ್ರಾಮಾಂತರ ಎಸ್.ಐ.ಸತ್ತಿವೇಲು ಭೇಟಿ ನೀಡಿದ್ದಾರೆ. ಅದೇ ರೀತಿ ವೈದ್ಯರ ತಂಡ ಭೇಟಿ ನೀಡಿ ಸ್ಥಳದಲ್ಲೇ ಕೆಲವು ಮಹಜರು ಕ್ರಿಯೆಯನ್ನು ನಡೆಸಿದರು.

ನೂರಾರು ಮಂದಿ ಭೇಟಿ: ಬಿಜೆಪಿ ಗ್ರಾಮಾಂತರ ಮಂಡಲದ ನಿಯೋಜಿತ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,ಎಪಿಎಂಸಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ಅಜ್ಜಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಮುಲಾರ್, ನಗರಸಭಾ ಸದಸ್ಯ ರಿಯಾಝ್ ರ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದಿಕ್ ಕೆ.ಎ., ಎಸ್.ಡಿ.ಎ.ಯು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ, ನರಿಮೊಗರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಬೂಡಿಯಾರು ಪುರುಷೋತ್ತಮ ರೈ, ಆರ್ಯಾಪು ಗ್ರಾ.ಪಂ.ಸದಸ್ಯರು, ಮುಂಡೂರು ಗ್ರಾ.ಪಂ ಸದಸ್ಯರು ಮತ್ತು ಅನೇಕ ಮಂದಿ ಭೇಟಿ ನೀಡಿದರು.ಬೆಳಿಗ್ಗೆಯಿಂದ ಸಂಜೆಯವರೆಗೂ ಮನೆ ಮುಂಭಾಗದಲ್ಲಿ ಜನಸ್ತೋಮವೇ ಸೇರಿರುವುದು ಕಂಡು ಬಂತು.

ದಿನವಿಡೀ ರಕ್ತದ ಮಡುವಲ್ಲಿದ್ದ ಖತೀಜಾಬಿ: ಕತ್ತಿಯೇಟಿನಿಂದ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಸ್ಥಿತಿಯಲ್ಲಿಯೇ ಬಿದ್ದಿದ್ದ ಖತೀಜಾಬಿಯವರು ಕೊನೆಗೂ ಬದುಕುಳಿದಿರುವುದು ಪವಾಡವೆನ್ನುವಂತಾಗಿದೆ.ನ.೧೭ರ ರಾತ್ರಿ ಘಟನೆ ನಡೆದಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು ಆ ಬಳಿಕದಿಂದ ನ.೧೯ರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬರುವವರೆಗೂ ರಕ್ತ ಸ್ರಾವವಾಗುತ್ತಾ ರಕ್ತದ ಮಡುವಲ್ಲಿಯೇ ಬಿದ್ದಿದ್ದ ಖತೀಜಾಬಿಯವರು ಬದುಕುಳಿದಿರುವುದೇ ಅಚ್ಚರಿ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.