Home_Page_Advt
Home_Page_Advt
Home_Page_Advt

ಕುರಿಯದಲ್ಲಿ ಡಬಲ್ ಮರ್ಡರ್ – ಕೊಲೆ ಮಾಡಿ ಕಿಡ್ನಾಪ್ ಕಥೆ ಕಟ್ಟಿದ್ದ ಆರೋಪಿ ಕರೀಂ ಖಾನ್!

Puttur_Advt_NewsUnder_1
Puttur_Advt_NewsUnder_1
  • ಮನೆಯ ಗೋಡೆ ಏರಿ ಕೋಣೆಗೆ ಹಾರಿದ್ದ ಕರೀಂ ಖಾನ್…!

ಪುತ್ತೂರು: ಕುರಿಯ ಗ್ರಾಮದ ಹೊಸಮಾರು ಎಂಬಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣ ತಿರುವು ಪಡೆದುಕೊಳ್ಳುತ್ತಿದ್ದು ಅಜ್ಜ ಹಾಗೂ ಮೊಮ್ಮಗಳನ್ನು ಕತ್ತಿಯಿಂದ ಕಡಿದು ಕೊಂದು ವೃದ್ಧೆಯನ್ನು ಗಂಭೀರ ಗಾಯಗೊಳಿಸಿರುವ ಆರೋಪಿ ಕರೀಂ ಖಾನ್ ಇಡೀ ಘಟನೆಯ ಹಾದಿ ತಪ್ಪಿಸಲು ಕಿಡ್ನ್ಯಾಪ್ ಕಥೆ ಕಟ್ಟಿದ್ದು ಇದೀಗ ಬಯಲಾಗಿದೆ.

ನ.೧೭ರಂದು ರಾತ್ರಿ ಶೇಖ್ ಕೊಗ್ಗು ಸಾಹೇಬರ ಮನೆಗೆ ರಾತ್ರಿ ವೇಳೆ ನುಗ್ಗಿದ ಆರೋಪಿ ಕೊಗ್ಗು ಸಾಹೇಬ್, ಅವರ ಪತ್ನಿ ಖತೀಜಾಬಿ ಹಾಗೂ ಮೊಮ್ಮಗಳು ಸಮೀಹಾ ಬಾನು ಅವರಿಗೆ ಹಿಗ್ಗಾಮುಗ್ಗಾ ಕತ್ತಿಯಿಂದ ಕಡಿದು ಪರಾರಿಯಾಗಿದ್ದ. ತೀವ್ರ ಗಾಯಗೊಂಡಿದ್ದ ಕೊಗ್ಗು ಸಾಹೇಬ್ ಹಾಗೂ ಸಮೀಹಾ ಮೃತಪಟ್ಟಿದ್ದರೆ ವೃದ್ಧೆ ಖತೀಜಾಬಿ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿದ್ದರು. ಕೊಲೆ ಮಾಡುವ ಸಂದರ್ಭದಲ್ಲಿ ಆರೋಪಿ ಕರೀಂ ಖಾನ್ ಕೈಗೂ ಕತ್ತಿಯ ಗಾಯಗಳಾಗಿದ್ದು ಅದಕ್ಕೆ ಚಿಕಿತ್ಸೆ ಪಡೆಯಲು ಆತ ಆಸ್ಪತ್ರೆಗೂ ದಾಖಲಾಗಿದ್ದ.

ನ.೧೮ರಂದು ಆರೋಪಿ ಕರೀಂ ಖಾನ್ ಕುರಿಯದಲ್ಲಿದ್ದಾಗ ಆತನ ಪರಿಚಯಸ್ಥರು ಆತನ ಕೈಗೆ ಗಾಯವಾಗಿರುವುದನ್ನು ಕಂಡು ಏನೆಂದು ವಿಚಾರಿಸಿದ್ದು ಆ ವೇಳೆ ಆರೋಪಿ ಕರೀಂ ಕಿಡ್ನ್ಯಾಪ್ ಕಥೆ ಹೇಳಿದ್ದ. ನಾನು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನ.೧೭ರಂದು ಕುರಿಯ ಕಡೆಗೆ ಬರುತ್ತಿದ್ದ ವೇಳೆ ಕುರಿಯ ಜಂಕ್ಷನ್ ಸಿಗುವ ಮೊದಲು ಇರುವ ಕೋಳಿ ಅಂಗಡಿ ಮುಂಭಾಗದಲ್ಲಿ ನಾಲ್ಕು ಮಂದಿ ದರೋಡೆಕೋರರು ನನ್ನ ಬೈಕ್‌ನ್ನು ಅಡ್ಡಗಟ್ಟಿ ನನಗೆ ಹಲ್ಲೆ ನಡೆಸಿದ್ದು ಈ ವೇಳೆ ನಾನು ಬೈಕ್‌ನಿಂದ ಕೆಳಗೆ ಬಿದ್ದಿದ್ದೆ. ಆ ವೇಳೆ ದರೋಡೆಕೋರರು ನನ್ನನ್ನು ವಾಹನವೊಂದರಲ್ಲಿ ಕೂಡಿಹಾಕಿ ಕಿಡ್ನಾಪ್ ಮಾಡಿದ್ದು ಡಿಂಬ್ರಿ ಎಂಬ ಸ್ಥಳದಲ್ಲಿ ವಾಹನದಿಂದ ಇಳಿಸಿ ಹೋಗಿದ್ದರು ಎಂದು ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಬಗ್ಗೆ ಪೊಲೀಸ್ ದೂರು ಯಾಕೆ ನೀಡಿಲ್ಲ ಎಂಬ ಪ್ರಶ್ನೆಗೆ ಪೊಲೀಸ್ ದೂರು ನೀಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ, ಹಾಗಾಗಿ ದೂರು ನೀಡಿಲ್ಲ ಎಂದು ಆರೋಪಿ ಕರೀಂ ಹೇಳಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರ್ಪುಂಜದಿಂದ ಎರಡೂವರೆ ಕಿ.ಮೀ ಒಳರಸ್ತೆಯ ಕುರಿಯ ಹೊಸಮಾರು ಎಂಬಲ್ಲಿ ನಡೆದ ಘಟನೆ ತಾಲೂಕನ್ನೇ ಬೆಚ್ಚಿಬೀಳಿಸಿದ್ದು ಇಡೀ ಕುರಿಯ ಗ್ರಾಮವೇ ಆಘಾತದಿಂದ ಇನ್ನೂ ಹೊರಬಂದಿಲ್ಲ.

ಕೊಗ್ಗು ಸಾಹೇಬ್ ಮನೆಯಲ್ಲಿ ಕೆಲಸ ಮಾಡಿದ್ದ ಆರೋಪಿ: ಆರೋಪಿ ಕರೀಂ ಖಾನ್ ನ.೧೭ರಂದು ಮೃತ ಕೊಗ್ಗು ಸಾಹೇಬ್ ಅವರ ಮನೆಯ ಜಾಗದ ಸುತ್ತ ಇರುವ ಬೇಲಿಯ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಕೊಗ್ಗು ಸಾಹೇಬ್ ಅವರೂ ಕರೀಂ ಖಾನ್ ಜೊತೆಗೂಡಿ ಬೇಲಿ ದುರಸ್ತಿಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ಕರೀಂ ಖಾನ್ ರಾತ್ರಿ ವೇಳೆ ಕೃತ್ಯ ಎಸಗಿದ್ದಾರೆ. ಕೊಗ್ಗು ಸಾಹೇಬರ ಮನೆಯ ಬಳಿಯ ಬೇಲಿಯ ಕೆಲಸಕ್ಕೆ ಬಂದಿದ್ದ ವೇಳೆ ಮನೆಯ ಸಂಪೂರ್ಣ ಚಲನವಲನಗಳನ್ನು ಗಮನಿಸಿದ್ದ. ಮಾತ್ರವಲ್ಲದೇ ಅದೇ ದಿನ ಕೊಗ್ಗು ಸಾಹೇಬರ ಕಿರಿ ಸೊಸೆ ತವರಿಗೆ ತೆರಳಿದ್ದು ಹಾಗಾಗಿ ಮನೆಯಲ್ಲಿ ಚಿನ್ನಾಭರಣ ಇರುವ ಬಗ್ಗೆಯೂ ಆತ ತಿಳಿದುಕೊಂಡಿದ್ದ ಅದೇ ದಿನ ರಾತ್ರಿ ಆರೋಪಿ ಕರೀಂ ಹಿಂಬಾಗಿಲ ಬಳಿ ಗೋಡೆಯ ಮೇಲಕ್ಕೇರಿ ಉಪಾಯದಿಂದ ಮನೆಯೊಳಗೆ ಪ್ರವೇಶಿಸಿದ್ದು ಈ ವೇಳೆ ಶಬ್ದ ಕೇಳಿದಾಗ ಮನೆ ಮಂದಿ ಎಚ್ಚರಗೊಂಡಿದ್ದರು. ಆರೋಪಿಯು ಚಿನ್ನಾಭರಣ ದೋಚಲು ಬಂದಿದ್ದನೇ ಅಥವಾ ಸಮೀಹಾಬಾನು ಮೇಲೆ ಅತ್ಯಾಚಾರ ನಡೆಸಲು ಬಂದಿರಬಹುದು. ಮನೆಯಲ್ಲಿ ಕೊಗ್ಗು ಸಾಹೇಬ್‌ರವರ ಕಿರಿಯ ಸೊಸೆ ಇಲ್ಲದಿರುವ ವಿಚಾರ ಕೆಲಸಕ್ಕೆ ಬಂದಿದ್ದ ಆತನಿಗೆ ತಿಳಿದಿದ್ದರಿಂದ ಸಮೀಹಾ ಬಾನು ಮೇಲೆ ಅತ್ಯಾಚಾರ ಮಾಡುವ ಉದ್ದೇಶದಿಂದಲೇ ಬಂದಿರಬಹುದು ಎಂದೂ ಪ್ರಚಾರವಿರುವ ಕಾರಣ ಈ ನಿಟ್ಟಿನಲ್ಲೂ ಪೊಲೀಸ್ ತನಿಖೆ ನಡೆಯುತ್ತಿದೆ.

ಗೋಡೆ ಏರಿ ಕೋಣೆಯೊಳಗೆ ಹಾರಿದ್ದ ಕರೀಂ ಖಾನ್…!: ಮನೆಯ ಮಾಡಿನ ಮೂಲಕ ಮನೆಯ ಅಟ್ಟಕ್ಕೆ ಬಂದ ಈತ ಮನೆಯಲ್ಲಿ ಇತ್ತೀಚೆಗೆ ಮದುವೆಯಾಗಿ ಮನೆಯಲ್ಲಿದ್ದ ಕೊಗ್ಗು ಸಾಹೇಬರ ಕಿರಿಯ ಮಗ ರಿಯಾಝ್ ಪತ್ನಿ ಮಲಗುವ ಕೋಣೆಗೆ ಹಾರಿರುವುದಾಗಿ ತಿಳಿದು ಬಂದಿದೆ. ರಾತ್ರಿ ಸುಮಾರು ೧೧ ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು ಮನೆಯ ಕೋಣೆಯೊಳಗೆ ಉಂಟಾದ ಶಬ್ದ ಕೇಳಿ ಮನೆಯ ಎದುರಿನ ಕೋಣೆಯಲ್ಲಿ ಮಲಗಿದ್ದ ಸಮೀಹಾ ಬಾನುಗೆ ಎಚ್ಚರವಾಗಿ ವಿದ್ಯುತ್ ಸ್ವಿಚ್ ಹಾಕಿದ್ದಾಳೆ. ಆ ವೇಳೆ ಕರೆಂಟ್ ಇರಲಿಲ್ಲ. ಬಳಿಕ ಆಕೆ ತನ್ನ ಮೊಬೈಲ್‌ನಲ್ಲಿದ್ದ ಟಾರ್ಚನ್ನು ಹಿಡಿದು ಮನೆಯೊಳಗೆ ತೆರಳಿದಾಗ ಆರೋಪಿ ಆಕೆಯನ್ನು ಹಿಡಿದು ನೆಲಕ್ಕೆ ಅಪ್ಪಳಿಸಿದ್ದಾನೆ. ಬಳಿಕ ಅಡುಗೆ ಕೋಣೆಯಲ್ಲಿದ್ದ ಹರಿತವಾದ ಕೊಕ್ಕೆ ಕತ್ತಿಯನ್ನು ತಂದು ಕತ್ತಲೆಯ ನಡುವೆ ಹಿಗ್ಗಾಮುಗ್ಗಾ ಇರಿದಿದ್ದಾನೆ. ಇರಿಯುವ ವೇಳೆ ಕೈಯಿಂದ ತಡೆಯಲು ಯತ್ನಿಸಿದ ವೇಳೆ ಕತ್ತಿಯೇಟಿನಿಂದ ಸಮೀಹಾಳ ಕೈ ತುಂಡಾಗಿದೆ. ಬಳಿಕ ಎಚ್ಚರವಾದ ಕೊಗ್ಗು ಸಾಹೇಬರತ್ತವೂ ಕತ್ತಿಯಿಂದ ಇರಿದಿದ್ದಾನೆ. ಬಳಿಕ ಅಲ್ಲಿ ಮಲಗಿದ್ದ ಕೊಗ್ಗು ಸಾಹೇಬರ ಪತ್ನಿ ಖದೀಜಾಬಿಗೂ ಇರಿದು ಅವರ ಬಳಿ ಇದ್ದ ೩೦ ಗ್ರಾಂ ತೂಕದ ಸರ ಹಾಗೂ ೬೦೦೦ ನಗದನ್ನು ದೋಚಿ ಹಿಂಬಾಗಿಲ ಮೂಲಕ ಪರಾರಿಯಾಗಿದ್ದಾನೆನ್ನಲಾಗಿದೆ.

ಆರೋಪಿ ಕರೀಂ ಖಾನ್

ಹೆಣಗಳ ಬಳಿಯೇ ೨ ದಿನ ಕಳೆದ ಖತೀಜಾಬಿ…!: ನ೧೭ರಂದು ಭಾನುವಾರ ರಾತ್ರಿ ೧೧ ಗಂಟೆಗೆ ಕೊಗ್ಗು ಸಾಹೇಬರ ಮನೆಯಲ್ಲಿ ಎರಡು ಕೊಲೆಗಳು ನಡೆಯುತ್ತದೆ. ಮನೆಯಲ್ಲಿದ್ದ ವೃದ್ದೆ ಖದೀಜಾಬಿಯವರ ಮೇಲೂ ಗಂಭೀರ ಗಾಯಗಳಾಗುತ್ತದೆ. ಎರಡು ಹೆಣಗಳು ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದರೆ. ಕೂತಲ್ಲಿಂದ ಮೇಲೆ ಏಳಲಾಗದೆ ಮನೆಯ ಒಂದು ಮೂಲೆಯಲ್ಲಿ ಎರಡು ರಾತ್ರಿ ವೃದ್ದೆ ಕಳೆದಿದ್ದಾರೆ. ಮನೆಯ ಕೋಣೆಯೆಲ್ಲಾ ರಕ್ತದ ಓಕುಳಿಯೇ ಹರಿದಿತ್ತು. ವಿದ್ಯುತ್ ಇಲ್ಲದೆ ಕತ್ತಲೆ ಕೋಣೆ, ಹಿಂಬಾಗಿಲು ತೆರೆದ ಮನೆ, ಇವೆಲ್ಲದರ ಮಧ್ಯೆ ಕತ್ತಿಯೇಟಿನಿಂದಾಗಿ ರಕ್ತಸ್ರಾವವಾಗುತ್ತಲೇ ಗಂಭೀರ ಸ್ಥಿತಿಯಲ್ಲಿ ವೃದ್ದೆ ಎರಡು ರಾತ್ರಿ ಕಳೆದಿರುವುದು ಪವಾಡವೇ ಸರಿ. ಖದೀಜಾಬಿಯವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ತುಸು ಚೇತರಿಸಿಕೊಂಡಿದ್ದಾರೆ.

ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ: ಆರೋಪಿ ಕರೀಂ ಖಾನ್ ಸ್ಥಳೀಯವಾಗಿ ಎಲ್ಲರೊಂದಿಗೆ ಉತ್ತಮವಾಗಿ ಬೆರೆತುಕೊಂಡಿದ್ದು ಇಂತಹ ಕೃತ್ಯ ಎಸಗುತ್ತಾನೆ ಎಂದರೆ ಯಾರೂ ಅಂದುಕೊಂಡಿರಲಿಲ್ಲ. ಮೂಲತಃ ಬೇಲೂರಿನವನಾದ ಕರೀಂ ಖಾನ್ ಸುಮಾರು ೮ ವರ್ಷಗಳ ಹಿಂದೆ ಕುರಿಯದಿಂದ ಯುವತಿಯೋರ್ವಳನ್ನು ವಿವಾಹವಾಗಿದ್ದ. ಕರೀಂ ಖಾನ್‌ಗೆ ನಾಲ್ವರು ಮಕ್ಕಳೂ ಇದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಆತ ಕೆಲಸದಲ್ಲಿ ಸ್ಥಳೀಯವಾಗಿ ಉತ್ತಮ ಹೆಸರನ್ನೂ ಪಡೆದಿದ್ದ. ಕೆಟ್ಟ ಚಟಗಳೂ ಆತನಿಗೆ ಇರುವ ಬಗ್ಗೆ ಯಾರಿಗೂ ಮಾಹಿತಿ ಕೂಡಾ ಇಲ್ಲ. ಮೊದಲಿಗೆ ಕುರಿಯ ಗ್ರಾಮದ ಕಟ್ಟತ್ತಾರು ಎಂಬಲ್ಲಿ ಮನೆ ಮಾಡಿಕೊಂಡಿದ್ದ ಆತ ಬಳಿಕ ಆಶ್ರಯ ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲನೇ ಮನೆಯನ್ನು ಬಾಡಿಗೆಗೆ ನೀಡಿರುವ ಕರೀಂ ಖಾನ್ ಪತ್ನಿ ಮಕ್ಕಳೊಂದಿಗೆ ಕಟ್ಟತ್ತಾರುವಿನಲ್ಲಿರುವ ಎರಡನೇ ಮನೆಯಲ್ಲಿ ವಾಸವಾಗಿದ್ದ. ಆರೋಪಿ ಕರೀಂ ಖಾನ್ ಮನೆಯಿಂದ ಕೊಗ್ಗು ಸಾಹೇಬ್ ಮನೆಗೆ ಅರ್ಧ ಕಿ.ಮೀ ಅಂತರವಿದ್ದು ಕುಟುಂಬಸ್ಥರಾದ ಕಾರಣ ಕರೀಂ ಖಾನ್ ಕೊಗ್ಗು ಸಾಹೇಬ್ ಮನೆಗೆ ಕೆಲವೊಮ್ಮೆ ಭೇಟಿ ನೀಡುತ್ತಿದ್ದ ಎನ್ನಲಾಗಿದೆ.

ಸಂಪ್ಯ ಮಸೀದಿಯಲ್ಲಿ ಕೊಗ್ಗು ಸಾಹೇಬರ ದಫನ: ತಾನು ಸತ್ತರೆ ತನ್ನನ್ನು ಸಂಪ್ಯ ಮಸೀದಿಯ ಖಬರ್‌ಸ್ಥಾನದಲ್ಲಿ ದಫನ ಮಾಡಬೇಕು ಎಂದು ಕೊಗ್ಗು ಸಾಹೇಬ್ ಕೆಲ ವರ್ಷಗಳ ಹಿಂದೆಯೇ ಕುಟುಂಬಸ್ಥರಲ್ಲಿ ಹೇಳಿದ್ದರು. ಆ ಪ್ರಕಾರ ಕೊಗ್ಗು ಸಾಹೇಬರ ಮೃತದೇಹವನ್ನು ಸಂಪ್ಯ ಮಸೀದಿಯ ವಠಾರದಲ್ಲಿ ದಫನ ಮಾಡಲಾಯಿತು. ಈ ವೇಳೆ ನೂರಾರು ಮಂದಿ ಆಗಮಿಸಿದ್ದರು. ವಿದೇಶದಲ್ಲಿದ್ದ ಅವರ ಕಿರಿಯ ಮಗ ರಿಯಾಝ್ ನ.೧೯ರಂದು ತಡರಾತ್ರಿ ಆಗಮಿಸಿದ್ದರು. ಬಾಲಕಿ ಸಮೀಹಾ ಮೃತದೇಹವನ್ನು ಬಂಟ್ವಾಳ ತಾಲೂಕಿನ ಕಾವಳ್‌ಕಟ್ಟೆಯ ಮಸೀದಿಯಲ್ಲಿ ದಫನ ಕಾರ್ಯ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಆರೋಪಿಯ ಮಾಹಿತಿ ಮೊದಲು ನೀಡಿದ್ದು ಗ್ರಾಮಸ್ಥ
ಕೊಗ್ಗು ಸಾಹೇಬರ ಮನೆಯಲ್ಲಿ ಘಟನೆ ನಡೆದ ಕೂಡಲೇ ಮನೆಯ ಮುಂದೆ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ತಕ್ಷಣವೇ ಪೊಲೀಸರು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದರು. ಕೊಲೆ ಮಾಡಿದವರು ಯಾರು ಮತ್ತು ಯಾಕಾಗಿ ಕೊಲೆ ಮಾಡಿದರು ಎನ್ನುವ ಪ್ರಶ್ನೆಯನ್ನೇ ಎಲ್ಲರೂ ಹಾಕುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಲಂದರ್ ಕಟ್ಟತ್ತಾರು ಎಂಬವರು ಸ್ಪೋಟಕ ಮಾಹಿತಿಯೊಂದನ್ನು ಪೊಲೀಸರಿಗೆ ನೀಡುತ್ತಾರೆ. ಅದೇನೆಂದರೆ `ಭಾನುವಾರದಂದು ಯಾರೋ ಅಪರಿಚಿತರು ಇಲ್ಲಿನ ಯುವಕನೊಬ್ಬನಿಗೆ ಹಲ್ಲೆ ನಡೆಸಿದ್ದು ಯುವಕ ಗಾಯಗೊಂಡಿದ್ದಾನೆ, ಕತ್ತಿಯಿಂದ ಕಡಿದ ಅಪರಿಚಿತರು ಪರಾರಿಯಾಗಿದ್ದರಂತೆ’ ಎಂದು ಹೇಳಿಕೆ ನೀಡಿದ್ದಾರೆ. ಆ ವೇಳೆ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಕಲಂದರ್ ಅವರನ್ನು ಪ್ರಶ್ನಿಸಿದ್ದು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತೇ ಎಂದು ಕೇಳಿದಾಗ ಪೊಲೀಸರಿಗೆ ದೂರು ಕೊಡುವುದು ಬೇಡ ಎಂದು ಕರೀಂ ಖಾನ್ ಹೇಳಿದ್ದನಂತೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಇಲ್ಲ ಎಂದು ಹೇಳಿಕೊಂಡಿದ್ದರು. ತನ್ನ ಕೈ ಬೆರಳಿಗಾದ ಗಾಯದ ಕುರಿತು ಆತ ತನ್ನ ಮನೆ, ಇತರ ಕಡೆಗಳಲ್ಲಿ ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡಿದ್ದ. ಇದನ್ನೇ ಪ್ರಮುಖ ಸುಳಿವನ್ನಾಗಿಸಿಕೊಂಡ ಪೊಲೀಸರು ಆತ ನೀಡಿದ್ದ ಭಿನ್ನ ಹೇಳಿಕೆಗಳ ಹಿನ್ನೆಲೆಯಲ್ಲಿ ಬಲವಾದ ಸಂಶಯದೊಂದಿಗೆ ತನಿಖೆ ಕೇಂದ್ರೀಕರಿಸಿ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದ್ದ ಕರೀಂ ಖಾನ್‌ನನ್ನು ತಕ್ಷಣವೇ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದರು. ಪ್ರಾರಂಭದಲ್ಲಿ ತಾನು ಬೈಕ್‌ನಿಂದ ಬಿದ್ದು ಗಾಯಗೊಂಡಿರುವುದಾಗಿ ಪೋಲಿಸರಿಗೆ ಹೇಳಿಕೆ ನೀಡಿದ್ದ ಕರೀಂ ಖಾನ್ ಬಳಿಕ ಎಲ್ಲವನ್ನೂ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ಊಹಿಸಲೂ ಸಾಧ್ಯವಾಗುತ್ತಿಲ್ಲ
ನನ್ನ 29 ವರ್ಷದ ಅನುಭವದಲ್ಲಿ ಇಂತಹ ಘಟನೆ ಸ್ಥಳೀಯವಾಗಿ ನೋಡಿರಲಿಲ್ಲ. ಕೇಳಿರಲಿಲ್ಲ. ಇದೀಗ ನಮ್ಮ ಗ್ರಾಮದಲ್ಲೇ ಇಂತಹದ್ದೊಂದು ಭೀಭತ್ಸ ಘಟನೆ ನಡೆದಿರುವುದನ್ನು ನಂಬಲೂ ಸಾಧ್ಯವಾಗುತ್ತಿಲ್ಲ. ನಡೆಯಬಾರದ ಘಟನೆಯೊಂದು ನಡೆದುಹೋಗಿರುವುದರಿಂದ ಇಡೀ ಊರಿಗೆ ಊರೇ ಬೇಸರ ಮತ್ತು ದುಃಖದಲ್ಲಿದೆ. ನಮ್ಮ ಊರು, ಪರಿಸರ ಚೆನ್ನಾಗಿರಬೇಕು ಎಂಬ ಆಸೆ ನಮ್ಮದು. ಆದರೆ ಇಂತಹ ಕೆಟ್ಟ ಘಟನೆಗಳು ಇಡೀ ಊರಿಗೆ ಕಪ್ಪು ಚುಕ್ಕೆಯಾಗಿದೆ. ಸದ್ರಿ ಘಟನೆಯಿಂದಾಗಿ ಮನಸ್ಸಿಗೆ ತುಂಬಾ ಆಘಾತವಾಗಿದ್ದು ಗ್ರಹಿಸಲಾಗದ ಘಟನೆಯಿಂದಾಗಿ ಗ್ರಾಮದ ಜನತೆ ಧರ್ಮಭೇದ ಮರೆತು ದುಃಖಿತರಾಗಿದ್ದಾರೆ. ಇಂತಹ ಘೋರ ಘಟನೆ ಇನ್ನೆಲ್ಲಿಯೂ ನಡೆಯದಿರಲಿ ಎನ್ನುವುದೇ ನನ್ನ ಪ್ರಾರ್ಥನೆ -ಹಸೈನಾರ್ ಅಜ್ಜಿಕಟ್ಟೆ(ಸಂತೋಷ್)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.