- ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಭರದ ತಯಾರಿ
ನ.22: ಕೃಷಿಕರ ಸಭೆ
ಈ ಮೇಳದ ಪೂರ್ವಭಾವಿಯಾಗಿ ಕೃಷಿಕರ ಸಭೆಯನ್ನು ನ. 22 ರಂದು ಬೆಳಿಗ್ಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಕರೆಯಲಾಗಿದೆ. ಕೃಷಿಕರು ಮತ್ತು ಕೃಷಿ ಸಂಬಂಧಿಸಿದ ವಾಟ್ಸಾಪ್ ಗ್ರೂಪ್ಗಳ ಅಡ್ಮಿನ್ಗಳು ಈ ಸಭೆಯಲ್ಲಿ ಭಾಗವಹಿಸುವಂತೆ ಆಯೋಜಕರ ಪ್ರಕಟಣೆ ತಿಳಿಸಿದೆ.
ಮೇಳದಲ್ಲಿ ಪ್ರದರ್ಶನವಾಗುವ ಪ್ರಮುಖ ಯೋಜನೆಗಳು
* ಅಡಿಕೆಯ ನವೀನ ಉತ್ಪನ್ನಗಳು
* ಸೌರಶಕ್ತಿಯಿಂದ ಕೃಷಿಯ ನಿರ್ವಹಣೆ
* ಸಾವಯವ ರಸಗೊಬ್ಬರಗಳು
* ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ನವೀನ ಯೋಜನೆಗಳು
* ಸೃಜನಾತ್ಮಕ ಯಂತ್ರೋಪಕರಣಗಳು
* ಮಳೆನೀರು ಕೊಯ್ಲು ವಿಧಾನ
* ಔಷಧಿ ಸಿಂಪಡಣೆಯ ನವೀನ ವಿಧಾನ
* ಬಹೂಪಯೋಗಿ ಕೃಷಿ ಸಲಕರಣೆಗಳು
* ಬಿತ್ತನೆ ಮತ್ತು ಉಳುಮೆಯ ಯಂತ್ರಗಳು
* ಪ್ಲಾಸ್ಟಿಕ್ಗೆ ಪರ್ಯಾಯ ಉತ್ಪನ್ನಗಳು
ಪುತ್ತೂರು: ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕೃಷಿ ಸಂಬಂಧಿತ ಆವಿಷ್ಕಾರಗಳ ವಿನೂತನ ಸ್ಪರ್ಧಾ ಉತ್ಸವ ನಡೆಸಲು ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭರದ ತಯಾರಿ ನಡೆಯುತ್ತಿದೆ. ಹಲವು ಯಶಸ್ವೀ ಕೃಷಿ ಮೇಳಗಳನ್ನು ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ಇದರ ಅಂಗ ಸಂಸ್ಥೆಯಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕ ನಗರ, ತೆಂಕಿಲ ಇದರ ಜಂಟಿ ಆಶ್ರಯದಲ್ಲಿ ನ. ೩೦ ಡಿ. ೧ ರಂದು ಅನ್ವೇಷಣಾ- ೨೦೧೯ ಅಗ್ರಿ ಟಿಂಕರಿಂಗ್ ಫೆಸ್ಟ್ ಎಂಬ ಕೃಷಿ ಪೂರಕ ನವೀನ ಆವಿಷ್ಕಾರಗಳ ರಾಜ್ಯ ಮಟ್ಟದ ವಿಜ್ಞಾನ ಮೇಳ ನಡೆಯಲಿದೆ. ಲಘು ಉದ್ಯೊಗ ಭಾರತಿ ಕರ್ನಾಟಕ, ಕ್ಯಾಂಪ್ಕೋ, ಪಶು ಸಂಗೋಪನಾ ಇಲಾಖೆ ಹಾಗು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಬೆಂಗಳೂರು ಇವರ ಸಹಯೊಗದೊಂದಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ.
ಸಂಪೂರ್ಣ ಸ್ಪರ್ಧಾ ರೂಪದಲ್ಲಿರುವ ಸದ್ರಿ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ರಾಜ್ಯಾದ್ಯಂತ ಇರುವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗು ವಿಶೇಷವಾಗಿ ಕೃಷಿಕರಿಗೆ ಸಂಬಂಧಪಟ್ಟ ವಯೋಮಾನದ ವಿಭಾಗಗಳಲ್ಲಿ ತಾವು ಅವಿಷ್ಕರಿಸಿರುವ ಕೃಷಿ ಸಂಬಂಧಿತ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಲು ಅವಕಾಶವಿರುತ್ತದೆ.
ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಬಹುದಾದ ಅವಿಷ್ಕಾರಗಳನ್ನು ಒಂದು ವರ್ಷದ ಅವಧಿಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿ ವಾಣಿಜ್ಯಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಪೇಟೆಂಟ್/ IPR ಹಕ್ಕನ್ನು ಒದಗಿಸಿಕೊಡುವ ಹಾಗೂ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಪ್ರೇರೇಪಿಸುವ ನವೀನ ಯೋಚನೆಯನ್ನು ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸಲಾಗಿದೆ. ಅದಲ್ಲದೆ ಈ ಮೇಳದಲ್ಲಿ ನಿಖರ ಕೃಷಿ, ಬಯೋ ಗ್ಯಾಸ್ ಬ್ಯಾಗ್ ರೀತಿಯ ಹಲವಾರು ಸೃಜನಾತ್ಮಕ ಕೃಷಿ ಸಂಬಂಧಿತ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.