HomePage_Banner
HomePage_Banner
HomePage_Banner
HomePage_Banner

‘ನುಗ್ಗೆ’-ಹೊಸ ಸಂಶೋಧನೆಯ ಬೆಳಕಿನಲ್ಲಿ….

Puttur_Advt_NewsUnder_1
Puttur_Advt_NewsUnder_1

ಭಾರತದಲ್ಲಿ ನುಗ್ಗೆಕಾಯಿ ಅಜ್ಜಿ ಮದ್ದುಗಳ ಸಂಗ್ರಹ ದಲ್ಲಿ ಮಹತ್ವದ ಸ್ಥಾನ ಪಡೆಯುವುದಕ್ಕೆ ಕಾರಣವೇನೆಂದು ಆಶ್ಚರ್ಯ ಗೊಂಡಿದ್ದೀರಾ? ಬೆಂಗಳೂರಿನ ವಿಜ್ಞಾನಿಗಳು ಇದಕ್ಕೆ ಸ್ಪಷ್ಟವಾದ ಕಾರಣವನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದೆ ನುಗ್ಗೆಕಾಯಿ ಯನ್ನು ಅಜ್ಜಿ ಮದ್ದು ಎಂದು ಹಗುರವಾಗಿ ಕಾಣಬೇಡಿ!

ರಾಷ್ಟ್ರೀಯ ಜೈವಿಕ ವಿಜ್ಞಾನ ಸಂಸ್ಥೆಯ ಸಂಶೋಧಕರು, ಮನೆಯ ಸುತ್ತಮುತ್ತ ಬೆಳೆಯುವ ಈ ನುಗ್ಗೆ ಮರದಲ್ಲಿ ಹುದುಗಿ ಇರುವ ವಿಸ್ತಾರವಾದ ಜೀವರಾಸಾಯನಿಕ ಕಾರ್ಖಾನೆಯನ್ನು ಆವಿಷ್ಕರಿಸಿದ್ದಾರೆ. ಇದು ೫ ಬಗೆಯ ಔಷಧಗಳ ಮೌಲ್ಯವನ್ನು ಹೊಂದಿರುವ ರಾಸಾಯನಿಕ ಅಣುಗಳು ಹಾಗೂ ಜೀವಸತ್ವಗಳು.

ನುಗ್ಗೆ ಮರದ ಎಲೆಗಳು, ಕಾಯಿ ಹಾಗೂ ಹೂವುಗಳು ಈ ಜೀವರಾಸಾಯನಿಕ ಔಷಧಗಳಿಂದ ಇಡಿಕಿರಿದಿವೆ. ಕೊಬ್ಬಿನ ಜೈವಿಕ ಪಚನ, ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವುದು, ಹೃದಯ ನರಮಂಡಲದ ರಕ್ಷಣೆ ಹಾಗೂ ಕ್ಯಾನ್ಸರ್ ನಿರೋಧಕಗಳನ್ನು ಅವುಗಳು ಹೊಂದಿವೆ. ಲವಣಾಂಶಗಳನ್ನು ನುಗ್ಗೆ ಮರವು ಯಥೇಚ್ಛವಾಗಿ ಹೊಂದಿದೆ. ಇದು ಯಾರದೋ ಊಹೆಯಲ್ಲ. ರಾಷ್ಟ್ರೀಯ ಜೀವಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡದ ಮುಖ್ಯಸ್ಥರಾದ ಆರ್. ಸೌದಾಮಿನಿ ಅವರು ಕಂಡುಕೊಂಡ ಸತ್ಯಗಳು.

ದಿನನಿತ್ಯದ ಅಡುಗೆಯಲ್ಲಿ ಸಾಂಬಾರ ವನ್ನಾಗಿ ಅಥವಾ ಪಲ್ಯ ಚಟ್ನಿ ಇತ್ಯಾದಿಗಳ ರೂಪದಲ್ಲಿ, ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಬಳಸುವ ನುಗ್ಗೆಮರದ ಭಾಗಗಳು ಇಂದು ಜಗತ್ತಿನ ಗಮನವನ್ನು ಸೆಳೆಯುತ್ತಿದೆ. ಇದನ್ನು ಉನ್ನತ ಮೌಲ್ಯದ ಆಹಾರವನ್ನಾಗಿ ಅಂಗೀಕರಿಸುವುದಕ್ಕೆ ಕಾರಣ ಇದರಲ್ಲಿನ ಬಹುಮುಖಿಯಾದ ಔಷಧೀಯ ಗುಣಗಳು.

ರಾಷ್ಟ್ರೀಯ ಜೈವಿಕ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಯುನಿವರ್ಸಿಟಿ ಆಫ್ ಟ್ರಾನ್ಸ್ ಡಿಸಿಪ್ಲಿನರಿ ಹೆಲ್ತ್ ಸಾಯನ್ಸ್ ಅಂಡ್ ಟೆಕ್ನಾಲಜಿ- ಇವರು ನಡೆಸಿದ ಸಂಶೋಧನೆಯ ಪರಿಶ್ರಮವು ಇಷ್ಟು ದೊಡ್ಡಮಟ್ಟದ ಪ್ರಚಾರವನ್ನು ಅದು ಪಡೆಯುವುದಕ್ಕೆ ಬುನಾದಿ ಹಾಕಿದೆ.

ನುಗ್ಗೆ ಮರದಲ್ಲಿರುವ ರಾಸಾಯನಿಕಗಳಲ್ಲಿ ಮೋರಿಂಝಿನ್ ಎಂಬುದು ಒಂದು. ಇದು ಕೊಬ್ಬಿನ ಚಯಾಪಚಯ (ಮೆಟಬಾಲಿಸಂ)ಕ್ರಿಯೆಯಲ್ಲಿ ಭಾಗಿ
ಯಾಗಿ ದೇಹದಲ್ಲಿರುವ ಕೊಬ್ಬು ಬೇಗನೆ ದಹಿಸುವಂತೆ ,ಕರಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ತೂಕ ಕಡಿಮೆಯಾಗಲು ಸಹಕಾರಿಯಾಗುತ್ತದೆ. ಇದು ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವುದಕ್ಕೆ ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಯ್ದು ಕೊಳ್ಳುವುದಕ್ಕೆ ಅಗತ್ಯ ಅಂಶ. ಉಳಿದ ರಕ್ಷಣಾತ್ಮಕ ಅಂಶಗಳು ಕ್ವೆರ್ಸೆಟಿನ್, ಇದು ಮೆಟಾಬಾಲಿಕ್ ಕ್ರಿಯೆಯಲ್ಲಿ ಸಂಭವಿಸಿದ ರೋಗಗಳಿಗೆ ಪರಿಣಾಮಕಾರಿ. ಕೆಂಫೆರಾಲ್ ಇದು ಕ್ಯಾನ್ಸರ್ ನಿರೋಧಕ ಅಂಶ. ಅರ್ಸೋಲಿಕ್ ಆಸಿಡ್ ಮತ್ತು ಒಲಿಯಾನೋಲಿಕ್ ಆಸಿಡ್ ಇವುಗಳು ಕ್ಯಾನ್ಸರ್ ತಡೆಗಟ್ಟುವ ಅಂಶಗಳು. ಇದರ ಕೆಲವು ಗುಣಗಳನ್ನು ಆಯುರ್ವೇದದಲ್ಲಿ ಮೊದಲೇ ಹೇಳಿದ್ದರೂ, ಇಂತಹ ಪರಿಣಾಮವು ಇಂತಹದ್ದೇ ರಾಸಾಯನಿಕದಿಂದ ಎಂಬ ಖಚಿತವಾದ ಮಾಹಿತಿಯು ಈ ಸಂಶೋಧನೆಯಿಂದ ಇಂದು ಬಹಿರಂಗಗೊಂಡಿದೆ. ಆಯುರ್ವೇದದ ನೆಲವಾದ ಈ ಪುಣ್ಯಭೂಮಿ ಭಾರತದಲ್ಲಿ ಈ ಸಂಶೋಧನೆ ಫಲ ಕಂಡದ್ದು ನಮ್ಮೆಲ್ಲರ ಹೆಮ್ಮೆ.

ಬಸಳೆ ಮತ್ತು ಪಾಲಾಕ್ ಸೊಪ್ಪು ಗಳಲ್ಲಿ ಇರುವುದಕ್ಕಿಂತ ೩೦ ಪಟ್ಟು ಹೆಚ್ಚು ಕಬ್ಬಿಣದ ಅಂಶವು ನುಗ್ಗೆಯಲ್ಲಿದೆ. ಕ್ಯಾಲ್ಶಿಯಂ ಅಂಶವು ನೂರುಪಟ್ಟು ಹೆಚ್ಚಾಗಿದೆ. ಸಂಶೋಧನಾ ತಂಡದಲ್ಲಿ ಒಬ್ಬರಾದ ನಜೀರ್ ಪಾಷಾ ಎಂಬವರ ಪ್ರಕಾರ ಕಬ್ಬಿಣ, ಸತು ( ಜಿಂಕ್) ಮತ್ತು ಮ್ಯಾಗ್ನಿಷಿಯಂ ಅಂಶಗಳನ್ನು ಸಾಗಾಣಿಕೆ ಮಾಡುವ ಅಂಶಗಳು ಬೇರು ಮತ್ತು ಕಾಂಡದ ಭಾಗದಲ್ಲಿ ಹೆಚ್ಚಾಗಿವೆ. ಈ ವಿಚಾರವು ಜೆನೋಮಿಕ್ಸ್ ಎಂಬ ಪತ್ರಿಕೆಯ ಏಪ್ರಿಲ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿದೆ.

?ನುಗ್ಗೆ ಮರದ ಪ್ರತಿಯೊಂದು ಭಾಗವು ಔಷಧೀಯ ಗುಣವನ್ನು ಒಳಗೊಂಡಿದೆ. ಆಯುರ್ವೇದದಲ್ಲಿ ಇದು ಸ್ಪಷ್ಟವಾಗಿ ದಾಖಲಿತ ವಾಗಿದೆ. ಆದರೆ ಕೊರತೆಯೆಂದರೆ ಅದರಲ್ಲಿ ಈ ರಾಸಾಯನಿಕ ಅಂಶಗಳ ಸ್ಪಷ್ಟ ಪ್ರಮಾಣಗಳು ಅದರ ಬೇರೆ ಬೇರೆ ಭಾಗಗಳಲ್ಲಿ ಎಷ್ಟು ಎಷ್ಟು ಇವೆ ಎಂಬ ಉಲ್ಲೇಖ ಆಗದೆ ಇರುವುದು ಮತ್ತು ಈ ರಾಸಾಯನಿಕ ಅಂಶಗಳ ಉತ್ಪಾದನೆಯ ಪ್ರೋಟೀನ್ ಸರಣಿ ಕ್ರಿಯೆಯ ಅರ್ಥೈಸುವಿಕೆ ಆಗದೆ ಇರುವುದು? ಎಂದು ವಿಜ್ಞಾನಿ ಸೌದಾಮಿನಿ ಅವರು ವಿವರಿಸುವಾಗ ಪ್ರಾಚೀನ ಆಯುರ್ವೇದದ ಮಹತ್ವ ಹಾಗೂ ಸಂಶೋಧನೆಯಲ್ಲಿ ಕಂಡುಕೊಂಡ ಹೊಸತನ ಎರಡು ಸಂಗತಿಗಳು ವ್ಯಕ್ತವಾಗುತ್ತವೆ. ಆಯುರ್ವೇದವನ್ನು ಯಾಕೆ ವೈಜ್ಞಾನಿಕವಾಗಿ ಗೌರವಿಸಬೇಕು ಎಂಬುದು ಮನದಟ್ಟಾಗುತ್ತದೆ.

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇರುವ ನುಗ್ಗೆ ಮರಗಳಿಂದ ಭಾಗಗಳನ್ನುಸಂಗ್ರಹಿಸಿ ನಡೆಸಿದ ಈ ಅಧ್ಯಯನದಲ್ಲಿ ಬೇರು ಕಾಂಡ ಹೂವು ಕಾಯಿ ಎಲೆಗಳ ಭಾಗದ ಆರ್ ಎನ್ ಎ ವಂಶವಾಹಿಗಳ ಅಧ್ಯಯನವನ್ನು ಮಾಡಿರುತ್ತಾರೆ. ದೇಹದೊಳಗಿನ ಡಿ ಎನ್ ಎ ವಂಶವಾಹಿಗಳಲ್ಲಿ ದಾಖಲಿತ ವಾದ ಸಂಕೇತಗಳ ಮುಖಾಂತರ ನಿರ್ಧರಿತ ವಾಗುವ ಆರ್ ಎನ್ ಎ ಮತ್ತು ಡಿ ಎನ್ ಎ ಪರಸ್ಪರ ವರ್ತನೆಯ ಆಧಾರದಲ್ಲಿ ಕೋಶಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಅಧ್ಯಯನವನ್ನು ಮಾಡಿರುತ್ತಾರೆ. ಗುಣ ಮತ್ತು ಕ್ರಿಯೆಗಳ ಮೂಲ ವಂಶವಾಹಿಗಳಲ್ಲಿ ಅಡಕವಾಗಿದೆ ಎಂಬುದು ಕೂಡ ಅನಾವರಣಗೊಳ್ಳುವ ಒಂದು ಸತ್ಯ. ಸಂಕೇತಗಳ ಮೂಲಕ ದಾಖಲೆ ಗೊಳ್ಳುವುದು ಹೌದಾದಲ್ಲಿ, ಸಂಕೇತಗಳ ಮೂಲಕವೇ ಗುಣಗಳು ಕೂಡ ಕಾರ್ಯಗತ ಗೊಳ್ಳುವುದು. ಅಂತೂ ಜಗತ್ತು ಎಂದರೆ ಅದು ಹುಟ್ಟಿದ್ದು ಕೂಡ ಸಂಕೇತದ ಮೂಲಕ, ಕಾರ್ಯನಿರ್ವಹಿಸುವುದು ಕೂಡ ಸಂಕೇತದ ಮೂಲಕ. ಆ ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದೇ ಸಂಶೋಧನೆ!

ಆಯುರ್ವೇದದಲ್ಲಿ ಭಾವ ಪ್ರಕಾಶ ಗ್ರಂಥದಲ್ಲಿ ದೀಪನ ಅಂದರೆ ಹಸಿವನ್ನು ಹೆಚ್ಚಿಸುವುದು, ರೋಚನ ಅಂದರೆ ರುಚಿಯನ್ನು ಹೆಚ್ಚಿಸುವುದು, ಚಕ್ಷುಷ್ಯ ಅಂದರೆ ಕಣ್ಣಿಗೆ ಹಿತಕಾರಕ, ಬಾವು ಮತ್ತೆ ಉರಿಯೂತಗಳನ್ನು ಶಮನಗೊಳಿಸುವುದು, ಮೇದೋನಾಶಕ ಅಂದರೆ ಕೊಬ್ಬನ್ನು ಕರಗಿಸುವುದು, ವಿಷಹರ ಅಂದರೆ ಶರೀರದಲ್ಲಿನ ಟಾಕ್ಸಿಕ್ ಅಂಶಗಳನ್ನು ತೆಗೆಯುವುದು, ಹುಣ್ಣುಗಳನ್ನು ಮಾಯಿಸುವ ಗುಣ, ? ಇತ್ಯಾದಿ ಗುಣಗಳಿಂದ ನುಗ್ಗೆಕಾಯಿ ಶ್ರೀಮಂತವಾಗಿದೆ ಎಂದು ಹೇಳಲಾಗಿದೆ.

ಶೋಭಾಯಮಾನವಾದ ವೃಕ್ಷ ಆದುದರಿಂದ ಶೋಭಾಂಜನ ವೆಂದು, ಅಂಗಾಂಗಗಳ ಒಳಗೆ ಹೋಗಿಪರಿಣಾಮಕಾರಿಯಾಗಿ ಕಾರ್ಯ ಮಾಡುವುದರಿಂದ ಶಿಗ್ರು ಎಂದು, ಉಗ್ರ ವಾಸನೆ ಹೊಂದಿರುವುದರಿಂದ ತೀಕ್ಷ್ಣ ಗಂಧ ಎಂದು, ವಿಷವನ್ನು ಶರೀರದಿಂದ ಹೊರ ತೆಗೆಯುವುದರಿಂದ ಅಕ್ಷೀವ ಎಂದು, ಕಾಯಿಲೆಗಳಿಂದ ಮುಕ್ತಗೊಳಿಸುವುದುರಿಂದ ಮೋಚಕ ಎಂದು ವಿವಿಧ ಹೆಸರುಗಳಿಂದ ಆಯುರ್ವೇದ ಗ್ರಂಥಗಳಲ್ಲಿ ಇದನ್ನು ಕರೆದಿದ್ದಾರೆ.

ವಿಟಮಿನ್ ಎ, ವಿಟಮಿನ್ ಬಿ೧, ವಿಟಮಿನ್ ಬಿ೨, ವಿತಮಿನ್ ಬಿ ೩, ವಿಟಮಿನ್ ಸಿ, ಕ್ಯಾಲ್ಸಿಯಂ, ತಾಮ್ರ, ಕೊಬ್ಬು, ನಾರಿನಂಶ, ಕಬ್ಬಿಣ,, ಮೆಗ್ನೀಷಿಯಂ, ಪಾಸ್ಪರಸ್, ಪೊಟ್ಯಾಶಿಯಂ, ಪ್ರೋಟೀನ್, ಸತು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ. ವಿಟಮಿನ್ ಸಿ ಅಂಶವು ತಾಜಾ ಎಲೆಗಳಲ್ಲಿ ೨೨೦ ಮಿಲಿಗ್ರಾಂ, ಒಣ ಎಲೆಗಳಲ್ಲಿ ೧೭.೩ ಮಿಲಿಗ್ರಾಂ :., ಕ್ಯಾಲ್ಶಿಯಂ ಅಂಶವು ತಾಜಾ ಅಲೆಗಳಲ್ಲಿ ೪೪೦ ಮಿಲಿಗ್ರಾಂ, ಒಣ ಎಲೆಗಳಲ್ಲಿ ೨೦೦೩ ಮಿಲಿಗ್ರಾಂ:, ಕಬ್ಬಿಣದ ಅಂಶವು ತಾಜಾ ಎಲೆಗಳಲ್ಲಿ .೮೫ ಮಿಲಿಗ್ರಾಂ ಹಾಗೂ ಒಣ ಎಲೆಗಳಲ್ಲಿ ೨೮.೨ ಮಿಲಿಗ್ರಾಂ ಇರುತ್ತದೆ.

ಪ್ರಯೋಜನಗಳು: 1. ಇನ್ಫೆಕ್ಷನ್ ಅಥವಾ ಸೋಂಕು ನಿವಾರಕವಾಗಿ ಕೆಲಸಮಾಡುತ್ತದೆ.
2 . ಬೇರಿನ ತೊಗಟೆ ಮತ್ತು ಎಲೆ ರಕ್ತದೊತ್ತಡ ಶಮನಗೊಳಿಸಲು ನೆರವಾಗುತ್ತದೆ.
3. ಆಂಟಿ ಇನ್ ಫ್ಲಾಮೇಟರಿ ಅಥವಾ ಉರಿಯೂತ ನಿವಾರಕ ವಾಗಿ ಕೆಲಸ ಮಾಡುತ್ತದೆ.
4. ಸಂಧಿವಾತ( ಆಸ್ಟಿಯೋ ಆರ್ಥ್ರೈಟಿಸ್) ಆಮವಾತ( ರುಮಟಾಯ್ಡ್ ಆರ್ಥ್ರೈಟಿಸ್), ರಕ್ತವಾತ( ಗೌಟ್) ಗಳಲ್ಲಿ ಪರಿಣಾಮಕಾರಿ.
5. ಇದರಲ್ಲಿನ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶಗಳು ಮೂಳೆ ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ.
6. ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಕಾಪಾಡುತ್ತದೆ.
7. ಎಲೆಗಳನ್ನು ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಂಡರೆ ತಲೆನೋವು ಕಡಿಮೆಯಾಗುತ್ತದೆ.
8. ನುಗ್ಗೆ ಎಲೆಯ ಟೀ ಜಠರದ ಹುಣ್ಣು ಹಾಗೂ ಅತಿ ಸಾರವನ್ನು ನಿವಾರಿಸುತ್ತದೆ.
9. ಮರದಿಂದ ಬರುವ ಮೇಣವು ಮೂತ್ರವನ್ನು ಸರಿಯಾಗಿ ವಿಸರ್ಜಿಸಲು ಸಹಕಾರಿ ಆಗುತ್ತದೆ. ಅಸ್ತಮಾ ರೋಗಕ್ಕೆ ಉಪಶಮನ ನೀಡುತ್ತದೆ.
10. ಎಲೆಗಳು ಬಾವು, ಶ್ವಾಸನಾಳದ ಉರಿಯೂತ( ಬ್ರಾಂಕೈಟಿಸ್), ಕಣ್ಣು ಮತ್ತು ಕಿವಿಯ ಸೋಂಕುಗಳಿಗೆ ಪ್ರಯೋಜನವಾಗುತ್ತದೆ.
11. ಆಯುರ್ವೇದದಲ್ಲಿ ನುಗ್ಗೆಯ ರಸವನ್ನು ಮೂಗಿಗೆ ಬಿಡುವ ನಸ್ಯ ವಿಧಾನವು ಮತ್ತು ಹೆಣ್ಣಿಗೆ ಬಿಡುವ ಆಶ್ಚ್ಯೋತನ ವಿಧಾನವು ಪ್ರಯೋಗದಲ್ಲಿದೆ. ಕಾಯಿಲೆಗಳ ಅವಸ್ಥೆಗೆ ಅನುಸಾರ ಆಯುರ್ವೇದ ವೈದ್ಯರು ಇದನ್ನು ಪ್ರಯೋಗಿಸುತ್ತಾರೆ.
12. ಕಾಯಿಗಿಂತ ಎಲೆಗಳಲ್ಲಿ ವಿಟಮಿನ್ ಹಾಗೂ ಲವಣಾಂಶಗಳು ಹೆಚ್ಚಾಗಿವೆ.
13. ನುಗ್ಗೆಯ ಅಂಶಗಳನ್ನು ಕ್ಯಾಪ್ಸೂಲ್ ಗಳಲ್ಲಿ ತುಂಬಿಸಿ ತೆಗೆದುಕೊಳ್ಳುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಅಂಶಗಳು ದೇಹಕ್ಕೆ ಲಭ್ಯವಾಗುವುದಿಲ್ಲ. ತಾಜಾ ರೂಪದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.
14. ಕಾಫಿಯಲ್ಲಿರುವ ಕ್ಲೋರೋಜಿನಿಕ್ ಆಸಿಡ್ ಎಂಬ ಉತ್ತಮ ಉಪಯೋಗವಾದ ಅಂಶವು ನುಗ್ಗೆಯಲ್ಲಿ ಇರುವುದರಿಂದ ಅದು ಆಹಾರ ಸೇವನೆಯ ನಂತರದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸಲು ಸಹಕಾರಿ.
15. ಅಧ್ಯಯನವೊಂದರ ಪ್ರಕಾರ, ಒಂದುವರೆ ಚಮಚದಷ್ಟು ನುಗ್ಗೆ ಎಲೆಯ ಚೂರ್ಣವನ್ನು ದಿನನಿತ್ಯ ಸೇವಿಸಿದ ಮಹಿಳೆಯರಲ್ಲಿ ಆಹಾರಸೇವನೆಯ ಪೂರ್ವದ ರಕ್ತದಲ್ಲಿನ ಸಕ್ಕರೆಯ ಅಂಶವು ಸರಾಸರಿ ೧೩.೫ ಶೇಕಡ ದಷ್ಟು ಕಡಿಮೆಯಾದದ್ದು ಕಂಡುಬಂದಿದೆ.
16. ಸಕ್ಕರೆ ಕಾಯಿಲೆ ಇರುವ ೬ ರೋಗಿಗಳಲ್ಲಿ ಪ್ರತಿದಿನ ಊಟದೊಂದಿಗೆ ೫೦ಗ್ರಾಂ ನುಗ್ಗೆ ಸೊಪ್ಪುಗಳನ್ನು ಸೇರಿಸಿ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ೨೧ ಶೇಕಡ ದಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಅಧ್ಯಯನವು ತಿಳಿಸುತ್ತದೆ.
17. ಎಲೆ ಕಾಯಿ ಬೀಜಗಳಲ್ಲಿರುವ ಐಸೋಥಯೋ ಸೈನೇಟ್ ಅಂಶಗಳು ಆಂಟಿ ಇನ್ ಫ್ಲಾಮೇಟರಿ ಅಂದರೆ ಉರಿಯೂತ ನಿವಾರಕ ಗುಣವನ್ನು ಹೊಂದಿವೆ. ಆದಕಾರಣ ಯಾವುದೇ ಜ್ವರ, ಬಾವು ಇತ್ಯಾದಿಗಳಲ್ಲೂ ಇದನ್ನು ಬಳಸಬಹುದು.
18. ಕೊಲೆಸ್ಟರಾಲ್ ಅಂಶವನ್ನು ರಕ್ತದಲ್ಲಿ ತಗ್ಗಿಸುವುದರಿಂದ ಹೃದಯಾಘಾತ, ಪಕ್ಷಾ ಘಾತ ಗಳನ್ನು ತಡೆಗಟ್ಟಬಹುದು.
19. ಆಹಾರ ಮತ್ತು ನೀರುಗಳಲ್ಲಿ ಅರ್ಸೆನಿಕ್ ವಿಷಕಾರಿ ಅಂಶವು ಜಗತ್ತಿನ ಬಹುಭಾಗಗಳಲ್ಲಿ ಇಂದು ಪತ್ತೆಯಾಗುತ್ತಿದೆ. ಹೃದಯಾಘಾತ ಮತ್ತು ಕ್ಯಾನ್ಸರ್ ಕಾಯಿಲೆಗಳನ್ನು ಉಂಟುಮಾಡುವ ಈ ವಿಷಕಾರಿ ಅಂಶದ ಹಾನಿಕಾರಕ ಪರಿಣಾಮಗಳನ್ನು ನುಗ್ಗೆಯ ಎಲೆ ಮತ್ತು ಕಾಯಿಗಳು ತಡೆಗಟ್ಟುವುದು.

ಆದರೆ ಬರಹ ಮತ್ತು ಮಾತುಗಳಿಂದ ಮಾಡುವ ಉತ್ತೇಜನದಿಂದ ಇದರ ಸೇವನೆಗೆ ದೊರಕುವ ಪ್ರೇರಣೆ ತಾತ್ಕಾಲಿಕವಾಗಿದೆ, ನಿಮ್ಮ ಮನಸ್ಸಿನಲ್ಲಿ ನುಗ್ಗೆಯನ್ನು ಪಲ್ಯದ ರೂಪದಲ್ಲೂ, ಚಟ್ನಿಯ ರೂಪದಲ್ಲೂ, ಸಾಂಬಾರ್ ರೂಪದಲ್ಲೂ ಸೇವನೆ ಮಾಡುವ ಹುಮ್ಮಸ್ಸು ನಿತ್ಯ ನಿರಂತರವಾಗಿರಲಿ. ವಾರದಲ್ಲಿ ಒಂದೆರಡು ಬಾರಿಯಾದರೂ ನುಗ್ಗೆ ನಿಮ್ಮ ಆಹಾರದ ಭಾಗವಾಗಲಿ.


ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ.
B. A. M. S., D. Pharm., M. S. (Ayu).
ಆಯುರ್ವೇದ ತಜ್ಞ ವೈದ್ಯರು
ಪ್ರಸಾದ್ ಹೆಲ್ತ್ ಕೇರ್ ಸೆಂಟರ್,
ಪುರುಷರಕಟ್ಟೆ, ಪುತ್ತೂರು.
ಮೊಬೈಲ್ :9740545979

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.