ಪುತ್ತೂರು: ಕರ್ನಾಟಕ ಸರಕಾರ ತೋಟಗಾರಿಕಾ ಇಲಾಖೆ ವತಿಯಿಂದ ಕೊಡಮಾಡುವ ರಾಜ್ಯದ ಅತ್ಯುತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿಗೆ ಈ ಬಾರಿ ಜಿಲ್ಲೆಯ ಪ್ರತಿಷ್ಠಿತ ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಭಾಜನವಾಗಿದೆ.
ಡಿ.27ರಂದು ಬೆಂಗಳೂರಿನಲ್ಲಿ ಮೂರು ದಿನ ನಡೆಯುವ ರಾಜ್ಯಮಟ್ಟದ ‘ಮಧುಮೇಳ’ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ ನಾರಾಯಣ, ತೋಟಗಾರಿಕೆ ಸಚಿವ ವಿ.ಸೋಮಣ್ಣ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದ.ಕ. ಜೇನು ವ್ಯವಸಹಾಯ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಚಾರ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
1938ರಲ್ಲಿ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಸ್ಥಾಪಿನೆಗೊಂಡ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ಜೇನು ಕೃಷಿಕರ ಅಭ್ಯುದಯಕ್ಕಾಗಿ ಕಳೆದ 81 ವರ್ಷಗಳಿಂದ ಜೇನು ಕೃಷಿಯಲ್ಲಿ ನಿರತವಾಗಿದ್ದು ಮಹತ್ತರ ಪ್ರಗತಿಯನ್ನು ಸಾಧಿಸಿದೆ. ಉಡುಪಿ ಮತ್ತು ದ.ಕ ಎರಡು ಜಿಲ್ಲೆಗಳ ಕಾರ್ಯಕ್ಷೇತ್ರ ಹೊಂದಿದ್ದು, ಈಗ 2760 ಜೇನು ಕೃಷಿಕರು ಸಂಘದ ಸದಸ್ಯರಾಗಿದ್ದು ವ್ಯವಹರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಸುಳ್ಯ, ಉಡುಪಿ ಮತ್ತು ಧರ್ಮಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುತ್ತದೆ. ಸದಸ್ಯರಿಗೆ ಸಂದರ್ಭಕ್ಕನುಗುಣವಾಗಿ ಜೇನು ಕೃಷಿಗೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಏ ಗ್ರೇಡ್ ಜೇನು:
ಸಂಪನ್ಮೂಲ ವ್ಯಕ್ತಿಗಳಿಂದ ಜೇನು ಕೃಷಿಗೆ ಅಗತ್ಯವಿರುವ ತರಬೇತಿಯನ್ನು ನೀಡಿ ಜೇನು ಕೃಷಿಗೆ ಅಗತ್ಯವಿರುವ ಕೃಷಿಸಲಕರಣೆಗಳನ್ನು ಒದಗಿಸುವುದು ಮಾತ್ರವಲ್ಲದೇ, ಜೇನು ಕೃಷಿಕರು ಉತ್ಪಾದಿಸಿದ ಜೇನನ್ನು ಯೋಗ್ಯ ಬೆಲೆಗೆ ಖರೀದಿಸಿ, ಅತ್ಯಾಧುನಿಕ ಮೈಕ್ರೋಫಿಲ್ಟರ್ ಹೊಂದಿರುವ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ, ‘ಮಾಧುರಿ ಅಗ್ ಮಾರ್ಕ್’ ‘ಎ’ ಗ್ರೇಡ್ ಜೇನನ್ನು ಮಾರುಕಟ್ಟೆಗೆ ಒದಗಿಸುತ್ತಿದೆ.
ಸ್ಪರ್ಧಾತ್ಮಕ ಮಾರುಕಟ್ಟೆಯಿರುವ ಈ ಸಂದರ್ಭದಲ್ಲೂ ಕೂಡ ಜೇನಿನ ಗುಣಮಟ್ಟವನ್ನು ಕಾಪಾಡಿಕೊಂಡು ತನ್ನ ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ.
ಶೇ.25 ಪಾಲು ಮುನಾಫೆ ನೀಡುವ ಏಕೈಕ ಜೇನು ಸಹಕಾರಿ ಸಂಸ್ಥೆ:
ರಾಜ್ಯ, ಅಂತರ್ರಾಜ್ಯ ಹಾಗೂ ವಿದೇಶಗಳಾದ ಬಹ್ರೈನ್, ಸೌಧಿ ಅರೇಬಿಯಾ, ದುಬೈ, ಹಾಗೂ ಮಸ್ಕತ್ಗಳಿಗೆ ರಫ್ತು ಮಾಡಲಾಗುತ್ತಿದೆ. ಅಲ್ಲದೇ, ‘ಮಾಧುರಿ’ ಜೇನಿಗೆ ಟ್ರೇಡ್ಮಾರ್ಕ್ಗೆ ಅರ್ಜಿ ಸಲ್ಲಿಸಿದ್ದು ಪ್ರಗತಿಯಲ್ಲಿದೆ. ರೈತರು ಉತ್ಪಾದಿಸಿ ಸಂಘಕ್ಕೆ ನೀಡಿದ ಪ್ರತಿ ಕಿಲೋ ಜೇನಿಗೆ ರೂ.೧೦/- ರಂತೆ ಬೋನಸ್ಸು ನೀಡಿ ಪ್ರೊತ್ಸಾಹಿಸಲಾಗುತ್ತಿದೆ. ಸದಸ್ಯರ ಪಾಲು ಬಂಡವಾಳಕ್ಕೆ ಶೇ.೨೫ ಪಾಲು ಮುನಾಫೆ ನೀಡುತ್ತಿರುವ ರಾಜ್ಯದ ಏಕೈಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜೇನು ಕೃಷಿಕರಿಗೆ ತರಬೇತಿ:
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಮಾನ್ಯತೆ ಪಡೆದಿರುವ ನಮ್ಮ ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ಹನಿಮಿಷನ್ ಕಾರ್ಯಕ್ರಮದಡಿಯಲ್ಲಿ ಸುಮಾರು ೭೫೦ ಜೇನು ಪೆಟ್ಟಿಗೆಗಳನ್ನು, ಜೇನು ಕುಟುಂಬ, ಕಬ್ಬಿಣದ ಸ್ಟಾಂಡ್ಗಳು, ಮುಖಪರದೆ, ಹೊಗೆತಿದಿ ಮತ್ತು ಇತರ ಪರಿಕರಗಳನ್ನು ಜೇನು ಕೃಷಿಕರಿಗೆ ಸಂಪೂರ್ಣ ಉಚಿತವಾಗಿ ಒದಗಿಸಿದಲ್ಲದೆ ೫ ದಿನಗಳ ೩ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ಜೇನು ಕೃಷಿಕರಿಗೆ ಉಚಿತವಾಗಿ ಮಾಹಿತಿ ಮತ್ತು ತರಬೇತಿ ಒದಗಿಸಿದೆ, ಮಾತ್ರವಲ್ಲದೆ, ಕಳೆದ ೧೫ವರ್ಷಗಳಿಂದ ತೋಟಗಾರಿಕಾ ಇಲಾಖೆಯೊಂದಿಗೆ ತರಬೇತಿ ಶಿಬಿರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತೇವೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸುಮಾರು ೨.೫೦ಕೋಟಿಯ ಸ್ಪೂರ್ತಿ ಅನುದಾನದ ಯೋಜನೆಯನ್ನು ಸಂಘದಲ್ಲಿ ಅಳವಡಿಸಿಕೊಂಡು ಜೇನುಕೃಷಿಕರಿಗೆ ಅದರ ಪ್ರಯೋಜನವನ್ನು ನೀಡುವ ಉದ್ಧೇಶದಿಂದ ಆಯೋಗದೊಂದಿಗೆ ಸಂಪರ್ಕವಿರಿಸಿಕೊಂಡು ಅನುದಾನವನ್ನು ನಿರೀಕ್ಷಿಸುತ್ತಿದ್ದೇವೆ.
ಜೇನು ಕೃಷಿ ಪತ್ರಿಕೆ:
ರಾಜ್ಯದ ಏಕೈಕ ಜೇನು ಕೃಷಿ ಪತ್ರಿಕೆ ‘ಮಧುಪ್ರಪಂಚ’ವನ್ನು ಸಂಘವು 42 ವರ್ಷಗಳಿಂದ ತ್ರೈಮಾಸಿಕ ಪತ್ರಿಕೆಯಾಗಿ ಮುದ್ರಿಸಿ ಜೇನುಕೃಷಿಯ ಹಾಗೂ ಜೇನು ಕೃಷಿಗೆ ಪೂರಕವಾದ ತೋಟಗಾರಿಕಾ ಬೆಳೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸುತ್ತಿದೆ.
ಪ್ರಶಸ್ತಿಗಳು:
ಸತತ 2016-17, 2017-18 ಮತ್ತು 2018-19 ಮೂರು ವರ್ಷಗಳಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇವರಿಂದ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡಕೊಂಡಿದೆ. 2008ರಲ್ಲಿ ಸಂಘಕ್ಕೆ ರಾಷ್ಟ್ರೀಯ ಸನ್ಮಾನ ಪುರಸ್ಕಾರ ಪುರಸ್ಕ್ರತಗೊಂಡಿದೆ.