HomePage_Banner
HomePage_Banner
HomePage_Banner
HomePage_Banner

ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಸಾವಯವ ಹಬ್ಬ – ನವತೇಜ ಟ್ರಸ್ಟ್‌ಗೆ ಚಾಲನೆ, ಜೀವಧಾನ್ಯ ಕೃತಿ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಸಿರಿಧಾನ್ಯ, ದಿನಸಿ, ತರಕಾರಿ, ಅಡುಗೆ ಸೇರಿದಂತೆ ಸಮುದಾಯದ ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾವಯವ ಕೃಷಿಕರೊಂದಿಗೆ ಸಂಪರ್ಕ, ಕೃಷಿಕರಿಗೆ ಮಾರುಕಟ್ಟೆ ಅರಿವು, ಉದ್ಯಮ ಮತ್ತು ಕೃಷಿಕರ ಸಂಪರ್ಕದ ಕುರಿತು ಶ್ರೀ ಮಹಾಲಿಂಗೇಶ್ವವರ ದೇವಳದ ಸಭಾಭವನದಲ್ಲಿ ಎರಡು ದಿನ ನಡೆಯುವ ಸಾವಯವ ಹಬ್ಬಕ್ಕೆ ಜ.೪ರಂದು ಬೆಳಿಗ್ಗೆ ರಾಗಿ ಬೀಸುವ ಮೂಲಕ ಚಾಲನೆ ನೀಡಲಾಯಿತು. ನವಚೇತನ ಸ್ನೇಹಸಂಗಮ ಮತ್ತು ಜೆಸಿಐ ಪುತ್ತೂರು ಇವರ ಆಯೋಜನೆಯಲ್ಲಿ ನಟರಾಜ ವೇದಿಕೆಯಲ್ಲಿ ನಡೆಯುವ ಸಾವಯವ ಹಬ್ಬದ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಸಾವಯವ ಕೃಷಿ ಮಿಶನ್‌ನ ಅಧ್ಯಕ್ಷ ಆ.ಶ್ರೀ ಆನಂದ್ ಉದ್ಘಾಟಿಸಿದರು.


2೦ ವರ್ಷದ ಹಿಂದೆಯೇ ಸಾವಯವ ಮಿಶನ್ ಆರಂಭ:
ಶಾಸಕ ಸಂಜೀವ ಮಠಂದೂರು ಮಾತನಾಡಿ ಪ್ರತಿಯೊಂದು ವ್ಯಕ್ತಿ ಸಾಯುವ ತನಕ ಆರೋಗ್ಯವಂತನಾಗಬೇಕೆಂಬ ಆಶಯ ಇಟ್ಟುಕೊಂಡವನು. ಆದರೆ ಪ್ರಕೃತಿಯ ಅನುಗುಣಕ್ಕೆ ವಿರುದ್ಧವಾಗಿ ಕೃಷಿಪದ್ಧತಿಯಿಂದ ಅನೇಕ ತೊಂದರೆಯನ್ನು ನಾವು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಕೃತಿಯ ಗುಣಗಳನ್ನು ನಾವು ಮೈಗೂಡಿಸಿಕೊಳ್ಳುವುದು ಮುಖ್ಯ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು 2೦ ವರ್ಷದ ಹಿಂದೆಯೇ ಸಾವಯವ ಮಿಷನ್ ಆರಂಭಿಸುವ ಮೂಲಕ ಅದರ ಅವಶ್ಯಕತೆಯನ್ನು ಮನಗಂಡಿದ್ದರು. ನಾವು ಸ್ವಾವಲಂಬಿಗಳಾಗಬೇಕು ಆದರೆ ಪ್ರಸ್ತುತ ದಿನಗಳಲ್ಲಿ ಪರಾವಲಂಬಿಗಳಾಗಿದ್ದೇವೆ ಎಂದ ಶಾಸಕರು ಮೂವತ್ತು ನಲವತ್ತು ವರ್ಷಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಬೇಕಾದಷ್ಟು ಭತ್ತ ಬೆಳೆಯುತ್ತಿದ್ದೆವು. ಇವತ್ತು ಬೇರೆ ಕಡೆಯಿಂದ ತರುವ ಪರಿಸ್ಥಿತಿಯೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶ ಒಂದೇ ರೀತಿಯಾಗಿದೆ. ಈ ನಿಟ್ಟಿನಲ್ಲಿ ಸಾವಯವ ಹಬ್ಬ ಮತ್ತೊಮ್ಮೆ ಜನರಲ್ಲಿ ಆರೋಗ್ಯವಂತ ಕೃಷಿಗೆ ಪ್ರೇರಣೆ ನೀಡುತ್ತದೆ. ನಾವು ಪರಿಸರದ ಕುರಿತು ವಿಶೇಷ ಗಮನ ಕೊಡುವ ಕೆಲಸ ಆಗಬೇಕು ಎಂದರು.

ಎಪಿಎಂಸಿಯಲ್ಲಿ ಸಾವಯವ ಸಂತೆ: ಕಾನೂನಿನ ಚೌಕಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರದಿಂದ ಸಾವಯವ ಕೃಷಿಗೆ ಯೋಜನೆ ಇದೆ. ಪುತ್ತೂರಿಗೆ ಸಂಬಂಧಿಸಿ ಸಾವಯವ ಸಂತೆಗೆ ಎಪಿಎಂಸಿಯಲ್ಲಿ ಅವಕಾಶ ಇದ್ದರೆ ಎಪಿಎಂಸಿ ಆಡಳಿತ ಮಂಡಳಿಯಲ್ಲಿ ಮಾತನಾಡಿ ತಿಳಿಸುತ್ತೇನೆ ಎಂದು ಶಾಸಕರು ಹೇಳಿದರು.

ವಿಷವಿಲ್ಲದ ತುತ್ತಿಗಾಗಿ ಅಮ್ಮನಿಗೆ ಬೇಡಿಕೆ ಇಡಿ: ಕರ್ನಾಟಕ ಸರಕಾರದ ಸಾವಯವ ಕೃಷಿ ಮಿಶನ್ ಅಧ್ಯಕ್ಷ ಆ.ಶ್ರೀ.ಆನಂದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದಿನದಿಂದ ದಿನಕ್ಕೆ ಖಾಯಿಲೆಗಳ ಉಲ್ಬಣ ಆಗುತ್ತಿದೆ. ಖಾಯಿಲೆಗಳು ಯಾಕೆ ಬರುತ್ತಿದೆ ಎಂಬ ಚಿಂತನೆ ಉಂಟಾದಾಗ ಇದೆಲ್ಲದಕ್ಕೂ ಕಾರಣ ನಮ್ಮ ಊಟದ ಬಟ್ಟಲು ಬಹಳ ದೊಡ್ಡ ಪ್ರಮಾಣದಲ್ಲಿ ವಿಷ ವಾಗಿರುವುದು ಕಂಡು ಬರುತ್ತದೆ. ಸರಕಾರ, ಸ್ವಯಂಸೇವಕರು, ಸಂಘ ಸಂಸ್ಥೆಗಳು, ಕೃಷಿಕರು ಪ್ರಯತ್ನ ಪಟ್ಟರೆ ಅನ್ನದ ಬಟ್ಟಲನ್ನು ಅಮೃತ ಮಾಡಬಹುದು. ಇದಕ್ಕಾಗಿ ಮಕ್ಕಳ ಸಹಕಾರ ಬೇಕು ಎಂದರು. ಮನೆಯಲ್ಲಿ ಬೇರೆ ಬೇರೆ ರೀತಿಯಲ್ಲಿ 108 ಬೇಡಿಕೆ ಇಡುವ ಮಕ್ಕಳು ವಿಷ ಇಲ್ಲದ ತುತ್ತು ಹಾಕಿ ಎಂದು ಅಮ್ಮನ ಮುಂದೆ ಬೇಡಿಕೆ ಇಡಿ ಎಂದು ಕಿವಿ ಮಾತನ್ನು ಹೇಳಿದ ಅವರು, ಸುಭಿಕ್ಷಾ ಸಾವಯವ ಬಹು ರಾಜ್ಯ ಸಹಕಾರಿ ಸಂಘಕ್ಕೆ ಪುತ್ತೂರು ತಾಲೂಕಿನಲ್ಲಿ ಕೂಡಾ ಶೇರುದಾರರಾಗಬೇಕು ಎಂದು ಮನವಿ ಮಾಡಿದರು.

ನಗರದತ್ತ ಕೊಂಡೊಯ್ಯುವ ಹಳದಿ ಬಸ್‌ಗಳು: ಹಳದಿ ಬಣ್ಣದ ಬಸ್ ಗಳು ಬರುವಾಗ ಮತ್ತು ಹೋಗುವಾಗ ಹೊಗೆಯಾಡುತ್ತದೆ. ಅದೇ ರೀತಿ ಬಸ್‌ಗಳು ಹೋಗಿ ಬರುವ ನಡುವೆ ನಮ್ಮ ಎಲ್ಲಾ ಮಕ್ಕಳನ್ನು ನಗರದತ್ತ ಕೊಂಡೊಯ್ಯುವ ಮೂಲಕ ಕೃಷಿ ನಶಿಸುವ ಸಾಧ್ಯತೆ ಇದೆ ಎಂದು ಆ.ಶ್ರೀ.ಆನಂದ್ ಹೇಳಿದರು.

ಸಾವಯವದ ಚಳವಳಿ ಆಗಬೇಕು: ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾವಯವ ಹಬ್ಬದ ಕ್ರಿಯಾ ಸಮಿತಿ ಗೌರವಾಧ್ಯಕ್ಷರಾದ ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ರೆ| ವಿಜಯ ಹಾರ್ವಿನ್ ಮಾತನಾಡಿ ಸಾವಯದ ಅರಿವು, ಬೆಳೆಯಲು ಪ್ರೋತ್ಸಾಹದ ಉದ್ದೇಶದಿಂದ ಸಾವಯವ ಹಬ್ಬ ಆಯೋಜಿಸಲಾಗಿದೆ. ಹಿಂದಿನ ಕಾಲದಲ್ಲಿ ವಿಷ ರಹಿತ ಅಹಾರದಿಂದ ಆರೋಗ್ಯವಂತ ಜೀವನ ಪದ್ಧತಿ ಬೆಳೆಯಿತು. ಜೀವನ ಪದ್ಧತಿ ಬದಲಾದಂತೆ ಆಹಾರಪದ್ಧತಿ ಬದಲಾಯಿತು. ಇವತ್ತು ಒಟ್ಟಾರೆಯಾಗಿ ಅರೋಗ್ಯಕ್ಕಾಗಿ ಒಂದಷ್ಟು ಹಣ ವ್ಯಯಿಸಬೇಕು. ಇದಕ್ಕೆ ಕಾರಣ ಸಾವಯವ ಕೃಷಿಯಿಂದ ದೂರ ಉಳಿದಿರುವುದು ಎಂದರು. ಸಾವಯವ ಕೃಷಿ ಮಾಡುವ ಕುರಿತು ಹೊಸ ಪೀಳಿಗೆ ಚಳವಳಿ ರೂಪದಲ್ಲಿ ಕೆಲಸ ಮಾಡಬೇಕಾಗಿದೆ ಎಂದರು. ಶ್ರಮ ವಹಿಸಿ ದುಡಿಯುವ ಜೀವನದಿಂದ ವ್ಯವಸ್ಥೆ ಬದಲಾವಣೆ ಸಾಧ್ಯ ಎಂದ ಅವರು ಮೊದಲು ನಾವು ಶುದ್ದ, ಆರೋಗ್ಯವಂತ ಮನಸ್ಸು ಬೇಕು ಎಂದರು.

ಪುಸ್ತಕ ಲೋಕಾರ್ಪಣೆ, ಗೌರವ: ಲೇಖಕ ನಾ.ಕಾರಂತ ಪೆರಾಜೆಯವರ 32 ನೇ ಕೃತಿ ಜೀವಧಾನ್ಯ ಪುಸ್ತಕದ ಲೋಕಾರ್ಪಣೆ ಮಾಡಲಾಯಿತು. ನವಚೇತನ ಸ್ನೇಹಸಂಗಮದ ಸದಸ್ಯ ಮಹೇಶ್ ಪುಚ್ಚಪ್ಪಾಡಿ ಪುಸ್ತಕದ ಪರಿಚಯ ಮಾಡಿದರು. ಬದ್ಧತೆಯ ಬದುಕನ್ನು ಕಟ್ಟಿಕೊಂಡ ಭತ್ತದ ಕೃಷಿಕ ದಂಪತಿ ತೆಂಕಕಾರಂದೂರು ಉಷಾ ಮೆಹಂದಳೆ ಮತ್ತು ಸೀತಾರಾಮ ಮೆಹಂದಳೆ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಚಿಪ್ಪು ಅಣಬೆ, ರಸಂ ಚಟ್ನಿ ಬಿಡುಗಡೆ: ನರಿಮೊಗರು ನಿಧಿ ಪ್ರೊಡಕ್ಟ್ ನ ಬಾಲಕೃಷ್ಣ ಗೌಡ ಅವರಿಂದ ರಾಸಾಯನಿಕ ಬಳಸದೆ ಹೊಸದಾಗಿ ಉತ್ಪಾದಿಸಲ್ಪಟ್ಟ ಮೌಲ್ಯವರ್ಧಿತ ಉತ್ಪನ್ನ ಚಿಪ್ಪು ಅಣಬೆಯ ರಸಂ, ಚಟ್ನಿ ಪುಡಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಘಸಂಸ್ಥೆಗಳ ಪ್ರೋತ್ಸಾಹ ಅಗತ್ಯ: ಜೇಸಿಐ ವಲಯ ೧೫ರ ಆರೋಗ್ಯ ಮತ್ತು ಕ್ಷೇಮದ ವಲಯ ಸಂಯೋಜಕ ಬಾದ್‌ಶಾ ಸಂಬಾರತೋಟ ಅವರು ಮಾತನಾಡಿ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಕಾರ ಅಗತ್ಯ. ಈ ಭಾಗದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸಾವಯವ ಕೃಷಿ ಬೆಳೆಸಿರುವುದು ಆರೋಗ್ಯಕ್ಕೆ ಪೂರಕವಾಗಿದೆ ಎಂದರು.

ನವತೇಜ ಟ್ರಸ್ಟ್ ಉದ್ಘಾಟನೆ: ನವಚೇತನ ಸ್ನೇಹಸಂಗಮದಿಂದ `ನವತೇಜ ಟ್ರಸ್ಟ್’ ಅನ್ನು ಸಭೆಯಲ್ಲಿ ಉದ್ಘಾಟಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರು ಟ್ರಸ್ಟ್‌ನ ರೂಪುರೇಶೆ ತಿಳಿಸಿದರು. ಉತ್ಪಾದಕರು ಮತ್ತು ವರ್ತಕರ ಮಧ್ಯೆ ಸಾವಯವ ಸಂಪರ್ಕ ಮತ್ತು ಸಾವಯವ ಉತ್ಪನ್ನ ಅಥವಾ ಕೃಷಿ ರಹಿತ ಉತ್ಪನ್ನಗಳ ಬೇಡಿಕೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಟ್ರಸ್ಟ್ ಮೂಲಕ ಮಾಡಲಾಗುವುದು ಎಂದ ಅವರು ಮೇ ತಿಂಗಳಲ್ಲಿ ಎಲ್ಲಾ ಹಣ್ಣುಗಳ ರಾಜ್ಯ ಮಟ್ಟದ ಮೇಳ ನಡೆಯಲಿದೆ ಎಂದು ಹೇಳಿದರು. ಅದೇ ರೀತಿ ನಮ್ಮ ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ (ಸಾವಯವ ಸಂತೆ)ಮತ್ತು ಕಚೇರಿಗೆ ಸ್ಥಳಾವಕಾಶ ಕೊಡಲು ಅವಕಾಶ ಮಾಡಿ ಕೊಡಬೇಕು ಎಂದು ಬೇಡಿಕೆಯನ್ನು ಶಾಸಕರ ಮುಂದೆ ಇಟ್ಟರು. ವಿವೇಕಾನಂದ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ನವಚೇತನ ಸ್ನೇಹಸಂಗಮದ ಕಾರ್ಯದರ್ಶಿ ಸುಹಾಸ್ ಎ.ಪಿಮರಿಕೆ ಸ್ವಾಗತಿಸಿದರು. ಜೇಸಿಐ ಉಪಾಧ್ಯಕ್ಷ ನವೀನ್ ಕೊಲ ವಂದಿಸಿದರು. ಅಂಕಣಕಾರ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

50ಕ್ಕೂ ಅಧಿಕ ಮಳಿಗೆಗಳು:
ಸಾವಯವ ಹಬ್ಬದಲ್ಲಿ ಸುಮಾರು 5೦ಕ್ಕೂ ಮಿಕ್ಕಿ ಮಳಿಗೆಗಳಿದ್ದು, ಈ ಪೈಕಿ ೨೫ಕ್ಕೂ ಮಿಕ್ಕಿ ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಹಬ್ಬದಲ್ಲಿ ಕೃಷಿಕರು ತಾವು ಬೆಳೆಸಿದ ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಿಸಿಬಿಸಿ ತಿಂಡಿಗಳು, ಕೃಷಿ ಯಂತ್ರಗಳು, ಮೇಳದ ವಿಶೇಷವಾಗಿತ್ತು. ಹಲಸಿನ ಖಾದ್ಯಗಳು, ರಾಗಿ ಖಾದ್ಯಗಳು, ಸಾವಯವ ಗೊಬ್ಬರಗಳು, ವಿವಿಧ ಜಾತಿಯ ಹಣ್ಣಿನ ಗಿಡಗಳು, ನಿಧಿಫುಡ್ ಪ್ರೋಡಕ್ಟ್ ನಿಂದ ವಿವಿಧ ಉತ್ಪನ್ನಗಳು, ಸಾವಯವ ಕೃಷಿ ಪರಿವಾರ ತೀರ್ಥಹಳ್ಳಿ ಅವರಿಂದ ಸಾವಯವ ಅವಲಕ್ಕಿ, ಔಷಧಿಗಳು, ಲಹರಿ ಡ್ರೈಫುಡ್ಸ್, ಪುಸ್ತಕ ಮಳಿಗೆಗಳು, ಕೃಷಿಗೆ ಸಂಬಂಧಿಸಿ ಅಡಿಕೆ ಮರಕ್ಕೆ ಔಷಧ ಸಿಂಪಡಿಸುವ ಯಂತ್ರಗಳು, ಎಸ್.ಆರ್.ಕೆ. ಲ್ಯಾಡರ್‍ಸ್ ಅವರ ಕೃಷಿಗೆ ಉಪಯೋಗ ಆಗುವ ಯಂತ್ರಗಳು, ಕ್ರಾಂಪ್ಟನ್ ಎಲ್‌ಇಡಿ ಬಲ್ಬ್‌ಗಳು, ಸುರಭಿ ಸಾರ ದೇಶಿ ತಳಿ ಗೋಮೂತ್ರ ಪೌಡರ್ ಕ್ಯಾಪ್ಸೂಲ್‌ಗಳು ಸೇರಿದಂತೆ ಅನೇಕ ಕೃಷಿ ಉಪಯುಕ್ತ ಮುಳಿಗೆಗಳು ಆಕರ್ಷಣೆಯಾಗಿದ್ದವು. ಕೃಷಿ ಮಳಿಗೆಗಳನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್. ಭಟ್ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಮೇಳದಲ್ಲಿ ಏನಿದೆ ?
ಸಿರಿಧಾನ್ಯ: ಸಜ್ಜೆ, ನವಣೆ, ಸಾಮೆ, ಊದಲು, ಹಾರಕ, ಕೊರಲೆ, ಬರಗು, ರಾಗಿ ಇವಲ್ಲದೆ ಮೌಲ್ಯವರ್ಧನೆ ಮಾಡಿದ ಸಿರಿಧಾನ್ಯಗಳ ಚಕ್ಕುಲಿ , ಬಿಸ್ಕಟ್, ಮಾಲ್ಟ್, ದೋಸೆ ಮಿಕ್ಸ್, ರೊಟ್ಟಿ ಮಿಕ್ಸ್, ಇಡ್ಲಿ ಮಿಕ್ಸ್, ಉಪ್ಪಿಟ್ಟು ಮಿಕ್ಸ್, ಮತ್ತು ಆರೋಗ್ಯವರ್ಧಕ ಪೇಯಗಳು.

ದಿನಸಿ: ಬೆಳ್ತಿಗೆ ಅಕ್ಕಿಗಳಾದ ಗಂಧ ಸಾಲೆ, ಬಾಸುಮತಿ, ಸೋನ ಮಸೂರಿ, ಗೌರಿ, ಸುಮತಿ, ಜೀರಾಕ್ಕಿ, ಕಜೆ ಜಯ ಕುಚ್ಚಿಲಕ್ಕಿ, ಬೆಲ್ಲ, ಸಕ್ಕರೆ, ಬೇಳೆ ಕಾಳುಗಳು ಬರಲಿದೆ.

ತರಕಾರಿ: ಹೀರೆಕಾಯಿ, ಎಲೆ ಕೋಸು, ಟೊಮೆಟೊ, ಬೆಂಡೆ, ಹಸಿ ಮೆಣಸಿನ ಕಾಯಿ, ದೊಣ್ಣೆ ಮೆಣಸು, ಬೀಟ್ರೂಟ್, ಚಿನಿಕಾಯಿ, ಸೌತೆ, ಮುಳ್ಳುಸೌತೆ, ಬೀನ್ಸ್, ಪಡುವಳ, ಸೋರೆ, ನಿಂಬೆ ,ಕ್ಯಾರೆಟ್, ಸೀಮೆ ಬದನೆ, ಶುಂಠಿ, ಬಿಳಿ ಮೂಲಂಗಿ, ಸೊಪ್ಪುಗಳು ಇನ್ನು ಹತ್ತು ಹಲವು.

ಅಡುಗೆ: ನವಣೆ, ಬಿಸಿಬೇಳೆಬಾತ್, ಸಜ್ಜೆ ಹಾಲು, ಊದಲೂ ಪಾಯಸ, ಬರಗಿನ ಮೊಸರನ್ನ, ರಾಗಿ ಹಲ್ವಾ, ರಾಗಿ, ಹೋಳಿಗೆ, ಕಾಯಿ ಹೋಳಿಗೆ, ಸಾವಯವ ಬೆಲ್ಲದಲ್ಲಿ, ತೆಂಗಿನ ಎಣ್ಣೆಯಲ್ಲಿ ಕರಿದ ವಿವಿಧ ತಿಂಡಿಗಳು. ನರ್ಸರಿ ಗಿಡಗಳು, ಖಾದಿ ಕೈಮಗ್ಗದ ಬಟ್ಟೆಗಳು ಮೌಲ್ಯ ವರ್ದಿತ ಉತ್ಪನ್ನಗಳು ಇವೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.