ಪುತ್ತೂರು: 4 ವರ್ಷಗಳ ಹಿಂದೆ ಬಜತ್ತೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಸ್ಸು ಚಾಲಕ ಮಹಮ್ಮದ್ರವರನ್ನು ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಬಜತ್ತೂರು ಗ್ರಾಮದ ನೀರಕಟ್ಟೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ 407 ಟೆಂಪೋ (ಕೆ. ಎಲ್. 07-ಎಡಬ್ಲ್ಯು- 8896) ಮತ್ತು ಟ್ಯಾಂಕರ್( ಕೆ.ಎ.-11-ಬಿ- 526) ನಡುವೆ ಆಪಘಾತ ಸಂಭವಿಸಿದ್ದು ಆಪಘಾತದ ಬಳಿಕ ಟೆಂಪೋದಲ್ಲಿದ್ದ ರಾಮು ಯಾನೆ ರಮೇಶ ಮತ್ತು ಶರೀಫ್ ರವರು ಟೆಂಪೋದಿಂದ ಕೆಳಗೆ ಇಳಿದು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು (ಪಿ. ವೈ. 01-ಸಿ.ಜೆ.-8415)ನ ಚಾಲಕ ಮಹಮ್ಮದ್ ರವರು ಆಜಾಗರೂಕತೆಯಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಾಮು@ ರಮೇಶ ಮತ್ತು ಶರೀಫ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಮು@ ರಮೇಶ ಮತ್ತು ಶರೀಫ್ ರವರು ತೀವ್ರ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವಾಗ ರಾಮು@ ರಮೇಶ ಮೃತಪಟ್ಟಿರುತ್ತಾರೆ ಮತ್ತು ಶರೀಫ್ರವರು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಲು ಅರೋಪಿಯು ಕಾರಣರಾಗಿರುತ್ತಾರೆ ಮತ್ತು ಅವರ ತಪ್ಪಿನಿಂದಲೇ ಅಪಘಾತ ಸಂಭವಿಸಿದೆ ಎಂಬಿತ್ಯಾದಿ ಅರೋಪದಡಿ ಪುತ್ತೂರು ಸಂಚಾರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ರಿ ಪ್ರಕರಣದ ಬಗ್ಗೆ ಪುತ್ತೂರು ಸಂಚಾರ ಪೊಲೀಸರು ಪ್ರಥಮ ವರ್ಥಮಾನ ವರದಿ ದಾಖಲಿಸಿಕೊಂಡ ನಂತರ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
ನಂತರ ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಸುಮಾರು 7 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. ಆಪಘಾತ ಕುರಿತು 2 ಪ್ರಕರಣ ದಾಖಾಲಾಗಿತ್ತು ಮತ್ತು ಈ 2 ಪ್ರಕರಣಗಳಲ್ಲಿ ಸ್ಥಳದ ನಕ್ಷೆ ವ್ಯತ್ಯಾಸವಾಗಿತ್ತು ಹಾಗೂ ಆಪಘಾತ ಅದಾಗ ಟೆಂಪೋದಲ್ಲಿ ದನದ ಸಗಣಿ ಮತ್ತು ದನ ಸಾಗಿಸುವ ಕುರುಹುಗಳು ಕಂಡು ಬಂದಿತ್ತು. ಪ್ರಕರಣದ ಪಿರ್ಯಾದಿ ಪ್ರತಿಕೂಲ ಸಾಕ್ಷಿ ನುಡಿದಿರುತ್ತಾರೆ ಎಂಬಿತ್ಯಾದಿ ಅಂಶಗಳನ್ನು ಆರೋಪಿ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯವು ಪ್ರಾಸಿಕ್ಯೂಶನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಆರೋಪಿ ಮಹಮ್ಮದ್ ತಪ್ಪಿನಿಂದಲೇ ಅಪಘಾತ ಆಗಿದೆ ಎಂದು ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ತಿರ್ಮಾನಿಸಿದೆ. ಅಂತಿಮ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥರವರು ಆರೋಪಿಯನ್ನು ದೋಷಮುಕ್ತಗೊಳಿಸಿ ಆದೇಶಿಸಿದ್ದಾರೆ. ಆರೋಪಿಯ ಪರ ವಕೀಲರಾದ ಕಜೆ ಲಾ ಚೇಂಬರ್ಸ್ನ ಮಹೇಶ್ ಕಜೆ ವಾದಿಸಿದ್ದರು.