ಬೆಂಗಳೂರು: ಲಿವರ್ ಕ್ಯಾನ್ಸರ್ ಪತ್ತೆಯಾದಾಗ ಇನ್ನು 6 ತಿಂಗಳು ಮಾತ್ರ ತಾನು ಬದುಕುಳಿಯಬಹುದು ಎಂದು ವೈದ್ಯರು ತಿಳಿಸಿದ್ದರು. ದೇವರ ದಯೆ. ಕ್ಯಾನ್ಸರನ್ನು ಜಯಿಸಿದ್ದೇನೆ. ಆರೋಗ್ಯದ ದೃಷ್ಟಿಯಿಂದ ಕೆಎಸ್ಎಎ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ, ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಹೇಳಿದರು.
ರಾಮನಗರದಲ್ಲಿ ಜ.20 ರಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಬೆನ್ನು ನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿದಾಗ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇನ್ನು ಆರು ತಿಂಗಳು ಮಾತ್ರ ಬದುಕಬಹುದಷ್ಟೇ ಎಂದು ವೈದ್ಯರು ತಿಳಿಸಿದ್ದರು. ದೆಹಲಿಯಲ್ಲಿ ಚಿಕಿತ್ಸೆ ಪಡೆದು ಚೆನ್ನೈಗೆ ಹಿಂದಿರುಗಿದೆ. ಮಣಿಪಾಲ್ಗೆ ಬಂದು ಮತ್ತೆ ತಪಾಸಣೆ ನಡೆಸಿದಾಗ ಕ್ಯಾನ್ಸರ್ ಮೆದುಳಿಗೂ ಹರಡುತ್ತಿರುವುದು ಪತ್ತೆಯಾಯಿತು. ಆದರೆ ಪವಾಡ ಎಂಬಂತೆ ಇದೀಗ ಕ್ಯಾನ್ಸರನ್ನು ಜಯಿಸಿದ್ದೇನೆ ಎಂದರು.
ತಾನು ಯಾವಾಗ ಬೇಕಾದರೂ ಹೋಗಬಹುದು. ಇನ್ನು ಇಲ್ಲಿ ನಾನು ಮಾಡುವುದೇನು ಇಲ್ಲ. ದೊಡ್ಡದಾದ ಸಂಘಟನೆ ಕಟ್ಟಿದ್ದೇನೆ. ನಾನು ಹೋದ ಬಳಿಕ ಸಂಘಟನೆ ಹಾಳಾಗಬಾರದು. ವೈದ್ಯರು ಆರೋಗ್ಯದ ಬಗ್ಗೆ ಗಮನ ಕೊಡಲು ಸಲಹೆ ನೀಡಿದ್ದಾರೆ. ಆದ್ದರಿಂದ ಮಿತವಾದ ಆಹಾರ ಸೇವನೆ ಮಾಡುತ್ತಿದ್ದೇನೆ. ಮುಂದೆ ಕೆಎಸ್ಎಎ ಅಧ್ಯಕ್ಷ ಸ್ಥಾನ ತೊರೆಯಲು ನಿರ್ಧರಿಸಿದ್ದೇನೆ. ಈ ಸ್ಥಾನವನ್ನು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ಅಲಂಕರಿಸಲಿದ್ದಾರೆ ಎಂದರು.