ಪುತ್ತೂರು: ಇಲ್ಲಿನ ಸೆಲ್ ಝೋನ್ ಮೊಬೈಲ್ ಮಾರಾಟ ಮತ್ತು ಸೇವಾ ಸಂಸ್ಥೆಯಿಂದ ಹಾಡುಹಗಲೇ ಗ್ರಾಹಕ ಸೋಗಿನಲ್ಲಿ ಬಂದ ಬಾಲಕನೋರ್ವ ಡೆಮೊ ಪ್ರದರ್ಶನಕ್ಕಿಟ್ಟ ಮೊಬೈಲ್ನ್ನು ಕಳವು ಮಾಡಿದ ಘಟನೆ ಜ.20ರಂದು ನಡೆದಿರುವ ಕುರಿತು ಬೆಳಕಿಗೆ ಬಂದಿದೆ.
ಬಾಲಕನೋರ್ವ ಇಲ್ಲಿನ ಮುಖ್ಯರಸ್ತೆಯಲ್ಲಿರುವ ಸೆಲ್ ಝೋನ್ ಮೊಬೈಲ್ ಮಾರಾಟ ಮತ್ತು ಸೇವಾ ಸಂಸ್ಥೆಯ ಮಳಿಗೆ ಗ್ರಾಹಕ ಸೋಗಿನಲ್ಲಿ ಬಂದು ಡೆಮೊಗಾಗಿ ಪ್ರದರ್ಶನಕ್ಕಿಟ್ಟ ಮಾರುಕಟ್ಟೆಗೆ ಈಗ ತಾನೆ ಬಂದ ಹೊಸ ಮಾದರಿಯ ಮೊಬೈಲ್ ಸೆಟ್ಗಳ ಪೈಕಿ ಒಂದನ್ನು ಕಳವು ಮಾಡಿದ್ದಾನೆ. ಈ ಕುರಿತು ಮಳಿಗೆಯ ಸಿ.ಸಿ.ಕ್ಯಾಮರದಲ್ಲಿ ಕಳವು ಮಾಡಿದ ದೃಶ್ಯ ಪತ್ತೆಯಾಗಿದ್ದು, ಸಂಸ್ಥೆಯ ಮಾಲಕ ಸಹೋದರರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳವಾದ ಮೊಬೈಲ್ ಸೆಟ್ ಸ್ಯಾಮ್ಸಂಗ್ ಕಂಪೆನಿಯದ್ದಾಗಿದ್ದು, ರೂ. 30ಸಾವಿರ ಬೆಲೆಯದ್ದಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.