- 2007ರ ಬ್ರಹ್ಮಕಲಶದಲ್ಲೂ ಪುತ್ತೂರಿನಿಂದ ಬೃಹತ್ ಹೊರೆಕಾಣಿಕೆ
- ಮೆರವಣಿಗೆಯಲ್ಲಿ 150ಕ್ಕೂ ಅಧಿಕ ವಾಹನಗಳು
ಪುತ್ತೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕ, ಸ್ವರ್ಣಧ್ವಜ ಪ್ರತಿಷ್ಠೆ, ನಾಗಮಂಡಲ, ಕೋಟಿಜಪಯಜ್ಞ, ಸಹಸ್ರಚಂಡಿಕಾ ಯಾಗದ ವಿಶೇಷ ಸಂದರ್ಭದಲ್ಲಿ ಪುತ್ತೂರಿನಿಂದ ಜ.27ರಂದು ಹಸಿರುಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ಪುತ್ತೂರಿನಿಂದ ಸಹಸ್ರ ಸಂಖ್ಯೆಯಲ್ಲಿ ಹೊರೆಕಾಣಿಕೆ ಸಮರ್ಪಣಾ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಹರಿಪ್ರಸಾದ ವೈಲಾಯ ಅವರು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.
ಹಸಿರು ಹೊರೆಕಾಣಿಕೆ ಸಮರ್ಪಣೆಗಾಗಿ ಜ.26 ರಿಂದಲೇ ಶ್ರೀ ಮಹಾಲಿಂಗೇಶ್ವರ ದೇವಳದ ಗೋಪುರದಲ್ಲಿ ನಿಗದಿ ಪಡಿಸಿದ ಕೌಂಟರ್ ತೆರೆಯಲಾಗುತ್ತದೆ. ಇಲ್ಲವಾದಲ್ಲಿ ತಮ್ಮದೇ ವಾಹನಗಳಲ್ಲಿ ದೇವಿಯ ಸನ್ನಿಧಿಗೆ ಜ.27ರಂದು ಕಟೀಲಿಗೆ ಹೊರಡುವ ಹಸಿರುವಾಣಿ ಮೆರವಣಿಗೆಯಲ್ಲಿ ಒಟ್ಟಾಗಿ ತೆರಳಿ ಸಮರ್ಪಣೆ ಮಾಡಬಹುದು ಎಂದು ಅವರು ಹೇಳಿದರು.
2007ರ ಬ್ರಹ್ಮಕಲಶದಲ್ಲೂ ಪುತ್ತೂರಿನಿಂದ ಬೃಹತ್ ಹೊರೆಕಾಣಿಕೆ:
ಹೊರೆಕಾಣಿಕೆ ಸಮಿತಿ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅವರು ಮಾತನಾಡಿ 2007ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಹೊರೆಕಾಣಿಕೆ ಸಮರ್ಪಣೆಯಲ್ಲಿ ಪುತ್ತೂರಿನ ಪಾತ್ರ ಬಹಳ ದೊಡ್ಡದಾಗಿತ್ತು. ಪುತ್ತೂರಿನಿಂದ ಬಂದ ಹೊರೆಕಾಣಿಕೆಯಿಂದ ಕಟೀಲು ಉಗ್ರಾಣ ತುಂಬಿತ್ತು ಎಂದು ದೇವಸ್ಥಾನದ ಅನುವಂಶಿಕ ಅರ್ಚಕರು ಪ್ರತಿ ಸಭೆಯಲ್ಲೂ ಇವತ್ತಿಗೂ ಉಲ್ಲೇಖ ಮಾಡುತ್ತಾರೆ. ಈ ನಿಟ್ಟಿನಲ್ಲಿ ಈ ಭಾರಿಯೂ ಪುತ್ತೂರಿನಿಂದ ಹೊರಡುವ ಹಸಿರುವಾಣಿ ದೊಡ್ಡ ಮಟ್ಟದಲ್ಲಿ ಇರಬೇಕೆಂದು ಬೇರೆ ದೇವಸ್ಥಾನ ಗ್ರಾಮಗಳಲ್ಲಿ ಸಭೆ ಮಾಡಲಾಗಿದೆ. ದೇವಸ್ಥಾನಗಳ ಮೂಲಕ ಸಂಗ್ರಹವಾದ ಹಸಿರುವಾಣಿಯನ್ನು ಪುತ್ತೂರು ದೇವಸ್ಥಾನ ಹೊರೆಕಾಣಿಕೆ ಕಚೇರಿಯಲ್ಲಿ ಸಮರ್ಪಣೆ ಮಾಡಿ ಅಲ್ಲಿಂದ ಒಟ್ಟಾಗಿ ಜ.27ರಂದು ದೊಡ್ಡ ಮಟ್ಟದ ಮೆರವಣಿಗೆಯಲ್ಲಿ ತೆರಳಿ ದೇವಿಯ ಸೇವೆಯಲ್ಲಿ ನಾವೆಲ್ಲ ತೊಡಗೋಣ ಎಂದ ಅವರು ಈಗಾಗಲೇ ಉಪ್ಪಿನಂಗಡಿ ಸಹ್ರಸಲಿಂಗೇಶ್ವರ ದೇವಸ್ಥಾನ, ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ, ಪಡುಮಲೆ ಶಾಸ್ತಾವು ದೇವಸ್ಥಾನ, ಸವಣೂರು ಬಸದಿ, ಕಬಕ ಮಹಾದೇವಿ ಮಂದಿರ, ಆಲಂಕಾರು ದುರ್ಗಾಪರಮೇಶ್ವರಿ ದೇವಸ್ಥಾನ, ಕಾವು ಪಂಚಲಿಂಗೇಶ್ವರ, ಈಶ್ವರಮಂಗಲ ಪಂಚಲಿಂಗೇಶ್ವರ, ಕೆಯ್ಯೂರು ದುರ್ಗಾಪರಮೇಶ್ವರಿ, ಮಹಿಷಮರ್ದಿನಿ ಪುತ್ತೂರು, ಕುಂಜಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಇಡ್ಕಿದು ಶಾರದಾಂಬಾ ಭಜನಾ ಮಂದಿರ, ಕಾಣಿಯೂರು ನರಸಿಂಹ ಭಜನಾ ಮಂದಿರ, ಕರಾಯ ಮಹಾಲಿಂಗೇಶ್ವರ ದೇವಸ್ಥಾನ, ಬಿಳಿಯೂರು ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಹೊರೆಕಾಣಿಕೆ ಸಮಿತಿ ಸಭೆ ನಡೆಸಲಾಗಿದ್ದು, ಅಲ್ಲಿಂದ ಹೊರೆಕಾಣಿಕೆ ಸಮರ್ಪಣೆ ಆಗಲಿದೆ ಎಂದು ಅವರು ಹೇಳಿದರು.
150ಕ್ಕೂ ಅಧಿಕ ವಾಹನಗಳು:
ಸಮಿತಿ ಕಾರ್ಯದರ್ಶಿ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಹಸಿರು ಹೊರೆಕಾಣಿಕೆ ಸಮರ್ಪಣೆಗೆ ಜ.27ರಂದು ಸುಮಾರು 150ಕ್ಕೂ ಮಿಕ್ಕಿ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ವರ್ತಕರಿಂದ ಹೊರೆಕಾಣಿಕೆ ಸಮರ್ಪಣೆಗಾಗಿ ಜ.22ರಂದು ಅಂಗಡಿಗಳಿಗೆ ಭೇಟಿ ನೀಡಿ ಮನವಿ ಮಾಡುವ ಕಾರ್ಯಕ್ರಮ ನಡೆಯಲಿದೆ. ಜೊತಗೆ ಕೋಟಿ ಜಪಯಜ್ಞದ ಸಂಕಲ್ಪ ಕಾರ್ಯ ಎಲ್ಲಾ ಕಡೆ ನಡೆದಿದ್ದು, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅವರಿಗೆ ದೇವಸ್ಥಾನದಿಂದ ಪ್ರಸಾದ ರೂಪದಲ್ಲಿ ಪ್ರಮಾಣಪತ್ರ ವಿತರಣೆ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ದೇವಳದ ಹೊರೆಕಾಣಿಕೆ ಸಮಿತಿ ಉಪಾಧ್ಯಕ್ಷ ಕಳತ್ತೂರು ರಾಘವೇಂದ್ರ ಭಟ್ ಮತ್ತು ಪುತ್ತೂರು ತಾಲೂಕು ಸಮಿತಿ ಉಪಾಧ್ಯಕ್ಷರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ರಾಜೇಶ್ ಬನ್ನೂರು ಉಪಸ್ಥಿತರಿದ್ದರು.
ಹೊರೆಕಾಣಿಕೆ ಸಮರ್ಪಣೆ ಹೀಗಿರಲಿ
ಬೆಳ್ತಿಗೆ ಅಕ್ಕಿ, ಬೆಲ್ಲ, ಎಣ್ಣೆ, ತುಪ್ಪ, ಸೀಯಾಳ, ತೆಂಗಿನ ಕಾಯಿ ಸುವಸ್ತುಗಳು ಅಗತ್ಯವಾಗಿ ಬೇಕಾಗಿದ್ದು, ಭಕ್ತಾದಿಗಳು ತಮ್ಮ ಇಚ್ಚಾನುಶಕ್ತಿಯಿಂದ ಹೊರೆಕಾಣಿಕೆ ಸಮರ್ಪಣೆ ಮಾಡಲು ಅವಕಾಶವಿದೆ. ಜೊತೆಗೆ ಕ್ಷೇತ್ರದಲ್ಲಿ ನಾಗಮಂಡಲ ನಡೆಯಲಿರುವುದರಿಂದ ಹೆಚ್ಚಿನ ರೀತಿಯಲ್ಲಿ ಹಿಂಗಾರ ಬೇಕಾಗಿದೆ. ಈಗಾಗಲೇ ನರಿಮೊಗರು ಭಾಸ್ಕರ್ ಇಂದಾರ್ ಅವರು ಸುಮಾರು 1 ಸಾವಿರ ಹಿಂಗಾರ ಒಪ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.