HomePage_Banner
HomePage_Banner
HomePage_Banner
HomePage_Banner

ಕಡಬ ತಾ| ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ ಟಿ.ನಾರಾಯಣ ಭಟ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಫೆಬ್ರವರಿ ೨೮ ಹಾಗೂ ೨೯ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ನಡೆಯುವ ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ, ಸುದ್ದಿಬಿಡುಡೆ ಪತ್ರಿಕೆಯ ಅಂಕಣಕಾರರೂ ಆಗಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್‌ರವರು ಆಯ್ಕೆಗೊಂಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹಾಗೂ ಕಡಬ ತಾಲೂಕು ಘಟಕದ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲುರವರು ತಿಳಿಸಿದ್ದಾರೆ.

ಹಿರಿಯ ಸಾಹಿತಿಯು ಆಗಿರುವ ಟಿ. ನಾರಾಯಣ ಭಟ್‌ರವರ ಲೇಖನಗಳು ಸುದ್ದಿಬಿಡುಗಡೆ ಸೇರಿದಂತೆ ಉದಯವಾಣಿ, ಹೊಸದಿಗಂತ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ಈಗಾಗಲೇ ಇವರ ಸುಮಾರು ೨೫ಕ್ಕಿಂತ ಹೆಚ್ಚು ಕೃತಿಗಳು ಪ್ರಕಟಗೊಂಡಿದ್ದು ಇದರಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಬದುಕಿನ ಚಿತ್ರಣವಿರುವ “ರಾಮಕುಂಜದಿಂದ ರಾಷ್ಟ್ರಾದ್ಯಂತ ವಿಶ್ವೇಶತೀರ್ಥರ ವಿಶಿಷ್ಟ ಪಯಣ’ ಕೃತಿಯೂ ಜನಪ್ರಿಯಗೊಂಡಿದೆ. ‘ನಮ್ಮ ಮಕ್ಕಳು ಹೇಗಿರಬೇಕು’ ಎಂಬ ಕೃತಿಗೆ ೨೦೧೪ರಲ್ಲಿ ಅಕ್ಷರ ಶ್ರೀ ಪ್ರತಿಷ್ಠಾನ, ಆಲದಪದವು, ಬಂಟ್ವಾಳ ಇವರಿಂದ, ‘ನಮ್ಮ ಮಕ್ಕಳ ಯಶಸ್ಸು ಹೇಗೆ ಸಾಧ್ಯ ?’ ಎಂಬ ಕೃತಿಗೆ ಅಡ್ವೈಸರ್ ಕನ್ನಡ ಮಾಸ ಪತ್ರಿಕೆ ಮಂಡ್ಯ ಇವರಿಂದ ಹಾಗೂ ‘ಬದುಕು ಬದಲಾಯಿಸಬಲ್ಲ ಮಕ್ಕಳ ಕಥೆಗಳು ಕೃತಿಗೆ’ ಬುದ್ಧ-ಬಸವ-ಗಾಂಧಿ ಟ್ರಸ್ಟ್, ಬೆಂಗಳೂರು ಇವರಿಂದ ಪ್ರಶಸ್ತಿ ಬಂದಿತ್ತು. ಜೀವನ ಶಿಕ್ಷಣ, ಉತ್ತಮ ಶಾಲೆಗೊಂದು ಮಾರ್ಗದರ್ಶಿ, ಬದುಕಿಗೆ ಶಿಕ್ಷಣ, ಮೌಲ್ಯ ಬಿಂದು, ಬಾಳ ಹಾದಿಯಲಿ, ನಮ್ಮ ಮಕ್ಕಳಿಗೇನು ಕಲಿಸ್ಬೇಕು ? ಇವರ ಪ್ರಮುಖ ಕೃತಿಗಳಾಗಿವೆ. ಲೇಖನ ಬರೆಯುವುದು, ಸಮಾಜಸೇವೆ, ಧಾರ್ಮಿಕ ಸೇವೆ, ಬಡಜನರಿಗೆ ಮಾರ್ಗದರ್ಶನ, ಶೈಕ್ಷಣಿಕ ಸಂಘಟನೆ ಇವರ ಮುಖ್ಯ ಹವ್ಯಾಸಗಳಾಗಿವೆ.

ಶೈಕ್ಷಣಿಕ ಸೇವೆ:
ಟಿ.ನಾರಾಯಣ ಭಟ್‌ರವರು ೨೧-೭-೧೯೭೮ರಂದು ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡಿದ್ದು ಒಟ್ಟು ೪೧ ವರ್ಷಗಳ ಸೇವಾವಧಿಯಲ್ಲಿ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿನ ಇವರ ಸಾಧನೆಗಾಗಿ ೧೯೯೪ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ೨೦೦೫ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ೨೦೦೯ರಲ್ಲಿ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಬಂದಿತ್ತು. ಅಲ್ಲದೇ ಇವರ ಸಾಧನೆ ಪರಿಗಣಿಸಿ ಶಾಮರಾವ್ ಫೌಂಡೇಶನ್ ಮಂಗಳೂರು ಇವರಿಂದ ೨೦೦೯ರಲ್ಲಿ ಔಟ್‌ಸ್ಟಾಡಿಂಗ್ ಟೀಚರ್ ಅವಾರ್ಡ್, ಉಡುಪಿ ಪೇಜಾವರ ಮಠಾಧೀಶರಿಂದ ರಾಮವಿಠಲಾನುಗ್ರಹ ಪ್ರಶಸ್ತಿ, ೨೦೧೦ರಲ್ಲಿ ಐಡಿಯಲ್ ಟೀಚರ್ ಅವಾರ್ಡ್, ಕಾಶಿ ಶೇಷ ಶಾಸ್ತ್ರಿ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಸೇರಿದಂತೆ ನೂರಾರು ಸಂಘ-ಸಂಸ್ಥೆಗಳಿಂದ ಸನ್ಮಾನ, ಅಭಿನಂದನೆ ಮಾಡಲಾಗಿದೆ. ೧೯೧೯ರಲ್ಲಿ ಸ್ಥಾಪನೆಗೊಂಡ ಶ್ರೀರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆ ೧೯೭೫ರ ವೇಳೆಗೆ ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಾಗ ಅಧ್ಯಕ್ಷರಾಗಿದ್ದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥರು ೧೮ ವರ್ಷದ ಯುವಕನಾಗಿದ್ದ ನಾರಾಯಣ ಭಟ್‌ರನ್ನು ೧೯೭೮ರಲ್ಲಿ ಶಿಕ್ಷಕನಾಗಿ ನೇಮಿಸಿ ಶಾಲಾಭಿವೃದ್ಧಿಯ ಜವಾಬ್ದಾರಿ ನೀಡಿದ್ದರು. ಇವರು ದೇವಳದ ಗೋಪುರದಲ್ಲಿದ್ದ ಶಾಲೆಯನ್ನು ೧೯೮೦ರಲ್ಲಿ ಸ್ಥಳಾಂತರಗೊಳಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೪೦ ಮಕ್ಕಳಿದ್ದ ಕನ್ನಡ ಶಾಲೆಯನ್ನು ೧೯೯೦ರಿಂದ ನಿರಂತರ ೪೦೦ಕ್ಕೂ ಅಧಿಕ ಮಕ್ಕಳು ಕಲಿಯುವಂತೆ ಮಾಡಿದ ಸಾಧನೆ ಇವರದ್ದಾಗಿದೆ. ಔಷಧೀಯ ಸಸ್ಯ, ನಕ್ಷತ್ರ ವನ, ಹೂದೋಟ, ಬೋಧನೋಪಕರಣ ಇತ್ಯಾದಿಗಳಿಂದ ಇದೊಂದು ಶಾಲೆಗಳಿಗೆ ಒಂದು ಆದರ್ಶ ಶಾಲೆ ಎಂಬ ಪ್ರಶಂಸೆಯ ಜೊತೆಗೆ ಹಲವಾರು ಸಲ ತಾಲೂಕು, ಜಿಲ್ಲೆ ಉತ್ತಮ ಶಾಲಾ ಪ್ರಶಸ್ತಿಯೂ ಲಭಿಸಿದೆ.
ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜು ನಿರ್ಮಾಣದ ಪ್ರಧಾನ ಕಾರ್ಯದರ್ಶಿ, ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣದ ಜೊತೆ ಕಾರ್ಯದರ್ಶಿ, ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣದ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಸಂಘದ ಕಾರ್ಯದರ್ಶಿ, ಯುವಕ ಮಂಡಲದ ಅಧ್ಯಕ್ಷ, ಶಿಕ್ಷಕ ಕೇಂದ್ರದ ಕಾರ್ಯದರ್ಶಿ, ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ, ಸಾಕ್ಷರತಾ ಆಂದೋಲನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಾಮಾಜಿಕ ಸೇವೆಗಳು:
ಜಿಲ್ಲೆಯ ನೂರಾರು ಶಾಲೆಗಳಲ್ಲಿ ಸಂದರ್ಶಕ ಶಿಕ್ಷಕನಾಗಿ ಮಕ್ಕಳಿಗೆ, ಪೋಷಕರಿಗೆ ಉಪನ್ಯಾಸ, ಊರಿನ ೫ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ನೇತೃತ್ವ, ತಾಲೂಕು ಸಾಹಿತ್ಯ ಸಮ್ಮೇಳನ ಸಂಘಟನೆ, ಪರಿಸರ ಮಾಹಿತಿ ಕಾರ್ಯಕ್ರಮ ನೀಡಿಕೆ, ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮ ನೀಡಿಕೆ, ಮದ್ಯವರ್ಜನ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿ, ಮದ್ಯವ್ಯಸನಿಗಳನ್ನು ಪ್ರೇರೇಪಿಸಿ ಸನ್ಮಾರ್ಗದಲ್ಲಿ ತರುವುದು, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಪಾತ್ರಧಾರಿಯಾಗಿ ಜಾಗೃತಿ, ಮಕ್ಕಳಿಗೆ ನಾಟಕ ತರಬೇತಿಯೂ ನೀಡುತ್ತಿದ್ದಾರೆ. ಇವರು ಪ್ರಗತಿಪರ ಕೃಷಿಕ ರಾಮಕುಂಜ ಸನ್ನಿಧಿ ನಿವಾಸಿ ಟಿ. ಸುಬ್ರಾಯ ಭಟ್ ಹಾಗೂ ಭಾಗೀರಥಿ ದಂಪತಿ ಪುತ್ರ. ಇವರ ಪತ್ನಿ ಸಂಧ್ಯಾ ಎಂ.,ಶ್ರೀರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಡಾ. ಮೌಲಿಕಾ ಟಿ., ಪುತ್ರಿ.

ಶ್ರೀ ವಿಶ್ವೇಶತೀರ್ಥ ಪರಮಾನುಗ್ರಹದ ಫಲ:
ನೂತನ ಕಡಬ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಇತ್ತೀಚೆಗೆ ಆರಂಭಗೊಂಡಿದೆ. ಇದರ ವತಿಯಿಂದ ರಾಮಕುಂಜದಲ್ಲಿ ನಡೆಯಲಿರುವ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಸಮರ್ಪಿತವಾಗಲಿದೆ. ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷನಾಗಿ ನನ್ನನ್ನು ಕಸಾಪ ಪುತ್ತೂರು ಹಾಗೂ ಕಡಬ ತಾಲೂಕಿನ ಪದಾಧಿಕಾರಿಗಳು ಹಿರಿಯರು ಹಾಗೂ ಜಿಲ್ಲಾಧ್ಯಕ್ಷ ಪ್ರದೀಪ್ ಕಲ್ಕೂರುರವರು ಸರ್ವಾನುಮತದಿಂದ ನಿಯೋಜಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ನಾನು ಮಾಡಿರುವ ಕಿಂಚಿತ್ ಸೇವೆ ಗುರುತಿಸಲ್ಪಟ್ಟಿರುವುದು ತುಂಬಾ ಸಂತೋಷ ನೀಡಿದೆ. ಇದು ನನ್ನ ಬದುಕನ್ನು ರೂಪಿಸಿದ ಶ್ರೀ ವಿಶ್ವೇಶತೀರ್ಥರ ಪರಮಾನುಗ್ರಹದ ಫಲವೆಂದು ಭಾವಿಸಿದ್ದೇನೆ. ಈ ಸಮ್ಮೇಳನದಿಂದ ಕನ್ನಡ ಜಾಗೃತಿ ಮತ್ತಷ್ಟೂ ಬೆಳೆಯಲೆಂದು ನನ್ನ ಆಶಯ, ನನ್ನ ಸಾಹಿತ್ಯಾಭಿಮಾನಿಗಳೆಲ್ಲರಿಗೆ ಅಭಿನಂದನೆಗಳು – ನಾರಾಯಣ ಭಟ್ ಟಿ., ನಿಯೋಜಿತ ಸಮ್ಮೇಳನಾಧ್ಯಕ್ಷರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.