ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ನೇತ್ರ ಬಂಧು ಗಂಗಾಧರ ಶೆಟ್ಟಿ ಹೊಸಮನೆಯವರ ನೇತೃತ್ವದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್, ಜೆಸಿಐ ನೆಲ್ಯಾಡಿ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಪುತ್ತೂರು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪಡುಬೆಟ್ಟು, ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಸಹಕಾರದೊಂದಿಗೆ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸ.ಹಿ.ಪ್ರಾ ಶಾಲೆಯಲ್ಲಿ ೩೫ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಆನಂದಾಶ್ರಮ ಸೇವಾ ಟ್ರಸ್ಟ್ನ ವತಿಯಿಂದ ಉಚಿತ ಕನ್ನಡಕ ವಿತರಣೆ ನಡೆಯಿತು.
ನೆಲ್ಯಾಡಿ ಜೇಸಿಐ ಅಧ್ಯಕ್ಷ ಶಿವಪ್ರಸಾದ್ ಬೀದಿಮಜಲುರವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ವಿಶೇಷ ಕಾಳಜಿ ವಹಿಸಿ ತನ್ನ ಸಾಮಾಜಿಕ ಸೇವೆಗಾಗಿ “ನೇತ್ರಬಂಧು” ಬಿರುದು ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿಯವರ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿರುವ ಈ ಕಣ್ಣಿನ ಶಿಬಿರ ಯಶಸ್ವಿಯಾಗಲಿ ಎಂದರು. ದ.ಕ ಜಿಲ್ಲಾ ನೇತ್ರ ಪರೀಕ್ಷಕ ಶಾಂತರಾಜ್ರವರು ಕಣ್ಣಿನ ಆರೋಗ್ಯದ ಬಗ್ಗೆ ಮತ್ತು ಪೊರೆ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆನಂದಾಶ್ರಮ ಸೇವಾ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿ ಪೈ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ. ಅನಿಲ್ ರಾಮಾನುಜಂ, ವೆನ್ಲಾಕ್ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಸಾನಿಯಾ, ಶ್ರೀ ಕ್ಷೇತ್ರ.ಧ.ಗ್ರಾ ಯೋಜನೆಯ ತಾಲೂಕು ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ಪಡುಬೆಟ್ಟು ಶಾಲಾ ಮುಖ್ಯಗುರು ಅನ್ನಮ್ಮ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಬಿರದ ಸಂಘಟಕ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ಕಳೆದ ೧೦ ವರ್ಷಗಳಲ್ಲಿ ೩೫ ಕಣ್ಣಿನ ಶಿಬಿರ ನೆಲ್ಯಾಡಿ ವಲಯದಲ್ಲಿ ಸಂಘಟಿಸಿ ೨೮೦ಕ್ಕೂ ಮಿಕ್ಕಿ ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಿ ಉಚಿತವಾಗಿ ಲೆನ್ಸ್ ಅಳವಡಿಸಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ವಿಶೇಷವಾಗಿ ಪುತ್ತೂರು ಆನಂದಾಶ್ರಮದ ಸಹಕಾರದಲ್ಲಿ ೩೦೦೦ಕ್ಕೂ ಮಿಕ್ಕಿ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಉಪಯುಕ್ತವಾದ ಇಂತಹ ಶಿಬಿರಗಳ ಯಸಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು. ಪಡುಬೆಟ್ಟು ಶಾಲಾ ಮುಖ್ಯ ಗುರು ಅನ್ನಮ್ಮ ವಂದಿಸಿದರು. ಶಿಬಿರದಲ್ಲಿ ೧೫೦ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಪೊರೆ ಶಸ್ತ್ರ ಚಿಕಿತ್ಸೆಗಾಗಿ ೭ ಜನರನ್ನು ಆಯ್ಕೆಮಾಡಲಾಯಿತು.