- ಫೆ.24ಕ್ಕೆ ದರ್ಬೆ ವೃತ್ತದಲ್ಲಿ ಪ್ರತಿಭಟನೆ
ಪುತ್ತೂರು: ದರ್ಬೆ ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಮತ್ತು ದಲಿತ ಸಂಘಟನೆಗಳು ಸೂಚಿಸಿದ ಸ್ಥಳದಲ್ಲೇ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಪುತ್ತೂರಿನ ವಿವಿಧ ದಲಿತ್ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನೊಳಗೊಂಡ ರಾಜಕೀಯ ರಹಿತ ಹೋರಾಟ ಆರಂಭಗೊಂಡಿದೆ. ಸಂಘಟನೆಯೊಂದರಿಂದ ಪ್ರತ್ಯೇಕಗೊಂಡು ಪ್ರತ್ಯೇಕ ಸಂಘಟನೆ ಮಾಡಿಕೊಂಡ ಮುಖಂಡರೂ ಸಹಿತ ಎಲ್ಲಾ ಸಂಘಟನೆಗಳೂ ಸೇರಿ ಬಹುಜನ ಒಕ್ಕೂಟ ಹೋರಾಟ ಸಮಿತಿ ಎಂಬ ಹೆಸರಿನ ಅಡಿಯಲ್ಲಿ ಅಂಬೇಡ್ಕರ್ ಅನ್ಯಾಯದ ವಿರುದ್ಧ ಹೋರಾಟ ಮಾಡಲಿದ್ದು, ಫೆ.24ರಂದು ದರ್ಬೆ ವೃತ್ತಕ್ಕೆ ಅಂಬೇಡ್ಕ್ ಅವರ ಹೆಸರು ಇಡುವಂತೆ ಒತ್ತಾಯಿಸಿ ದರ್ಬೆಯಲ್ಲಿ ಪ್ರತಿಭಟನೆ ನಡೆಯಲಿದೆ.
ಪತ್ರಿಕಾಗೊಷ್ಠಿಯಲ್ಲಿ ಬಹುಜನ ಒಕ್ಕೂಟ ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ ಈಗಾಗಲೇ ದರ್ಬೆ ವೃತ್ತಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಹಲವಾರು ಹಕ್ಕೊತ್ತಾಯ ಹೋರಾಟ ಮಾಡಿದ್ದೇವೆ. ಶಾಸಕರಿಗೂ, ಪೌರಾಯುಕ್ತರಿಗೂ ಮನವಿ ಕೊಟ್ಟಿದ್ದೇವೆ. ಹಾಗೆಂದು ನಾವು ಕೋಚ್ಚಣ್ಣ ರೈ ಅವರ ವಿರೋಧಿಗಳಲ್ಲ. ನಾವು ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂದು ಮೊದಲೇ ಹಕ್ಕೊತ್ತಾಯ ಮಾಡಿದ್ದೇವೆ. ಆದರೆ ಅದು ಯಾಕೆ ಈಗ ಹಿನ್ನಡೆಯಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಇದೊಂದೆ ಅಲ್ಲ ಅಂಬೇಡ್ಕರ್ ಭವನಗಳ ವಿಚಾರದಲ್ಲೂ ಗೊಂದಲ ಭಾವನೆ ನಿರ್ಮಿಸುತ್ತಾ ನಮ್ಮನ್ನು ಬೇರೆ ರೀತಿಯಲ್ಲಿ ನೋಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ದರ್ಬೆ ವೃತ್ತದ ವಿಚಾರಕ್ಕೆ ಸಂಬಂಧಿಸಿ ನಮ್ಮನ್ನು ಅನಾವಶ್ಯಕವಾಗಿ ಕೋಚ್ಚಣ್ಣ ರೈ ಅವರ ವಿರೋಧಿಗಳನ್ನಾಗಿ ಬಿಂಬಿಸುತ್ತಿದ್ದಾರೆ ಎಂದರು. ಒಂದು ದೇಶದ ಮಹಾನ್ ನಾಯಕನ ಭವನಕ್ಕೆ, ಅವರ ಪ್ರತಿಮೆ ಸ್ಥಾಪಿಸಲು, ಸರ್ಕಲ್ಗೆ ಹೆಸರಿಡಲು ಈ ರೀತಿಯ ಷಡ್ಯಂತರ ಮಾಡುವುದು ತುಂಬಾ ಬೇಸರ ತಂದಿದೆ. ಕೋಚಣ್ಣ ರೈ ಅವರ ಹೆಸರನ್ನು ದರ್ಬೆ ಅಶ್ವಿನಿ ಸರ್ಕಲ್ಗೆ ಇಟ್ಟು, ಈಗಿರುವ ಸರ್ಕಲ್ಗೆ ಅಂಬೇಡ್ಕರ್ ಹೆಸರನ್ನು ಇಡಬೇಕು. ಇಲ್ಲವಾದಲ್ಲಿ ಫೆ.24ರಂದು ನಾವು ದರ್ಬೆ ವೃತ್ತದಲ್ಲೇ ರಾಜಕೀಯ ರಹಿತವಾದ ಸಂಘಟನೆಯಾದ ಬಹುಜನ ಒಕ್ಕೂಟ ಹೋರಾಟ ಸಮಿತಿಯ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.
ಭವನ ನಿರ್ಮಾಣಕ್ಕೂ ನಮಗೆ ವಿರೋಧ:
ಪುತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಾವು ಹೇಳಿದ ಸ್ಥಳದಲ್ಲಿ ಇನ್ನೂ ಕೆಲಸ ಮಾಡುತ್ತಿಲ್ಲ. ನಿಡ್ಪಳ್ಳಿಯಲ್ಲಿ 15 ಸೆಂಟ್ಸ್ ಅಂಬೇಡ್ಕರ್ಗೆ ಮೀಸಲಿಟ್ಟ ಸ್ಥಳವನ್ನು ರದ್ದು ಮಾಡುವಂತೆ ಸಹಾಯಕ ಕಮೀಷನರ್ ಮತ್ತು ಜಿಲ್ಲಾಧಿಕಾರಿಗೆ ಮನವಿ, ವಿಟ್ಲದಲ್ಲಿ ಕೂಡಾ ಅಂಬೇಡ್ಕರ್ ಭವನ ಸ್ಥಳದಲ್ಲಿ ಗ್ರಾ.ಪಂ ಪಾರ್ಕ್ ಮಾಡಲು ಹುನ್ನಾರ, ಬಂಟ್ವಾಳದಲ್ಲೂ ಭವನ ನಿರ್ಮಾಣ ಮಾಡಲು ಅಡ್ಡಿಪಡಿಸುವ ಮೂಲಕ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸೇಷಪ್ಪ ಬೆದ್ರಕಾಡು ಹೇಳಿದರು.
ಪ್ರತಿಭಟನೆಗೆ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ:
ಬಹುಜನ ಒಕ್ಕೂಟ ಹೋರಾಟ ಸಮಿತಿ ಗೌರವಾಧ್ಯಕ್ಷ ಗಿರಿಧರ ನಾಯ್ಕ ಅವರು ಮಾತನಾಡಿ ಫೆ.24ರಂದು ದರ್ಬೆಯಲ್ಲಿ ನಡೆಯುವ ಹೋರಾಟಕ್ಕೆ ಅಧಿಕಾರಿಗಳ ಕಡೆಯಿಂದ ಸ್ಪಂದನೆ ಭರವಸೆ ಬೇಡ. ಯಾವಾಗ ಅಂಬೇಡ್ಕರ್ ನಾಮಕರಣ ಮಾಡುತ್ತೀರಿ ಎಂಬ ಸ್ಪಷ್ಟ ಮಾಹಿತಿ ಬೇಕು. ಒಂದು ವೇಳೆ ಪ್ರತಿಭಟನೆ ಬಳಿಕವೂ ನಮ್ಮ ಬೇಡಿಕೆ ಈಡೇರದಿದ್ದರೆ 15 ದಿನದೊಳಗೆ ಉಗ್ರ ಹೋರಾಟ ನಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಬಹುಜನ ಒಕ್ಕೂಟ ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ಕೆ.ಅಣ್ಣಪ್ ಕಾರೆಕ್ಕಾಡು, ಉಪಾಧ್ಯಕ್ಷ ಹಮೀದ್ ಸಾಲ್ಮರ, ಪದಾಧಿಕಾರಿ ರಾಜು ಹೊಸ್ಮಠ ಉಪಸ್ಥಿತರಿದ್ದರು.