ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ಆರಂಭವಾಗಿ ಬಳಿಕ ಗೋವಾ, ಹುಬ್ಬಳ್ಳಿ ಹಾಗೂ ಇತರೆಡೆಯ ಮಹಾನ್ ನಗರಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಪುತ್ತೂರಿನಲ್ಲಿ ಕೆಥೋಲಿಕ್ ಕ್ರಿಶ್ಚಿಯನ್ ಸಮುದಾಯದ `ದಿ ಕೆಟೆನಿಯನ್ಸ್ ಅಸೋಸಿಯೇಶನ್ ಪುತ್ತೂರು ಸರ್ಕಲ್ ೩೮೦’ ಹೆಸರಿನಲ್ಲಿ ಆಸ್ತಿತ್ವಕ್ಕೆ ಬಂದಿದ್ದು, ಇದರ ಪ್ರಥಮ ವರ್ಷದ ಆಚರಣೆಯು ಫೆ.೧೨ ರಂದು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಿತು.
ದಿ ಕೆಟೆನಿಯನ್ಸ್ ಅಸೋಸಿಯೇಶನ್ ಮಂಗಳೂರು ಇದರ ಮಾಜಿ ಅಧ್ಯಕ್ಷ ಗಿಲ್ಬರ್ಟ್ ಡಿ’ಸೋಜರವರು ಮಾತನಾಡಿ, ಕುಟುಂಬದಲ್ಲಿ ಪರಸ್ಪರ ಬಾಂಧವ್ಯವನ್ನು ವೃದ್ಧಿಸುವ ಹಾಗೂ ಧರ್ಮದಲ್ಲಿ ನಂಬಿಕೆ ಮೂಲಕ ಕುಟುಂಬ ಜೀವನದ ಉನ್ನತೀಕರಣವೆಂಬ ಧ್ಯೇಯದೊಂದಿಗೆ ಇಂಗ್ಲೆಂಡ್ನಲ್ಲಿ ೧೯೦೮ರಲ್ಲಿ ಪ್ರಾರಂಭವಾದ ಈ ದಿ ಕೆಟೇನಿಯನ್ಸ್ ಸಂಸ್ಥೆಗೆ ಜಗದ್ಗುರು ಪೋಪ್ ಫ್ರಾನ್ಸಿಸ್ರವರ ಅನುಮೋದನೆಯೂ ಲಭಿಸಿದೆ. ಪ್ರಸ್ತುತ ಈ ಸಂಸ್ಥೆಯು ಮಂಗಳೂರು, ಗೋವಾ, ಹುಬ್ಬಳ್ಳಿ ಸಹಿತ ವಿಶ್ವದೆಲ್ಲೆಡೆ ಪಸರಿಸಿದೆ. ಪುತ್ತೂರಿನಲ್ಲೂ ಈ ಸಂಸ್ಥೆಯು, ಸಂಸ್ಥೆಯಲ್ಲಿನ ಸದಸ್ಯರ ಬಾಂಧವ್ಯವನ್ನು ವೃದ್ಧಿಸುವ ಮೂಲಕ ಮನೆಮಾತಾಗಲಿ ಎಂದು ಹೇಳಿ ಶುಭಹಾರೈಸಿದರು.
ಪುತ್ತೂರಿನವರೇ ಆಗಿದ್ದು, ಪ್ರಸ್ತುತ ಧಾರವಾಡ ಧರ್ಮಪ್ರಾಂತ್ಯದಲ್ಲಿ ಧರ್ಮಗುರುಗಳಾಗಿರುವ ವಂ|ರಿಚರ್ಡ್ ಮಸ್ಕರೇನ್ಹಸ್ರವರು ಮಾತನಾಡಿ, ಯಾರು ಕಷ್ಟದಲ್ಲಿದ್ದರೋ ಅವರೊಂದಿಗೆ ಭಾಗಿಯಾಗಿ ಅವರ ಕಷ್ಟ-ಸುಖಗಳಲ್ಲಿ ಯಾರು ಭಾಗಿಯಾಗುತ್ತಾನೆ ಆತ ದೇವರಿಗೆ ಹತ್ತಿರವಾಗುವನು. ದೇವರ ಆಶೀರ್ವಾದದೊಂದಿಗೆ, ದೇವರ ವಿಶೇಷ ಯೋಜನೆಯೊಂದಿಗೆ ಮಾನವ ತಾಯಿ ಗರ್ಭದ ಮೂಲಕ ಭುವಿಗೆ ಬರುತ್ತಾನೆ ನಿಜ. ಭುವಿಯಲ್ಲಿ ಜೀವಿಸುವ ಸಂದರ್ಭ ಮಾನವನು ಪರೋಪಕಾರಿಯಾಗಿ, ನಿಸ್ವಾರ್ಥತೆಯ ಮನೋಭಾವದಿಂದ ಜೀವಿಸುವ ಮೂಲಕ ದೇವರ ಇಚ್ಛೆಯನ್ನು ಪೂರೈಸುವ ಮಹತ್ತರ ಜವಾಬ್ದಾರಿಯನ್ನು ಹೊಂದಬೇಕಾಗಿರುವುದು ಉಲ್ಲೇಖನೀಯ. ಮನುಷ್ಯ ತನ್ನ ಜೀವಿತಾವಧಿಯನ್ನು ಯಾರನ್ನೂ ನೋಯಿಸದೆ ಪೂರೈಸಿದಾಗ ನಿಜಕ್ಕೂ ಸಾರ್ಥಕತೆಯನ್ನು ಪಡೆಯುತ್ತಾನೆ ಎಂದರು.
ಮಾಯಿದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಶತಮಾನದ ಹಿಂದೆ ಆರಂಭವಾದ ಈ ಸಂಘಟನೆಯು ಇಂದು ಬಲಿಷ್ಟವಾಗಿ ಬೆಳೆಯಬೇಕಾದರೆ ತನ್ನ ಹಾದಿಯುದ್ದಕ್ಕೂ ಎಷ್ಟೊಂದು ಕಷ್ಟಗಳನ್ನು ಅನುಭವಿಸಿದೆ ಎಂಬುದನ್ನು ಅರ್ಥ ಮಾಡಬೇಕಿದೆ. ಮನುಷ್ಯನಲ್ಲಿ ಪರಸ್ಪರ ವಿಶ್ವಾಸ, ಪ್ರೀತಿ, ನಂಬಿಕೆ ಗಟ್ಟಿಗೊಂಡಾಗ ಯಾವುದೇ ಸಂಘಟನೆಗಳಾಗಲಿ ಉತ್ತಮ ಹೆಸರನ್ನು ಗಳಿಸುತ್ತಾ ಮುನ್ನೆಡೆಯಬಲ್ಲುದು ಎಂದರು.
ಸಭಾ ಕಾರ್ಯಕ್ರಮದ ಮೊದಲಿಗೆ ಕೆಟೆನಿಯನ್ಸ್ ಅಸೋಸಿಯೇಶನ್ನ ಸದಸ್ಯರ ಸಭೆಯು ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಜೆರೋಮಿಯಸ್ ಪಾಸ್ ವರದಿ ಮಂಡಿಸಿ ವಂದಿಸಿದರು. ಕೋಶಾಧಿಕಾರಿ ವಲೇರಿಯನ್ ಡಾಯಸ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಜೋನ್ ಕುಟಿನ್ಹಾ, ಚೇಂಬರ್ಲೈನ್ ಲಾರೆನ್ಸ್ ಗೊನ್ಸಾಲ್ವಿಸ್, ಮಾರ್ಶಲ್ ಡೆನ್ನಿಸ್ ಮಸ್ಕರೇನ್ಹಸ್, ರಿಜಿಸ್ಟ್ರಾರ್ ನೋಯಲ್ ಡಿ’ಸೋಜ, ಸದಸ್ಯರಾದ ಫೆಲಿಕ್ಸ್ ಡಿ’ಕುನ್ಹಾ, ಮಾರ್ಸೆಲ್ ವೇಗಸ್, ಲಾರೆನ್ಸ್ ಫೆರ್ನಾಂಡೀಸ್, ಫ್ರೆಡ್ರಿಕ್ ಗೊನ್ಸಾಲ್ವಿಸ್, ಜೇಕಬ್ ಲಾರೆನ್ಸ್ ಲೋಬೋ, ಸಿರಿಲ್ ಮೊರಾಸ್, ಜೋನ್ ರೆಬೆಲ್ಲೋ, ಸಿ.ಎಲ್ ಮಸ್ಕರೇನ್ಹಸ್, ಮೈಕಲ್ ಕ್ರಾಸ್ತಾ, ವಾಲ್ಟರ್ ಸಿಕ್ವೇರಾ, ವಾಲ್ಟರ್ ರೆಬೆಲ್ಲೋ, ವಿಕ್ಟರ್ ಮಾರ್ಟಿಸ್ರವರನ್ನೊಳಗೊಂಡ ಸಭೆಯು ಜರಗಿತು. ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಮಾಯಿದೆ ದೇವುಸ್ ಚರ್ಚ್ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋ, ಮಾಯಿದೆ ದೇವುಸ್ ಚರ್ಚ್ನ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನ ಉಪಾಧ್ಯಕ್ಷೆ ಗ್ರೆಟ್ಟಾ ಮೊಂತೇರೋ, ಧರ್ಮಭಗಿನಿಯರಾದ ಬೆಥನಿ ಕಾನ್ವೆಂಟಿನ ಸಿಸ್ಟರ್ ಸರಿತಾ ಬಿ.ಎಸ್, ಸಿಸ್ಟರ್ ಪ್ಲೋರಾ ಮಚಾದೋ, ಸಿಸ್ಟರ್ ಲೀಡಿಯಾ, ಸಿಸ್ಟರ್ ಪ್ರಶಾಂತಿ, ಸಿಸ್ಟರ್ ಫ್ಲಾವಿಯಾ ಲೂವಿಸ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಂ|ಪೀಟರ್ ಸೆರಾವೋರವರಿಗೆ ಸನ್ಮಾನ…
ನಿಡ್ಡೋಡಿ ಎಂಬಲ್ಲಿ ಜನಿಸಿ, ೧೯೬೬ರಲ್ಲಿ ಗುರುದೀಕ್ಷೆಯನ್ನು ಪಡೆದು ವಿವಿಧ ಚರ್ಚ್ಗಳಲ್ಲಿ ಸಹಾಯಕ ಧರ್ಮಗುರುವಾಗಿ, ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕೇವಲ ೩೦ ಕ್ರೈಸ್ತ ಕುಟುಂಬಗಳನ್ನು ಹೊಂದಿರುವ ದೇಲಂತಬೆಟ್ಟು ಎಂಬಲ್ಲಿ ರೂ.೬೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಂತ ಪಾವ್ಲ್ ಚರ್ಚ್ನ ರೂವಾರಿಯೂ ಆಗಿರುವ ೮೩ ವರ್ಷ ಪ್ರಾಯದ ವಂ|ಪೀಟರ್ ಸೆರಾವೋರವರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಮನೆಲ, ಪೆರುವಾಯಿ, ದೇಲಂತಬೆಟ್ಟು ಹೀಗೆ ಮೂರು ಧರ್ಮಗುರುಗಳು ಬರೀ ಸ್ಕೂಟರ್ನಲ್ಲಿ ಹೋಗಿ ಬಲಿಪೂಜೆ ನಡೆಸುವ ಕಷ್ಟವನ್ನು ಮನಗಂಡ ಉಡುಗೆ, ಉಪಹಾರ, ಮಾತುಗಾರಿಕೆಯಲ್ಲಿ ಬಹಳ ಸರಳತೆಯನ್ನು ಹೊಂದಿರುವ ಸರಳತೆಯ ಪರಮಾವಥಾರ ಆಗಿರುವ ವಂ|ಪೀಟರ್ರವರು ಸುಲಭವಾಗಲಿ ಎಂದು ದೇಲಂತಬೆಟ್ಟುವಿನಲ್ಲಿ ಚರ್ಚ್ನ್ನು ನಿರ್ಮಿಸಿದ್ದಾಗಿದೆ. ಸನ್ಮಾನ ಸ್ವೀಕರಿಸಿದ ವಂ|ಪೀಟರ್ರವರು ತನ್ನ ಅನಿಸಿಕೆ ವ್ಯಕ್ತಪಡಿಸಿದರು.
ಅಸೋಸಿಯೇಶನ್ನ ಪ್ರಥಮ ವರ್ಷಾಚರಣೆಯ ಪ್ರಯುಕ್ತ ಸಂಜೆ ಮಾಯಿದೆ ದೇವುಸ್ ಚರ್ಚ್ನಲ್ಲಿ ವಂ|ರಿಚರ್ಡ್ ಮಸ್ಕರೇನ್ಹಸ್ ಧಾರವಾಡ, ಜಾರ್ಖಂಡ್ ಧರ್ಮಪ್ರಾಂತ್ಯದ ವಂ|ರಫಾಯೆಲ್ ಮೊಂತೇರೋ, ಬನ್ನೂರು ಸಂತ ಅಂತೋನಿ ಚರ್ಚ್ನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.