HomePage_Banner
HomePage_Banner
HomePage_Banner
HomePage_Banner

ಪುತ್ತೂರು ಗಾಂಧಿ ಕಟ್ಟೆ ನವೀಕರಣ: ಅಂತೂ ಗಾಂಧಿ ಕಟ್ಟೆ ಮತ್ತೆ ಸಹಜ ಸ್ಥಿತಿಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಪಟ್ಟಣದ ಹೃದಯ ಭಾಗವಾದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ನವೀಕರಣ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ತೆರವುಗೊಳಿಸಿದ್ದ ಗಾಂಧೀಜಿ ಪ್ರತಿಮೆಗೆ ಇದೀಗ ಕಟ್ಟೆಯ ಕಾಮಗಾರಿ ಅಂತಿಮ ಹಂತದಲ್ಲಿರುವ ಕಾರಣ ಮತ್ತೆ ಗಾಂಧೀಜಿ ಪ್ರತಿಮೆಗೆ ಕಾಯಕಲ್ಪ ಸಿಕ್ಕಿದೆ.

ಗಾಂಧಿಕಟ್ಟೆಯನ್ನು ತಳ ಭಾಗಕ್ಕೆ ನೆಲಕ್ಕೆ ಸಮನಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ನಗರಸಭೆಯಿಂದ ೮ ಲಕ್ಷ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ ನವೀಕರಣ ಕಾಮಗಾರಿ ಆರಂಭಿಸಲಾಗಿತ್ತು. ೨೦೧೯ ರ ಮಾರ್ಚ್ ತಿಂಗಳಲ್ಲಿ ಕಟ್ಟೆ ಹಾಗೂ ಗಾಂಧಿ ಪ್ರತಿಮೆಯನ್ನು ತೆರವುಗೊಳಿಸಲಾಗಿತ್ತು. ಬಳಿಕ ಕೆಲವೆ ತಿಂಗಳಲ್ಲಿ ಕಟ್ಟೆಯ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದಂತೆ ವ್ಯಕ್ತಿಯೊಬ್ಬರು ಕಾಮಗಾರಿಗೆ ರಾಜ್ಯ ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಗಾಂಧಿಕಟ್ಟೆಯ ಗಾಂಧಿ ಪ್ರತಿಮೆ ಸಮೀಪದ ಕೋಣೆಯೊಳಗೆ ಬಂಧಿಯಾಗಿತ್ತು. ಕೆಲ ತಿಂಗಳ ಹಿಂದೆ ಕೋರ್ಟಿನಲ್ಲಿ ತಡೆಯಾಜ್ಞೆ ತೆರವಾದ ಬಳಿಕ ಗಾಂಧಿ ಕಟ್ಟೆಯ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಇದರ ಗಾಂಧಿ ಮಂಟಪದಲ್ಲಿ ಗಾಂಧಿಯ ಪ್ರತಿಮೆಯನ್ನು ಫೆ.೧೨ರಂದು ಸ್ಥಾಪಿಸಲಾಗಿದೆ.

೧೯೩೪ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಆಗಮಿಸಿದ ಮತ್ತು ಅಶ್ವತ್ಥ ಮರದ ಕೆಳಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನೆನಪಿನಲ್ಲಿ ಈ ಗಾಂಧಿ ಕಟ್ಟೆಯನ್ನು ನಿರ್ಮಿಸಿ, ಗಾಂಧಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಇದೇ ಜಾಗದಲ್ಲಿ ಅಶ್ವತ್ಥ ಮರವೂ ಇದೆ. ಪುತ್ತೂರು ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿದ ಸಂದರ್ಭದಲ್ಲೂ ಗಾಂಧಿಕಟ್ಟೆಯನ್ನು ಹಾಗೆಯೇ ಉಳಿಸಲಾಗಿತ್ತು. ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರದ ಮಹತ್ವ ಮತ್ತು ಪ್ರಸ್ತುತತೆ ಕುರಿತು ಹಲವು ಬಾರಿ ಚರ್ಚೆ, ಗೊಂದಲಗಳು ನಡೆದಿದ್ದವು. ಕೆಲವರು ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಪರ ಮಾತನಾಡಿದರೆ, ಇನ್ನು ಕೆಲವರು ಪುತ್ತೂರಿನ ಅಭಿವೃದ್ಧಿಯ ದೃಷ್ಟಿಯಿಂದ ವ್ಯತ್ಯಾಸಗಳನ್ನು ಮಾಡಿಕೊಳ್ಳುವ ಪರ ನಿಂತು ನಿರಂತರ ವಾದ ಪ್ರತಿವಾದಗಳು ನಡೆಯುತ್ತಿದ್ದವು. ಈ ಮಧ್ಯೆ ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರದ ಸುತ್ತಲೂ ಮಣ್ಣಿನ ಕುಸಿತ ಉಂಟಾಗಿ ಅಪಾಯದ ಸ್ಥಿತಿಯೂ ಕಾಣಿಸಿಕೊಂಡಿತ್ತು. ಗಾಂಧಿ ಕಟ್ಟೆಯ ನಿರ್ವಹಣೆ ಸಮರ್ಪಕವಾಗಿರಲಿಲ್ಲ. ಅಶ್ವತ್ಥ ಮರದ ಗೆಲ್ಲುಗಳನ್ನು ಸವರುವ ಸಂದರ್ಭದಲ್ಲೂ ಪುತ್ತೂರಿನ ಹಿರಿಯರ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಪಕ್ಷಿಗಳಿಗೆ ತೊಂದರೆಯಾಗುವ ಮತ್ತು ಐತಿಹಾಸಿಕ ಜಾಗದಲ್ಲಿ ವ್ಯತ್ಯಾಸ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಬಳಿಕದ ಬೆಳವಣಿಗೆಯಲ್ಲಿ ಗಾಂಧಿ ಕಟ್ಟೆ ಮತ್ತು ಅಶ್ವತ್ಥಮರಕ್ಕೆ ತಾಗಿರುವ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯನ್ನು ನವೀಕರಣಗೊಳಿಸುವುದು ಮತ್ತು ಅಶ್ವತ್ಥ ಮರದ ಬೇರುಗಳು ಹೋಗದಂತೆ ಮತ್ತು ಮರಕ್ಕೂ ಆಧಾರವಾಗುವಂತೆ ಕಾಂಕ್ರೀಟ್ ಗೋಡೆ ನಿರ್ಮಾಣದ ಚಿಂತನೆಯಂತೆ ಒಟ್ಟು ಪುನರ್‌ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಇದೀಗ ಶೀಘ್ರದಲ್ಲಿ ಎಲ್ಲಾ ಕಾಮಗಾರಿ ಮುಗಿದು ಶೀಘ್ರ ಲೋಕಾರ್ಪಣೆಯೂ ಆಗಲಿದೆ.

ರೂ.8 ಲಕ್ಷ ಯೋಜನೆಯಲ್ಲಿ ಏನೆಲ್ಲಾ ಕಾಮಗಾರಿ
ಗಾಂಧಿಕಟ್ಟೆ ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಅಭಿವೃದ್ಧಿಯ ದೃಷ್ಟಿಯಿಂದ ನಗರಸಭೆಯಿಂದ ರೂ.೮ ಲಕ್ಷ ರೂ. ವೆಚ್ಚದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಗಾಂಧಿಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ನಿರ್ಮಾಣ, ಶಿಲ್ಪಿ ಪದ್ಮನಾಭ ಅವರಿಂದ ದೇವರ ಶಿಲಾಮಯ ಕಟ್ಟೆ ನಿರ್ಮಾಣ ಮಾಡಲಾಗಿದೆ. ಆರಂಭದಲ್ಲಿ ಆಶ್ವತ್ಥ ಮರದ ಗೆಲ್ಲುಗಳನ್ನು ಟ್ರಿಮ್ ಮಾಡಲೆಂದು ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಆಗಿನ ಸಹಾಯಕ ಕಮೀಷನರ್ ಎಚ್.ಕೆ.ಕೃಷ್ಣಮೂರ್ತಿ ಮತ್ತು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅವರ ಉಪಸ್ಥಿತಿಯಲ್ಲಿ ಮುಹೂರ್ತ ಮಾಡಲಾಗಿತ್ತು. ಇದೀಗ ಗಾಂಧಿ ಮಂಟಪದಲ್ಲಿ ಕೆಂಪು ಕಲ್ಲಿನ ತುಂಡುಗಳನ್ನು ಟೈಲ್ಸ್ ರೂಪದಲ್ಲಿ ಕೆತ್ತನೆ ಮಾಡಿ ಮಂಟಪದ ಗೋಡೆಗೆ ಅಳವಡಿಸಲಾಗಿದ್ದು ಗಾಂಧಿ ಪ್ರತಿಮೆಯನ್ನು ಮಂಟಪದ ನಡು ಭಾಗದಲ್ಲಿ ನಿಲ್ಲಿಸಲಾಗಿದೆ. ಇನ್ನು ಉಳಿದಂತೆ ಮಂಟಪದ ಸುತ್ತು ಸ್ಟೀಲ್ ಗ್ರಿಲ್, ಗೇಟ್, ಮಂಟಪದ ಎದುರು ಧ್ವಜಸ್ತಂಬ, ಹುಲ್ಲು ಹಾಸು, ಪೈಂಟಿಂಗ್ ಕೆಲಸ ಬಾಕಿ ಇದೆ. ಮುಂದೆ ಅಶ್ವತ್ಥ ಮರದಲ್ಲಿ ಕುಳಿತ ಹಕ್ಕಿಗಳ ಹಿಕ್ಕೆಗಳು ಬೀಳದಂತೆ ಅಶ್ವತ್ಥ ಕಟ್ಟೆಯ ಮೇಲ್ಭಾಗದಲ್ಲಿ ಶೀಟು ಹಾಸುವ ಚಿಂತನೆ ನಗರಸಭೆ ಮುಂದಿದೆ. ಒಟ್ಟು ಗಾಂಧಿಕಟ್ಟೆಯ ಕಾಮಗಾರಿಯ ವಾಸ್ತುಇಂಜಿನಿಯರ್ ಆಗಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ಅವರು ನಿರ್ವಹಣೆ ಮಾಡುತ್ತಿದ್ದಾರೆ. ಕಾಮಗಾರಿ ಗುತ್ತಿಗೆಯನ್ನು ಅಬ್ದುಲ್ ರಜಾಕ್ ವಹಿಸಿಕೊಂಡಿದ್ದಾರೆ.

ತಿಂಗಳೊಳಗೆ ಗಾಂಧಿಕಟ್ಟೆ ಲೋಕಾರ್ಪಣೆ
ಗಾಂಧಿ ಪ್ರತಿಮೆಯನ್ನು ಮಂಟಪದೊಳಗೆ ನಿಲ್ಲಿಸಲಾಗಿದೆ. ಮುಂದೆ ಟೈಲ್ಸ್ ಕಾಮಗಾರಿ ನಡೆಯಲಿದ್ದು, ಈ ತಿಂಗಳ ಕೊನೆಯ ವಾರ ಜಿಲ್ಲಾಧಿಕಾರಿಗಳು ಪುತ್ತೂರಿಗೆ ಆಗಮಿಸಲಿದ್ದು, ಈವೇಳೆ ಕಾಮಗಾರಿ ಗುಣಮಟ್ಟದ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಕಾಮಗಾರಿ ಪೂರ್ಣಗೊಂಡ ಬಳಿಕ ರಾಜ್ಯ ನಾಯಕರನ್ನು ಅಥವಾ ಹಿರಿಯ ಗಾಂಧಿ ಚಿಂತಕರ ಮೂಲಕ ಗಾಂಧಿಕಟ್ಟೆ ಲೋಕಾರ್ಪಣೆಗೊಳಿಸಲು ನಗರಸಭೆ ಸಿದ್ದತೆ ನಡೆಸುತ್ತಿದೆ.

ಗಾಂಧಿ ಕಟ್ಟೆಯ ಪುನರ್‌ನಿರ್ಮಾಣ ಕಾರ್ಯದಿಂದಾಗಿ ಗಾಂಧಿ ಪ್ರತಿಮೆಯನ್ನು ತೆರವುಗೊಳಿಸಿದ್ದರಿಂದ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಗಾಂಧಿ ಜಯಂತಿ, ಗಣರಾಜ್ಯೋತ್ಸವದ ಸಂದರ್ಭ ಗಾಂಧಿಕಟ್ಟೆಯಲ್ಲಿ ತಾಲೂಕು ಆಡಳಿತದಿಂದ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ವಿರಾಮ ಹಾಕಲಾಗಿತ್ತು. ಗಾಂಧಿ ಕಟ್ಟೆ ಅಭಿವೃದ್ದಿ ಸಮಿತಿಯವರು ತಾಲೂಕು ಆಡಳಿತವನ್ನು ಕರೆಸಿಕೊಂಡು ಗಾಂಧೀಜಿಯವರ ತಾತ್ಕಾಲಿಕ ಭಾವ ಚಿತ್ರ ಇಟ್ಟು ಎಲ್ಲಾ ಆಚರಣೆಗಳನ್ನು ಮಾಡಿ ಮಹಾತ್ಮ ಗಾಂಧೀಜಿಗೆ ಗೌರವ ನೀಡುತ್ತಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.