ಪುತ್ತೂರು: ಪುಲ್ವಾಮಾ ಘಟನೆ ದೇಶಕ್ಕೆ ದೇಶವೇ ಮರುಗಿದ ಘಟನೆ. ಈ ಘಟನೆ ದೇಶದ ಜನರ ಭಾವನೆ, ದೇಶವಾಸಿಗಳನ್ನು ಒಂದುಗೂಡಿಸಿದೆ, ಗಟ್ಟಿತನ ಜಾಗೃತವಾಗಿದೆ. ಆದರೆ ಸೈನಿಕರ ಜಾತಿ ಹುಡುಕಿದರು, ಹುಟ್ಟಿನ ಆಧಾರದಲ್ಲಿ ಸೈನಿಕ ಪ್ರಾಣ ಅಳೆಯುವ ಪ್ರಯತ್ನ ನಡೆಸಿದರು. ಅನಂತರ ನಡೆದ ಸರ್ಜಿಕಲ್ ಸ್ಟ್ರೈಕ್ ವಾಯುಸೇನೆ ದಾಳಿಗೆ ಸಾಕ್ಷಿ ಕೇಳುವ ಹಂತಕ್ಕೂ ತಲುಪಿದರು. ಆದರೆ ನಿಜವಾದ ದೇಶಪ್ರೇಮಿಗಳಿಗೆ ಇದು ಸಾವಿರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಗೆಲುವಿನ ದಿನ ಎಂದು ಸಂಸ್ಕಾರ ಭಾರತೀಯ ಪ್ರಮುಖ್ ಉಪನ್ಯಾಸಕ ಆದರ್ಶ ಗೋಕಲೆ ಅವರು ಹೇಳಿದರು.
೨೦೧೯ರ ಫೆ.೧೪ರಂದು ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದರಿಂದ ಹುತಾತ್ಮರಾದ ೪೦ ಮಂದಿ ಹೆಮ್ಮೆಯ ಸೈನಿಕರಿಗೆ ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಜ್ಯೋತಿಯ ಬಳಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ದೇಶದ ಗಡಿಯಲ್ಲಿ ನಮ್ಮ ಯೋಧರು ತಮ್ಮ ಎದೆಯನ್ನು ವೈರಿಗಳಿಗೊಡ್ಡಿ ಧೈರ್ಯದಿಂದ ವೀರಮರಣ ಹೊಂದಿದ್ದಾರೆ. ಇಂತಹ ವೀರ ಯೋಧರ ಯಶೋಗಾಥೆಗಳ ಸಾಲಿನಲ್ಲಿ ನಿಲ್ಲುವಂತಹ ವೀರ ಯೋಧರ ತ್ಯಾಗ ಅನುಕರಣೀಯ ಎಂದ ಅವರು ಸೈನಿಕರ ಬದುಕು ನಮಗೋಸ್ಕರ ಸಮರ್ಪಿತವಾದುದು. ಅವರ ಪ್ರಾಣ ತ್ಯಾಗ ನಮ್ಮಲ್ಲಿ ಪ್ರೇರಣೆ ತರದಿದ್ದರೆ, ನಾಳೆಯ ಭರವಸೆ ಮೂಡದಿದ್ದರೆ ಬಲಿದಾನ ವ್ಯರ್ಥವಾಗುತ್ತದೆ. ಪುಲ್ವಾಮಾ ಘಟನೆಯ ಬಳಿಕ ದೇಶವನ್ನು ಪ್ರೀತಿಸದವರು, ಸೈನಿಕರ ಬಲಿದಾನದ ಮಹತ್ವ ಅರಿಯದವರು ಸೈನಿಕರ ಜಾತಿ ಹುಡುಕಿದರು, ಹುಟ್ಟಿನ ಆಧಾರದಲ್ಲಿ ಸೈನಿಕರ ಪ್ರಾಣ ಅಳೆಯುವ ಪ್ರಯತ್ನ ನಡೆಸಿದರು. ಅನಂತರ ನಡೆದ ಸರ್ಜಿಕಲ್ ಸ್ಟ್ರೈಕ್ ವಾಯುಸೇನೆ ದಾಳಿಗೆ ಸಾಕ್ಷಿ ಕೇಳುವ ಹಂತಕ್ಕೂ ತಲುಪಿದರು. ಆದರೆ ನಿಜವಾದ ದೇಶಪ್ರೇಮಿಗಳಿಗೆ ಇದು ಸಾವಿರಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಗೆಲುವಿನ ದಿನವಾಗಿದೆ ಎಂದ ಅವರು ನಮಗೆ ಸೈನಿಕರ ಬಲಿದಾನ ಬೇಕಾಗಿಲ್ಲ. ಅವರು ಬದುಕು ಬೇಕಾಗಿದೆ.
ಈ ನಿಟ್ಟಿನಲ್ಲಿ ನಾವೆಲ್ಲ ಪ್ರಾರ್ಥನೆ ಮಾಡಬೇಕು. ನಮ್ಮ ಮನೆಯ ತುಳಸಿಕಟ್ಟೆ ಬಳಿ ನಿಂತು ಸೈನಿಕರ ಬದುಕಿಗಾಗಿ ಪ್ರಾರ್ಥನೆ ಮಾಡಬೇಕೆಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಪ್ರಾಂಶುಪಾಲೆ ರಾಜಶ್ರೀ ನಟ್ಟೋಜ, ನಗರಸಭಾ ಸದಸ್ಯೆ ವಿದ್ಯಾ ಆರ್. ಗೌರಿ, ಅಂಬಿಕಾ ವಿದ್ಯಾಲಯದ ನಿರ್ದೇಶಕ ಸುರೇಶ್ ಶೆಟ್ಟಿ, ಡಾ| ಸುರೇಶ್ ಪುತ್ತೂರಾಯ ಸೇರಿದಂತೆ, ಮಾಜಿ ಸೈನಿಕರು ಹಾಗೂ ಸಾರ್ವಜನಿಕರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿದ್ಯಾಲಯದ ಚೇತನ್ ಅಂತಿಬೆಟ್ಟು ಸ್ವಾಗತಿಸಿ, ವಿದ್ಯಾರ್ಥಿನಿ ವೈಷ್ಣವಿ ವಂದಿಸಿದರು. ಮಾಜಿ ಸೈನಿಕರು ಅಮರ್ ಜವಾನ್ ಜ್ಯೋತಿ ಎದುರು ಗೌರವ ವಂದನೆಯೊಂದಿಗೆ ನಮನ ಸಲ್ಲಿಸಿದರು.