ಪುತ್ತೂರು: ಅವಳಿ ವೀರರಾದ ಕೋಟಿ ಚೆನ್ನಯರ ದಾರು ಬಿಂಬ ಮತ್ತು ಪಂಚ ಲೋಹದ ಬಿಂಬಗಳ ಪ್ರತಿಷ್ಠೆಗೆ ಗೆಜ್ಜೆಗಿರಿ ಮೂಲಸ್ಥಾನ ಗರಡಿ ಸಿದ್ಧಗೊಂಡಿದೆ. ದೇಯಿ ಬೈದ್ಯೆತಿ ಸತ್ಯಧರ್ಮ ಚಾವಡಿಯ ಪಕ್ಕದಲ್ಲಿ ಸುಮಾರು 500 ಮೀಟರ್ ಎತ್ತರದ ಶಿಖರದ ಮೇಲೆ ಭವ್ಯವಾಗಿ ತಲೆ ಎತ್ತಿರುವ ಮೂಲಸ್ಥಾನ ಗರಡಿಯಲ್ಲಿ ಫೆ. 28ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
3 ವರ್ಷಗಳ ಹಿಂದೆ ಶಿಲಾನ್ಯಾಸ ನಡೆದಿದ್ದ ಗರಡಿ ಕಾಮಗಾರಿಯು ಹಂತ ಹಂತವಾಗಿ ನಡೆದು ಇದೀಗ ಪೂರ್ಣಗೊಂಡಿದೆ. ಈ ಮೂಲಕ 500 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೋಟಿ ಚೆನ್ನಯರಿಗೆ ಮೂಲಸ್ಥಾನ ಗರಡಿ ನಿರ್ಮಾಣಗೊಂಡಂತಾಗಿದೆ.
ಗೆಜ್ಜೆಗಿರಿ ಕ್ಷೇತ್ರ ಪುನರುತ್ಥಾನಕ್ಕೆ ಸಂಬಂಧಿಸಿ 2013ರಿಂದ ಹಂತ ಹಂತದ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಬರಲಾಗಿತ್ತು. 2015ರಲ್ಲಿ ಕ್ಷೇತ್ರದ ಆದಿದೈವ ಧೂಮಾವತಿಯ ನೇಮೋತ್ಸವದಲ್ಲಿ ದೈವಿಕ ಸೂಚನೆಯ ಮೇರೆಗೆ ಕ್ಷೇತ್ರ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. 2016ರ ನವೆಂಬರ್ 24ರಂದು ಗರಡಿ ನಿರ್ಮಾಣಕ್ಕೆ ಸಂಬಂಧಿಸಿ ಸಾಮೂಹಿಕ ಪ್ರಾರ್ಥನೆ ಮಾಡಿ ಸಂಕಲ್ಪ ಕೈಗೊಳ್ಳಲಾಗಿತ್ತು. 2017ರ ಫೆ. 19ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆದಿತ್ತು. 3 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಸಮಗ್ರ ನಿರ್ಮಾಣ ಕಾರ್ಯ ನಡೆದಿದ್ದು, ಪ್ರಸ್ತುತ ಫೆ. 28ರಂದು ಮೂಲಸ್ಥಾನ ಗರಡಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಪೂರ್ವ ಮತ್ತು ಉತ್ತರಾಭಿಮುಖ ಬಾಗಿಲುಗಳನ್ನು ಹೊಂದಿರುವ ಮೂಲಸ್ಥಾನ ಗರಡಿಯು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಗರಡಿಯ ಒಳಭಾಗದಲ್ಲಿ ಗರ್ಭಗುಡಿ ಮತ್ತು ಸತ್ಯ ನಡೆ ಇದ್ದು, ಗರ್ಭಗುಡಿಯಲ್ಲಿ ಗುರು ಸಾಯನ ಬೈದ್ಯರ ಕುಳಿತ ಭಂಗಿಯ ವಿಗ್ರಹ ಮತ್ತು ಅಕ್ಕಪಕ್ಕದಲ್ಲಿ ನಿಂತ ಭಂಗಿಯ ಕೋಟಿ ಚೆನ್ನಯರ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.
ಬೆಟ್ಟದ ನೆತ್ತಿಯಲ್ಲಿ ಪ್ರಕೃತಿ ರಮಣೀಯ ಪರಿಸರದಲ್ಲಿ ಗರಡಿ ನಿರ್ಮಾಣಗೊಂಡಿದ್ದು, ಗರಡಿಗೆ ಅಭಿಮುಖವಾಗಿ ಬೆರ್ಮೆರ್ ಗುಂಡ ನಿರ್ಮಿಸಲಾಗಿದೆ. ಶಿಖರಾಗ್ರದ ಗರಡಿಯಿಂದ ತಪ್ಪಲಲ್ಲಿರುವ ಸತ್ಯಧರ್ಮ ಚಾವಡಿಗೆ ಸಂಪರ್ಕಿಸಲು ವೀರಪಥ ನಿರ್ಮಿಸಲಾಗಿದೆ. ಮಾರ್ಚ್ 1ರಂದು ರಾತ್ರಿ ನಡೆಯುವ ಗರಡಿ ನೇಮೋತ್ಸವದಲ್ಲಿ ಕೋಟಿ ಚೆನ್ನಯರು ಗರಡಿಯಿಂದ ಇಳಿದು ಮೆಟ್ಟಿಲುಗಳ ಮೂಲಕ ವೀರಪಥ ತಲುಪಿ ಅಲ್ಲಿಂದ ಸತ್ಯಧರ್ಮ ಚಾವಡಿಗೆ ಬಂದು ಮಾತೆ ದೇಯಿ ಬೈದ್ಯೆತಿಯನ್ನು ಭೇಟಿ ಮಾಡಲಿದ್ದಾರೆ.
ಹೊಯ್ಸಳ ಶೈಲಿಯ ವಿಗ್ರಹಗಳು
ಕರಾವಳಿಯಾದ್ಯಂತ 250ಕ್ಕಿಂತಲೂ ಅಧಿಕ ಗರಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಕೋಟಿ ಚೆನ್ನಯರಿಗೆ ಇದೇ ಮೊದಲ ಬಾರಿ ಮೂಲಸ್ಥಾನದಲ್ಲಿ ಗರಡಿ ನಿರ್ಮಿಸಲಾಗಿದೆ. ಈ ಗರಡಿಯಲ್ಲಿ ಸುಂದರವಾದ ಕೋಟಿ ಚೆನ್ನಯ ವಿಗ್ರಹಗಳು ಪ್ರತಿಷ್ಠಾಪನೆಯಾಗಲಿದೆ. ರಮೇಶ್ ಪೆರುವಾಯಿ ಮತ್ತವರ ತಂಡ ಹೊಯ್ಸಳ ಶೈಲಿಯಲ್ಲಿ ದಾರು ವಿಗ್ರಹಗಳನ್ನು ರಚಿಸಿದೆ. ಕೋಟಿ ಚೆನ್ನಯರಿಬ್ಬರು ಸುರಿಯ, ಧನುಸ್ಸು ಧರಿಸಿಕೊಂಡು ಅಭಯಧಾರಿಗಳಾಗಿ ನಿಂತಿರುವ ಭಂಗಿಯ ಮೂರ್ತಿಗಳಾಗಿದ್ದು, ಮಧ್ಯದಲ್ಲಿ ಗುರು ಸಾಯನ ಬೈದ್ಯರ ಕುಳಿತ ಭಂಗಿಯ ಮೂರ್ತಿ ಇರಲಿದೆ. ದಾರು ಮೂರ್ತಿಗಳ ಬುಡದಲ್ಲೇ ಪಂಚಲೋಹದ ಮೂರ್ತಿಗಳನ್ನು ಕೂಡ ಪ್ರತಿಷ್ಠಾಪಿಸಲಾಗುತ್ತಿದ್ದು, ಇವುಗಳನ್ನು ಕೇರಳದಲ್ಲಿ ರಚಿಸಲಾಗಿತ್ತಿದೆ.