Home_Page_Advt
Home_Page_Advt
Breaking News

ಉಪ್ಪಿನಂಗಡಿ: ಕಳವುಗೈಯಲು ಮನೆಗೆ ನುಗ್ಗಿದಾತ ನಿದ್ರೆಗೆ ಜಾರಿದ! ದೈವೀ ಶಕ್ತಿ ಕಳ್ಳನ ದಾರಿ ತಪ್ಪಿಸಿತೇ?

ಉಪ್ಪಿನಂಗಡಿ: ಕಳ್ಳತನದ ಪ್ರಕರಣಗಳು ಉಪ್ಪಿನಂಗಡಿ ಪರಿಸರದಲ್ಲಿ ಹೆಚ್ಚಾಗುತ್ತಿದ್ದಂತೆಯೇ ಉಪ್ಪಿನಂಗಡಿಯ ಹೃದಯಭಾಗದಲ್ಲಿನ ಮನೆಯೊಂದಕ್ಕೆ ಕಳ್ಳನೋರ್ವ ಹಂಚು ತೆಗೆದು ಒಳನುಗ್ಗಿ ಅಲ್ಲೇ ನಿದ್ದೆ ಮಾಡಿ ಬೆಳಗ್ಗೆ ಮನೆಯ ಯಜಮಾನನ ಕೈಗೆ ಸಿಕ್ಕಿಬಿದ್ದ ಸ್ವಾರಸ್ಯಕರ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಉದ್ಯಮಿ ಸುದರ್ಶನ್‌ರವರ ಮನೆಯಲ್ಲಿ ಈ ಕಳ್ಳತನದ ಯತ್ನ ನಡೆದಿದೆ. ಸುಮಾರು ೨೪ ಅಡಿ ಎತ್ತರದ ಮಾಳಿಗೆ ಮನೆಯ ಛಾವಣಿಯನ್ನೇರಿ ಅಲ್ಲಿಂದ ಛಾವಣಿಯ ಹಂಚುಗಳನ್ನು ತೆಗೆದು ನೆಲ ಮಹಡಿಗೆ ಬಂದಾತ ನಡು ಕೋಣೆಯಲ್ಲಿನ ಟಿವಿ ಸ್ಟ್ಯಾಂಡ್ ನ್ನು ಜಾಲಾಡಿಸಿ ಮನೆಯಲ್ಲಿನ ಬೀಗದ ಕೀ ಗೊಂಚಲನ್ನು ಪಡೆದುಕೊಂಡಿದ್ದಾನೆ. ಬಳಿಕ ನಡುಕೋಣೆಗೆ ಹೋಗಿ ಅಲ್ಲಿದ್ದ ದಿವಾನದಲ್ಲಿ ನಿದ್ದೆ ಹೋಗಿದ್ದಾನೆ. ಮುಂಜಾನೆ ಆರು ಗಂಟೆಯ ಸುಮಾರಿಗೆ ಮನೆಯ ಯಜಮಾನನ ಬೆತ್ತದೇಟಿಗೆ ಈತ ಎಚ್ಚರಗೊಂಡಿದ್ದು, ಬಳಿಕ ಪೊಲೀಸ್ ವಶವಾಗಿದ್ದಾನೆ.

ನಂಬಿದ ದೈವ ನಿದ್ದೆ ತರಿಸಿತೆ?: ಉದ್ಯಮಿ ಸುದರ್ಶನ್‌ರವರು ಅಪಾರ ದೈವ ಭಕ್ತರಾಗಿದ್ದು, ಅವರ ಮನೆಯಲ್ಲಿ ಕಾರಣಿಕ ದೈವದ ಆರಾಧನೆ ನಿಯಮಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸೋಮವಾರ ಮಧ್ಯ ರಾತ್ರಿ ೧೨:೩೦ ರ ಸುಮಾರಿಗೆ ಮನೆಯ ಬಾಗಿಲುಗಳನ್ನು ಭದ್ರಪಡಿಸಿ ಬೆಡ್ ರೂಮಿನಲ್ಲಿ ನಿದ್ರಿಸಲು ಹೋದ ಸುದರ್ಶನ್‌ರವರು ಮುಂಜಾನೆದ್ದು ಬಂದಾಗ ತನ್ನ ಮನೆಯ ನಡು ಕೋಣೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ನಿದ್ರಿಸಿಕೊಂಡಿರುವುದನ್ನು ಕಂಡು ದಿಗಿಲುಗೊಳ್ಳುತ್ತಾರೆ. ಎಲ್ಲಾ ಬಾಗಿಲುಗಳನ್ನು ಭದ್ರಪಡಿಸಲಾಗಿದ್ದರೂ ವ್ಯಕ್ತಿಯೋರ್ವ ಒಳಗೆ ಹೇಗೆ ಪ್ರವೇಶಿಸಿದ ಎಂದು ಪರಿಶೀಲಿಸಿದಾಗ ಮಹಡಿ ಮೇಲಿನ ಛಾವಣಿಯ ಹಂಚು ತೆಗೆದಿರುವುದು ಕಂಡು ಬಂತು. ಬಂದಾತ ಕಳ್ಳನೆಂದು ದೃಢಪಟ್ಟ ಬಳಿಕ ಆತನಿಗೆ ಎರಡೇಟು ನೀಡಿ ನಿದ್ರೆಯಿಂದ ಎಬ್ಬಿಸಿದಾಗ ಆತನ ಕೈಯಲ್ಲಿ ಮನೆಯ ಬೀಗದ ಕೀ ಗಳು ಪತ್ತೆಯಾದವು. ಮಹಡಿಯ ಮೇಲ್ಚಾವಣಿ ಮೂಲಕ ಒಳನುಗ್ಗಿದ ಕಳ್ಳ ಮಹಡಿಯಿಂದ ನೆಲ ಅಂತಸ್ತಿಗೆ ಬಂದಿದ್ದನಾದರೂ, ಅಲ್ಲಿಂದ ಹೊರ ಹೋಗಲು ಆತ ಬಾಗಿಲಿಗೆ ಹಾಕಲಾದ ಚಿಲಕವೊಂದನ್ನು ಸರಿಸಿದರೆ ಸಾಕಿತ್ತು. ಸುಲಲಿತವಾಗಿ ಮನೆಯಿಂದ ಹೊರಗೆ ಹೋಗಬಹುದಾಗಿತ್ತು. ಕಳ್ಳನಿಗೆ ಹೊರಗಡೆ ಹೋಗಲು ಇಲ್ಲಿ ಸುಲಭ ಸಾಧ್ಯ ಅವಕಾಶಗಳಿದ್ದಾಗ್ಯೂ ಕೂಡಾ ಅದನ್ನು ಮಾಡಲಾಗದೆ ಮನೆಯೊಳಗಿಂದ ಜಾಲಾಡಿಸಿ ಸಂಗ್ರಹಿಸಿದ ಬೀಗದ ಕೀಯೊಂದಿಗೆ ಆತ ನಿದ್ರಾಪರವಶನಾಗಿರುವುದು ವಿಸ್ಮಯ ಮೂಡಿಸಿದೆ. ಅವರು ನಂಬಿರುವ ಕಾರಣಿಕ ಶಕ್ತಿಯೇ ಈತನ ದಾರಿಗೆ ಅಡ್ಡವಾಗಿರಬಹುದೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಮನೆ ಮಾಲಕ ಸುದರ್ಶನ್, `ನಮ್ಮ ಈ ಮನೆಗೆ ಸುಮಾರು ಒಂದು ನೂರು ವರ್ಷಗಳ ಇತಿಹಾಸವಿದೆ. ಹಿರಿಯರ ಲಗಾಯತ್ತಿನಿಂದ ನಡೆದ ಘಟನಾವಳಿಗಳಲ್ಲಿ ಕಳ್ಳತನದ ಪ್ರಕರಣಗಳು ಸಂಭವಿಸಿದ್ದಿಲ್ಲ. ಕಠಿಣ ಹಾದಿಯನ್ನು ಕ್ರಮಿಸಿ ಎತ್ತರದ ಮಹಡಿ ಛಾವಣಿಯಿಂದ ಕೆಳಗಿಳಿದ ಕಳ್ಳ ಮನೆಯ ಹೊರಗಡೆ ಹೋಗಲು ಸುಲಭ ದಾರಿಗಳಿದ್ದಾಗ್ಯೂ ಅದರತ್ತ ಗಮನಹರಿಸದೆ ನಿದ್ರೆಗೆ ಜಾರಿರಬೇಕಾದರೆ ನಂಬಿದ ದೈವ ದೇವರ ಪ್ರಭಾವವೇ ಪ್ರಮುಖ ಕಾರಣವಾಗಿದೆ’ ಎಂದು ಹೇಳಿದರು.

ಎರಡು ದಿನಗಳ ಹಿಂದೆ ಸುದರ್ಶನ್‌ರವರ ದೈವದ ಗುಡಿಯೊಳಕ್ಕೂ ಬೇರೊಬ್ಬ ಕಳ್ಳ ನುಗ್ಗಿದ್ದು, ಕದ್ದ ಹಣದೊಂದಿಗೆ ಪರಾರಿಯಾಗಲು ಆಗದೆ ಅಲ್ಲೇ ಸುತ್ತುತ್ತಾ ಪೊಲೀಸರ ವಶನಾದ ಪ್ರಕರಣ ನಡೆದಿತ್ತು. ಅದರ ಬೆನ್ನಿಗೆ ಈಗ ಈ ಘಟನೆ ನಡೆದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.