ಕಡಬ ತಾ. ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

Puttur_Advt_NewsUnder_1
Puttur_Advt_NewsUnder_1
  • ರಾಜ್ಯದ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಥಮ ಭಾಷೆ ಕನ್ನಡ ಆಗಬೇಕು: ಡಾ| ಚಂದ್ರಶೇಖರ ದಾಮ್ಲೆ


ರಾಮಕುಂಜ: ಸರಕಾರ ಸರಕಾರಿ, ಅನುದಾನಿತ ಶಾಲೆಗಳಿಗೆ ಸಾಕಷ್ಟೂ ಸೌಲಭ್ಯ ನೀಡುತ್ತಿದೆ. ಆದರೆ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲೂ ಶಿಕ್ಷಕರಿಗೆ 10 ಸಾವಿರ ರೂ.ವೇತನ ನಿಗದಿಗೊಳಿಸಿ ಪ್ರತಿ ತರಗತಿಗೆ ಒಂದರಂತೆ ಶಿಕ್ಷಕರ ನೇಮಕ ಮಾಡಬೇಕು. ಈ ರೀತಿಯಾದಲ್ಲಿ ಮಾತ್ರ ಸರಕಾರಿ ಶಾಲೆಗಳೂ ಸಬಲೀಕರಣಗೊಳ್ಳಲಿದೆ. ಅಲ್ಲದೇ ರಾಜ್ಯದ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಥಮ ಭಾಷೆ ಕನ್ನಡವೇ ಆಗಿರಬೇಕೆಂದು ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಅಂಕಣಕಾರ ಡಾ| ಚಂದ್ರಶೇಖರ ದಾಮ್ಲೆ ಹೇಳಿದರು.

ಅವರು ರಾಮಕುಂಜ ವಿಶ್ವೇಶನಗರ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಅರ್ಬಿ ಶ್ರೀಮತಿ ರಾಜಮ್ಮ ಮತ್ತು ಶ್ರೀನಿವಾಸ ಭಟ್ಟ ಸಮ್ಮೇಳನಾಂಗಣದ ಡಾ| ಎಂ.ಚಿದಾನಂದ ಮೂರ್ತಿ ಸಭಾಂಗಣದ ಪರಮಪೂಜ್ಯ ವಿಶ್ವೇಶತೀರ್ಥ ವೇದಿಕೆಯಲ್ಲಿ ಎರಡು ದಿನ ನಡೆದ ಕಡಬ ತಾ| ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಸರಕಾರಿ ಶಾಲೆಗಳ ಶಿಕ್ಷಕರು, ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ತಾವು ಸರಕಾರದಿಂದ ಪಡೆದ ವೇತನವನ್ನೂ ಡೋನೇಷನ್ ರೂಪದಲ್ಲಿ ಕೊಟ್ಟು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ನಾನಾ ರೀತಿಯಲ್ಲಿ ಆಂಗ್ಲಮಾಧ್ಯಮ ಶಾಲೆಗಳಿಗೆ ಸರಕಾರವೇ ಪ್ರೋತ್ಸಾಹ ನೀಡುತ್ತಿದೆ. ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶ್ರಮ ಶಕ್ತಿಯಿಂದ ದೂರವಾಗುತ್ತಿದ್ದಾರೆ ಎಂದರು. ವಿಜ್ಞಾನಿಗಳಂತೆ ಸತ್ಯ ಹೇಳುವವರೇ ಸಾಹಿತಿಗಳು, ಆದರೆ ಕೆಲವು ಮುಖವಾಡದ ಸಾಹಿತಿಗಳಿದ್ದಾರೆ. ನಿಜವಾದ ಸಾಹಿತಿಗೆ ಬಲಪಂಥೀಯ, ಎಡಪಂಥೀಯ ಒಲವು ಬೇಡ. ಸಾಹಿತ್ಯ ಸತ್ಯದ ಆಧಾರದಲ್ಲಿ ಇದ್ದಾಗ ಕನ್ನಡದ ಬೆಳವಣಿಗೆಗೆ ಪೂರಕವಾಗಲಿದೆ. ಸಾಹಿತಿಗಳೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಬದಲು ಪುಸ್ತಕ ಮಾರಾಟ ಮಾಡುವವರನ್ನು, ಸಾಹಿತ್ಯಾಸಕ್ತರನ್ನೂ ಸಮ್ಮೇಳನಾಧ್ಯಕ್ಷರಾಗಿ ಮಾಡಬೇಕೆಂದು ಡಾ| ಚಂದ್ರಶೇಖರ ದಾಮ್ಲೆ ಹೇಳಿದರು.

 ಟಿ.ನಾರಾಯಣ ಭಟ್‌ರಿಗೆ ಸನ್ಮಾನ  

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರುರವರು ಮಾತನಾಡಿ, ಸರಕಾರಗಳಿಗೆ ಕನ್ನಡದ ಬಗ್ಗೆ ಕಾಳಿಜಿಯೇ ಇರುವುದಿಲ್ಲ. ರಾಜಕಾರಣಿಗಳೇ ಆಂಗ್ಲಮಾಧ್ಯಮ ಶಾಲೆ ನಡೆಸುತ್ತಿದ್ದಾರೆ. ಸರಕಾರಿ ಶಾಲೆಗಳಿಗೆ ಕ್ಲಾಸಿಗೊಂದರಂತೆ ಶಿಕ್ಷಕರ ನೇಮಕ ಮಾಡಬೇಕು. ಮಾತೃಭಾಷೆ ಕನ್ನಡ ಭಾಷೆಯನ್ನು ಯಾರೂ ಮರೆಯಬಾರದು. ಕಲಿಯುವ ಭಾಷೆ ಯಾವುದಿದ್ದರೂ ಮನೆಯಲ್ಲಿ ಕನ್ನಡದಲ್ಲೇ ಮಾತನಾಡಬೇಕೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಬೇಕು. ಆಯಾ ರಾಜ್ಯಗಳಲ್ಲಿನ ರಾಜ್ಯಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕು ಎಂದು ಹೇಳಿದ ಅವರು, ಹೋಬಳಿ, ಗ್ರಾಮ, ಪ್ರತಿ ಮನೆ ಮನೆಯಲ್ಲೂ ಸಾಹಿತ್ಯ ಸಮ್ಮೇಳನ ನಡೆಯಬೇಕು. ರಾಮಕುಂಜದಲ್ಲಿ ಯಶಸ್ವಿಯಾಗಿ ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ಈ ಮೂಲಕ ರಾಮಕುಂಜ ವಿದ್ಯಾಸಂಸ್ಥೆ ಸುಸಂಸ್ಕೃತ ಸಾಹಿತ್ಯ ದೇಗುಲವಾಗಿಯೂ ಬೆಳೆದಿದೆ ಎಂದರು. ಸಮ್ಮೇಳನಾಧ್ಯಕ್ಷ ನಾರಾಯಣ ಭಟ್ ಟಿ.,ರಾಮಕುಂಜ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯಾಭಿಮಾನದ ಕಿಚ್ಚು ಬೆಳೆಸಿ. ಪುಸ್ತಕ, ಕನ್ನಡ ದಿನಪತ್ರಿಕೆ ಖರೀದಿ, ಓದಿಸುವ ಹವ್ಯಾಸ ಬೆಳೆಸಿದಲ್ಲಿ ಕನ್ನಡ ಎಂದಿಗೂ ಸಾಯುವುದಿಲ್ಲ. ಇಂತಹ ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗೆ ಪ್ರೇರಣೆಯಾಗಬೇಕೆಂದು ಹೇಳಿದರು. ದಾನಿಗಳಿಗೆ ಗೌರವಾರ್ಪಣೆ ಮಾಡಿದ ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಮಹಮ್ಮದ್ ಕುಂಞಿ ಕಡಬ ಸಂದರ್ಭೋಚಿತವಾಗಿ ಮಾತನಾಡಿದರು.

  ಸ್ವಾಗತ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ

ದ.ಕ.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ|ಎಂ.ಪಿ.ಶ್ರೀನಾಥ್ ಉಜಿರೆ, ಪುತ್ತೂರು ತಾಲೂಕು ಕಸಾಪ ಅಧ್ಯಕ್ಷ ಐತ್ತಪ್ಪ ನಾಯ್ಕ, ಗೌರವ ಕಾರ್ಯದರ್ಶಿ ಡಾ| ಎಚ್.ಜಿ.ಶ್ರೀಧರ್, ಬಂಟ್ವಾಳ ಕಸಾಪ ಅಧ್ಯಕ್ಷ ಮೋಹನ್ ರಾವ್ ಆತೂರು, ಸ್ವಾಗತ ಸಮಿತಿ ಅಧ್ಯಕ್ಷ ಇ.ಕೃಷ್ಣ ಮೂರ್ತಿ ಕಲ್ಲೇರಿ, ಸ್ವಾಗತ ಸಮಿತಿ ಸಹಸಂಚಾಲಕ ಪ್ರೋ.ವೇದವ್ಯಾಸ ರಾಮಕುಂಜ, ಕೋಶಾಧಿಕಾರಿ ಕೆ. ಸೇಸಪ್ಪ ರೈ, ಆರ್ಥಿಕ ಸಮಿತಿ ಸಂಚಾಲಕ ರಾಧಾಕೃಷ್ಣ ಕೆ.ಎಸ್, ಜೊತೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಆತೂರು, ಕಸಾಪ ಕಡಬ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಸತೀಶ್ ನಾಯಕ್, ಸದಸ್ಯ ಜಾನ್ ವೇಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ಕಸಾಪ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಸ್ವಾಗತಿಸಿ, ಗೌರವ ಕಾರ್ಯದರ್ಶಿ ವಿಶ್ವನಾಥ ರೈ ಕಡಬ ವಂದಿಸಿದರು. ಹರಿಕಿರಣ್ ಕೊಲ ಕಾರ್ಯಕ್ರಮ ನಿರೂಪಿದರು.

ಸನ್ಮಾನ:
ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾರಾಯಣ ಭಟ್ ಟಿ.,ರಾಮಕುಂಜ ಹಾಗೂ ಅವರ ಪತ್ನಿ ಶ್ರೀಮತಿ ಸಂಧ್ಯಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪುತ್ರಿ ಡಾ.ಮೌಲಿಕಾ ಉಪಸ್ಥಿತರಿದ್ದರು. ೧ ತಿಂಗಳಲ್ಲಿ ಸಮ್ಮೇಳನಕ್ಕೆ ಯೋಜನೆ ರೂಪಿಸಿಕೊಂಡು ಯಶಸ್ವಿಯಾಗಿ ನಡೆಸಿದ ಸ್ವಾಗತ ಸಮಿತಿಯ ಅಧ್ಯಕ್ಷ ಇ.ಕೃಷ್ಣಮೂರ್ತಿ ಕಲ್ಲೇರಿ, ಸಂಚಾಲಕ ಪ್ರೋ.ವೇದವ್ಯಾಸ ರಾಮಕುಂಜ, ಸಹಸಂಚಾಲಕ ಡಾ| ಸಂಕೀರ್ತ್ ಹೆಬ್ಬಾರ್, ಕಾರ್ಯದರ್ಶಿ ಗಣರಾಜ್ ಕುಂಬ್ಳೆ, ಕೋಶಾಧಿಕಾರಿ ಕೆ.ಸೇಸಪ್ಪ ರೈ, ಆರ್ಥಿಕ ಸಮಿತಿ ಸಂಚಾಲಕ ರಾಧಾಕೃಷ್ಣ ಕುವೆಚ್ಚಾರುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ದಾನಿಗಳಿಗೆ ಗೌರವಾರ್ಪಣೆ:
ಕಡಬ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ದಾನಿಗಳನ್ನು ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರು ಕನ್ನಡದ ಶಾಲು,ಸ್ಮರಣಿಕೆ ನೀಡಿ ಗೌರವಿಸಿದರು. ಸ್ವಾಗತ ಸಮಿತಿ ಕೋಶಾಧಿಕಾರಿ ಕೆ.ಸೇಸಪ್ಪ ರೈಯವರು ದಾನಿಗಳ ಹೆಸರು ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.