Breaking News

ಎರಡು ಮುಷ್ಟಿ ಅನ್ನ ಮತ್ತು ವರ್ಷಾನು ವರ್ಷಗಳ ಋಣ

Puttur_Advt_NewsUnder_1
Puttur_Advt_NewsUnder_1

`ತುಸು ತಿಳಿದವನ ಪಿಸುಮಾತು’

 

 

ಬಾಡಿಗೆ ಮನೆಯಲ್ಲಿ ಕುಳಿತಿದ್ದ ಆ ತಾಯಿ ಎರಡು ವರ್ಷಗಳ ತನ್ನ ಮಗುವನ್ನು ರಮಿಸುತ್ತಾ ಊಟ ಮಾಡಿಸುತ್ತಿದ್ದಳು. ಮಗುವಿಗೆ ಅದಾಗಲೇ ಹೊಟ್ಟೆ ತುಂಬಿತ್ತೋ ಇಲ್ಲಾ ತಾಯಿಯ ಮೊಗದಲ್ಲಿ ಹುಸಿಕೋಪ ಮೂಡಿಸುವ ಮನಸ್ಸಾ ಯಿತೋ ಗೊತ್ತಿಲ್ಲ, ಬಟ್ಟಲಿನಲ್ಲಿ ಉಳಿದಿದ್ದ ಎರಡು ಮುಷ್ಟಿ ಊಟವನ್ನು ಏನೆಂದರೂ ಬಾಯಿಗಿಳಿಸಿಕೊಳ್ಳಲಾರೆ ಎಂದು ಹಠ ಹಿಡಿದು ಕೂತುಬಿಟ್ಟಿತು. ಮಗು ತಿನ್ನದೇ ಉಳಿಸಿದ್ದನ್ನು ಸಂತಸದಿಂದ ತಿಂದು ಮುಗಿಸುವ ಆ ತಾಯಿಗೆ ಅಂದೇಕೋ ಊಟ ಮಾಡುವ ಮನಸ್ಸಿರಲಿಲ್ಲ. ಏನು ಮಾಡುವುದೆಂದು ಯೋಚಿಸಿದ ಅವಳು ಅಂಗಳದ ಕಡೆಗೆ ನಡೆದಳು. ಬಾಡಿಗೆ ಮನೆ ಮಾಲೀಕರು ಪ್ರೀತಿಯಿಂದ ಸಾಕಿದ್ದ ನಾಯಿ ತನ್ನ ಕೊರಳನ್ನು ಬಿಗಿದಿದ್ದ ಸಂಕೋಲೆ ಕೊಟ್ಟ ಅವಕಾಶದಷ್ಟು ದೂರಕ್ಕೆ ನೆಗೆಯುತ್ತಾ ಬೊಗಳುತ್ತಿತ್ತು. ಭಾರೀ ಜೋರಿನ ನಾಯಿಯದು. ಹೆದರುತ್ತಲೇ ಬಳಿ ಹೋದ ಅವಳು ಅದರ ಬಟ್ಟಲಿಗೆ ತನ್ನ ಮಗು ತಿಂದು ಉಳಿಸಿದ್ದ ಅನ್ನವನ್ನು ಹಾಕಿ ಮನೆಯೊಳಕ್ಕೆ ಬಂದಳು.
ಆ ಹೆಣ್ಣುಮಗಳು ಆ ಬಾಡಿಗೆ ಮನೆ ಬಿಟ್ಟು ಬೇರೆ ಕಡೆ ನೆಲೆ ನಿಂತು ಕಡಿಮೆ ಎಂದರೂ ಮೂರು ವರ್ಷ ಕಳೆದಿತ್ತೇನೋ. ಅದೊಂದು ಭಾನುವಾರ ಪುಟುಪುಟು ನಡೆದಾಡುವ ಮಗನ ಕೈ ಹಿಡಿದುಕೊಂಡು ಮತ್ತೆ ಆ ಮನೆಗೆ ಬಂದಳು. ಮನೆ ಮಾಲೀಕರ ಪತ್ನಿಯ ಜೊತೆಗೆ ಒಂದಷ್ಟು ಹರಟಬೇಕೆಂಬ ಆಸೆ ಅವಳಿಗೆ. ಮನೆಯವ ರ್‍ಯಾರೂ ಅಂಗಳದಲ್ಲಿರಲಿಲ್ಲ. ಆ ಜೋರಿನ ನಾಯಿ ಸಂಕೋಲೆಯಿಂದ ಮುಕ್ತವಾಗಿ ಅಂಗಳದ ತುಂಬೆಲ್ಲಾ ಸುತ್ತು ಹೊಡೆಯುತ್ತಿತ್ತು. ಗೇಟು ತೆರೆದು ಹತ್ತು ಹೆಜ್ಜೆ ಒಳ ಬಂದಿರುವವಳಿಗೆ ಇದು ತಿಳಿದಿಲ್ಲ. ಗೇಟು ತೆರೆದು ಒಳಬಂದವರನ್ನು ದುರುಗುಟ್ಟಿ ನೋಡಿದ ನಾಯಿ ಜೋರಾಗಿ ಬೊಗಳುತ್ತಾ ಆ ತಾಯಿ ಮಗನ ಬಳಿಗೆ ಓಡಿತು. ಇನ್ನೇನು ಕಚ್ಚಿಯೇ ಬಿಡುತ್ತದೆ ಎಂದು ಹೆದರಿದ ಆ ತಾಯಿ ಮಗನನ್ನು ಎದೆಗಾನಿಸಿ ಜೋರು ಬೊಬ್ಬೆ ಹಾಕತೊಡಗಿದಳು. ಮನೆಯೊಳಗಿದ್ದ ವರೆಲ್ಲಾ ಬೊಬ್ಬೆ ಕೇಳಿ ಓಡಿಬಂದಿದ್ದರು. ನಾಯಿ ಕಚ್ಚಿಯೇಬಿಟ್ಟಿದೆ ಎಂದು ಹೆದರಿ ನೋಡುತ್ತಿದ್ದವರಿಗೆಲ್ಲಾ ಅಚ್ಚರಿ. ಆ ಹೆಣ್ಣುಮಗಳ ಬಳಿ ನಿಂತ ಆ ನಾಯಿ `ನನ್ನ ಪ್ರೀತಿಪಾತ್ರರು ನೀವು’ ಎಂಬಂತಹ ಆತ್ಮೀಯತೆಯಲ್ಲಿ ಬಾಲ ಬೀಸುತ್ತಾ ನಿಂತಿದೆ. ಅವಳ ಸುತ್ತೆಲ್ಲಾ ಓಡಾಡಿ ಹರ್ಷ ವ್ಯಕ್ತಪಡಿಸುತ್ತಿದೆ.

ಹೌದು! ಆ ಹೆಣ್ಣು ಮಗಳನ್ನು ಉಳಿಸಿದ್ದು ಮೂರು ವರ್ಷಗಳ ಹಿಂದೆ ಅನಿವಾರ್ಯವಾಗಿ ಅವಳಿಕ್ಕಿದ ಎರಡು ಮುಷ್ಟಿ ಅನ್ನ!
`ನಿಶ್ಯಬ್ಧ’ ಎನ್ನುವ ಕನ್ನಡ ಸಿನಿಮಾವನ್ನು ನಾವೆಲ್ಲಾ ವೀಕ್ಷಿಸಿದ್ದೇವೆ. ನಾಯಿಗಳನ್ನು ಅತೀವವಾಗಿ ಪ್ರೀತಿಸುವ ವ್ಯಕ್ತಿಯೊಬ್ಬನ ಕಥೆಯದು. ಅವನನ್ನು ದ್ವೇಷಿಸುವ ಜನರು ಅವನು ಸಾಕಿದ್ದ ಪ್ರೀತಿಯ ನಾಯಿಗೆ ಹುಚ್ಚು ಹಿಡಿಸುವ ಪ್ರಯತ್ನ ನಡೆಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಹುಚ್ಚು ಹಿಡಿಸಿಕೊಂಡ ನಾಯಿ ತನ್ನನ್ನು ಪ್ರೀತಿಯಿಂದ ಸಾಕಿದ ಯಜಮಾನನನ್ನು ಆ ಸಂದರ್ಭದಲ್ಲಿಯೂ ಮರೆಯುವುದಿಲ್ಲ. ತನ್ನ ಯಜಮಾನನ ಕೆಡುಕನ್ನು ಬಯಸಿದವರನ್ನೇ ಕೊಂದು ಹಾಕುತ್ತದೆ. ಬಳಿಕ ಯಜಮಾನನ ಬಳಿಗೆ ಬಂದು `ನೀನೇ ಗತಿ` ಎಂಬಂತೆ ಮುಗ್ಧವಾಗಿ ನೋಡುತ್ತಾ ನಿಂತುಕೊಳ್ಳುತ್ತದೆ. ಉಳಿದ ನಾಯಿಗಳಿಗೂ ಹುಚ್ಚು ಹಿಡಿದೀತೆಂಬ ಭಯಕ್ಕೆ ಕಟ್ಟುಬಿದ್ದ ಯಜಮಾನ ಕಣ್ಣಿನಲ್ಲಿ ನೀರು ತುಂಬಿಸಿಕೊಳ್ಳುತ್ತಲೇ ಕೋವಿಯ ಟ್ರಿಗರನ್ನು ಒತ್ತುತ್ತಾನೆ. ನಾಯಿ ನಿಶ್ಯಬ್ಧವಾಗುತ್ತದೆ ಮತ್ತು ನೋಡುವವರ ಎದೆಯೂ ಕೂಡ. `ಟೂ ಬ್ರದರ್‍ಸ್’ ಎನ್ನುವ ಆಂಗ್ಲ ಭಾಷೆಯ ಸಿನಿಮಾದ ಕೊನೆಯ ಹಂತ ಅತೀ ವಿಶಿಷ್ಟವಾದದ್ದು. ಪಂಜರದೊಳಗಿನ ಬಂಧನದಲ್ಲಿಟ್ಟು ಸಾಕಿದ, ಅಮಾನವೀಯವಾಗಿ ನಡೆದುಕೊಂಡ ಮನುಷ್ಯನನ್ನು ಕೊಲ್ಲುವ ಎಲ್ಲಾ ಅವಕಾಶವಿದ್ದಾಗಲೂ ಕೂಡಾ ಎರಡು ಹುಲಿಗಳು ಹಾಗೆ ಮಾಡುವುದಿಲ್ಲ. ಹುಲಿಯಂತಹ ಕ್ರೂರ ಪ್ರಾಣಿಯೂ ಕೂಡಾ ಮನುಷ್ಯನಷ್ಟು ಕ್ರೂರವೇನಲ್ಲ ಎನ್ನುವ ಸಂದೇಶವನ್ನು ಈ ಸಿನಿಮಾ ಜಗತ್ತಿಗೆ ಸಾರಿ ಹೇಳಿದೆ.

`ಇವೆಲ್ಲಾ ಸಿನಿಮಾಗಳಲ್ಲಿ ಮಾತ್ರ’ ಎಂದು ಹಲವು ಸಂದರ್ಭಗಳಲ್ಲಿ ನಾವು ಮೂಗು ಮುರಿಯುತ್ತೇವೆ. ನಿಜವಾಗಿ ನಡೆದ ಘಟನೆಯನ್ನೇ ಆಧರಿಸಿದ `ಹಚಿಕೋ ಮೊನೊಗತರಿ’ ಎಂಬ ಜಪಾನೀ ಸಿನಿಮಾ ನಮ್ಮ ಈ ಅನಿಸಿಕೆಯನ್ನು ಖಂಡಿತವಾಗಿಯೂ ಬದಲಾಯಿಸಬಲ್ಲದು. ಕಲ್ಲೆದೆಯನ್ನೂ ಕರಗಿಸಬಲ್ಲಂತಹ ಅಪೂರ್ವ ಕಥಾನಕವನ್ನು ಹೊಂದಿರುವ ಈ ಚಲನಚಿತ್ರ 1987ರಲ್ಲಿ ಬಿಡುಗಡೆಗೊಂಡಿದ್ದು, ‘Hachi: A Dog’s Tale’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೆ ರಿಮೇಕ್ ಆಗಿದೆ. ಪ್ರೊಫೆಸರ್ ಒಬ್ಬ ರೈಲ್ವೇ ನಿಲ್ದಾಣದಲ್ಲಿ ಸಿಕ್ಕಿದ ನಾಯಿಯೊಂದನ್ನು ತಂದು ಸಾಕತೊಡಗುತ್ತಾನೆ. ಆತನನ್ನು ಪ್ರತೀದಿನ ಬೆಳಗ್ಗೆ ರೈಲ್ವೇ ಸ್ಟೇಶನ್‌ಗೆ ಬಿಟ್ಟುಬರುವುದು, ಸಂಜೆ ಮನೆಗೆ ಕರೆದುಕೊಂಡು ಬರುವುದು-ಈ ಅಭ್ಯಾಸವನ್ನು ಆ ನಾಯಿ ರೂಢಿಸಿಕೊಳ್ಳುತ್ತದೆ. ಅದೊಂದು ದಿನ ಆ ಪ್ರೊಫೆಸರ್ ಕರ್ತವ್ಯದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆತನ ಹೆಣವನ್ನು ಮನೆಗೆ ಸಾಗಿಸಲಾಗಿದೆ. ಆತನ ಬರುವಿಕೆಗಾಗಿ ರೈಲ್ವೇ ನಿಲ್ದಾಣದಲ್ಲಿ ಕಾದು ಕುಳಿತಿದ್ದ ನಾಯಿಗೆ ಈ ವಿಚಾರ ತಿಳಿದಿಲ್ಲ. ಮನೆಯ ಯಜಮಾನನ ಸಾವಿನ ನಂತರ ಮನೆಯವರು ಬೇರೆಲ್ಲಿಯೋ ಹೋಗಿ ನೆಲೆ ನಿಲ್ಲುತ್ತಾರೆ. ಈ ನಾಯಿಯನ್ನೂ ತಮ್ಮ ಜೊತೆಗೆ ಕರೆದೊಯ್ಯುತ್ತಾರೆ. ಆದರೆ ಯಜಮಾನನ ಬರುವಿಕೆಯ ನಿರೀಕ್ಷೆಯನ್ನು ಆ ನಾಯಿ ಕಳೆದುಕೊಳ್ಳುವುದಿಲ್ಲ. ರೈಲ್ವೇ ಸ್ಟೇಶನ್‌ಗೆ ಮತ್ತೆ ತೆರಳಿದ ಅದು ಅಲ್ಲೇ ಕಾದು ಕುಳಿತುಕೊಳ್ಳುತ್ತದೆ. ಬಂದು ಹೋಗುವ ರೈಲುಗಳೆಲ್ಲದರಲ್ಲಿಯೂ ತನ್ನ ಯಜಮಾನನ್ನು ಅರಸುತ್ತದೆ. ಹೀಗೆ ಆ ನಾಯಿ ಕಾದು ಕುಳಿತದ್ದು ಹತ್ತಿಪ್ಪತ್ತು ನಿಮಿಷಗಳಲ್ಲ, ಮೂವತ್ತು ನಲುವತ್ತು ದಿನ ಗಳಲ್ಲ, ಒಚಿದೆರಡು ವರುಷಗಳಲ್ಲ; ಬರೋಬ್ಬರಿ ಒಂಬತ್ತು ವರುಷಗಳು! ಹೌದು! ಆ ನಾಯಿ ತನ್ನ ಯಜಮಾನ ಬಂದೇ ಬರುತ್ತಾನೆ ಎಂಬ ನಂಬಿಕೆಯಲ್ಲಿಯೇ ಒಂಬತ್ತು ವರ್ಷಗಳನ್ನು ರೈಲ್ವೇ ನಿಲ್ದಾಣದಲ್ಲಿಯೇ ಕಳೆಯುತ್ತದೆ. ಪ್ರಾಣಿಪ್ರಿಯರಿಂದ ಅಷ್ಟೋ ಇಷ್ಟೋ ಆಹಾರ ಪಡೆದುಕೊಂಡಿದ್ದ ಅದು ಒಂಬತ್ತು ವರ್ಷಗಳ ಬಳಿಕ ಯಜಮಾನನ ನಿರೀಕ್ಷೆಯಲ್ಲಿಯೇ ಸಾವನ್ನಪ್ಪುತ್ತದೆ. ಅದರ ಮುಗ್ಧತೆ, ನಿಷ್ಠೆಯನ್ನು ಅರ್ಥೈಸಿಕೊಂಡ ಪ್ರಾಣಿಪ್ರಿಯರು ಅದರ ನೆನಪಿಗಾಗಿ ಆ ರೈಲ್ವೇ ನಿಲ್ದಾಣದಲ್ಲಿ ಅದರ ಮೂರ್ತಿಯೊಂದನ್ನು ನಿರ್ಮಿಸಿದ್ದಾರೆ.
ಪ್ರಾಣಿಗಳು ಮನುಷ್ಯರನ್ನು ಪ್ರೀತಿಸಿದರೆ ನಿಜವಾಗಿಯೂ ಪ್ರೀತಿಸುತ್ತವೆ. ತೋರಿಕೆಯ ಪ್ರೀತಿ ಅವುಗಳದ್ದಲ್ಲ. ಕಾರಣ, ಅವುಗಳಿಗೆ ಮನುಷ್ಯರಿಗಿಂತ ಹೆಚ್ಚಿನ ಹೃದಯವಂತಿಕೆ ಇದೆ ಮತ್ತು……. ಮನುಷ್ಯರಿಗಿಂತ ಕಡಿಮೆ ಬುದ್ಧಿ ವಂತಿಕೆ ಇದೆ!

ವಿಶ್ವನಾಥ ಎನ್. ನೇರಳಕಟ್ಟೆ

ಕನ್ನಡ ಉಪನ್ಯಾಸಕ
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು
ನೆಹರು ನಗರ, ಪುತ್ತೂರು
ಮೊ. : ೯೪೪೯೪೮೯೧೪೦,
೭೭೬೦೪೧೩೭೬೭

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.