ಮಂಗಳೂರು ವಿವಿ ಘಟಕ ಕಾಲೇಜಿಗೆ ಮೀಸಲಿರಿಸಿದ್ದ ಜಾಗಕ್ಕೆ ಅರಣ್ಯ ಇಲಾಖೆ ತಕರಾರು

Puttur_Advt_NewsUnder_1
Puttur_Advt_NewsUnder_1
  • ಗ್ರಾಮಸ್ಥರ ತೀವ್ರ ವಿರೋಧ- ಪ್ರತಿಭಟನೆ ಎಚ್ಚರಿಕೆ
  • ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಕೆ

 

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿಗೆ ಮೀಸಲಿರಿಸಿದ್ದ ಜಾಗಕ್ಕೆ ಈಗ ಅರಣ್ಯ ಇಲಾಖೆ ತಕರಾರು ಮಾಡುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಘಟನೆ ನೆಲ್ಯಾಡಿ ಗ್ರಾಮಸಭೆಯಲ್ಲಿ ನಡೆದಿದೆ.

ಸಭೆ ಫೆ.24ರಂದು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕು ಯುವಜನ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಜಯರಾಮ ಗೌಡರವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಗಣೇಶ್ ಪೂಜಾರಿ ಪೊಸೋಳಿಗೆಯವರು, ನೆಲ್ಯಾಡಿಗೆ ಮಂಜೂರುಗೊಂಡಿರುವ ಮಂಗಳೂರು ವಿವಿಯ ಘಟಕ ಕಾಲೇಜಿನ ಕಟ್ಟಡಕ್ಕೆ ಎರಡು ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಕಾಲೇಜು ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡು ಎರಡು ವರ್ಷ ಕಳೆದಿದೆ. ಆದರೆ ಕಟ್ಟಡ ಇನ್ನೂ ನಿರ್ಮಾಣಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ.ಸದಸ್ಯೆ, ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆಯೂ ಆದ ಉಷಾ ಅಂಚನ್‌ರವರು, ನೆಲ್ಯಾಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜಿಗೆಂದು ತೊಟ್ಟಿಲಗುಂಡಿ ಎಂಬಲ್ಲಿ ೨೫ ಎಕ್ರೆ ಜಾಗ ಕಾದಿರಿಸಿ ಆರ್‌ಟಿಸಿಯೂ ಆಗಿದೆ.

ಆದರೆ ಈ ಜಾಗಕ್ಕೆ ಈಗ ಅರಣ್ಯ ಇಲಾಖೆಯು ತಕರಾರು ಎಬ್ಬಿಸಿದ್ದು ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸುತ್ತಿದೆ. ನೆಲ್ಯಾಡಿ ಸಂತಜಾರ್ಜ್ ವಿದ್ಯಾಲಯದ ಬಾಡಿಗೆ ಕೊಠಡಿಯಲ್ಲಿ ಮಂಗಳೂರು ವಿವಿ ಘಟಕ ಕಾಲೇಜು ಆರಂಭಗೊಂಡು ಎರಡು ವರ್ಷ ಆಗುತ್ತಿದೆ. ಮುಂದಿನ ವರ್ಷ ಅಲ್ಲಿ ತರಗತಿ ನಡೆಸಲು ಕೊಠಡಿ ಲಭ್ಯವಾಗುವುದು ಕಷ್ಟ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಠಡಿಯ ಬದಲಿ ವ್ಯವಸ್ಥೆಯೂ ಮಾಡಿಕೊಂಡಿದ್ದೇವೆ . ತೊಟ್ಟಿಲಗುಂಡಿಯಲ್ಲಿ ಘಟಕ ಕಾಲೇಜಿಗೆ ಮೀಸಲಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿ ಪಡಿಸಿ, ಘಟಕ ಕಾಲೇಜು ರದ್ದುಗೊಂಡಲ್ಲಿ ಗ್ರಾಮಸ್ಥರ ಜೊತೆಗೂಡಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇದಕ್ಕೆ ಗ್ರಾಮಸ್ಥರೂ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ಸೂಚಿಸಿದರು. ಕಾಲೇಜಿನ ನೋಂದಾವಣಿ ಪ್ರಕ್ರಿಯೆ ವಿವಿ ಮಟ್ಟದಲ್ಲಿ ನಡೆಯುತ್ತಿದೆ. ಪುತ್ತೂರಿನ ಶಾಸಕರ ಜೊತೆಗೂ ಈ ಬಗ್ಗೆ ಮಾತುಕತೆ ನಡೆಸಿzನೆ ಎಂದು ಉಷಾ ಅಂಚನ್ ತಿಳಿಸಿದರು.

ಹೈಕೋರ್ಟ್ ಆದೇಶದಂತೆ ಗ್ರಾ.ಪಂ.ಗಳಿಂದ ಕೆರೆ ಅತಿಕ್ರಮಣ ತೆರವು ಕಾರ್‍ಯ ನಡೆಯುತ್ತಿದೆ. ನೆಲ್ಯಾಡಿ ಗ್ರಾ.ಪಂ.ಗೆ ಸಂಬಂಧಿಸಿದಂತೆ ಪಡುಬೆಟ್ಟು ಕೆರೆ ಮಾತ್ರ ಇದ್ದು ನೆಲ್ಯಾಡಿ ಕೆರೆಯ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದು ಉಷಾ ಅಂಚನ್‌ರವರು ಸಭೆಯ ಗಮನಕ್ಕೆ ತಂದರು. ವಿವಿ ಘಟಕಕ್ಕೆ ಕಾದಿರಿಸಿರುವ ಜಾಗ ಸರಕಾರಿ ಜಾಗವಾಗಿದ್ದು ಅದರಲ್ಲಿನ ಮರಗಳು ಅರಣ್ಯ ಇಲಾಖೆಯದ್ದು ಆಗಿದೆ. ಆದ್ದರಿಂದ ಇಲಾಖೆಯವರೇ ಮರಗಳನ್ನು ತೆರವುಗೊಳಿಸಿ ವಿವಿ ಘಟಕ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕೆಂದು ಅಧ್ಯಕ್ಷ ಗಂಗಾಧರ ಶೆಟ್ಟಿ ಹೇಳಿದರು. ಸದ್ರಿ ಜಾಗದಲ್ಲಿ ಅರಣ್ಯ ಇಲಾಖೆಯ ನೆಡುತೋಪು ಇತ್ತು. ಈ ಬಗ್ಗೆ ಇಲಾಖೆಗೆ ವರದಿ ಸಲ್ಲಿಸಿzವೆ. ಮುಂದಿನ ಕ್ರಮ ಜಿಲ್ಲಾಮಟ್ಟದಲ್ಲಿಯೇ ಆಗಬೇಕಿದೆ ಎಂದು ಅರಣ್ಯ ರಕ್ಷಕ ಜನಾರ್ದನರವರು ತಿಳಿಸಿದರು.

ಹಸಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುತ್ತಿಲ್ಲ: ನೆಲ್ಯಾಡಿ ಸಂತೆಮಾರುಕಟ್ಟೆಯಲ್ಲಿ ಹಸಿಮೀನು ಮಾರುಕಟ್ಟೆ ಇದ್ದರೂ ಟೆಂಡರ್ ಪಡೆದುಕೊಂಡವರು ಅಲ್ಲಿ ಹಸಿ ಮೀನು ಮಾರಾಟ ಮಾಡುತ್ತಿಲ್ಲ ಎಂದು ಗ್ರಾಮಸ್ಥ ಗಣೇಶ್ ಪೂಜಾರಿಯವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಶೆಟ್ಟಿಯವರು, ಹಸಿಮೀನು ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡಬೇಕೆಂಬ ನಿಬಂಧನೆಯೊಂದಿಗೆ ಏಲಂ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಯಾವುದಾದರೂ ತೊಂದರೆ ಇದ್ದಲ್ಲಿ ಅದನ್ನು ಸರಿಪಡಿಸಿಕೊಡಲಾಗುವುದು. ಹರಾಜು ಪಡೆದುಕೊಂಡವರು ಮಾರುಕಟ್ಟೆಯಲ್ಲಿ ಹಸಿಮೀನು ಮಾರಾಟಕ್ಕೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಅಣ್ಣಿ ಎಲ್ತಿಮಾರ್‌ರವರು, ನೆಲ್ಯಾಡಿಯಲ್ಲಿ ಮೀನು ಮಾರಾಟಕ್ಕೆ ಟೆಂಡರ್ ಪಡೆದುಕೊಂಡು ಕೌಕ್ರಾಡಿಯಲ್ಲಿ ಮಾರಾಟ ಮಾಡುತ್ತಿರುವುದು ಸರಿಯಲ್ಲ, ಅವರು ನೆಲ್ಯಾಡಿಯಲ್ಲಿಯೇ ಹಸಿ ಮೀನು ಮಾರಾಟ ಮಾಡಬೇಕೆಂದು ಹೇಳಿದರು.

ಶಾಲೆ, ಅಂಗನವಾಡಿ ಆವರಣದೊಳಗೆ ಮದ್ಯದ ಬಾಟ್ಲಿ: ಪಡುಬೆಟ್ಟು ಸರಕಾರಿ ಪ್ರೌಢಶಾಲೆ, ಪಡುಬೆಟ್ಟು ಅಂಗನವಾಡಿ ಕೇಂದ್ರ, ಕುರುಬರಕೇರಿ ಅಂಗನವಾಡಿ ಕೇಂದ್ರದ ಆವರಣದೊಳಗೆ ರಾತ್ರಿ ವೇಳೆ ಮದ್ಯಪಾನ ಮಾಡಿ ಬಾಟಲಿ ಬಿಟ್ಟುಹೋಗುತ್ತಿದ್ದಾರೆ ಎಂದು ಆರೋಪಿಸಿದ ಪಡುಬೆಟ್ಟು ಪ್ರೌಢಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಅಣ್ಣಿ ಎಲ್ತಿಮಾರ್, ಅಂಗನವಾಡಿ ಕಾರ್ಯಕರ್ತೆಯರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೆಲ್ಯಾಡಿ ಹೊರಠಾಣೆ ಸಿಬ್ಬಂದಿ ಹರಿಶ್ಚಂದ್ರರವರು, ಇಂತಹ ಚಟುವಟಿಕೆಯಲ್ಲಿ ಭಾಗಿಯಾಗುವವರು ಪೊಲೀಸ್ ಜೀಪು ನೋಡಿದ ತಕ್ಷಣ ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ತಾವೇ ಯಾರಾದರೂ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ದಾಖಲೆ ನೀಡಿದಲ್ಲಿ ಅವರನ್ನು ಕರೆಸಿ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ನೆಲ್ಯಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಸೋಲಾರ್ ಬೀದಿದೀಪದ ಬ್ಯಾಟರಿಗಳ ಕಳ್ಳತನ ಪ್ರಕರಣ ನಡೆಯುತ್ತಿದೆ. ಆದ್ದರಿಂದ ಪೊಲೀಸರು ರಾತ್ರಿ ಗಸ್ತು ತಿರುಗಬೇಕೆಂದು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿಯವರು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.

ಅಂಬೇಡ್ಕರ್ ಭವನ ವಿಳಂಬ ಯಾಕೆ ?: ನೆಲ್ಯಾಡಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬರುತ್ತಿzವೆ. ಈಗ ಜಾಗ ಮಂಜೂರುಗೊಂಡಿದ್ದರೂ ಭವನ ನಿರ್ಮಾಣ ಕಾರ್ಯ ಯಾಕೆ ವಿಳಂಬ ಆಗುತ್ತಿದೆ ಎಂದು ಗ್ರಾಮಸ್ಥರಾದ ಕೆ.ಪಿ.ಆನಂದ ಪಡುಬೆಟ್ಟು, ಅಣ್ಣಿ ಎಲ್ತಿಮಾರ್ ಮತ್ತಿತರರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕೆ ಅಶ್ವಿನಿಯವರು, ಇದಕ್ಕೆ ಸಂಬಂಧಿಸಿದ ಕಡತ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪೆಂಡಿಂಗ್ ಆಗಿತ್ತು. ಈಗ ಜಾಗದ ಆರ್‌ಟಿಸಿ ಆಗಿದ್ದು ಮುಂದಿನ ಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದರು.

ಕೃಷಿ ಇಲಾಖೆಯವರು ಗ್ರಾ.ಪಂ.ಗೆ ಭೇಟಿ ನೀಡಿ: ಕೃಷಿ ಇಲಾಖೆಯವರಿಗೆ ಪ್ರತಿ ಬುಧವಾರ ಗ್ರಾ.ಪಂ.ಕಚೇರಿಗೆ ಭೇಟಿ ನೀಡುವಂತೆ ಹಿಂದಿನ ಗ್ರಾಮಸಭೆಯಲ್ಲಿಯೇ ಸೂಚಿಸಲಾಗಿದೆ. ಆದರೆ ಇಲಾಖೆಯವರು ಇದನ್ನು ಪಾಲಿಸುತ್ತಿಲ್ಲ, ಕೃಷಿ ಸಮ್ಮಾನ್‌ಗೆ ಸಂಬಂಧಿಸಿದ ಅರ್ಜಿಗಳು ಗ್ರಾ.ಪಂ.ನಲ್ಲಿದ್ದು ಅದನ್ನು ತೆಗೆದುಕೊಂಡು ಹೋಗುವಂತೆ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿಯವರು ಕೃಷಿ ಅಧಿಕಾರಿ ಭರಮಣ್ಣರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಭರಮಣ್ಣರವರು, ಹೋಬಳಿ ವ್ಯಾಪ್ತಿಯಲ್ಲಿ ನಾನು ಒಬ್ಬನೇ ಇರುವುದರಿಂದ ಭೇಟಿಗೆ ಸಾಧ್ಯವಾಗುತ್ತಿಲ್ಲ ಎಂದರು. ಈ ವೇಳೆ ಮಾತನಾಡಿದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು, ಶಿರಾಡಿಯಿಂದ ಗೋಳಿತ್ತೊಟ್ಟು ತನಕದ ಕೃಷಿಕರು ಪ್ರತಿ ಬುಧವಾರ ನೆಲ್ಯಾಡಿ ವಾರದ ಸಂತೆಗೆ ಬರುತ್ತಾರೆ. ಆದ್ದರಿಂದ ನೀವು ಪ್ರತಿ ಬುಧವಾರ ೧ ತಾಸು ಗ್ರಾಮ ಪಂಚಾಯತ್ ಕಚೇರಿಯಲ್ಲಿದ್ದು ಕೃಷಿಕರ ಮನವಿಯಿದ್ದಲ್ಲಿ ಪಡೆದುಕೊಳ್ಳುವಂತೆ ಸೂಚಿಸಿದರು. ಇದಕ್ಕೆ ಭರಮಣ್ಣನವರು ಒಪ್ಪಿಗೆ ಸೂಚಿಸಿದರು.

ಮೆಸ್ಕಾಂ ಶಾಖಾ ಕಟ್ಟಡ ನಿರ್ಮಿಸಿ: ಮೆಸ್ಕಾಂನ ನೆಲ್ಯಾಡಿ ಶಾಖೆಗೆ ಕಟ್ಟಡ ನಿರ್ಮಾಣಕ್ಕೆ ಗ್ರಾ.ಪಂ. ೧೦ ಸೆಂಟ್ಸ್ ಜಾಗ ನೀಡಿದೆ. ಆದರೆ ಅಲ್ಲಿ ಇನ್ನೂ ಕಟ್ಟಡ ನಿರ್ಮಾಣ ಕೆಲಸ ಯಾಕೆ ಆಗಿಲ್ಲ ಎಂದು ಗ್ರಾಮಸ್ಥರು ಇಲಾಖೆಯ ಕಿರಿಯ ಇಂಜಿನಿಯರ್ ರಮೇಶ್‌ರವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್‌ರವರು, ಕಟ್ಟಡ ನಿರ್ಮಾಣಕ್ಕೆ ೪೬ ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಹಂತದಲ್ಲಿದೆ. ಟೆಂಡರ್ ಆದ ಕೂಡಲೇ ಕಟ್ಟಡ ಕಾಮಗಾರಿಯೂ ಆರಂಭಗೊಳ್ಳಲಿದೆ ಎಂದರು. ನೆಲ್ಯಾಡಿ ಭಾಗದಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಮಸ್ಥರಾದ ಗಣೇಶ್ ಪೂಜಾರಿ, ಉಮೇಶ್ ಪೂಜಾರಿ, ಜಿ.ವರ್ಗೀಸ್, ಮೇದಪ್ಪ ನೆಲ್ಯಾಡಿ, ಕೆ.ಪಿ.ಆನಂದ ಪಡುಬೆಟ್ಟು, ಚಂದ್ರಶೇಖರ ಭಟ್ ಮಾಪಲ ಮತ್ತಿತರರು ಪ್ರಸ್ತಾಪಿಸಿದರು.

ಕೊಲ್ಯೊಟ್ಟು-ಮಾದೇರಿ ರಸ್ತೆ ದುರಸ್ತಿಗೊಳಿಸಿ: ನೆಲ್ಯಾಡಿಯಿಂದ ಕೊಲ್ಯೊಟ್ಟು, ಮಾದೇರಿಗೆ ತೆರಳುವ ಜಿ.ಪಂ.ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು ಹೊಂಡ, ಗುಂಡಿಗಳಿಂದ ಕೂಡಿದೆ. ಸದ್ರಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಉಮೇಶ್ ಪೂಜಾರಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು, ಸದ್ರಿ ರಸ್ತೆಗೆ ೨೦ ಲಕ್ಷ ರೂ.,ಮಳೆಹಾನಿ ಅನುದಾನ ಬಿಡುಗಡೆಗೊಂಡಿದ್ದು ಅಗತ್ಯ ಇದ್ದ ಕಡೆಯಲ್ಲಿ ಕಾಂಕ್ರಿಟೀಕರಣ ಮಾಡಿ ಉಳಿದ ಕಡೆ ಪ್ಯಾಚ್ ವರ್ಕ್ ಮಾಡಲಾಗುವುದು ಎಂದು ಹೇಳಿದರು.

ವಸತಿ ಯೋಜನೆ ಅನುದಾನ ಬಂದಿಲ್ಲ: ವಸತಿ ಯೋಜನೆಯಡಿ ಮನೆ ಮಂಜೂರುಗೊಂಡು ಮೊದಲ ಹಂತದ ಕಾಮಗಾರಿ ಮುಗಿದಿದ್ದರೂ ಅನುದಾನ ಬಂದಿಲ್ಲ. ಇದರಿಂದ ಬಹುತೇಕ ಮನೆಗಳು ಅರ್ಧದಲ್ಲಿಯೇ ಮೊಟಕುಗೊಂಡಿವೆ ಎಂದು ಗ್ರಾಮಸ್ಥ ಮೇದಪ್ಪರವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು, ಒಂದೂವರೆ ವರ್ಷದಿಂದ ವಸತಿ ಯೋಜನೆಗೆ ಅನುದಾನ ಬಿಡುಗಡೆಯಾಗದೇ ಕಾಮಗಾರಿಗಳು ಅರ್ಧದಲ್ಲೇ ಉಳಿದಿವೆ. ಇದು ಸರಕಾರದ ವತಿಯಿಂದ ಆಗಬೇಕಾಗಿದೆ. ಕೆಲವೊಂದು ಮಾರ್ಗಸೂಚಿ ಬದಲಾಯಿಸಿಕೊಂಡು ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಇತ್ತೀಚೆಗೆ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಕನ್ವರ್ಷನ್ ಮಾಡಲು ಆಗ್ರಹ: 9-11, ಕನ್ವರ್ಷನ್ ಆಗದೇ ಹೊಸ ಮನೆಗಳಿಗೆ ಗ್ರಾಮ ಪಂಚಾಯತ್‌ನಿಂದ ಮನೆ ನಂಬ್ರ ಕೊಡುತ್ತಿಲ್ಲ. ಹಿಂದೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗಗಳಿಗೆ ಕನ್ವರ್ಷನ್ ಆಗುತಿತ್ತು. ಆದರೆ ಈಗ ಅಂತಹ ಜಾಗಗಳಿಗೆ ಕನ್ವರ್ಷನ್ ಆಗುವುದಿಲ್ಲ. ಇದರಿಂದ ಹೊಸ ಮನೆ ಕಟ್ಟುತ್ತಿರುವವರಿಗೆ ತೊಂದರೆಯಾಗಿದೆ. ಆದ್ದರಿಂದ ಹಿಂದಿನಂತೆಯೇ ಅಕ್ರಮ ಸಕ್ರಮದಲ್ಲೂ ಮಂಜೂರಾದ ಜಾಗಗಳಿಗೆ ಕನ್ವರ್ಷನ್ ಮಾಡಿಕೊಡಬೇಕೆಂದು ಗ್ರಾಮಸ್ಥ ಜಿ.ವರ್ಗೀಸ್ ಕೊಪ್ಪಮಾದೇರಿ ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ನೆಲ್ಯಾಡಿ ಪಶುಚಿಕಿತ್ಸಾಲಯಕ್ಕೆ ಖಾಯಂ ಪಶುವೈದ್ಯಾಧಿಕಾರಿ ನೇಮಕಗೊಳಿಸುವ ಸಂಬಂಧ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು. ಪಡುಬೆಟ್ಟು ಸರಕಾರಿ ಪ್ರೌಢಶಾಲೆಗೆ ಖಾಯಂ ಮುಖ್ಯಶಿಕ್ಷಕರ ನೇಮಕ ಮಾಡುವಂತೆ ಅಣ್ಣಿ ಎಲ್ತಿಮಾರ್‌ರವರು ಆಗ್ರಹಿಸಿದರು. ನೆಲ್ಯಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೋತಿಗಳ ಉಪಟಳ ಬಹಳಷ್ಟು ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚಂದ್ರಶೇಖರ ಮಾಪಲ ಹೇಳಿದರು. ಸೋಲಾರ್ ಲೈಟ್ ಅಳವಡಿಸುವಂತೆಯೂ ಗ್ರಾಮಸ್ಥರಿಂದ ಬೇಡಿಕೆ ಬಂತು. ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯ, ನೆಲ್ಯಾಡಿ ಹೊರಠಾಣೆಯ ಸಿಬ್ಬಂದಿ ಹರಿಶ್ಚಂದ್ರ, ಕೃಷಿ ಅಧಿಕಾರಿ ಭರಮಣ್ಣನವರ, ಮೆಸ್ಕಾಂ ಕಿರಿಯ ಇಂಜಿನಿಯರ್ ರಮೇಶ್, ಹಿರಿಯ ಪಶುವೈದ್ಯ ಪರೀಕ್ಷಕ ರವೀಂದ್ರ, ಸಿಆರ್‌ಪಿ ಅಶೋಕ್ ಕುಮಾರ್, ಗ್ರಾಮಕರಣಿಕೆ ಅಶ್ವಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೆಲ್ಯಾಡಿ ವಲಯ ಮೇಲ್ವಿಚಾರಕಿ ಉಮಾವತಿ, ಅರಣ್ಯ ರಕ್ಷಕ ಜನಾರ್ದನರವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಉಮಾವತಿ, ಸದಸ್ಯರುಗಳಾದ ಜಯಾನಂದ ಬಂಟ್ರಿಯಾಲ್, ತೀರ್ಥೇಶ್ವರ ಯು., ಚಿತ್ರಾ ರಾಮನಗರ, ಅಬ್ರಹಾಂ ಕೆ.ಪಿ., ಮೋಹಿನಿ, ಅಬ್ದುಲ್ ಹಮೀದ್, ಉಷಾ ಜೋಯಿ, ಫ್ರೋರಿನಾ ಡಿ.ಸೋಜ, ಶೇಖ್ ಶಬ್ಬೀರ್ ಸಾಹೇಬ್, ಲೈಲಾ ತೋಮಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಂಜುಳ ಎನ್., ವರದಿ ಮಂಡಿಸಿದರು. ಕಾರ್ಯದರ್ಶಿ ದೇವರಾಜ್ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಸದಸ್ಯ ಜಯಾನಂದ ಬಂಟ್ರಿಯಾಲ್ ವಂದಿಸಿದರು.

ಕುಡಿಯುವ ನೀರಿಗೆ ಬೋರ್‌ವೆಲ್ ವ್ಯವಸ್ಥೆ, ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿರುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್ ಹಾಗೂ ಗ್ರಾ.ಪಂ.ಆಡಳಿತ ಮಂಡಳಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.