ಮಾ.4 ರಿಂದ ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ ಆರಂಭ

Puttur_Advt_NewsUnder_1
Puttur_Advt_NewsUnder_1
  • ಜಿಲ್ಲೆಯಲ್ಲಿ 34,346 ಪರೀಕ್ಷಾರ್ಥಿಗಳು | 24*7 ಮಾನಿಟರಿಂಗ್ ಸೆಲ್ | ಎಲ್ಲಾ ರೂಂಗಳಿಗೂ ಸಿಸಿಟಿವಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ಮಾ.4 ರಿಂದ 23ರ ವರೆಗೆ ಪಿಯುಸಿ ಪರೀಕ್ಷೆಗಳು ರಾಜ್ಯಾದ್ಯಾಂತ ನಡೆಯಲಿದ್ದು, ಪರೀಕ್ಷೆಯನ್ನು ಸುಸೂತ್ರವಾಗಿ ಮತ್ತು ಪಾರದರ್ಶಕತೆಯಿಂದ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಪೂರ್ವ ತಯಾರಿಗಳನ್ನು ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕಛೇರಿಯಲ್ಲಿ 24*7 ಮಾನಿಟರಿಂಗ್ ಸೆಲ್ ತೆರೆಯಲಾಗುತ್ತಿದ್ದು, ಖುದ್ದು ಡಿಸಿಯವರೇ ಇದನ್ನು ಗಮನಿಸಲಿದ್ದಾರೆ ಅಲ್ಲದೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 2೦೦ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ರವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 34,346 ಪರೀಕ್ಷಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಈ ಪೈಕಿ 17,137 ಹುಡುಗರು, 17209 ಹುಡುಗಿಯರು ಪರೀಕ್ಷೆಯನ್ನು ಬರೆಯಲಿದ್ದು, ಕಲಾ ವಿಭಾಗದಲ್ಲಿ 4,532, ವಾಣಿಜ್ಯ ವಿಭಾಗದಲ್ಲಿ 16,237 ಹಾಗೂ ವಿಜ್ಞಾನ ವಿಭಾಗದಲ್ಲಿ 13,577 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಪುತ್ತೂರು ತಾಲೂಕಿನ ಒಂಭತ್ತು ಕೇಂದ್ರಗಳಾದ ಫಿಲೋಮಿನಾ ಪಿಯು ಕಾಲೇಜು(1069 ವಿದ್ಯಾರ್ಥಿಗಳು), ವಿವೇಕಾನಂದ ಪಿಯು ಕಾಲೇಜು(938), ಕಡಬ ಸರಕಾರಿ ಪಿಯು ಕಾಲೇಜು(318), ಕುಂಬ್ರ ಸರಕಾರಿ ಪಿಯು ಕಾಲೇಜು(460), ನೆಲ್ಯಾಡಿ ಸಂತ ಜಾರ್ಜ್ ಪಿಯು ಕಾಲೇಜು(323), ಕೊಂಬೆಟ್ಟು ಜ್ಯೂನಿಯರ್ ಕಾಲೇಜು(817), ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜು(627), ರಾಮಕುಂಜ ಸರಕಾರಿ ಕಾಲೇಜು(299), ಕಾಣಿಯೂರು ಸರಕಾರಿ ಪಿಯು ಕಾಲೇಜು(ಲಭ್ಯವಾಗಿಲ್ಲ), ಹೀಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾ.೪ ರಂದು ಪಿಸಿಕ್ಸ್ ಹಾಗೂ ಇತಿಹಾಸ ಪರೀಕ್ಷೆ ನಡೆಯಲಿದೆ.

24*7 ಮಾನಿಟರಿಂಗ್ ಸೆಲ್:
ಈ ಮಾನಿಟರಿಂಗ್ ಸೆಲ್ ದಿನದ 24 ಗಂಟೆಯೂ ಕಾರ್ಯಾಚರಿಸಲಿದೆ. ಪರೀಕ್ಷೆ ಆರಂಭಕ್ಕೆ ಮುನ್ನ, ಆರಂಭವಾದ ಅನಂತರ, ಪರೀಕ್ಷೆ ಮುಗಿದ ಬಳಿಕವೂ ಸೆಲ್ ಕಾರ್ಯಾಚರಣೆ ನಡೆಸಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನಿಷೇಧಾಜ್ಞೆ ಮೀರುವುದು, ನಕಲು ಮಾಡುವುದು ಮುಂತಾದ ಚಟುವಟಿಕೆಗಳು ನಡೆಯದಂತೆ ತಡೆಯಲು ಮಾನಿಟರಿಂಗ್ ಸೆಲ್‌ನ್ನು ಈ ಬಾರಿ ತೆರೆಯಲಾಗುತ್ತಿದೆ. ಜಿಲ್ಲಾಧಿಕಾರಿಗಳೇ ಈ ಸೆಲ್‌ನಲ್ಲಿ ನಿಗಾ ಇರಿಸಲಿದ್ದಾರೆ. ಈ ಹಿಂದೆ ಸ್ಟ್ರಾಂಗ್ ರೂಂನಲ್ಲಿ ಮಾತ್ರ ಈ ವ್ಯವಸ್ಥೆ ಇದ್ದು, ಟ್ರೆಶರಿ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು.

ಎಲ್ಲಾ ರೂಂಗಳಿಗೂ ಸಿಸಿಟಿವಿ:

ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಿದ್ದು, ಪರೀಕ್ಷೆ ವೇಳೆ ಯಾವುದೇ ಅಕ್ರಮಗಳು ಘಟಿಸದಂತೆ ತಡೆಯುವ ಸಲುವಾಗಿ ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಪ್ರತಿ ತರಗತಿ ಕೋಣೆಗೂ ಸಿಸಿ ಟಿವಿ ಅಳವಡಿಸಲಾಗುತ್ತಿದೆ. ಇದರಿಂದ ಪರೀಕ್ಷೆಯು ಪಾರದರ್ಶಕತೆ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕಗಳನ್ನು ಸಕಾಲಕ್ಕೆ ತಲುಪಿಸುವ 27 ರೂಟ್‌ಗಳನ್ನು ಗುರುತಿಸಲಾಗಿದ್ದು, ಎಲ್ಲಾ ರೂಟ್‌ಗಳನ್ನು ಪ್ರಶ್ನೆಪತ್ರಿಕೆ ಹೊತ್ತು ತೆರಳುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಆಯಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಬಯೋಮೆಟ್ರಿಕ್ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಶ್ನೆ ಪತ್ರಿಕೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ಬಳಿಕ ಅದನ್ನು ಸ್ವೀಕರಿಸುವುದು, ತೆಗೆದಿಡುವುದು, ಪರೀಕ್ಷೆ ಆರಂಭದ ಮುನ್ನ ಪತ್ರಿಕೆಗಳನ್ನು ತೆರೆಯುವುದು, ವಿತರಣೆ, ಪರೀಕ್ಷೆ ಮುಗಿದ ಬಳಿಕ ಬಂಡೆಲ್ ಮಾಡುವುದು ಸಹಿತ ಎಲ್ಲ ಪ್ರಕ್ರಿಯೆಗಳು ಸಿಸಿಟಿವಿಯ ನಿಗಾದಡಿಯಲ್ಲಿ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಯನ್ನು ಡಿಸಿ ಕಛೇರಿಯಲ್ಲಿರುವ ಸೆಲ್‌ನಲ್ಲಿ ವೀಕ್ಷಣೆ ಮಾಡಲಾಗುತ್ತದೆ.

ಆಯಾ ಕೇಂದ್ರದ ಸುತ್ತಮುತ್ತ ನಿಷೇಧಿತ ವಲಯ:
ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ, ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳಿಂದ 2೦೦ಮೀ. ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಕೇಂದ್ರಗಳನ್ನು ಮುಚ್ಚಿಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಪರೀಕ್ಷೆಯನ್ನು ನಕಲು ಮಾಡಲು ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು, ಯಾವುದೇ ವಿಷಯಗಳನ್ನು, ಮಾಹಿತಿಗಳನ್ನು ರವಾನಿಸುವ ಅಥವಾ ತಿಳಿಸುವ ಸನ್ನೆಗಳನ್ನು ಮಾಡುವುದು, ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು ಅಥವಾ ಇನ್ನಾವುದೇ ವಸ್ತುಗಳನ್ನು ಹಂಚುವುದು, ರವಾನಿಸುವುದು ಹಾಗೂ ಇನ್ನಿತರ ಕ್ರಿಯೆಗಳಲ್ಲಿ ತೊಡಗುವುದನ್ನು ನಿರ್ಬಂಧಿಸಲಾಗಿದೆ. ನಿಷೇಧಿತ ವಲಯದಲ್ಲಿ ಯಾವುದೇ ರೀತಿಯ ಸ್ಪೋಟಕ ವಸ್ತುಗಳನ್ನು ಕೊಂಡು ಹೋಗುವುದು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಆದೇಶವು ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಸರಕಾರದಿಂದ ಅಥವಾ ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಸಭೆ ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ ಮತ್ತು ಪೊಲೀಸ್ ಅಧಿಕಾರಿಗಳು, ಬ್ಯಾಂಕ್, ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ಲಾಠಿ, ಶಸ್ತ್ರಾಸ್ತ್ರ ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.