Breaking News

ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ: ಮೂರು ಸಭೆಗೆ ಗೈರು ಹಾಜರಾದ ಸದಸ್ಯರ ಸದಸ್ಯತ್ವ ರದ್ದತಿಗೆ ನಿರ್ಣಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ವಿಭಾಗ, ಪುತ್ತೂರು ಉಪ ವಿಭಾಗ, ಪುತ್ತೂರು ವಲಯ ಗ್ರಾಮ ಅರಣ್ಯ ಸಮಿತಿ ಅರಿಯಡ್ಕ, ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ ೨೦೧೮-೧೯ ನೇ ಸಾಲಿನ ವಾರ್ಷಿಕ ಮಹಾಸಭೆ ಫೆ.೨೯ ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಹಿಂದೆ ಎರಡು ಬಾರಿ ಮಹಾಸಭೆಯು ಕೋರಂ ಕೊರತೆಯಿಂದ ರದ್ದಾಗಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಹಿಂದಿನ ಸಭೆ ಸೇರಿದಂತೆ ಮೂರು ಸಭೆಗೆ ನಿರಂತರ ಗೈರು ಹಾಜರಾದ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡುವುದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆಯುವುದು ಎಂದು ನಿರ್ಣಯಿಸಲಾಯಿತು. ಸಭಾಧ್ಯಕ್ಷತೆ ವಹಿಸಿದ್ದ ಲೋಕೇಶ್ ರೈಯವರು ಮಾತನಾಡಿ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಸಮಿತಿ ಸಾಧ್ಯವಾಗುವ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ. ಹೀಗಿದ್ದರೂ ಕೆಲವೊಂದು ಕಡೆಗಳಲ್ಲಿ ಅರಣ್ಯ ಒತ್ತುವರಿ ಆಗುತ್ತಿದೆ. ಮರ ಕಡಿದಾಗ ಗಿಡ ನೆಡುವ ಕೆಲಸ ಆಗಬೇಕಾಗಿದೆ. ಗಿಡ ನೆಟ್ಟು ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು. ಅರಣ್ಯ ಗ್ರಾಮ ಸಮಿತಿಗೆ ಪ್ರತ್ಯೇಕ ಸಭಾಭವನ ನಿರ್ಮಾಣಕ್ಕೆ ಸ್ಥಳ ಕಾಯ್ದಿರಿಸುವ ಬಗ್ಗೆ ಲೋಕೇಶ್ ರೈಯವರು ಪ್ರಸ್ತಾವನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರು ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಬಿ.ಜಿ ಮಾತನಾಡಿ, ಅರಣ್ಯ ರಕ್ಷಣೆ ಕೇವಲ ಅರಣ್ಯ ಇಲಾಖಾ ಸಿಬ್ಬಂದಿಗಳಿಂದ ಮಾತ್ರ ಸಾಧ್ಯವಿಲ್ಲ. ಸಮಿತಿ ಸದಸ್ಯರು ಸಹಕರಿಸಬೇಕಾಗಿದೆ ಎಂದ ಅವರು, ಅರಣ್ಯ ರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದು ಆಗಿದೆ. ಅರಣ್ಯ ಇಲಾಖೆಯ ಕಾಡು ಎಂಬ ಭಾವನೆಯನ್ನು ಬಿಟ್ಟು ಕಾಡು ನಮ್ಮದು, ನಮ್ಮೆಲ್ಲರ ಸೊತ್ತು ಎಂಬ ಭಾವನೆಯನ್ನು ಬೆಳೆಸಿಕೊಂಡು ಕಾಡಿನ ರಕ್ಷಣೆಯಲ್ಲಿ ತೊಡಗಬೇಕು ಆಗ ಮಾತ್ರ ಕಾಡು ಉಳಿಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅರಿಯಡ್ಕ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪದ್ಮಕುಮಾರಿ ಶುಭ ಹಾರೈಸಿದರು. ವೇದಿಕೆಯಲ್ಲಿ ಅರಣ್ಯ ಗ್ರಾಮ ಸಮಿತಿಯ ನಿರ್ದೇಶಕರುಗಳಾದ ವನರಾಜ್, ಗೀತಾ ಹರ್ಷ ರೈ, ವಸಂತ ಕುಮಾರ್, ಪದ್ಮನಾಭ ಆಚಾರ್ಯ, ಇರ್ಷಾದ್ ಕೌಡಿಚ್ಚಾರು, ಪ್ರಭಾಕರ ಗೌಡ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ತಿಲಕ್ ರೈ ಕುತ್ಯಾಡಿ ಸ್ವಾಗತಿಸಿದರು. ಪಾಣಾಜೆ ವಲಯ ಅರಣ್ಯ ಅಧಿಕಾರಿ ಲೋಕೇಶ್ ಎಸ್.ಎನ್ ವರದಿ ವಾಚಿಸಿದರು. ಅರಣ್ಯ ರಕ್ಷಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಇಲಾಖಾ ಸಿಬ್ಬಂದಿಗಳು ಸಹಕರಿಸಿದ್ದರು.

ಕಾಡಿನಲ್ಲಿ ಹಣ್ಣಿನ ಮರಗಳನ್ನು ಬೆಳೆಸಿರಿ
ಇತ್ತೀಚಿನ ದಿನಗಳಲ್ಲಿ ಕೃಷಿಗೆ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದೆ. ಮಂಗಗಳು ತೋಟಕ್ಕೆ ನುಗ್ಗಿ ಕೃಷಿಫಲವಸ್ತುಗಳನ್ನು ಹಾಳು ಮಾಡುತ್ತಿವೆ ಇದರಿಂದ ಕೃಷಿಕರಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ ಎಂದ ಕೃಷಿಕ ಅಮ್ಮಣ್ಣ ರೈ ಪಾಪೆಮಜಲುರವರು, ಕಾಡಿನಲ್ಲಿ ಹಣ್ಣಿನ ಮರಗಳನ್ನು ಬೆಳೆಸಿರಿ. ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ನೆಡುವ ಮೂಲಕ ಹಣ್ಣಿನ ಮರಗಳನ್ನು ಬೆಳೆಸಬೇಕು ಇದರಿಂದ ಮಂಗ ಸೇರಿದಂತೆ ಕಾಡುಪ್ರಾಣಿಗಳಿಗೆ ತಿನ್ನಲು ಹಣ್ಣುಹಂಪಲು ದೊರೆಯುತ್ತದೆ. ಆಗ ಅವುಗಳು ಕೃಷಿ ತೋಟಕ್ಕೆ ನುಗ್ಗುವುದಿಲ್ಲ ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ತಿನ್ನಲು ಏನೂ ಸಿಗದ ಸಮಯದಲ್ಲಿ ಅವು ನಾಡಿಗೆ ನುಗ್ಗಿ ಕೃಷಿಹಾನಿ ಮಾಡುತ್ತವೆ ಎಂದು ಅಮ್ಮಣ್ಣ ರೈ ತಿಳಿಸಿದರು.

ಕಾಡಿನಲ್ಲಿ ನೀರಿ ತೊಟ್ಟಿಗಳನ್ನು ನಿರ್ಮಿಸಿ
ಕಾಡು ಪ್ರಾಣಿಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯಲು ನೀರು ಸಿಗದೆ ಇರುವ ಸಮಯದಲ್ಲಿ ಅವು ನೀರನ್ನು ಅರಸಿಕೊಂಡು ತೋಟಕ್ಕೆ ನುಗ್ಗುತ್ತವೆ. ಆದ್ದರಿಂದ ಕಾಡಿನ ಮಧ್ಯ ಅಲ್ಲಲ್ಲಿ ಸಿಮೆಂಟಿನಿಂದ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಅದರಲ್ಲಿ ನೀರು ತುಂಬಿಸುವ ಕೆಲಸ ಆಗಬೇಕು. ಆಗ ಬೆಸಿಗೆ ಕಾಲದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯಲು ನೀರು ದೊರೆಯುತ್ತದೆ ಇದರಿಂದ ತೋಟಕ್ಕೆ ಹಾನಿ ಮಾಡುವುದಿಲ್ಲ ಎಂದು ಅಮ್ಮಣ್ಣ ರೈ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.