ರಜತಾದ್ರಿಯಲ್ಲಿ ನಿರ್ಮಾಣವಾಗುತ್ತಿದೆ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ: ಮಾ.8ರಂದು ಕ್ಷೇತ್ರಕ್ಕೆ ಶಿಲಾವಿಗ್ರಹಗಳ ಆಗಮನ

Puttur_Advt_NewsUnder_1
Puttur_Advt_NewsUnder_1

ಆದಿಶಕ್ತಿ ಚಾಮುಂಡಿ ದೇವಿಯು ದುಷ್ಟ ನಿಗ್ರಹದ ಬಳಿಕ ಭೂಲೋಕದಲ್ಲಿ ನಾನಾ ಅವತಾರದಲ್ಲಿ ನಾನಾ ಕಡೆ ನೆಲೆಸಿ ಭಕ್ತ ಕೋಟಿಯನ್ನು ಅನುಗ್ರಹಿಸುತ್ತಿದ್ದಾಳೆ. ಶಂಕರಾಚಾರ್ಯರೇ ಸ್ವತಃ ದೇವಿಯ ಪೂಜೆಗೈದ ಸ್ಥಳ ಎನ್ನಲಾಗಿರುವ ಬಂಟ್ವಾಳ ತಾಲೂಕಿನ ಮುಂಡ್ರಬೈಲು ರಜತಾದ್ರಿ ಕ್ಷೇತ್ರ ಇದೀಗ ಆದಿಶಕ್ತಿ ಚಾಮುಂಡಿಯ ಭವ್ಯ ಕ್ಷೇತ್ರವಾಗಿ ಪರಿಣಮಿಸುತ್ತಿದೆ. ಕಟ್ಟೆಯ ರೂಪದಲ್ಲಿರುವ ದೇವಿ ಆಲಯವನ್ನು ಬಯಸಿದ್ದಾಳೆ ಎಂಬುದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಊರ ಪರವೂರ ಭಕ್ತ ಮಂದಿ ಸೇರಿ ದೇವಿಗೆ ಸುಂದರ ದೇಗುಲ ನಿರ್ಮಿಸುವ ಸಂಕಲ್ಪ ತೊಟ್ಟಿದ್ದಾರೆ.

ಹಲವು ವರ್ಷಗಳ ಇತಿಹಾಸ ಇರುವ ಶ್ರೀ ಚಾಮುಂಡೇಶ್ವರಿ, ಗುಳಿಗ, ನಾಗರಕ್ತೇಶ್ವರಿ ಹಾಗೂ ಕಲ್ಲುರ್ಟಿ ಇರುವ ಈ ಕ್ಷೇತ್ರದಲ್ಲಿ ಪ್ರತಿ ತಿಂಗಳ ಸಂಕ್ರಮಣ ಮತ್ತು ವಾರದ ಮಂಗಳವಾರ ಹಾಗೂ ಶುಕ್ರವಾರ ಶ್ರೀದೇವರ ದರ್ಶನ ಸೇವೆ ಮತ್ತು ಅನ್ನಸಂತರ್ಪಣೆ ನಡೆಯುತ್ತಾ ಬಂದಿದೆ.

ಕಾರಣಿಕ ಕ್ಷೇತ್ರ: ಕ್ಷೇತ್ರದಲ್ಲಿ ಶಕ್ತಿದೇವತೆಯಾಗಿರುವ ಆದಿಶಕ್ತಿ ಚಾಮುಂಡಿ ಅತ್ಯಂತ ಕಾರಣಿಕ ಮಹಿಮೆ ಹೊಂದಿದ್ದು, ಸಂಕ್ರಮಣ ದಿನ ದೇವಿ ಇಲ್ಲಿನ ಧರ್ಮದರ್ಶಿ ಕೃಷ್ಣಪ್ಪ ಪೂಜಾರಿಯವರ ಮೂಲಕ ದರ್ಶನ ನೀಡುತ್ತಾಳೆ. ಅಲ್ಲದೇ ಪ್ರತೀವರ್ಷ ನವರಾತ್ರಿಯ ಸಂದರ್ಭ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಜಿಲ್ಲೆ ಹೊರ ಜಿಲ್ಲೆಗಳಿಂದಲೂ ಇಲ್ಲಿಗೆ ನೂರಾರು ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ನೀಗಿಸಿಕೊಳ್ಳಲು ಆಗಮಿಸುತ್ತಾರೆ. ಇಲ್ಲಿಗೆ ಬಂದು ಭಕ್ತಿಯಿಂದ ಸೇವೆ ಸಲ್ಲಿಸಿದರೆ, ಪರಿಹಾರ ಕಾರ್ಯ ಮಾಡಿದರೆ ಪ್ರತಿಫಲ ದೊರೆತಿರುವ ಸಾಕಷ್ಟು ನಿದರ್ಶನಗಳಿವೆ. ಹಿಂದೂ ಧರ್ಮದವರು ಮಾತ್ರವಲ್ಲದೇ ಇಲ್ಲಿಗೆ ಮುಸ್ಲಿಂ ಕ್ರೈಸ್ತ ಬಾಂಧವರೂ ಸಾಕಷ್ಟು ಮಂದಿ ಆಗಮಿಸುತ್ತಿದ್ದಾರೆ.

ಮಣಿನಾಗನ ಸಾನ್ನಿಧ್ಯ: ದೇವಿಯ ಕಟ್ಟೆಯ ಬಳಿ ನಾಗ ಸಾನ್ನಿಧ್ಯವಿದೆ. ಬಹಳ ವಿಶೇಷವಾಗಿ ಇಲ್ಲಿ ಕಣ್ಣಿಗೆ ಗೋಚರಿಸದ `ಮಣಿನಾಗ’ ಸಾನ್ನಿಧ್ಯವಿದೆ ಎನ್ನಲಾಗಿದೆ. ಈಗಲೂ ಅನೇಕ ಬಾರಿ ಕೇವಲ ಮಣಿಯ ಬೆಳಕು ಪರಿಸರದಲ್ಲಿ ಗೋಚರಿಸುತ್ತದೆ ಎನ್ನುತ್ತಾರೆ ಸ್ಥಳೀಯರು. ಕೆಲವು ವರ್ಷಗಳ ಹಿಂದೆ ಇಲ್ಲಿ ಬರೀ ಗುಡ್ಡಪ್ರದೇಶವಿದ್ದು, ದೇವಿ ಸಾನ್ನಿಧ್ಯದಲ್ಲಿ ಬೃಹದಾಕಾರದ ಬನ ನಿರ್ಮಾಣವಾಗಿ ಬರೀಯ ನೋಟದಲ್ಲಿಯೇ ಭಯ ಭಕ್ತಿಯನ್ನು ಹುಟ್ಟಿಸುತ್ತಿತ್ತು.

ಶಂಕರಾಚಾರ್ಯರು ಪೂಜೆಗೈದ ಸ್ಥಳ: ಈ ಸ್ಥಳ ಆದಿ ಶಂಕರರು ತಮ್ಮ ಪ್ರವಾಸ ಸಮಯದಲ್ಲಿ ಪೂಜೆಗೈದ ಸ್ಥಳ ಎನ್ನಲಾಗಿದೆ. ಬಹಳ ಹಿಂದೆ ಇದಕ್ಕೆ ಪೂರಕವಾಗಿ ಇಲ್ಲೊಂದು ಗುಹೆ ಇತ್ತು ಎನ್ನಲಾಗಿದೆ.

೫ ವರ್ಷಗಳ ಮೊದಲು ಕೃಷ್ಣಪ್ಪ ಪೂಜಾರಿಯವರ ಮನೆಯಲ್ಲಿ ನಾನಾ ರೀತಿಯಲ್ಲಿ ಕಷ್ಟಕಾರ್ಪಣ್ಯಗಳು ತಲೆದೋರಿದಾಗ ದೇವಿಯು ದರ್ಶನದಲ್ಲಿ ಪ್ರಶ್ನಾಚಿಂತನೆ ಮಾಡಬೇಕೆಂದು ಹೇಳಿದ್ದಳು. ಅದರ ಪ್ರಕಾರ ಪ್ರಶ್ನಾಚಿಂತನೆ ನಡೆಸಲಾಗಿ ದೇವಿಯು ದೇಗುಲವನ್ನು ಬಯಸುತ್ತಿದ್ದಾಳೆ ಎಂದು ತಿಳಿದು ಬಂತು. ಸುಮಾರು ೧ ಕೋಟಿ ರೂ. ವೆಚ್ಚದಲ್ಲಿ ಸುಂದರ ಕೆಂಪು ಶಿಲಾಮಯ ದೇಗುಲ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿ ಈಗಾಗಲೇ ಶೇ. ೭೫ ರಷ್ಟು ಕೆಲಸ ಕಾರ್ಯಗಳು ಪೂರ್ಣಗೊಂಡಿವೆ. ದೈವಜ್ಞ ದಿನೇಶ್ ಪಂಡಿತ್ ಸೋಮೇಶ್ವರ್, ವಾಸ್ತುಶಿಲ್ಪಿ ರಾಜ್‌ಕುಮಾರ್ ಮತ್ತು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಸಿಂಹಾರೂಢ ಆದಿಶಕ್ತಿ
ನೂತನ ದೇಗುಲದಲ್ಲಿ ಪೂಜೆ ಪಡೆಯಲಿರುವ ದೇವಿಯ ವಿಗ್ರಹ ಕಾರ್ಕಳದಿಂದ ಮಾ. ೮ ರಂದು ಕ್ಷೇತ್ರಕ್ಕೆ ಆಗಮಿಸುತ್ತಿದೆ. ಸಿಂಹಾರೂಢ ದೇವಿಯ ಶಿಲಾ ವಿಗ್ರಹ, ಕಾಲಭೈರವನ ವಿಗ್ರಹಗಳನ್ನು ತರಲಾಗುತ್ತಿದೆ. ಮಿತ್ತೂರುನಿಂದ ವಿಗ್ರಹಗಳನ್ನು ಭವ್ಯ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಸಾಗಿಸಲಾಗುತ್ತದೆ.

ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡುವವರು `ರಜತಾದ್ರಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ’ ಹೆಸರಿನಲ್ಲಿ ಕರ್ಣಾಟಕ ಬ್ಯಾಂಕ್ ಕಬಕ ಶಾಖೆಯಲ್ಲಿರುವ ಖಾತೆ ಸಂಖ್ಯೆ 4012000100015501 ಐಎಫ್‌ಎಸ್‌ಸಿ ಕೋಡ್ – KAR0000401 ಗೆ ಜಮೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9481142289 ಅಥವಾ 9611697525 ನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.