Breaking News

ಹಾಸ್ಯ ಪಾತ್ರದ ಮೂಲಕ ಪ್ರೇಕ್ಷರನ್ನು ನಗಿಸುವ ತುಳು ರಂಗಭೂಮಿಯ ಎಲೆಮರೆಯ ಕಲಾವಿದ ರಂಗಯ್ಯ ಬಲ್ಲಾಳ್ ಕೆಂಬಾಡಿ ಬೀಡು

Puttur_Advt_NewsUnder_1
Puttur_Advt_NewsUnder_1

✍… ಸಿಶೇ ಕಜೆಮಾರ್

ಪುತ್ತೂರು: ಒಬ್ಬ ಕಲಾವಿದನಿಗೆ ಬೇಕಾಗಿರುವುದು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕಲಾಪ್ರೇಮಿಗಳು. ಕಲಾವಿದ ತನ್ನೊಡಲಲ್ಲಿ ಅಘಾತವಾದ ಪ್ರತಿಭೆಯನ್ನು ತುಂಬಿಕೊಂಡಿದ್ದರು ಆತನಿಗೆ ಬೇಕಾಗಿರುವುದು ಪ್ರತಿಭೆಯನ್ನು ಪ್ರೋತ್ಸಾಹಿಸುವ ಜನರು. ಪ್ರತಿಭೆಗೆ ಸರಿಯಾದ ವೇದಿಕೆ ಸಿಕ್ಕಿದಾಗಲೇ ಆತನಲ್ಲಿರುವ ಕಲೆ ಇನ್ನಷ್ಟು ಅರಳಲು ಸಾಧ್ಯವಿದೆ. ಇಲ್ಲದಿದ್ದರೆ ಎಲೆಮರೆಯ ಕಾಯಿಯಾಗಿ ಬಿದ್ದು ಹೋಗುವ ಛಾನ್ಸ್ ಇದೆ. ಇಂತಹ ಒಬ್ಬ ಅಪ್ರತಿಮ ಕಲಾವಿದ ಇಂದು ಎಲೆಮರೆಯ ಕಾಯಿಯಾಗಿ ಉಳಿದುಕೊಂಡಿದ್ದಾರೆ ಅವರೇ ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು. ಕೆದಂಬಾಡಿ ಗ್ರಾಮದ ಕೆದಂಬಾಡಿಬೀಡು ಮರಿಯಯ್ಯ ಬಲ್ಲಾಳ್ ಮತ್ತು ದೇವಕಿಅಮ್ಮರವರ ಪುತ್ರರಾಗಿರುವ ಇವರು ತುಳು ರಂಗಭೂಮಿಗೆ ತನ್ನ 16 ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದಾರೆ. 100 ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ ಇವರು ಒಬ್ಬ ಶ್ರೇಷ್ಠ ಕಲಾವಿದರಾಗಿ ಬೆಳೆದಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲೇ ನಾಟಕದ ಹುಚ್ಚು
ರಂಗಯ್ಯ ಬಲ್ಲಾಳ್‌ರವರಿಗೆ ವಿದ್ಯಾರ್ಥಿ ದೆಸೆಯಲ್ಲೇ ನಾಟಕದ ಹುಚ್ಚು. ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ‘ ಪೊಣ್ಣನ ಕೋಪ ಆನಗ್ ಶಾಪ’ ಎನ್ನುವ ತುಳು ನಾಟಕದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ನಾಟಕ ರಂಗಕ್ಕೆ ಕಾಲಿಟ್ಟಿದ್ದರು. ಆದರೆ ಮುಂದಿನ ದಿನಗಳಲ್ಲಿ ಇವರ ಆರಿಸಿಕೊಂಡದ್ದು ಹಾಸ್ಯ ಪಾತ್ರಗಳನ್ನು.ಒಬ್ಬ ಹಾಸ್ಯ ಕಲಾವಿದರಾಗಿ ಹಲವು ವರ್ಷಗಳಿಂದ ಅನೇಕ ನಾಟಕಗಳಲ್ಲಿ ಅಭಿನಯಿಸಿ ಸಾವಿರಾರು ಪ್ರೇಕ್ಷಕರ ಪ್ರೀತಿ, ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ಕಳೆದ ೧೫ ವರ್ಷಗಳಿಂದ ತಿಂಗಳಾಡಿ ಶ್ರೀ ಕೃಷ್ಣ ಮಿತ್ರವೃಂದದ ಸಕ್ರೀಯ ಕಲಾವಿದರಾಗಿ ಹಾಸ್ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾ ಬಂದಿದ್ದಾರೆ.

ಅಭಿನಯಕ್ಕೂ ಸೈ, ನಿರ್ದೇಶನಕ್ಕೂ ಸೈ
ರಂಗಯ್ಯ ಬಲ್ಲಾಳ್‌ರವರು ಕೇವಲ ಓರ್ವ ನಟರಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಒಬ್ಬ ನಿರ್ದೇಶಕರಾಗಿ ಹಲವು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ನಾಟಕ ‘ಸಂಸಾರ’ದಲ್ಲಿ ಸುಮಾರು ೭ ವರ್ಷಗಳ ಕಾಲ ಹಾಸ್ಯ ಕಲಾವಿದರಾಗಿ ಸೇವೆ ಮಾಡಿದ್ದಾರೆ. ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾಟಕ ಸಂಯೋಜನೆ, ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡು ಕೆಲಸ ಮಾಡಿದ್ದಾರೆ. ಸುಮಾರು 100 ಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡ ಸಂಸಾರ ತಂಡದ ಜನಪ್ರಿಯ ನಾಟಕ ‘ಬದ್ಕೆರೆ ಕಲ್ಪಿ’ಯಲ್ಲಿ ಪ್ರಮುಖ ಹಾಸ್ಯ ಪಾತ್ರ ‘ದರ್ಣಪ್ಪ’ನ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದಲ್ಲದೆ ಪುಣಚದ ‘ಸ್ನೇಹ ಕಲಾವಿದೆರ್’ ತಂಡದಲ್ಲೂ ಹಲವು ನಾಟಕಗಳಲ್ಲಿ ಅಭಿನಯ ನೀಡಿದ್ದಾರೆ.

ಅಭಿನಯದ ಪ್ರಮುಖ ನಾಟಕಗಳು
ರಂಗಯ್ಯ ಬಲ್ಲಾಳ್‌ರವರು ಹಲವು ತಂಡಗಳಲ್ಲಿದ್ದುಕೊಂಡು ಬಹಳಷ್ಟು ನಾಟಕಗಳಲ್ಲಿ ಅಭಿನಯ ನೀಡಿದ್ದಾರೆ. ಅದರಲ್ಲಿ ಗಾಳಿಗ್ ತೆಕ್ಕಿನ ತುಡರ್, ಮಾಜಂದಿ ಬರವು, ಬೆಚ್ಚ ನೆತ್ತೆರ್, ಕಡಲ್, ಉಡಲೇ ಮೋಕೆದ ಕಡಲ್, ಸ್ವಾತಿದ ಬರ್ಸ, ಧ್ರುವ ನಕ್ಷತ್ರ, ಪುಲ್ಯಾನಗ, ಗಳಿಗೆದುಲಾಯಿ, ಉಲಾಯಿಡುಲ್ಲೆರ್, ಗಂಗೆ ಗೌರಿ, ಬಯ್ಯಮಲ್ಲಿಗೆ, ಮಲ್ಲಕ್ಕನ ಇಲ್ಲೊಕ್ಕೆಲ್ ಇತ್ಯಾದಿ 100 ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ವೃತ್ತಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಇವರು ಪ್ರವೃತ್ತಿಯಲ್ಲಿ ನಾಟಕ ಕಲಾವಿದರಾಗಿ, ಧಾರ್ಮಿಕ ಭಾಷಣಕಾರರಾಗಿ, ಹಿನ್ನೆಲೆ ಗಾಯಕರಾಗಿ, ಕಾರ್ಯಕ್ರಮ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ತುಳುರಂಗಭೂಮಿ ನನಗೆ ಅನ್ನ,ಹೆಸರು ಎರಡನ್ನೂ ನೀಡಿದೆ ಎಂದೇಳುವ ರಂಗಯ್ಯ ಬಲ್ಲಾಳ್‌ರವರು ತನ್ನೊಡಲಲ್ಲಿ ಬೆಟ್ಟದಷ್ಟು ನೋವು ತುಂಬಿಕೊಂಡಿದ್ದರು ಅದೆನ್ನೆಲ್ಲ ಮರೆತು ಒಬ್ಬ ಹಾಸ್ಯ ಕಲಾವಿದರಾಗಿ ಜನರನ್ನು ನಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಲಾಸೇವೆ ನಾಡಿನಾದ್ಯಂತ ಪಸರಿಸಲಿ ಎನ್ನುವುದೆ ಅವರ ಅಭಿಮಾನಿಗಳ ಹಾರೈಕೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.