ಪುಣಚ ಗ್ರಾಪಂ ಸಭಾಂಗಣ ` ಅನುಭವ ಮಂಟಪ’ ಹಾಗೂ ಗ್ರಂಥಾಲಯ ಕಟ್ಟಡ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1
  • ಜನತೆಗೆ ನ್ಯಾಯ, ಬೇಡಿಕೆಗಳಿಗೆ ಸ್ಪಂದನೆ ಕೊಡುವ ಕೆಲಸ ಅನುಭವ ಮಂಟಪದಿಂದಾಗಲಿ : ಸಂಜೀವ ಮಠಂದೂರು

ಪುತ್ತೂರು: ಶ್ರೇಷ್ಠ ದಾರ್ಶನಿಕ ಬಸವಣ್ಣನವರ `ಅನುಭವ ಮಂಟಪ’ ಜಗತ್ತಿನ ಮೊದಲ ಪಾರ್ಲಿಮೆಂಟ್ ಆಗಿದೆ. ಇಲ್ಲಿಂದಲೇ ಸಮಾಜ ತಿದ್ದುವ ಮತ್ತು ಅಭಿವೃದ್ಧಿಯ ಕೆಲಸಗಳು ಆರಂಭಗೊಂಡಿದ್ದವು. ಅದೇ ರೀತಿಯಲ್ಲಿ ಪುಣಚ ಗ್ರಾಪಂನ ಅನುಭವ ಮಂಟಪದಿಂದ ಗ್ರಾಮಾಭಿವೃದ್ಧಿಯ ಕೆಲಸಗಳು ನಿತ್ಯ ನಿರಂತರವಾಗಿ ನಡೆಯಲಿದೆ. ಪಂಚಾಯತ್ ಗ್ರಾಮಾಭಿವೃದ್ಧಿಯ ಅನುಭವ ಮಂಟಪವಾಗಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುಣಚ ಗ್ರಾಮ ಪಂಚಾಯತ್‌ನ ನೂತನ ಸಭಾಂಗಣ `ಅನುಭವ ಮಂಟಪ’ ಹಾಗೂ ನೂತನ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸವನ್ನು ಪಂಚಾಯತ್ ಮಾಡಬೇಕು ಎಂದ ಶಾಸಕರು, ಮತದಾರರಿಗೆ ನ್ಯಾಯ ಕೊಡುವ ಕೆಲಸ, ಅವರ ಬೇಡಿಕೆಗಳಿಗೆ ಸ್ಪಂದನೆ ಕೊಡುವ ಕೆಲಸ `ಅನುಭವ ಮಂಟಪ’ದಿಂದ ಆಗಲಿ ಎಂದರು.ಸ್ವಚ್ಛ ಭಾರತದಿಂದ ಶ್ರೇಷ್ಠ ಭಾರತ ನಿರ್ಮಾಣವು ಪ್ರತಿಯೊಬ್ಬರಿಂದ ಆಗಬೇಕಾಗಿದೆ ಅದಕ್ಕಾಗಿ ನಮ್ಮ ಜ್ಞಾನ ಭಂಡಾರವನ್ನು ಪುಸ್ತಕಗಳನ್ನು ಓದುವ ಮೂಲಕ ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಗ್ರಂಥಾಲಯಗಳಿಗೆ ನಾವು ಭೇಟಿ ಕೊಡಬೇಕು ಎಂದು ಹೇಳಿ ಶುಭ ಹಾರೈಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಾರ್ಯಕ್ರಮ ಸಂಯೋಜನೆ ಮಾಡಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜರವರು ಮಾತನಾಡಿ, ಅನುಭವ ಮಂಟಪದಿಂದ ಸಮಾಜದ ಜನರಿಗೆ ಅನುಕೂಲತೆಗಳು ಸಿಗಲಿ ಆ ಮೂಲಕ ಗ್ರಾಮಾಭಿವೃದ್ಧಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಪಂಚಾಯತ್ ಒಂದು ಸ್ಥಳೀಯಾಡಳಿತವಾಗಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಪಂಚಾಯತ್‌ನ ಪಾತ್ರ ಬಹಳ ದೊಡ್ಡದು. ಆದ್ದರಿಂದ ಗ್ರಾಮಸ್ಥರು ಪಂಚಾಯತ್‌ಗೆ ಸಹಕಾರ ನೀಡಿ ಗ್ರಾಮಾಭಿವೃದ್ಧಿಯಲ್ಲಿ ತಮ್ಮ ಅನುಭವಗಳನ್ನು ಪಂಚಾಯತ್‌ನೊಂದಿಗೆ ಹಂಚಿಕೊಳ್ಳಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಕೊಳ್ನಾಡು ಕ್ಷೇತ್ರದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಪಂಚಾಯತ್ ಆಡಳಿತ ಮಂಡಳಿ ರಾಜಕೀಯ ರಹಿತವಾಗಿ ಕೆಲಸ ಮಾಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಪುಣಚ ಗ್ರಾಪಂ ಉತ್ತಮ ಉದಾಹರಣೆಯಾಗಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಗೆ ಗ್ರಾಮಾಭಿವೃದ್ಧಿಯ ಅನುಭವವನ್ನು ಹಂಚುವ ಕಾರ್ಯ ಪುಣಚದಿಂದ ಆರಂಭವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಬಂಟ್ವಾಳ ತಾಪಂ ಉಪಾಧ್ಯಕ್ಷ ಬಿ.ಎಮ್.ಅಬ್ಬಾಸ್ ಅಲಿ, ಜಿಪಂ ಸದಸ್ಯೆ ಜಯಶ್ರೀ ಕೋಡಂದೂರು, ಪುಣಚ ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ, ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ. ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಪುಣಚ ಗ್ರಂಥಾಲಯ ಮೇಲ್ವಿಚಾರಕಿ ಜಯಲಕ್ಷ್ಮೀ ಪ್ರಾರ್ಥಿಸಿದರು.ಪುಣಚ ಗ್ರಾಪಂ ಸದಸ್ಯ ಉದಯ ಕುಮಾರ್ ದಂಬೆ ಸ್ವಾಗತಿಸಿದರು. ಸದಸ್ಯೆ ನಳಿನಾಕ್ಷಿ ಎಂ. ವಂದಿಸಿದರು. ಸದಸ್ಯ ಬಾಲಕೃಷ್ಣ ಎಚ್. ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿಗಳಾದ ಮಮತಾ ಕಜೆಮಾರ್, ಸತ್ಯಪ್ರಕಾಶ್, ಉಸ್ಮಾನ್, ಅಶೋಕ್ ಹಾಗೂ ಗ್ರಂಥಾಲಯ ಇಲಾಖಾ ಸಿಬ್ಬಂದಿಗಳು ಸಹಕರಿಸಿದ್ದರು.

ಸನ್ಮಾನ
ಅನುಭವ ಮಂಟಪ ಹಾಗೂ ಗ್ರಂಥಾಲಯ ಕಟ್ಟಡ ಕಾಮಗಾರಿಯಲ್ಲಿ ಸಹಕರಿಸಿದ್ದ ಕಂಟ್ರಾಕ್ಟ್‌ದಾರ ನವೀನ್ ಚಂದ್ರ, ಗುತ್ತಿಗೆದಾರ ಲ್ಯಾನ್ಸಿ, ಶಶಿಧರ್ ಬಿ.ಕೆ, ಗ್ರಾಪಂನ ಸಿಬ್ಬಂದಿಗಳಾದ ರಾಮ ನಾಯ್ಕ, ಶಿವರಾಮ ಮೂಲ್ಯ, ಗ್ರಾಪಂ ಅಧ್ಯಕ್ಷ ಪ್ರತಿಭಾ ಶ್ರೀಧರ್ ಶೆಟ್ಟಿ, ಗ್ರಂಥಾಲಯ ಮೇಲ್ವಿಚಾರಕಿ ಜಯಲಕ್ಷೀರವರುಗಳನ್ನು ಈ ಸಂದರ್ಭದಲ್ಲಿ ಶಾಲು, ಹಾರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

` ಪಂಚಾಯತ್‌ನ ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ. ಐದು ವರ್ಷಗಳ ಆಡಳಿತಾವಧಿಯಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಸಹಕರಿಸಿದ ಸರ್ವ ಸದಸ್ಯರುಗಳಿಗೆ,ಶಾಸಕ, ಸಚಿವರುಗಳಿಗೆ, ಜನಪ್ರತಿನಿಧಿಗಳಿಗೆ, ರಾಜಕೀಯ ಮುಖಂಡರುಗಳಿಗೆ ಹಾಗೂ ಪುಣಚ ಗ್ರಾಮದ ಸಮಸ್ತ ಜನತೆಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾ, ಮುಂದೆಯೂ ಸಹಕಾರ ಬಯಸುತ್ತೇವೆ’ ಪ್ರತಿಭಾ ಶ್ರೀಧರ್ ಶೆಟ್ಟಿ, ಅಧ್ಯಕ್ಷರು ಪುಣಚ ಗ್ರಾಪಂ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.