ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

  • ಆಡಂಬರದ ಬದಲು ಸರಳ ಜೀವನ ನಮ್ಮದಾಗಬೇಕು: ಮಾಣಿಲ ಶ್ರೀ

ಪುತ್ತೂರು: ಧಾರ್ಮಿಕ ಶ್ರದ್ಧಾಕೇಂದ್ರಗಳು ನಮ್ಮದು ಎಂಬ ಭಾವನೆ ಜನರಲ್ಲಿ ಮೂಡಿದಾಗ ಮಾತ್ರ ಬ್ರಹ್ಮಕಲಶೋತ್ಸವಕ್ಕೆ ನಿಜವಾದ ಅರ್ಥ. ಆಡಂಬರದ ಜೀವನ ಬಿಟ್ಟು ಸರಳಜೀವನ ನಮ್ಮದಾಗಬೇಕು. ದೇವರಲ್ಲಿ ಭಕ್ತಿ, ನಂಬಿಕೆ, ಗುರುಹಿರಿಯರನ್ನು ಗೌರವಿಸುವ ಗುಣ ಜೀವನದಲ್ಲಿ ಅಳವಡಿಸಿಕೊಂಡಾಗ ಸಂತೃಪ್ತಿಯ ಜೀವನ ನಮ್ಮದಾಗುತ್ತದೆ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮಿಜಿ ಹೇಳಿದರು.

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಮಾ.೭ರಂದು ಸಂಜೆ ಪ್ರಥಮ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಆಶೀರ್ವಚನ ನೀಡಿದರು. ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳು ಹಿಂದುಗಳ ಪವಿತ್ರ ಶ್ರದ್ಧಾಕೇಂದ್ರಗಳು. ಅವುಗಳನ್ನು ಯಾವ ಜಾತಿ, ಸಮುದಾಯದಕ್ಕೆ ಸೇರಿದ್ದು ಎಂದು ಪ್ರಶ್ನಿಸಬಾರದು. ನಾವು, ನಮ್ಮದು ಎಂಬ ಭಾವನೆಯಿಂದ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ದೇವಸ್ಥಾನಕ್ಕೆ ಬ್ರಹ್ಮಕಲಶ ಮಾಡಿದರೆ ಸಾಲದು ದೇವಸ್ಥಾನಕ್ಕೆ ಸಂಬಂಧಿಸಿದ ಮನೆಯವರು ಪ್ರತಿನಿತ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಪ್ರತಿಜ್ಞೆ ಮಾಡಬೇಕು ಎಂದ ಅವರು, ಕೀಳರಿಮೆ ಬಿಟ್ಟು, ಧನಾತ್ಮಕ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇನ್ನೊಬ್ಬರ ವಿಚಾರದಲ್ಲಿ ಕಾಲಹರಣ ಮಾಡುವ ಗುಣವನ್ನು ಬಿಟ್ಟುಬಿಡಬೇಕು. ದೇವಸ್ಥಾನದೊಳಗೆ ಅಪಹಾಸ್ಯ ಮಾಡುವ ಭಾವನೆಗಳನ್ನು ಬಿಟ್ಟು ಬಿಡಬೇಕು ಎಂದು ಅವರು ಹೇಳಿದರು.

ಧಾರ್ಮಿಕ ಉಪನ್ಯಾಸ ನೀಡಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಸತ್ಕರ್ಮದಲ್ಲಿ ಪಾಲ್ಗೊಂಡಾಗ ಪುಣ್ಯ ಪ್ರಾಪ್ತಿಯಾಗಿ ಜೀವನ ಬಂಧನಗಳಿಂದ ಮುಕ್ತಿ ದೊರೆಯಲಿದೆ. ಹರಕೆ ಹೇಳಿ ಸೇವೆ ಮಾಡುವುದು ದೇವರಿಗೆ ನೀಡುವ ಒಂದು ರೀತಿಯ ಲಂಚ. ಅದು ದೇವರಿಗೆ ನೀಡುವ ಅಮಿಷ. ಆದರೆ ದೇವರು ದಡ್ಡನಲ್ಲಿ ಆಲೋಚಿಸುತ್ತಾನೆ. ಆ ರೀತಿಯ ಆರಾಧನೆಯಿಂದ ಫಲ ದೊರೆಯಲು ಸಾಧ್ಯವಿಲ್ಲ. ದೇವಾಲಯಗಳ ನಿಯಮಗಳನ್ನು ಪಾಲನೆ ಮಾಡಬೇಕು. ಅದರ ಬಗ್ಗೆ ಪ್ರಶ್ನಿಸಬಾರದು ಎಂದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಊರಿನ ದೇವಸ್ಥಾನಗಳ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದಲ್ಲಿ ಆ ಭಾಗದ ಜನರು ಜಾತಿ, ಧರ್ಮ ಬೇಧವಿಲ್ಲದೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತದೆ. ಜನರಲ್ಲಿ ನಾವು, ನಮ್ಮದು, ನಮ್ಮವರು ಎಂಬ ಐಕ್ಯತೆಯ ಭಾವನೆಯನ್ನು ವೃದ್ಧಿಸುತ್ತದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅಶೋಕ್ ಪಡಿವಾಳ್ ಮೂಡಾಯುರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಜೆ.ಕೊಟೇಚಾ, ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ಬನ್ನೂರು ಗ್ರಾ.ಪಂ ಸದಸ್ಯ ಅಣ್ಣಿ ಪೂಜಾರಿ, ಆಂಜನೇಯ ಯಕ್ಷಗಾನ ಕಲ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ವಿಘ್ನೇಶ್ ಮಡ್ ಬ್ಲಾಕ್ ನ ಮ್ಹಾಲಕ ಚಿದಾನಂದ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲೋಹಿನಿ ಹಾಗೂ ರಮಿತ ಪ್ರಾರ್ಥಿಸಿದರು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಮೂಡಾಯೂರು ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ಉಪಾಧ್ಯಕ್ಷ ಸೋಮಪ್ಪ ಗೌಡ ಬಡಾವು, ಪದಾಧಿಕಾರಿಗಳಾದ ಶ್ರೀಧರ ಪೂಜಾರಿ ಬಡಾವು, ಪುರುಷೋತ್ತಮ ಪೂಜಾರಿ ಅನಂತಿಮಾರು, ಶೀನಪ್ಪ ಪೂಜಾರಿ ಅನಂತಿಮಾರು, ಅಶೋಕ ಗೌಡ, ಆನಂದ ಗೌಡ ರೋಟರಿ ಪುರ, ದೇವಪ್ಪ ಗೌಡ ಕೆಮ್ಮಾಯಿ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ನೆಲ್ಲಿಕಟ್ಟೆ ಈಶ ಶಿಕ್ಷಣ ಸಂಸ್ಥೆಯ ಪಾಂಶುಪಾಲ ಗೋಪಾಲಕೃಷ್ಣ ಯಂ.ಎ ಕಾರ್ಯಕ್ರಮ ನಿರೂಪಿಸಿ, ರಾಮಣ್ಣ ಗೌಡ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ; ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೀರ್ನಹಿತ್ಲು ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಆರ್ಯಭಟ ಪ್ರಶಸ್ತಿ ಪುರಸ್ಕೃತ ಜಗದೀಶ್ ಆಚಾರ್ಯ ಬಳಗದವರಿಂದ ಸಂಗೀತ ಗಾನ ವೈಭವ ನಡೆಯಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಚತುಃಶುದ್ಧಿ, ಧಾರೆ, ಪಂಚಗವ್ಯ, ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳಶುದ್ಧಿ, ದಹನ, ಪ್ರಾಯಶ್ಚಿತ್ತ, ಪವಮಾನ ಹೋಮ, ಪ್ರಾಯಶ್ಚಿತ್ತ ಹೋಮ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಅಂಕುತಪೂಜೆ, ದುರ್ಗಾಪೂಜೆ, ಮಹಾಸುದರ್ಶನ ಹೋಮ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಬ್ರಹ್ಮಕಲಶದಲ್ಲಿ ಇಂದು(ಮಾ.8ರಂದು)..
ಬ್ರಹ್ಮಕಲಶದ ಅಂಗವಾಗಿ ಮಾ.೮ರಂದು ವಿವಿಧ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮ, ಸಂಜೆಯ ಸಭಾ ಕಾರ್ಯ ಕ್ರಮದಲ್ಲಿ ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.ಉಪನ್ಯಾಸಕ ಡಾ|ಶ್ರೀಶ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸಹಿತ ಹಲವು ಮಂದಿ ಅತಿಥಿಗಳು ಅಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಉಮಾಮಹೇಶ್ವರ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಗಾನಲಹರಿ, ಸಭಾ ಕಾರ್ಯಕ್ರಮದ ಬಳಿಕ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.