Breaking News

ಡಿಜಿಟಲೀಕರಣಕ್ಕಾಗಿ ಫೆಡರಲ್ ಬ್ಯಾಂಕ್‌ನಿಂದ ಮರ್ದಾಳ ಗ್ರಾ.ಪಂ. ದತ್ತು ಸ್ವೀಕಾರ

Puttur_Advt_NewsUnder_1
Puttur_Advt_NewsUnder_1

 

ಕಡಬ: ಭಾರತ ಸರ್ಕಾರದ ’ಡಿಜಿಟಲ್ ಇಂಡಿಯಾ’ ಯೋಜನೆಯಂತೆ ಮರ್ದಾಳ ಗ್ರಾಮ ಪಂಚಾಯತ್‌ನ್ನು ಡಿಜಿಟಲ್ ಗ್ರಾಮವಾಗಿ ರೂಪಾಂತರಿಸಲು ಫೆಡರಲ್ ಬ್ಯಾಂಕ್‌ನಿಂದ ದತ್ತು ಸ್ವೀಕಾರ ಕಾರ್ಯಕ್ರಮ ಮಾ.೭ರಂದು ಮರ್ದಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್‌ರವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಫೆಡರಲ್ ಬ್ಯಾಂಕ್‌ನ ಮಂಗಳೂರು ವಲಯದ ಮುಖ್ಯಸ್ಥ ಶ್ರೀಕಾಂತ್ ಕೆ.,ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಫೆಡರಲ್ ಬ್ಯಾಂಕ್‌ನ ಸುಳ್ಯ ಶಾಖಾ ಮುಖ್ಯಸ್ಥ ವಿಮರ್ಷರವರು, ಫೆಡರಲ್ ಬ್ಯಾಂಕ್‌ನ ಈ ವರ್ಷದ ಧ್ಯೇಯ ವಾಕ್ಯದಂತೆ ಗ್ರಾಹಕರ’ ಫಸ್ಟ್ ಚಾಯಿಸ್ ಫೆಡರಲ್ ಬ್ಯಾಂಕ್’ ಗುರಿಯನ್ನು ಈಡೇರಿಸುವ ದೃಷ್ಠಿಯಿಂದ ಹಾಗೂ ಸಮಾಜದ ಗ್ರಾಮೀಣ ಭಾಗವನ್ನು ಆರ್ಥಿಕವಾಗಿ ಹಾಗೂ ಸೌಲಭ್ಯದ ದೃಷ್ಠಿಯಿಂದ ಮೇಲೆತ್ತಬೇಕೆನ್ನುವ ಪ್ರಯತ್ನದ ಸಲುವಾಗಿ ಮರ್ದಾಳ ಗ್ರಾಮ ಪಂಚಾಯತನ್ನು ಡಿಜಿಟಲೀಕರಣದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದೇವೆ.

ಈ ಭಾಗದ ಜನತೆಯನ್ನು ತಾಂತ್ರಿಕವಾಗಿ ಸಬಲೀಕರಣಗೊಳಿಸುವ ದೃಷ್ಟಿಯಿಂದ ಅಭಿವೃದ್ಧಿಪರ ಕಾರ‍್ಯವನ್ನು ಪ್ರಾರಂಭಿಸಲಾಗುವುದು. ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಲು ಗ್ರಾಮದ ಪ್ರತಿಯೊಂದು ಮನೆಯವರು ಫೆಡರಲ್ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಬ್ಯಾಂಕ್ ಸಹ ಜನತೆಯ ಜೊತೆಗೆ ಕೈಜೋಡಿಸಿ ವಿವಿಧ ಹಂತಗಳ ಮೂಲಕ ಟಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಅತೀ ಸುಲಭವಾಗಿ ಬಳಸುವಂತೆ ಸಹಕರಿಸಲಿದೆ. ಗ್ರಾಹಕರು ಬ್ಯಾಂಕ್‌ನ ವ್ಯವಹಾರವನ್ನು ಶೇ.೮೫ರಷ್ಟು ಡಿಜಿಟಲ್ ಸೌಲಭ್ಯದ ಮೂಲಕ ನಿರ್ವಹಿಸುವುದು, ವ್ಯವಹಾರದ ಕ್ಷೇತ್ರಗಳಲ್ಲಿ ಕ್ಯುಆರ್ ಕೋಡ್ ಅಥವಾ ಸ್ವೀಪ್ ಮೆಷಿನ್ ಬಳಕೆಯ ಬಗ್ಗೆ ಪರಿಚಯವನ್ನು ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ. ಬ್ಯಾಂಕ್‌ನಿಂದ ದೊರೆಯುವ ಸೌಲಭ್ಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಯೋಜನೆಗಳು, ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್, ತಾ.ಪಂ.ಸದಸ್ಯೆ ಪಿ.ವೈ.ಕುಸುಮ, ಮರ್ದಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಕೆ., ಪಿಡಿಒ ಶೇಖರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಕಡಬ ಶಾಖಾ ವ್ಯವಸ್ಥಾಪಕ ಪ್ರಮೋದ ಬಿ.ಪಾಟೀಲ ಸ್ವಾಗತಿಸಿ, ಮರ್ದಾಳ ಗ್ರಾಮ ಪಂಚಾಯತ್ ಸದಸ್ಯ ಕೆ.ಸುಲೈಮಾನ್ ವಂದಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕ ತರುಣ್‌ರವರು ಕಾರ‍್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಅಭಿವೃದ್ಧಿ ಯೋಜನೆಗಳು:
ಕೇಪು, ಪಾಲೆತ್ತಡ್ಕ ಸರಕಾರಿ ಹಿ.ಪ್ರಾ.ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ, ಮರ್ದಾಳದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಜೀವನ್ ಜ್ಯೋತಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ಮಕ್ಕಳಿಗೆ ಊಟ ಮಾಡಲು ಟೇಬಲ್ ಹಾಗೂ ಚಯರ್, ಸ್ವ ಉದ್ಯೋಗಕ್ಕಾಗಿ ಬಾಳೆ ಎಲೆ ತಟ್ಟೆ ಮಾಡುವ ಯಂತ್ರವನ್ನು ಜೀವನ್ ಜ್ಯೋತಿ ಶಾಲೆಗೆ ನೀಡುವುದು, ಮರ್ದಾಳ ಗ್ರಾಮ ಪಂಚಾಯತನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವುದು, ಯುವ ಜನತೆ ಹಾಗೂ ವೃದ್ಧರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು, ರಸ್ತೆನಿಯಮ, ಕೃಷಿಗೆ ಸಂಬಂಧಿಸಿದಂತೆ ಹಾಗೂ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿ ಕಾರ‍್ಯಾಗಾರ ಹಮ್ಮಿಕೊಳ್ಳುವುದು, ಕಡಬ ಸರಕಾರಿ ಮಾ.ಹಿ.ಪ್ರಾ.ಶಾಲೆಗೆ ಸುಸಜ್ಜಿತ ಶೌಚಾಲಯ ನಿರ್ಮಾಣದ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಫೆಡರಲ್ ಬ್ಯಾಂಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.