ಸಮಾನತೆ ಮಾತಿನಲ್ಲಿ ಮಾತ್ರವಲ್ಲ ಕಾರ್ಯರೂಪದಲ್ಲೂ ಇರಲಿ: ವಿಶ್ವ ಮಹಿಳಾ ದಿನಾಚರಣೆ ರಾಷ್ಟ್ರೀಯ ಪೋಷಣ್ ಅಭಿಯಾನದಲ್ಲಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು

  • ಮಹಿಳಾ ಕಾನೂನು ಬಲಿಷ್ಠವಾಗಬೇಕು – ರಾಧಾಕೃಷ್ಣ ಬೋರ್ಕರ್
  • ಜಾಲತಾಣದಲ್ಲ ಮಹಿಳೆಯ ದೂಷಣೆ ಬದಲು ಸಾಧನೆ ಗುರುತಿಸಿ – ಶ್ರೀಲತಾ
  • ಸಮ ದೃಷ್ಟಿ ಬಂದಾಗ ಮಾತು ಚೆನ್ನಾಗಿರುತ್ತದೆ – ಸರಸ್ವತಿ
  • ನಾಯಕತ್ವದ ಗುಣ ಬೆಳೆದಿದೆ – ಮಮತಾ

ಪುತ್ತೂರು: ಸರಕಾರ ಅನೇಕ ಸ್ವಾವಲಂಭಿ ಯೋಜನೆಯನ್ನು ಮಹಿಳೆಯರಿಗಾಗಿ ಹಾಕಿ ಕೊಟ್ಟಿದೆ. ಆ ಮೂಲಕ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಸಾಧಕಿಯಾದರೂ ಕೂಡಾ ಅವಳ ಮೇಲಿನ ಶೋಷಣೆ ಇನ್ನು ಕಡಿಮೆ ಆಗಿಲ್ಲ. ಮಹಿಳೆಯ ಮೇಲಿನ ಸಮಾನತೆ ಕೇವಲ ಮಾತಿನಲ್ಲಿ ಮಾತ್ರವಲ್ಲ ಕಾರ್ಯರೂಪದಲ್ಲೂ ಇರಬೇಕು ಎಂದು ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನೇತ್ರಾವತಿ ಸ್ತ್ರೀಶಕ್ತಿ ಬ್ಯಾಂಕ್ ಪುತ್ತೂರು, ಅಸಹಾಯಕರ ಸೇವಾ ಟ್ರಸ್ಟ್ ಪುತ್ತೂರು, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರಿಯ ಸಂಘ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮಾ.೧೦ರಂದು ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಪೋಷಣ್ ಅಭಿಯಾನದ ೧೫ ದಿನಗಳು ನಡೆಯುವ ಪೋಷಣ್ ಪಕ್ವಾಡ್ ದಿವಸ್ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಇತಿಹಾಸದ ಪುಟಗಳನ್ನು ತೆರೆದಾಗ ಎಷ್ಟೋ ಸಾಧಕಿ ಮಹಿಳೆಯರನ್ನು ನೋಡಬಹುದು. ಆದರೂ ಇವತ್ತಿನ ದಿನದಲ್ಲಿ ಯಾವ ರೀತಿಯ ಸುರಕ್ಷತೆ ಇದೆ ಎಂಬುದನ್ನು ಅವಲೋಕಿಸಬೇಕು. ಎಷ್ಟೋ ಶೋಷಣೆ, ಬೇರೆ ಬೇರೆ ಒತ್ತಡಗಳಿಗೆ ಸಿಲುಕಿದ ಮಹಿಳೆಯರನ್ನು ನಾವು ನೋಡುತ್ತಿದ್ದೇವೆ. ಸರಕಾರ ಜನಜಾಗೃತಿ, ಅನೇಕ ಸ್ವಾವಲಂಭಿ ಕಾರ್ಯಕ್ರಮ ಹಾಕಿ ಕೊಟ್ಟರೂ ಸಮಾನತೆ ಮಾತಿಗೆ ಮಾತ್ರ ಸೀಮಿತ ಆಗಿದೆ. ಸಮಾಜವನ್ನು ಆಳುವಂತಹ ಮತ್ತು ಗುರುತಿಸಿ ಕೊಂಡ ಮಹಿಳೆಯರ ಮೇಲಿನ ಶೋಷಣೆ ಕಡಿಮೆ ಆಗಿಲ್ಲ. ಸಾಧಕಿಯಾದ ಮಹಿಳೆಯೂ ಸರಿಯಾದ ರೀತಿಯಲ್ಲಿ ಸಮಾನತೆ ಪಡೆಯಲು ಸಾಧ್ಯ ಆಗಿಲ್ಲ ಎಂದರು. ಒಟ್ಟಿನಲ್ಲಿ ನಮ್ಮ ಮನದೊಳಗೆ ಮಹಿಳೆಯ ಮೇಲಿನ ಗೌರವ ತುಂಬುವ ಕೆಲಸ ಆಗಬೇಕೆಂದರು.

ಮಹಿಳಾ ಕಾನೂನು ಬಲಿಷ್ಠವಾಗಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಇವತ್ತು ಎಲ್ಲಾ ತಾಯಂದಿರಿಗೂ ಸಮಾನವಾದ ಗೌರವ ಸಿಗುತ್ತಿದೆ. ಹಿಂದೆ ಪುರುಷ ಪ್ರದಾನ ಆಗಿತ್ತು. ನಮ್ಮಲ್ಲಿ ಇಚ್ಛಾ ಶಕ್ತಿ ಇದ್ದರೆ ಸಾಧನೆ ಮಾಡಿ ತೋರಿಸಬಹುದು. ಗುರುತಿಸುವಿಕೆ ಇನ್ನೋಬ್ಬರಿಗೆ ಪ್ರೇರಣೆ ಆಗಬೇಕು. ಇವತ್ತು ಎಲ್ಲಾ ತಾಯಂದಿರು ಸ್ವಸಹಾಯ ಸಂಘಗಳ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ಮಹಿಳೆಯ ಮೇಲಿನ ಅತ್ಯಾಚಾರ, ದೌರ್ಜನ್ಯದ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳು ಕಾನೂನಿನ ಬಲೆಯಿಂದ ತಪ್ಪಿಸುವ ಕೆಲಸ ಆಗುತ್ತಿದೆ. ನಿರ್ಬಯ ಅತ್ಯಾಚಾರಿಗಳು ಇವತ್ತು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕಾನೂನಿಂದ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕಾನೂನು ಇನ್ನಷ್ಟು ಬಲಗೊಳ್ಳಬೇಕು. ಆಗ ತಾಯಂದಿರ ಬಗ್ಗೆ ಅಗೌರವ ಕಡಿಮೆ ಆಗಿ ಗೌರವ ಹೆಚ್ಚುತ್ತದೆ. ಸಮಾಜದಲ್ಲಿ ಒಳ್ಳೆಯ ಕೆಲಸಕ್ಕೆ ಗೌರವ ಕೊಡಲೇ ಬೇಕು. ಒಬ್ಬ ಪುರುಷನ ಹಿಂದೆ ಮಹಿಳೆಯ ಪಾತ್ರ ಇದ್ದಂತೆ ಮಹಿಳೆಯ ಸಾಧನೆ ಹಿಂದೆಯೂ ಪುರುಷನ ಪಾತ್ರ ಬಹಳಷ್ಟಿದೆ. ನಮ್ಮಲಿ ಅಸಮಾನಾತೆ ಬೇಡ. ನಾವೆಲ್ಲ ಒಂದೆ ಎಂದು ಹೇಳಿದರು.

ಜಾಲತಾಣದಲ್ಲ ಮಹಿಳೆಯ ದೂಷಣೆ ಬದಲು ಸಾಧನೆ ಗುರುತಿಸಿ:
ಶಿಶು ಅಭಿವೃದ್ಧಿಯೋಜನಾಧಿಕಾರಿ ಶ್ರೀಲತಾ ಅವರು ಮಾತನಾಡಿ ಮಹಿಳಾ ದಿನಚಾರಣೆ ೩೬೫ ದಿನವೂ ಇರಬೇಕು. ಯಾಕೆಂದರೆ ಸಂವಿಧಾನ ಬದ್ದ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಸಮಾನ ಸ್ಥಾನ ಮಾನ ಕೊಟ್ಟಿದೆ. ಈ ಕುರಿತು ನಾವು ಸ್ವಾತಂತ್ರ್ಯ ಪೂರ್ವ ಮತ್ತು ಪ್ರಸ್ತುತ ದಿನಗಳ ಮಹಿಳೆಯರ ಸ್ಥಾನ ಮಾನ ಹೇಗಿದೆ ಎಂದು ಅವಲೋಕನೆ ಮಾಡಿದರೆ ಇವತ್ತು ಸುಧಾರಿಕೆ ಆಗಿದೆಯಾದರೂ ಎಲ್ಲೋ ಒಂದು ಕಡೆ ಮಹಿಳೆಗೆ ಸಿಗಬೇಕಾದ ಸ್ಥಾನ ಮಾನ ಸಿಕ್ಕಿಲ್ಲ. ಮಹಿಳಾ ದಿನಾಚರಣೆಯ ದಿನವೇ ಮಹಿಳೆಯರು ಕಚ್ಚಾಡುವ ಚಿತ್ರವನ್ನು ವಾಟ್ಸಾಪ್ ಮೂಲಕ ಹರಿಯ ಬಿಟ್ಟಿದ್ದನ್ನು ನೋಡಿದ್ದೇವೆ. ಇದರಿಂದ ಮಹಿಳೆಯರನ್ನು ದೂಷಿಸುವ ಕೆಲಸ ಇನ್ನೂ ನಡೆಯುತ್ತಿದೆಯೋ ಎಂಬ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರನ್ನು ದೂಷಿಸುವ ಬದಲು ಮಹಿಳಾ ಸಾಧಕರನ್ನು ಗುರುತಿಸುವ ಕೆಲಸ ಆಗಬೇಕು ಎಂದರು. ಯಾಕೆಂದರೆ ಕಚೇರಿ ಅಥವಾ ಮನೆ ಇರಬಹುದು ಎಲ್ಲವನ್ನು ಸಮಾನತೆಯಿಂದ ಕಾಪಾಡುವುದು ಮಹಿಳೆ. ಆಕೆ ಕ್ಷಮಯಾ ಧರಿತ್ರಿ ಆಗಿದ್ದಾಳೆ. ಎಷ್ಟೋ ಕಷ್ಟಗಳನ್ನು ಮಡಿಲಿನಲ್ಲಿ ಇಟ್ಟು ಕೊಂಡು ಸಮಾನತೆಯನ್ನು ಕಾಪಾಡುತ್ತಾಳೆ ಎಂದರು.

ಸಮ ದೃಷ್ಟಿ ಬಂದಾಗ ಮಾತು ಚೆನ್ನಾಗಿರುತ್ತದೆ:
ನಿವೃತ ಸಹಾಯಕ ಶಿಶುಅಭಿವೃದ್ದಿ ಯೋಜನಾಧಿಕಾರಿ ಸರಸ್ವತಿ ಅವರು ಮಾತನಾಡಿ ಮಹಿಳೆಯರಿಗೆ ಶಿಕ್ಷಣ, ಸ್ವಾವಲಂಭನೆ ಕುರಿತು ಸರಕಾರ ಯೋಜನೆ ಹಾಕಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣದಲ್ಲಿ ಮಹಿಳೆಯರೇ ಮುಂದಿದ್ದಾರೆ. ಶಿಕ್ಷಣ ಪಡೆದರೂ ಕೂಡ ಸಮಾಜದಲ್ಲಿ ಅವರು ಬದುಕುವ ರೀತಿ ನೋಡಿದಾಗ ಮಾನವೀಯ ಮೌಲ್ಯ ಇನ್ನು ಎಲ್ಲರಲ್ಲೂ ಮೂಡಿಲ್ಲ ಎಂದ ಅವರು ನೈತಿಕ ಮತ್ತು ಮಾನವೀಯ ಮೌಲ್ಯ ಬೆಳೆದಾಗ ಆ ವ್ಯಕ್ಯಿ ಪರಿಪೂರ್ಣನಾಗುತ್ತಾನೆ. ದೌರ್ಜನ್ಯದಿಂದ ಮುಕ್ತಿ ಕಾಣಬೇಕಾದರೆ ನಮ್ಮಲ್ಲಿರುವ ಭಾವನಾತ್ಮಕ ಸಮಸ್ಯೆ ಕೊನೆಗೊಳ್ಳಬೇಕು ಮತ್ತು ಕಣ್ಣು ಮತ್ತು ನಾಲಿಗೆಯನ್ನು ಜಯಿಸಿದ ವ್ಯಕ್ತಿ ಎಲ್ಲರ ಜೊತೆ ಸಮನಾತೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸಮ ದೃಷ್ಟಿ ಬಂದಾಗ ಮಾತು ಚೆನ್ನಾಗಿರುತ್ತದೆ ಹಾಗೂ ನಾವು ಸದಾಚಾರದ ಕಡೆ ಹೋಗುತ್ತೇವೆ ಎಂದರು.

ನಾಯಕತ್ವದ ಗುಣ ಬೆಳೆದಿದೆ:
ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಜಿಲ್ಲಾ ಕಾರ್ಯದರ್ಶಿ ಮಮತಾ ಅವರು ಮಾತನಾಡಿ ಸ್ತ್ರಿಶಕ್ತಿ ಗುಂಪಿನಲ್ಲಿ ಗ್ರಾಮೀಣ ಪ್ರದೇಶದ ಬಹಳಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ. ಇವತ್ತು ಎಷ್ಟೋ ಮಹಿಳೆಯರು ಮಹತ್ವದ ಸ್ಥಾನ ಪಡೆದಿದ್ದಾರೆ. ನಾಯಕತ್ವದ ಗುಣ ಬೆಳೆದಿದೆ, ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಡರಾಗಿದ್ದಾರೆ ಎಂದರು.

ಸಾಧಕಿಯರಿಗೆ ಸನ್ಮಾನ:
ಸಾಧಕರಾದ ಆಲಂಗಾರು ವಲಯದ ಮನವಳಿಕೆ ಅಂಗನವಾಡಿ ಕಾರ್ಯಕರ್ತೆ ಮೋಹಿನಿ, ಸರ್ವೆಯ ಪ್ರಾಥಮಿಕ ಆರೋಗ್ಯಕೇಂದ್ರದ ಆಶಾ ಕಾರ್ಯಕರ್ತೆ ಸುಲೋಚನ ಅವರಿಗೆ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಭವಾನಿ ಮತ್ತು ಅಮಿತಾ ಹರೀಶ್ ಸನ್ಮಾನಿತರನ್ನು ಪರಿಚಯಿಸಿದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸ್ತ್ರೀಶಕ್ತಿ ಗುಂಪುಗಳಿಗೆ ಮತ್ತು ಕಾರ್ಯಕರ್ತೆಯರಿಗೆ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಮೇಲ್ವಿಚಾರಕಿಯರಾದ ಸುಜಾತ, ಸರೋಜಿನಿ ಬಿಳಿನೆಲೆ, ಹೇಮರಾಮ್‌ದಾಸ್, ವಾಣಿ ಶ್ರೀಧರ್, ಹೇಮ, ರತ್ನಾವತಿ ಅತಿಥಿಗಳನ್ನು ಗೌರವಿಸಿದರು. ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಅಮಿತಾ ಹರೀಶ್ ಸ್ವಾಗತಿಸಿದರು. ಮೇಲ್ವಿಚಾರಕಿ ವನಿತಾ ವಂದಿಸಿದರು. ಜಲಜಾಕ್ಷಿ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.