Breaking News

ಗೆಜ್ಜೆಗಿರಿಯ ಹೊರೆ ಕಾಣಿಕೆ ಮರು ಸಮರ್ಪಣೆ, ದೇವಸ್ಥಾನ, ದೈವಸ್ಥಾನ, ಆಶ್ರಮ, ಶಾಲೆ ಅಂಗನವಾಡಿಗೆ ರವಾನೆ ಬಡವರ ಮನೆ ಶುಭ ಕಾರ್ಯಕ್ಕೂ ಸುವಸ್ತುಗಳ ಸದ್ಬಳಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವೈಭವ ಮತ್ತು ಹೊರೆಕಾಣಿಕೆ ವೈಭವದ ಮೂಲಕ ಕರಾವಳಿಯಲ್ಲೇ ಹೊಸ ದಾಖಲೆ ನಿರ್ಮಿಸಿರುವ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತ್‌ಲ್, ಇದೀಗ ಹೊರೆ ಕಾಣಿಕೆ ಮರು ಸಮರ್ಪಣೆಯಲ್ಲೂ ಇತಿಹಾಸ ನಿರ್ಮಿಸಿದೆ. ಕ್ಷೇತ್ರಕ್ಕೆ ತುಳುನಾಡು ಮತ್ತು ಹೊರನಾಡುಗಳಿಂದ ಹರಿದು ಬಂದ ಹೊರೆಕಾಣಿಕೆಯಲ್ಲಿ ಶೇಷ ಭಾಗವನ್ನು ಸಾನಿಧ್ಯ ಕ್ಷೇತ್ರಗಳು, ಶಾಲೆ, ಅಂಗನವಾಡಿ, ಆಶ್ರಮ ಸೇರಿದಂತೆ ಒಟ್ಟು 48 ಕ್ಷೇತ್ರಗಳಿಗೆ ಮರು ಸಮರ್ಪಣೆ ಮಾಡುವ ಮೂಲಕ ಗೆಜ್ಜೆಗಿರಿಯ ಹೊರೆಕಾಣಿಕೆ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ. 25ರಂದು ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆದಿತ್ತು. ದಕ್ಷಿಣಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಹಾಸನ, ಭಟ್ಕಳ ಮುಂತಾದ ಭಾಗಗಳಿಂದ ಹೊರೆಕಾಣಿಕೆ ಸಲ್ಲಿಸಲಾಗಿತ್ತು. ದಾಖಲೆ ಪ್ರಮಾಣದ ಅಕ್ಕಿ, ತರಕಾರಿ, ಬಾಳೆ ಗೊನೆ, ಅಕ್ಕಿ ಮುಡಿ, ಬೆಲ್ಲ, ಸಕ್ಕರೆ, ಎಣ್ಣೆ, ತುಪ್ಪ ಸೇರಿದಂತೆ ಜೀನಸು ಸಾಮಗ್ರಿಗಳು ಸಂಗ್ರಹಗೊಂಡಿದ್ದವು. ಪಚ್ಚೆದೈಸಿರಿ ಹೆಸರಿನ ಉಗ್ರಾಣದಲ್ಲಿ ಇವುಗಳನ್ನೆಲ್ಲ ವ್ಯವಸ್ಥಿತವಾಗಿ ಜೋಡಿಸಿಡಲಾಗಿತ್ತು.

8 ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಸಂದರ್ಭದಲ್ಲಿ ಉಗ್ರಾಣದಲ್ಲಿ ಸಂಗ್ರಹಗೊಂಡ ಸುವಸ್ತುಗಳನ್ನು ಬಳಸಿಕೊಳ್ಳಲಾಗಿತ್ತು ಮತ್ತು ಸುಮಾರು 6 ಲಕ್ಷಕ್ಕಿಂತಲೂ ಅಧಿಕ ಭಕ್ತರಿಗೆ ಅನ್ನದಾನ ನೀಡಲಾಗಿತ್ತು. ಇಷ್ಟಾದ ಬಳಿಕವೂ ಬ್ರಹ್ಮಕಲಶೋತ್ಸವದ ಬಳಿಕ ಸಾಕಷ್ಟು ಸುವಸ್ತುಗಳು ಉಳಿಕೆಯಾಗಿತ್ತು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸೂಕ್ತ ನಿರ್ಧಾರವೊಂದನ್ನು ಕೈಗೊಳ್ಳುವ ಮೂಲಕ ಉಳಿಕೆ ಹೊರೆಕಾಣಿಕೆ ಸುವಸ್ತುಗಳನ್ನು ಮರು ಸಮರ್ಪಣೆ ಮಾಡಲು ನಿರ್ಧರಿಸಲಾಯಿತು.

ಅದರಂತೆ 32 ದೇವಸ್ಥಾನ, ದೈವಸ್ಥಾನಗಳು, 7 ಆಶ್ರಮಗಳು ಮತ್ತು 9 ಶಾಲೆ, ಅಂಗನವಾಡಿಗಳಿಗೆ ಅಕ್ಕಿ, ತರಕಾರಿ, ಎಣ್ಣೆ, ಬೇಳೆ, ಬೆಲ್ಲ ಇತ್ಯಾದಿಗಳನ್ನು ವಿತರಿಸಲಾಗಿದೆ. ಬ್ರಹ್ಮಕಲಶೋತ್ಸವ ನಡೆಯಲಿರುವ ದೇವಾಲಯಗಳು, ಉತ್ಸವ, ನೇಮೋತ್ಸವ, ಜಾತ್ರೆ ನಡೆಯುವ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಲಾಗಿತ್ತು. ಇದಲ್ಲದೆ ಅಕ್ಷರ ದಾಸೋಹ ನಡೆಯುವ ಶಾಲೆಗಳು, ಆಶ್ರಮಗಳಿಗೂ ಆದ್ಯತೆ ನೀಡಿ ಸುವಸ್ತುಗಳನ್ನು ಪೂರೈಸಲಾಗಿದೆ. ತರವಾಡು ಸಾನಿಧ್ಯಗಳು, ಮದುವೆ ಇನ್ನಿತರ ಶುಭ ಕಾರ್ಯ ಕೈಗೆತ್ತಿಗೊಂಡಿರುವ ಬಡವರ ಮನೆಗಳಿಗೂ ನೀಡಲಾಗಿದೆ. ಈ ಮೂಲಕ ಗೆಜ್ಜೆಗಿರಿಗೆ ಭಕ್ತರ ಮೂಲಕ ಬಂದ ಸುವಸ್ತುಗಳು ಇನ್ನೂ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಸದ್ಬಳಕೆಯಾಗಿದೆ. ಶಾಲಾ ಮಕ್ಕಳಿಗೂ ಸಹಕಾರಿಯಾಗಿದೆ. ಆಶ್ರಮವಾಸಿಗಳಿಗೂ ನೆರವಾಗಿದೆ. ಇದು ನಿಜಕ್ಕೂ ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಮಹಿಮೆ ಎಂದು ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರ ಸಮತಿ ಅಧ್ಯಕ್ಷರಾದ ಜಯಂತ ನಡುಬೈಲ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪೀತಾಂಬರ ಹೇರಾಜೆ ಹೇಳಿದ್ದಾರೆ. ಹೊರೆಕಾಣಿಕೆ ಮೆರವಣಿಗೆ ಜಿಲ್ಲೆಯಲ್ಲೇ ದಾಖಲೆ ಬರೆದಿತ್ತು. ಈಗ ಮರು ಸಮರ್ಪಣೆಯಲ್ಲೂ ದಾಖಲೆ ಬರೆದಿರುವುದು ಹೆಮ್ಮೆಯ ಸಂಗತಿ ಎಂದು ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕರಾದ ರವಿ ಕಕ್ಕೆಪದವು ಹೇಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.