ಮಾ.15-16: ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

Puttur_Advt_NewsUnder_1
Puttur_Advt_NewsUnder_1
  • ಮೇಲ್ಛಾವಣೆ ಉದ್ಘಾಟನೆ – ಪುಷ್ಕರಿಣಿಯ ನೀಲ ನಕ್ಷೆ ಬಿಡುಗಡೆ ಸಮಾರಂಭ

ಪುತ್ತೂರು: ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮಾ.೧೫ ಮತ್ತು ೧೬ರಂದು ವೈಭವದಿಂದ ನಡೆಯಲಿದ್ದು ದೇವಳದ ನಿರ್ಮಾಣಗೊಂಡ ಮೇಲ್ಛಾವಣಿ ಉದ್ಘಾಟನೆ ಮತ್ತು ಸುಮಾರು ೬೦ ಲಕ್ಷದಲ್ಲಿ ಅಭಿವೃದ್ಧಿಗೊಳ್ಳಲಿರುವ ಪುಷ್ಕರಣಿಯ ನೀಲ ನಕ್ಷೆಯ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ದೇವಳದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೆ.ಸುಂದರ ಗೌಡ ನಡುಬೈಲು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮಾ.೧೩ಕ್ಕೆ ಶ್ರೀ ದೇವರಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಮಾ.೧೫ಕ್ಕೆ ಶ್ರೀ ಮಹಾಮೃತ್ಯುಂಜಯ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ ವೀರಮಂಗಲದ ಶ್ರೀ ಕೃಷ್ಣ ಕಲಾ ಕೇಂದ್ರ ಇವರಿಂದ ತುಳು ನೃತ್ಯ ರೂಪಕ ‘ಕಾರ್ಣಿಕೊದಪ್ಪೆ ಕಲ್ಲುರ್ಟಿ’ ಪ್ರದರ್ಶನಗೊಳ್ಳಲಿದೆ. ರಾತ್ರಿ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಶ್ರೀ ದೇವರ ಉತ್ಸವ ಬಲಿ, ಸುಡುಮದ್ದು ಪ್ರದರ್ಶನ, ವಸಂತಕಟ್ಟೆ ಪೂಜೆ ನಡೆಯಲಿದೆ. ಮಾ.೧೬ಕ್ಕೆ ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಬಳಿಕ ದೈವದ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ ಎಂದು ಅವರು ಹೇಳಿದರು.

ಮೇಲ್ಛಾವಣಿ ಉದ್ಘಾಟನೆ, ಪುಷ್ಕರಿಣಿಯ ನೀಲ ನಕ್ಷೆ ಬಿಡುಗಡೆ:
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುಗುತ್ತು ಅವರು ಮಾತನಾಡಿ ದೇವಳಕ್ಕೆ ಸರಕಾರದಿಂದ ಲಭ್ಯವಾದ ರೂ. ೫ಲಕ್ಷ ಅನುದಾನದಲ್ಲಿ ಮೇಲ್ಛಾವಣಿ ನಿರ್ಮಾಣ ಮಾಡಲಾಗಿದೆ. ಸುಮಾರು ೧೭ಲಕ್ಷಕ್ಕೂ ಮಿಕ್ಕಿ ಇಂಟರ್‌ಲಾಕ್ ಅಳವಡಿಕೆ, ಆವರಣಗೋಡೆ ಸೇರಿದಂತೆ ವಿವಿಧ ಕಾಮಗಾರಿ ನಡೆಸಲಾಗಿದೆ. ಅದೇ ರೀತಿ ಮುಂದೆ ದೇವಳದ ಪುಷ್ಕರಿಣಿಯನ್ನು ಅಭಿವೃದ್ಧಿ ಪಡಿಸಲು ರೂ. ೬೦ಲಕ್ಷದ ಯೋಜನೆ ರೂಪಿಸಿದ್ದು, ಅದರ ನೀಲ ನಕ್ಷೆ ಸಿದ್ಧಗೊಂಡಿದೆ. ಮೇಲ್ಛಾವಣಿ ಉದ್ಘಾಟನೆ ಮತ್ತು ನೀಲ ನಕ್ಷೆಯ ಬಿಡುಗಡೆ ಕಾರ್ಯಕ್ರಮವನ್ನು ಮಾ.೧೫ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮುಜರಾಯಿ ಬಂದರು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಲಿದ್ದಾರೆ. ಪುಷ್ಕರಿಣಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಪ್ರಜ್ವಲಿಸಲಿದ್ದು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಕೃತಿ ವಿಕೋಪದಲ್ಲಿ ದೇವಳದ ಪಶ್ಚಿಮ ಭಾಗದಲ್ಲಿ ಜರಿದಿರುವ ಬರೆಗೆ ತಡೆಗೋಡೆ ನಿರ್ಮಾಣಕ್ಕಾಗಿ ಇದೇ ಸಂದರ್ಭದಲ್ಲಿ ಗುದ್ದಲಿ ಪೂಜೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ದನ ಜೋಯಿಸ ಕುತ್ತಿಗದ್ದೆ, ಜಯಾನಂದ ಆಳ್ವ ಅಜಲಾಡಿ, ಸೀತಾರಾಮ ಗೌಡ ಮುಂಡತ್ತೋಡಿ, ಗಣೇಶ್ ನಾಯ್ಕ್ ಕೋಡಿಬೈಲು, ಶಕುಂತಳಾ ನೀಲಪ್ಪ ಪೂಜಾರಿ ಕುರೆಮಜಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.