Breaking News

ಕಡಬದಾದ್ಯಂತ ಕೊರೋನಾ ಭೀತಿ ಹಿನ್ನಲೆ: ಕೋಳಿ ಮಾಂಸ, ಮೀನು ಖರೀದಿಯಿಂದ ದೂರವಾದ ಜನತೆ

Puttur_Advt_NewsUnder_1
Puttur_Advt_NewsUnder_1

ವಿಜಯ ಕುಮಾರ್ ಕಡಬ

  • ದಿಢೀರ್ ಕುಸಿತ ಕಂಡ ಕೋಳಿ ಧಾರಣೆ: ಮೀನು ಮಾರಾಟದಲ್ಲೂ ಕುಸಿತ !

ಕಡಬ: ಕಡಬದಲ್ಲಿ ಕೋರೋನಾ ಇದೆಯಂತೆ ಹೌದಾ? ಚೀನಾದಿಂದ ಕಡಬಕ್ಕೆ ವ್ಯಕ್ತಿಯೊಬ್ಬರು ಬಂದಿದ್ದಾರೆ ಎಂದು ಭಯಪಡುತ್ತಾ ಕಡಬದಾದ್ಯಂತ ಹಾಗೂ ಕಡಬದ ಹೊರವಲಯದಲ್ಲೂ ಮಾತು ಆರಂಭಿಸುವುದು ಮಾ.11ರಂದು ಸಹಜವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಭಯ ಹುಟ್ಟಿಸುವ ಸುದ್ದಿಗಳನ್ನು ಹರಿಯಬಿಟ್ಟು ಜನರಲ್ಲಿ ಆತಂಕ ಸೃಷ್ಠಿಸಿರುವುದಂತು ಸುಳ್ಳಲ್ಲ. ಇದಕ್ಕೆ ಕಾರಣವೂ ಇದೆ. ಮೂಲತಃ ಕಡಬ ಸಮೀಪದ ಬಲ್ಯದ ನಿವಾಸಿ, ಚೀನದಲ್ಲಿದ್ದ ವ್ಯಕ್ತಿಯೊಬ್ಬರು ಊರಿಗೆ ಆಗಮಿಸಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಇದಕ್ಕೆ ರೆಕ್ಕಪುಕ್ಕ ಸೇರಿಸಿ ಜನ ವಾಟ್ಸಾಪ್ ಮೆಸೇಜ್‌ಗಳಲ್ಲಿ ಹರಿಯ ಬಿಟ್ಟರು. ಈ ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಆ ವ್ಯಕ್ತಿಯ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆದರೆ ಆ ವ್ಯಕ್ತಿಗೆ ಯಾವುದೇ ಕೊರೋನಾ ಭಾದೆ ಇಲ್ಲ ಎನ್ನುವುದು ಖಚಿವಾಯಿತು. ಚೀನಾದ ಶಾಂಗ್ಯೆಯಲ್ಲಿ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದ ಬಲ್ಯದ ಜೋಸೆಫ್ ಎಂಬವರ ಪುತ್ರ ಸನೋಜ್(28) ಮೂರು ವರ್ಷಗಳ ಹಿಂದೆ ಅಲ್ಲಿಗೆ ತೆರಳಿದ್ದರು. ಇದೀಗ ಚೀನಾದಲ್ಲಿ ಕೊರೋನಾ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಅವರು ಊರಿಗೆ ವಾಪಾಸ್ಸಾಗಿದ್ದಾರೆ. ಮಾ.7ರಂದು ಕೊಲೊಂಬೋ ಏರ್‌ಲೈನ್ಸ್‌ಲ್ಲಿ ಬೆಂಗಳೂರಿಗೆ ಆಗಮಿಸಿ ಬಳಿಕ ಊರಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲೇ ತಪಾಸನೆಗೆ ಒಳಗಾಗಿ ಊರಿಗೆ ಬಂದಿರುವುದರಿಂದ ಅವರಿಗೆ ಕೊರೋನಾ ಸೋಂಕು ಇಲ್ಲ ಎಂದು ದೃಢಪಟ್ಟಿದೆ. ಊರಿಗೆ ಆಗಮಿಸಿದ ಬಳಿಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಕೂಡಾ ತಪಾಸನೆ ನಡೆಸಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಕಡಬ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್ ಕಡಬದಲ್ಲಿ ಯಾವುದೇ ಶಂಕಿತ ಕೊರೋನಾ ಪೀಡಿತರಿಲ್ಲ, ಯಾರಿಗೂ ಕೊರೋನಾ ಸೋಂಕು ತಗಲಿಲ್ಲ ಎಂದು ತಿಳಿಸಿದ್ದಾರೆ.

ದಿಢೀರ್ ಕುಸಿತ ಕಂಡ ಕೋಳಿ ಧಾರಣೆ:
ಕಡಬದ ಎಲ್ಲೆಡೆ ಕೊರೋನಾ ಭಯ ಆವರಿಸಿಕೊಂಡು ಜನ ಅನಗತ್ಯ ಆತಂಕದಲ್ಲಿದ್ದಾರೆ. ವ್ಯಾಪಾರ ವ್ಯವಹಾರದಲ್ಲೂ ಕುಸಿತ ಕಂಡಿದೆ, ಅದರಲ್ಲೂ ಫಾರಂ ಕೋಳಿ ವ್ಯಾಪಾರಸ್ಥರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ದಿಢೀರ್ ಬೆಲೆ ಕುಸಿತವಾಗಿರುವುದಲ್ಲದೆ, ವ್ಯವಹಾರ ಕೂಡಾ ಪಾತಾಳಕ್ಕಿಳಿದಿದೆ. ಎರಡು ದಿನಗಳ ಹಿಂದೆ ಒಂದು ಕೆಜಿ ಕೋಳಿ ಮಾಂಸಕ್ಕೆ ರೂ 150 ಇದ್ದರೆ ಮಂಗಳವಾರ ನೂರರ ಕೆಳಗೆ ಬಂದು ನಿಂತಿದೆ. ಕೆಲವೆಡೆ ೫೦-೬೦ರೂ ಕೆಜಿ ಮಾಂಸ ದೊರೆಯಲಾರಂಭಿಸಿದೆ. ಅರ್ಧಕ್ಕರ್ಧ ಮಾಂಸ ಮಾರಾಟ ಕುಸಿತ ಕಂಡಿದೆ. ಮರ್ಧಾಳದಲ್ಲಿ ಕೋಳಿ ಸಾಕಾಣೆ ಮಾಡುವ ವ್ಯಕ್ತಿಯೊಬ್ಬರು ಇಡೀ ಕೋಳಿಯನ್ನು ಕೆಜಿಗೆ ೨೫ -೩೦ ರೂನಲ್ಲಿ ಊರಿನವರಿಗೆ ಮಾರಾಟ ಮಾಡಿ ಫಾರ್ಮ್ ಖಾಲಿ ಮಾಡಿದ್ದು, ಅಗ್ಗದ ಮಾಲನ್ನು ಜನ ಖರೀಸಿದ್ದಾರೆ. ಆದರೆ ಭಯಗೊಂಡಿರುವ ಕೆಲವರು ಕೋಳಿ ಮಾಂಸ ತಿನ್ನುವುದನ್ನೇ ದೂರ ಮಾಡಿದ್ದಾರೆ.

ಮೀನು ಮಾರಾಟ ಕೂಡಾ ಕುಸಿತ:
ಕಡಬ ವಲಯದಲ್ಲಿ ಮೀನು ಮಾರಾಟ ಕೂಡಾ ಕುಸಿತ ಕಂಡಿದೆ, ಆದರೆ ಮೀನಿನ ಬೆಲೆ ಮಾತ್ರ ಅಷ್ಟೊಂದು ಇಳಿಕೆಯಾಗಿಲ್ಲ. ಜನ ಮುಗಿಬಿದ್ದು ಖರೀದಿಸುವ ಗೋಜಿಗೆ ಹೋಗುತ್ತಿಲ್ಲ. ಕಳೆದ ಒಂದು ವಾರದಿಂದ ಪೇಟೆಗೆ ಆಗಮಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ವ್ಯವಹಾರ ಕೊಂಚ ಕಡಿಮೆಯಾಗಿದೆ. ಹೋಟೇಲು, ಹಾಗೂ ಹಣ್ಣಿನ ವ್ಯಾಪಾರಕ್ಕೆ ದೊಡ್ಡ ಹೊಡೆತವಾಗಿಲ್ಲವಾದರೂ ಮಾಂಸಾಹಾರ ಹೋಟೇಲುಗಳಲ್ಲಿ ಕೋಳಿ ಐಟಮ್ ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೋಟೆಲ್ ಮಾಲಕರು ಹೇಳುತ್ತಿದ್ದಾರೆ. ಅಂತೂ ಕೊರೋನಾ ಎಫೆಕ್ಟ್ ಕಡಬ ಪೇಟೆಯಲ್ಲಿ ಅನಗತ್ಯ ಚರ್ಚೆ ಹಾಗೂ ವಸ್ತುಗಳ ದರ ಕುಸಿತಕ್ಕೆ ಕಾರಣವಾಗುತ್ತಿದೆ.

ಮದುವೆ ಕಾರ್‍ಯಕ್ರಮದಲ್ಲೊ ಮಾಂಸ ತಿನ್ನುವವರ ಸಂಖ್ಯೆ ಕುಸಿತ
ಮಾ.೧೧ರ ಮದುವೆ ಕಾರ್‍ಯಕ್ರಮದಲ್ಲಿ ಮಾಂಸಹಾರ ಇದ್ದರೂ ಮಾಂಸ ತಿನ್ನುವವರ ಸಂಖ್ಯೆ ಮಾತ್ರ ವಿರಳವಾಗಿತ್ತು. ಒಟ್ಟಾರೆಯಾಗಿ ಕಾರ್‍ಯಕ್ರಮದಲ್ಲೂ ಕೊರೋನಾದ್ದೆ ಸುದ್ದಿ, ಕೊರೋನಾ ಎಂಬ ಮಹಾಮಾರಿ ನಮ್ಮೂರಿಗೆ ಬರದೆ ಇರಲಿ ಎಂಬುದು ಎಲ್ಲರ ಆಶಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.