ವಿಕ್ಟರ್ ಪ್ರೌಢಶಾಲೆಯಲ್ಲಿ ಎಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1
  • ನಮ್ಮಲ್ಲಿನ ಶಕ್ತಿ, ದೌರ್ಬಲ್ಯ ಅರಿತು ಮುಂದುವರೆಯಿರಿ-ವಂ|ಸುನಿಲ್ ಜಾರ್ಜ್

ಪುತ್ತೂರು: ನಾನು ಯಾರು?, ನನ್ನ ಮುಂದಿರುವ ಜವಾಬ್ದಾರಿಗಳೇನು? ಎಂಬುದರ ಸಕಾರಾತ್ಮಕ ಚಿಂತನೆ ಹಾಗೂ ಧೋರಣೆಗಳನ್ನು ವಿದ್ಯಾರ್ಥಿನಿಯರು ಹೊಂದುವಂತಾಗಬೇಕು ಜೊತೆಗೆ ನಮ್ಮಲ್ಲಿನ ಶಕ್ತಿ ಮತ್ತು ದೌರ್ಬಲ್ಯಗಳ ಬಗ್ಗೆ ಅರಿವು ಹೊಂದುತ್ತಾ ಜೀವನದಲ್ಲಿ ಮುಂದುವರೆದಾಗ ಭವಿಷ್ಯ ಉತ್ತಮವಾಗುತ್ತದೆ ಎಂದು ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಂ|ಸುನಿಲ್ ಜಾರ್ಜ್ ಡಿ’ಸೋಜರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಾ.೧೨ ರಂದು ಜರಗಿದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಎಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಿಗೆ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಪಡೆದ ಮೌಲ್ಯಗಳು ಮತ್ತು ಅನುಭವಗಳು ಜೀವನದ ಪಾಠವಾಗಬೇಕು ಮಾತ್ರವಲ್ಲದೆ ಹಿರಿಯರು ಹಾಗೂ ಶಿಕ್ಷಕರು ಹೇಳುವ ಮಾತನ್ನು ಕೇಳುವ ಮನಸ್ಸು ವಿದ್ಯಾರ್ಥಿಗಳಲ್ಲಿ ಅಡಕವಾಗಿರಬೇಕು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಜ್ಞಾನ ಕೌಶಲ್ಯವನ್ನು ವಿದ್ಯಾರ್ಥಿಗಳು ಹೊಂದುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೋರ್ವರೂ ಉತ್ತಮ ನಾಗರಿಕರಾಗಿ ಬದುಕುವ ಸಾಗಿಸುವ ಮೂಲಕ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಪುತ್ತೂರಿನ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಬಗ್ಗೆ ಹಿರಿಯರು ಅತ್ತ್ಯುತ್ತಮ ಶಿಕ್ಷಣ ಸಂಸ್ಥೆಗಳು ಎಂಬ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಕೆ.ಜಿ ತರಗತಿಯಿಂದ ಪಿ.ಜಿ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಗಳಿಸುವ ಅಪೂರ್ವ ಅವಕಾಶವನ್ನು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳು ಒದಗಿಸಿವೆ. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶೇ.ನೂರು ಫಲಿತಾಂಶವನ್ನು ಗಳಿಸುವಂತಾಗಲಿ. ಮೌಲ್ಯಾಧಾರಿತ ಶಿಕ್ಷಣ ಪಡೆದು ಮೌಲ್ಯಾಧಾರಿತ ಜೀವನವನ್ನು ನಡೆಸುವ ಸೌಭಾಗ್ಯ ವಿದ್ಯಾರ್ಥಿಗಳದ್ದಾಗಲಿ ಎಂದರು.

ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ದಿನೇಶ್ ಸಾಲಿಯಾನ್ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ನಿಜ. ಆದರೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟರೆ ಮಾತ್ರ ಯಶಸ್ಸು ಒಲಿಯಲು ಸಾಧ್ಯ. ವಿದ್ಯಾರ್ಥಿಗಳು ಮಾಡಿದ ತಪ್ಪಿಗೆ ಶಿಕ್ಷಕರು ಶಿಕ್ಷೆಯನ್ನು ನೀಡುವುದು ಸಹಜ. ಆದರೆ ವಿದ್ಯಾರ್ಥಿಗಳು ತಮಗೆ ಶಿಕ್ಷೆ ನೀಡಿದ ಬಗ್ಗೆ ತಮ್ಮ ಹೆತ್ತವರಲ್ಲಿ ಹೇಳಿದಾಗ ಹೆತ್ತವರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡುವುದರ ಬದಲು ತಮ್ಮ ಮಕ್ಕಳು ತಪ್ಪುಗಳನ್ನು ಮಾಡಿದ್ದಾರೆಯೇ ಎಂಬುದನ್ನು ವಿಮರ್ಶೆ ಮಾಡಿಕೊಂಡು ಮುಂದುವರೆಯುವಂತಾಗಬೇಕು ಎಂದರು.

ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐವಿ ಗ್ರೆಟ್ಟಾ ಪಾಸ್ ಮಾತನಾಡಿ, ಪರೀಕ್ಷೆಯನ್ನು ಎದುರಿಸಬೇಕಾದರೆ ಶುಭ್ರವಾದ ಮನಸ್ಸು ಬೇಕಾಗುತ್ತದೆ. ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಕೆಡವಿ ಹಾಕೂವ ಮೂಲಕ ಮನಸ್ಸನ್ನು ಆರೋಗ್ಯಯುತವಾಗಿ ಮತ್ತು ದೇಹವನ್ನು ಶುದ್ಧವಾಗಿಡುವಲ್ಲಿ ವಿದ್ಯಾರ್ಥಿಗಳ ಚಿತ್ತ ಹರಿದಾಗ ಮುಂದೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಲು ಸಾಧ್ಯವಾಗುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋ ಮಾತನಾಡಿ, ವಿಕ್ಟರ್ ಪ್ರೌಢಶಾಲೆಯ ಪರಿಸರವು ವಿದ್ಯಾರ್ಥಿನಿಯರಿಗೆ ಉತ್ತಮ ಮೌಲ್ಯಗಳನ್ನು ಕಲಿಸಿದೆ. ಹೇಗೆ ಶಿಲ್ಪಿಯು ಕೆತ್ತನೆಯ ಮೂಲಕ ಕಲ್ಲನ್ನು ಉತ್ತಮ ಪ್ರತಿಮೆಯನ್ನಾಗಿ ರಚಿಸಲು ಸಾಧ್ಯವಾಗುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸಲು ಉತ್ತಮ ಶಿಕ್ಷಣದಿಂದ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿವೇತನ/ಬಹುಮಾನ ವಿತರಣೆ:
ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಮೌಸಿನಾ ತಸ್ರೀಫಾ, ಅವಿತಾ ಜಿ.ಪಾಸ್, ಹೇಮಲತಾ, ಸುಚಿತಾರವರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ತರಗತಿವಾರು ಏರ್ಪಡಿಸಿದ ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಮತ್ತು ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಶಾಲಾ ಮಂತ್ರಿಮಂಡಲದಲ್ಲಿ ಉತ್ತಮವಾಗಿ ಕಾರ್ಯಾಚರಿಸಿದ ಮಂತ್ರಿಮಂಡಲದ ನಾಯಕಿಯರಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು.

ಪ್ರಶಸ್ತಿ ಪತ್ರ ಹಸ್ತಾಂತರ:
ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿನಿಯರಾದ ಕನ್ನಡ ಮಾಧ್ಯಮದಲ್ಲಿ ಹವ್ಯಶ್ರೀ, ಆಂಗ್ಲ ಮಾಧ್ಯಮದಲ್ಲಿ ಭೂಮಿಕಾ ರೈ ಮತ್ತು ನೀತಿಶಿಕ್ಷಣ ವಿಭಾಗದ ಕನ್ನಡ ಮಾಧ್ಯಮದಲ್ಲಿ ರಿಶಲ್ ಕುಟಿನ್ಹಾ, ಆಂಗ್ಲ ಮಾಧ್ಯಮದಲ್ಲಿ ಅಲ್ಫಿಯಾ ಫ್ರೆನಿಟ ಫೆರ್ನಾಂಡೀಸ್ ಹಾಗೂ ಸಿಕ್ಕಿಂನಲ್ಲಿ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ಜೇನ್ ಇವ್ಯಾಂಜಲಿನ್ ಕುಟಿನ್ಹಾ, ದಿಶಾ ಪರ್ಲ್ ಮಸ್ಕರೇನ್ಹಸ್, ವೈಷ್ಣವಿ ಎ.ಎಸ್‌ರವರಿಗೆ ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಲಾಯಿತು. ಶಿಕ್ಷಕಿ ಹರಿಣಾಕ್ಷಿ ವಿಜೇತರ ಹೆಸರನ್ನು ಓದಿದರು.
ಶಾಲೆಯ ಎಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಪ್ರತಿನಿಧಿಗಳಾದ ಹವ್ಯಶ್ರೀ, ಧನ್ಯಶ್ರೀ, ರಿಶಲ್ ಜಾಸ್ಮಿನ್ ಡಿ’ಸೋಜ, ಭೂಮಿಕಾ ರೈಯವರು ಅನಿಸಿಕೆ ವ್ಯಕ್ತಪಡಿಸಿದರು. ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಲ್ಯಾರಿ ಪಿಂಟೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ರೂಪ ಡಿ’ಕೋಸ್ಟ ಸ್ವಾಗತಿಸಿ, ವಿದ್ಯಾರ್ಥಿನಿ ಐಶ್ವರ್ಯ ವಂದಿಸಿದರು. ಒಂಭತ್ತನೇ ತರಗತಿ ವಿದ್ಯಾರ್ಥಿನಿಯರು ಸರ್ವಧರ್ಮ ಪ್ರಾರ್ಥನೆ ಹಾಗೂ ವಿದಾಯ ಗೀತೆ ಹಾಡಿದರು. ವಿದ್ಯಾರ್ಥಿಗಳ ಪರವಾಗಿ ಶಾಲಾ ಉಪನಾಯಕಿ ರಿಶಿತಾ ಸುಹಾನಿ ಡಿ’ಸೋಜ ಹಾಗೂ ಶಿಕ್ಷಕರ ಪರವಾಗಿ ಶಾಬಿದಾರವರು ಎಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿನಿ ಅನನ್ಯ ಲೋಬೋ ಕಾರ್ಯಕ್ರಮ ನಿರೂಪಿಸಿದರು.

ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವವರಾಗಿ…
ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರ ದೂರದೃಷ್ಟಿತ್ವದ ಕನಸಿನೊಂದಿಗೆ ಆರಂಭಿಸಿದ ಸಂತ ವಿಕ್ಟರ್ ಪ್ರೌಢಶಾಲೆಗೆ ಪ್ರಸ್ತುತ ೭೮ರ ಹರೆಯವಾಗಿದೆ. ಇಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿನಿಯರು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಕಾನ್ವೆಂಟ್ ಶಾಲೆಯಲ್ಲಿ ಧರ್ಮಗುರುಗಳು, ಧರ್ಮಭಗಿನಿಯರು, ಶಿಕ್ಷಕರು ಮಾನವೀಯ ಮೌಲ್ಯಗಳಿಗೆ, ಉತ್ತಮ ಸಂಸ್ಕೃತಿ-ಸಂಸ್ಕಾರಗಳಿಗೆ, ಶಿಸ್ತಿಗೆ ಪ್ರಾಧಾನ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಬೆಳೆಸುತ್ತಾರೆ. ಪರೀಕ್ಷೆಗೆ ಉತ್ತಮವಾಗಿ ತಯಾರಿ ಮಾಡುವ ಮೂಲಕ ಉತ್ತಮ ಅಂಕಗಳನ್ನು ಪಡೆದು, ಮುಂದೆ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವವರಾಗಿ ಮೌರಿಸ್ ಮಸ್ಕರೇನ್ಹಸ್, ಉಪಾಧ್ಯಕ್ಷರು, ಚರ್ಚ್ ಪಾಲನಾ ಸಮಿತಿ, ಮಾಯಿದೆ ದೇವುಸ್ ಚರ್ಚ್

ಕಾರ್ಯಕ್ರಮದ ಮೊದಲಿಗೆ ಎಸೆಸ್ಸೆಲ್ಸಿ ವಿದ್ಯಾರ್ಥಿನಿಯರನ್ನು ಹಾಗೂ ಗಣ್ಯರನ್ನು ಶಾಲೆಯ ಬ್ಯಾಂಡ್ ವಾದ್ಯದೊಂದಿಗೆ ವೇದಿಕೆಗೆ ಕರೆತರಲಾಯಿತು. ಕಾರ್ಯಕ್ರಮದ ಕೊನೆಗೆ ಎಸೆಸ್ಸೆಲ್ಸಿ ವಿದ್ಯಾರ್ಥಿನಿಯರ ಕೈಯಲ್ಲಿರುವ ಮೊಂಬತ್ತಿಗಳನ್ನು ಎಸೆಸ್ಸೆಲ್ಸಿ ತರಗತಿಯ ಪ್ರತಿನಿಧಿಗಳ ಜೊತೆಗೂಡಿ ಉರಿಸುವ ಮೂಲಕ ಮುಂಬರುವ ಎಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನು ಗಳಿಸುವತ್ತ ಬೆಳಕನ್ನು ಹರಿಸುವ ಮೂಲಕ ವಿದ್ಯಾರ್ಥಿನಿಯನ್ನು ಬೀಳ್ಕೊಡಲಾಯಿತು.

ಪುತ್ತೂರು ಮಾಯಿದೆ ದೇವುಸ್ ಚರ್ಚ್‌ಗೆ ೨೦೧೪ರಲ್ಲಿ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಪ್ರಧಾನ ಧರ್ಮಗುರುಗಳಾಗಿ ಆಗಮಿಸಿ, ಶಾಲೆಯ ಸಂಚಾಲಕರಾಗಿ ಸೇವೆಗೈದು, ಇದೇ ಮೇ ತಿಂಗಳಲ್ಲಿ ಬೇರೆ ಚರ್ಚ್‌ಗೆ ವರ್ಗಾವಣೆಗೊಳ್ಳಲಿರುವ ಹಿನ್ನೆಲೆಯಲ್ಲಿ ವಂ|ಆಲ್ಫ್ರೆಡ್‌ರವರ ಧಾರ್ಮಿಕ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ವಂ|ಆಲ್ಫ್ರೆಡ್‌ರವರಿಗೆ ಮಲ್ಲಿಗೆ ಕೃಷಿಯು ಇಷ್ಟಪಾತ್ರವಾಗಿದ್ದರಿಂದ ಅವರಿಗೆ ಮಲ್ಲಿಗೆ ಗಿಡವನ್ನು ಈ ಸಂದರ್ಭದಲ್ಲಿ ಸ್ಮರಣಿಕೆಯನ್ನಾಗಿ ನೀಡಲಾಯಿತು. ಶಿಕ್ಷಕಿ ಅನೀಶ ಡಿ’ಸಿಲ್ವ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.