ಕೋಳಿಸಾಕಾಣಿಕೆ ರೈತರ ಬದುಕಿಗೆ ಸಂಕಷ್ಟ.. ಕೊರೊನಾ ಭೀತಿ-ಕೋಳಿ ಸಾಕಾಣಿಕೆಗೂ ಆತಂಕ

ಪುತ್ತೂರು: ಕೊರೊನಾ ವೈರಸ್‌ನಿಂದ ಜಗತ್ತಿನೆಲ್ಲೆಡೆ ಜನತೆ ಆತಂಕಕ್ಕೀಡಾಗಿದ್ದರೆ, ಇತ್ತ ಕೋಳಿ ಸಾಕಾಣಿಕೆದಾರರು ಭೀತಿಗೊಳಗಾಗಿದ್ದಾರೆ. ಪುತ್ತೂರು ತಾಲೂಕಿನಲ್ಲೂ ಕೋಳಿಸಾಕಾಣಿಕೆ ಮಾಡುತ್ತಿರುವ ನೂರಾರು ಮಂದಿ ರೈತರು ಇದೀಗ ಗೊಂದಲ, ಆತಂಕಕ್ಕೆ ಒಳಗಾಗಿದ್ದಾರೆ. ನರಿಮೊಗರಿನ ಕೋಳಿ ಸಾಕಾಣಿಕೆ ಪ್ರದೇಶದಲ್ಲಿ ಕೋಳಿ ಮರಿ ವಿತರಣಾ ಕಂಪೆನಿಯೊಂದು ಕೋಳಿ ಮರಿಗಳ ಮಾರಣ ಹೋಮ ಮಾಡಿರುವುದಾಗಿ ತಿಳಿದು ಬಂದಿದೆ.

ರಾಜ್ಯದ ವಿವಿಧೆಡೆ ಕೋಳಿ ಸಾಕಾಣಿಕೆ ನಡೆಸುವ ರೈತರು ತಮ್ಮ ಕೋಳಿಗಳನ್ನು ನಾಶ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದುಬರುತ್ತಿರುವುದು ದ.ಕ. ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ನಡೆಸುತ್ತಿರುವ ರೈತರಲ್ಲಿ ಇಲ್ಲದ ಭೀತಿ ಉಂಟು ಮಾಡುತ್ತಿದೆ. ಕೋಳಿಗಳಿಗೂ ಕೊರೊನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ ಎಂಬ ಮಾಹಿತಿ ಇದ್ದರೂ, ಜಾಲತಾಣಗಳಿಂದಾಗಿ ರೈತರ ಆತಂಕ ಹೆಚ್ಚಾಗುತ್ತಿದೆ. ಕೊರೊನಾ ಭೀತಿ ಹಾಗೂ ಹಕ್ಕಿಜ್ವರದ ಹಿನ್ನಲೆಯಲ್ಲಿ ಕೇರಳ ಕರ್ನಾಟಕ ಗಡಿಪ್ರದೇಶವಾದ ಪುತ್ತೂರು ತಾಲೂಕಿನ ಈಶ್ವರಮಂಗಲ ಎಂಬಲ್ಲಿ ಕೇವಲ ರೂ.೨೦ರ ದರದಲ್ಲಿ ಕೆ.ಜಿ. ಕೋಳಿ ಮಾಂಸ ಮಾರಾಟವಾಗುತ್ತಿದೆ. ಎರಡು ವಾರಗಳ ಹಿಂದೆ ಕೋಳಿ ಮಾಂಸ ದರ ಕೆ.ಜಿ.ಗೆ ರೂ.೧೩೦ ಆಗಿತ್ತು. ತಾಲೂಕಿನ ಇತರ ಭಾಗದಲ್ಲಿಯೂ ಕೋಳಿ ಮಾಂಸ ಅತ್ಯಂತ ಕಡಿಮೆ ಬೆಲೆಗೆ ಮಾರಾಟಗೊಳ್ಳುತ್ತಿದೆ. ರೈತರು ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕಾಣಿಕಾ ವೃತ್ತಿ ಮಾಡುತ್ತಿದ್ದು, ಇದು ಕೃಷಿ ಪೂರಕ ಚಟುವಟಿಕೆಯಾಗಿದೆ. ಕೊರೊನಾ ಭೀತಿಯಿಂದ ಇದೀಗ ಕಂಪೆನಿಗಳು ರೈತರಿಗೆ ಕೋಳಿ ಮರಿಗಳನ್ನು ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಳಿ ಮಾಂಸಕ್ಕೆ ಮಾರುಕಟ್ಟೆಯೇ ಇಲ್ಲದಂತಹ ಸ್ಥಿತಿಯಿಂದ ಕಂಪೆನಿ ಮಾಲಕರು ಹತಾಶರಾಗಿದ್ದಾರೆ. ದಿನವೊಂದಕ್ಕೆ ಟನ್‌ಗಟ್ಟಲೆ ಕೋಳಿ ವ್ಯಾಪಾರ ನಡೆಸುವ ಇಂತಹ ಕಂಪೆನಿಗಳ ಸ್ಥಿತಿ ಹದೆಗೆಟ್ಟ ಕಾರಣ ಕೋಳಿ ಸಾಕಾಣಿಕೆ ನಡೆಸುವ ರೈತರ ಮೇಲೂ ಇದರ ಪರಿಣಾಮ ಬಿದ್ದಿದೆ.

ಸರಕಾರ ಸ್ಪಷ್ಟಪಡಿಸಬೇಕು: ಕೋಳಿ ಸಾಕಾಣಿಕೆ ನಡೆಸುತ್ತಿರುವ ರೈತರು ತಮ್ಮ ಬದುಕು ಆಂತಕಕ್ಕೊಳಗಾಗಿರುವುದನ್ನು ತಡೆಯಲು, ಕೋಳಿಮಾಂಸದಿಂದ ಕೊರೊನಾ ವೈರಸ್ ಬರುವುದಿಲ್ಲ ಎಂಬುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಾಗಿದೆ. ಭೀತಿಗೆ ಒಳಗಾಗಿರುವ ಜನತೆಯ ಗೊಂದಲ ನಿವಾರಿಸುವ ಹಾಗೂ ಗೊಂದಲ ಸೃಷ್ಟಿಸುತ್ತಿರುವ ಸಾಮಾಜಿಕ ಜಾಲತಾಣಗಳ ಬಗ್ಗೆ ಕ್ರಮಕೈಗೊಳ್ಳುವ ಕೆಲಸ ನಡೆಸಬೇಕಾಗಿದೆ ಎಂದು ಕೋಳಿ ಸಾಕಾಣಿಕಾ ರೈತ ವರ್ಗ ಆಗ್ರಹಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.