Breaking News

ಫಿಲೋಮಿನಾ ಕಾಲೇಜಿನಲ್ಲಿ ಅಂತರ್‌ರಾಷ್ಟ್ರೀಯ ಮಾತೃಭಾಷಾ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪ್ರಸ್ತುತ ಸನ್ನಿವೇಶದಲ್ಲಿ ಭಾಷೆಯು ಕೇವಲ ಸಂವಹನದ ಮೂಲವಾಗಿರದೆ, ವ್ಯಕ್ತಿ, ಸಮಾಜ, ಸಂಸ್ಕೃತಿಯನ್ನು ಗುರುತಿಸುವ ಮುಖ್ಯ ಅಂಶವಾಗಿ ಬೆಳವಣಿಗೆ ಕಂಡಿದೆ. ಯಾರಿಗಾದರೂ ತಮ್ಮ ಮಾತೃಭಾಷೆಯನ್ನು ಕೇಳಿದರೆ ರೋಮಾಂಚನ ಸೃಷ್ಟಿಯಾಗಿ, ಅಭಿಮಾನ ಉಕ್ಕಿ ಬರುತ್ತದೆ. ತಂತ್ರಜ್ಞಾನ ಹಾಗೂ ಇಂಗ್ಲೀಷ್ ಭಾಷೆಯ ಮೇಲೆ ಇರುವ ವಿಶೇಷ ಮೋಹ ಮಾತೃ ಭಾಷೆಯನ್ನೇ ಮರೆಯುವಂತೆ ಮಾಡಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಕಾಲೇಜಿನ ವಿದ್ಯಾರ್ಥಿ ಸಂಘ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಮಾರ್ಚ್ ೧೩ ರಂದು ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಲಾದ ಅಂತರ್‌ರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ನಮಗೆ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನವಿರಬೇಕು. ನಾವು ಎಳೆವೆಯಲ್ಲಿ ಕಲಿಯುವ ಭಾಷೆಯ ಮೇಲೆ ವಿಶೇಷ ಪ್ರೀತಿ ಇರುತ್ತದೆ. ವಿಶ್ವದಾದ್ಯಂತ ಚಾಲ್ತಿಯಲ್ಲಿದ್ದ ಅದೆಷ್ಟೋ ಭಾಷೆಗಳು ಇಂದು ನಶಿಸಿ ಹೋಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ಯುವ ಜನತೆ ಈ ದೇಶದ ಅತ್ಯಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಮಾತೃಭಾಷೆಯ ಕುರಿತು ಅಭಿಮಾನ ಮತ್ತು ಗೌರವದಿಂದ ಕಾಣುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್ ರಹ್‌ಮಾನ್ ಜಿ ಮಾತನಾಡಿ, ಗ್ರಂಥಾಲಯವು ತುಳು, ಕೊಂಕಣಿ, ಕನ್ನಡ, ಮಲಯಾಳಂ, ಅರೆಭಾಷೆ ಮೊದಲಾದ ಭಾಷೆಗಳಿಗೆ ಸಂಬಂಧಪಟ್ಟ ಸುಮಾರು ೮,೦೦೦ ಕ್ಕೂ ಮಿಕ್ಕಿ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮಾತೃಭಾಷಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ಈ ಪ್ರದರ್ಶನದಲ್ಲಿ ಪ್ರಮುಖ ಪುಸ್ತಕಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಇದರ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಭಾಷಾ ಸಂಪತ್ತನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಕೆ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಾನವನಿಗೆ ಮಾತೃಭಾಷೆಯೆನ್ನುವುದು ದೇವರಿಗೆ ಸಮಾನ. ಮಾತೃಭಾಷೆಗಿಂತ ಮಿಗಿಲಾದ ಭಾಷೆ ಇನ್ನೊಂದಿಲ್ಲ. ನಾವು ಆರಂಭಿಕ ಹಂತದ ಎಲ್ಲಾ ರೀತಿಯ ಯೋಚನೆ, ಯೋಜನೆಗಳನ್ನು ಕೈಗೊಳ್ಳುವುದು ಮಾತೃಭಾಷೆಯಲ್ಲಿಯೇ ಆಗಿದೆ. ಮಾತೃಭಾಷೆಯಲ್ಲಿ ವ್ಯವಹರಿಸುವ ಮನೋಗುಣವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಂಥಾಲಯ ಸಿಬ್ಬಂದಿ ಝೀಟಾ ನೊರೊನ್ಹಾ, ಕ್ಯಾಥರಿನ್ ಕ್ರಾಸ್ತ, ಪೀಟರ್ ಕ್ಲಿಫರ್ಡ್ ಡಿ’ಸೋಜ, ಲೈಬ್ರರಿ ಸಲಹಾ ಸಮಿತಿ ಸದಸ್ಯರು ಮತ್ತು ಪ್ರಯೋಗಾಲಯ ಸಹಾಯಕ ಅನಿಲ್ ಲಸ್ರಾದೊ ಸಹಕರಿಸಿದರು. ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಭಾರತಿ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.