ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಅಭಿನಂದನಾ ಸಮಾರಂಭ: ಹಾಜಬ್ಬರ ಜೀವನವೇ ಸಮಾಜಕ್ಕೆ ಸಂದೇಶ-ಬಿ.ವಿ ಸೂರ್ಯನಾರಾಯಣ

ವಿವಿಧ ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ:
ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ದ.ಕ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಗೌರವಾರ್ಪಣೆ ನಡೆಯಿತು. ಯುವಜನ ಪರಿಷತ್ ಸಂಘಟನಾ ಕಾರ್ಯದರ್ಶಿ ಅಶ್ರಫ್ ಮುಕ್ವೆ ಸನ್ಮಾನ ಪತ್ರ ವಾಚಿಸಿದರು. ಹರ್ಷದ್ ದರ್ಬೆ ನೇತೃತ್ವದಲ್ಲಿ ದರ್ಬೆ ಫ್ರೆಂಡ್ಸ್ ಹಾಗೂ ದರ್ಬೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಎಲ್.ಟಿ ಅಬ್ದುಲ್ ರಝಾಕ್ ಹಾಜಿ ನೇತೃತ್ವದಲ್ಲಿ ಅನ್ಸಾರುದ್ದೀನ್ ಜಮಾಅತ್ ಕಮಿಟಿ ವತಿಯಿಂದ, ಯುನಿಟಿ ಹಸನ್ ಹಾಜಿ ಅಭಿಮಾನಿ ಬಳಗದ ವತಿಯಿಂದ, ನೌಶಾದ್ ಹಾಜಿ ಬೊಳುವಾರು ನೇತೃತ್ವದಲ್ಲಿ ಗೋಲ್ಡನ್ ಆರ್ಟ್ಸ್ ಕ್ಲಬ್ ಬೊಳ್ವಾರು ವತಿಯಿಂದ, ಮೌಂಟೆನ್ ವ್ಯೂ ವಿದ್ಯಾಸಂಸ್ಥೆ ವತಿಯಿಂದ ಹಾಗೂ ಪಡೀಲು ಮುಈನುಲ್ ಇಸ್ಲಾಂ ಜುಮಾ ಮಸೀದಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪುತ್ತೂರು: ತಾನು ಅನಕ್ಷರಸ್ಥನಾದರೂ ನಿಸ್ವಾರ್ಥ ಸೇವೆ ಮೂಲಕ ಶಿಕ್ಷಣ ರಂಗಕ್ಕೆ ಮಹೋನ್ನತ ಕೊಡುಗೆ ನೀಡಿ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತಗೊಂಡಿರುವ ಹರೇಕಳ ಹಾಜಬ್ಬರ ಜೀವನವೇ ಸಮಾಜಕ್ಕೊಂದು ಸಂದೇಶವಾಗಿದೆ ಎಂದು ಸವಣೂರು ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಬಿ.ವಿ ಸೂರ್ಯನಾರಾಯಣ ಎಲಿಯ ಹೇಳಿದರು.

ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಹಾಗೂ ಉತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬರವರಿಗೆ ಮಾ.೧೩ರಂದು ಬೈಪಾಸ್ ಅಶ್ಮಿ ಟವರ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು. ಶಿಕ್ಷಣ ಸಂಸ್ಥೆ ಹೊಂದಿದವರು ಅದರಲ್ಲಿ ಅಧಿಕಾರ ಸ್ಥಾಪಿಸುತ್ತಾರೆ, ಸ್ಥಾನಮಾನ ಪಡೆದುಕೊಳ್ಳುತ್ತಾರೆ, ಸಂಸ್ಥೆಯಲ್ಲಿ ಮೇಲಿನ ಸ್ತರದ ಹುದ್ದೆ ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ ಆದರೆ ಹಾಜಬ್ಬರು ಅದಕ್ಕೆ ತದ್ವಿರುದ್ಧ ಎಂಬಂತೆ ಅಧಿಕಾರದಲ್ಲಿ ಪಾಲು ಕೇಳದೇ ತಾನು ಕಟ್ಟಿ ಬೆಳೆಸಿದ ಶಿಕ್ಷಣ ಸಂಸ್ಥೆಗಾಗಿ ಮಾತ್ರ ದುಡಿಯುತ್ತಿದ್ದಾರೆ, ಯಾವುದೇ ಸ್ವಾರ್ಥ, ಆಸೆ ಆಕಾಂಕ್ಷೆಗಳನ್ನು ಅವರು ಇಟ್ಟುಕೊಂಡಿಲ್ಲ ಎಂದು ಅವರು ಹೇಳಿದರು. ಹಾಜಬ್ಬರ ಸಂವೇದನಾ ಶೀಲತೆ ಮತ್ತು ಸಮಾಜ ಸೇವೆ ಅವರನ್ನು ಪದ್ಮಶ್ರೀಯತ್ತ ಕೊಂಡೊಯ್ದಿದ್ದು ಅವರು ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ, ನಿಜಕ್ಕೂ ಅವರು ಮಾನವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಹಾಜಬ್ಬರ ಸಾಧನೆಯ ಹಾದಿ ನಮಗೆಲ್ಲ ಮಾದರಿ-ಅಹ್ಮದ್ ಹಾಜಿ
ಪುತ್ತೂರು ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷನ್ ಮಾತನಾಡಿ ಶಿಕ್ಷಣ ಸಂಸ್ಥೆಗಳ ಮೇಧಾವಿಗಳ ಪೈಕಿ ಹರೇಕಳ ಹಾಜಬ್ಬರು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ, ಅವರ ಸಾಧನೆಯ ಹಾದಿ ಎಲ್ಲರಿಗೆ ಪ್ರೇರಣೆಯಾಗಿದೆ ಎಂದರು.

ತ್ಯಾಗ, ಪರಿಶ್ರಮಕ್ಕೆ ಸಿಕ್ಕಿದ ಪ್ರತಿಫಲ-ಎಲ್.ಟಿ ರಝಾಕ್ ಹಾಜಿ
ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ ಹರೇಕಳ ಹಾಜಬ್ಬರ ಸಾಧನೆ ಅಪೂರ್ವವಾಗಿದ್ದು ಅವರ ತ್ಯಾಗ ಮತ್ತು ಪರಿಶ್ರಮಕ್ಕೆ ಸಂದ ಫಲವೇ ಪದ್ಮಶ್ರೀ ಪ್ರಶಸ್ತಿಯಾಗಿದೆ ಎಂದು ಹೇಳಿದರು.

ಹಾಜಬ್ಬರ ಹೆಸರು ಶಾಶ್ವತವಾಗಿ ಉಳಿಯಲಿದೆ-ಇಬ್ರಾಹಿಂ ಗೋಳಿಕಟ್ಟೆ
ಜೆಡಿಎಸ್ ಮುಖಂಡ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ ಹರೇಕಳ ಹಾಜಬ್ಬರವರು ಅನನ್ಯ ಸಾಧನೆ ಮೂಲಕ ತಮ್ಮ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದು ಹೇಳಿದರು.

ಹಾಜಬ್ಬರು ಜಿಲ್ಲೆಗೆ ಅಭಿಮಾನ – ಅಶ್ರಫ್ ಕಲ್ಲೇಗ
ಅಧ್ಯಕ್ಷತೆ ವಹಿಸಿದ್ದ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ ಶಿಕ್ಷಣ ಸಂತ ಹಾಜಬ್ಬರು ನಮಗೆಲ್ಲಾ ಸ್ಪೂರ್ತಿಯಾಗಿದ್ದಾರೆ, ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು ನಮ್ಮ ಜಿಲ್ಲೆಗೆ ಅಭಿಮಾನದ ವಿಚಾರವಾಗಿದೆ ಎಂದರು.

ಗಮನ ಸೆಳೆದ ನ್ಯಾಯವಾದಿಯ ಕವನ:
ಮುಸ್ಲಿಂ ಯುವಜನ ಪರಿಷತ್ ರಾಜ್ಯ ಸಂಚಾಲಕ, ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ಅವರು ಹರೇಕಳ ಹಾಜಬ್ಬರ ಬಗ್ಗೆ ಸ್ವರಚಿತ ಕವನವನ್ನು ಸಭೆಯಲ್ಲಿ ವಾಚಿಸಿ ಗಮನ ಸೆಳೆದರು. ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವ ಕಷ್ಟ ಏನೆಂದು ನನಗೆ ಚೆನ್ನಾಗಿ ತಿಳಿದಿದೆ, ಅಂತದ್ದರಲ್ಲಿ ಹಾಜಬ್ಬರ ಸಾಧನೆಗೆ ಯಾವುದೂ ಸರಿಸಾಟಿಯಿಲ್ಲ ಎಂದು ಹೇಳಿದರು.

ಹಾಜಬ್ಬರ ಸಾಧನೆಯ ಹಾದಿ ಅದ್ಭುತ – ನೂರುದ್ದೀನ್ ಸಾಲ್ಮರ
ಸ್ವಾಗತಿಸಿದ ಮುಸ್ಲಿಂ ಯುವಜನ ಪರಿಷತ್‌ನ ಮುಖಂಡ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಾತನಾಡಿ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಸಿಕ್ಕಿರುವುದರ ಹಿಂದೆ ಅವರ ಕಠಿಣವಾದ ಸಮಾಜಪರವಾಗಿರುವ ಪರಿಶ್ರಮ ಅಡಗಿದೆ, ತಾನು ಅನಕ್ಷರಸ್ಥನಾದರೂ ಭವಿಷ್ಯದ ಬಗ್ಗೆ ಚಿಂತಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ, ಅವರ ಸಾಧನೆಯ ಹಾದಿ ಅದ್ಭುತವಾಗಿದೆ ಎಂದರು.

ಹಾಜಬ್ಬರ ಸನ್ಮಾನ ನಮ್ಮ ಪಾಲಿನ ಸೌಭಾಗ್ಯ – ಶಾಕಿರ್ ಹಾಜಿ
ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಮಾತನಾಡಿ ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಸನ್ಮಾನಿಸುವುದು ನಮ್ಮೆಲ್ಲರ ಪಾಲಿನ ಸೌಭಾಗ್ಯ, ಸಾಧಾರಣ ವ್ಯಕ್ತಿಯೋರ್ವರು ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ, ಅನೇಕ ಸಮಾಜಪರ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಮುಸ್ಲಿಂ ಯುವನ ಪರಿಷತ್‌ನ ಇಂದಿನ ಕಾರ್ಯಕ್ರಮ ಅರ್ಥಪೂರ್ಣ ಎಂದು ಅವರು ಹೇಳಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಸದಸ್ಯ ಹಸನ್ ಹಾಜಿ ಯುನಿಟಿ, ಕಲ್ಲೇಗ ಜುಮಾ ಮಸೀದಿ ಗೌರವಾಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿವಿಧ ಮಸೀದಿಗಳ ಅಧ್ಯಕ್ಷರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.