ಕಡಬದಾದ್ಯಂತ ಕೊರೋನಾ ಭೀತಿ ಇದ್ದರೂ ನಿದ್ದೆಯಿಂದ ಎಚ್ಚೆತ್ತುಕೊಳ್ಳದ ಕಡಬದ ಆರೋಗ್ಯ ಇಲಾಖೆ!!

Puttur_Advt_NewsUnder_1
Puttur_Advt_NewsUnder_1
  • ವಿದೇಶದಿಂದ ಆಗಮಿಸಿದ ವ್ಯಕ್ತಿಗಳು ಊರಿಡೀ ಸುತ್ತಾಡುತ್ತಿದ್ದರೂ ಕೇಳುವವರಿಲ್ಲದ ಸ್ಥಿತಿ-ಆತಂಕದಲ್ಲಿ ಜನತೆ

ಕಡಬ: ಕೆಲ ದಿನಗಳ ಹಿಂದೆ ಚೀನಾದಲ್ಲಿ ಉದ್ಯೋಗದಲ್ಲಿದ್ದ ಬಲ್ಯದ ವ್ಯಕ್ತಿ ಊರಿಗೆ ಆಗಮಿಸಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ತೆರಳಿದ್ದು ಅದೇ ದಿನ ದುಬೈಯಿಂದ ಆಗಮಿಸಿದ್ದ ಕೋಡಿಂಬಾಳದ ವ್ಯಕ್ತಿ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾಗಿದ್ದರು. ಅಂತೆಯೇ ಮಾ.11ರಂದು ಅಬುದಾಬಿಯಿಂದ ಆಗಮಿಸಿದ್ದ ಕುಟ್ರುಪಾಡಿಯ ವ್ಯಕ್ತಿಯನ್ನು ಮಾ.14ರಂದು ಒತ್ತಾಯಪೂರ್ವಕವಾಗಿ ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದು ತಪಾಸಣೆಗೊಳಪಡಿಸಲಾಗಿದೆ, ಈ ಮದ್ಯೆ ವಿದೇಶದಿಂದ ಆಗಮಿಸಿದವರ ಮಾಹಿತಿ ಮತ್ತು ಅವರ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮ ವಹಿಸುವ ಬಗ್ಗೆ ಕಡಬ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಕುಟ್ರುಪಾಡಿ ಗ್ರಾಮದ ಬಡಬೆಟ್ಟು ಮೂಲಕ್ಕರ ಮನೆಯ ಕ್ಸೇವಿಯರ್ ಎಂಬವರು ಅಬುದಾಬಿಯಿಂದ ಕಡಬಕ್ಕೆ ಆಗಮಿಸಿ ಮೂರು ದಿನ ಕಳೆದರೂ ಶೀತ, ಕೆಮ್ಮಿನಿಂದ ಬಳಲುತ್ತಿದ್ದ ಆತ ಸ್ಥಳೀಯವಾಗಿ ಯಾವುದೇ ವೈದ್ಯಕೀಯ ತಪಾಸಣೆಗೆ ಒಳಪಡದೆ ಇದ್ದುದು ಗ್ರಾಮದ ಜನರ ಭೀತಿಗೆ ಕಾರಣವಾಗಿತ್ತು. ಊರಿಗೆ ಬಂದ ಆತ ಆಸ್ಪತ್ರೆಗೆ ತಪಾಸಣೆಗೆ ತೆರಳದೆ ಕುಟ್ರುಪಾಡಿ ಪಂಚಾಯತ್, ಚರ್ಚ್‌ನ ಕಾರ್‍ಯಕ್ರಮ ಸೇರಿದಂತೆ ಊರಿನ ಎಲ್ಲೆಡೆ ಸುತ್ತಾಡುತ್ತಿರುವ ಬಗ್ಗೆ ಸ್ಥಳೀಯರು ಕಡಬ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರನ್ನು ಅಂದೇ ಭೇಟಿ ಮಾಡಿ ಅವರಿಗೆ ಸರಿಯಾದ ನಿರ್ದೇಶನ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ, ಈ ಬಗ್ಗೆ ವೈದ್ಯಾಧಿಕಾರಿಯನ್ನು ಸಂಪರ್ಕಿಸಿದರೆ ನಮ್ಮ ಆರೋಗ್ಯ ಕಾರ್‍ಯಕರ್ತೆ ಆತನನ್ನು ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಡಲು ಹೇಳಿದರೂ ಆತ ಬಂದಿಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ. ಕೊನೆಗೂ ಶನಿವಾರ ಸ್ಥಳೀಯ ಜನರು ಹಾಗೂ ಮಾದ್ಯಮದವರ ಒತ್ತಡದ ಮೇರೆಗೆ ಕ್ಸೇವಿಯರ್ ಅವರು ಕಡಬ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಟ್ಟಿದ್ದಾರೆ.

ವಿದೇಶದಿಂದ ಆಗಮಿಸಿದ ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆ ಭೀತಿ !
ಕ್ಸೆವಿಯರ್ ಅವರು ತೀರಿಕೊಂಡ ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕಾಗಿ ವಿದೇಶದಿಂದ ಊರಿಗೆ ಆಗಮಿಸಿದ್ದರು, ಮನೆಯಲ್ಲಿ ಹಾಗೂ ಚರ್ಚ್‌ನಲ್ಲಿ ನಡೆದ ಅಂತ್ಯಸಂಸ್ಕಾರದ ವಿಧಿಗಳಲ್ಲಿ ಭಾಗವಹಿಸಿದ್ದ ಅವರು ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದುದರಿಂದ ಅವರ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಹಿತೈಷಿಗಳು ಅವರನ್ನು ತಬ್ಬಿ ಹಿಡಿದು ಸಂತೈಸಿದ್ದರು. ಬಳಿಕ ಕ್ಸೆವಿಯರ್ ಅವರು ಬೇರೆ ಬೇರೆ ಕೆಲಸಗಳಿಗಾಗಿ ಕುಟ್ರುಪಾಡಿ ಗ್ರಾಮ ಪಂಚಾಯತ್ ಕಛೇರಿ, ಕಡಬ ಪೇಟೆ, ಹೊಸಮಠ ಪೇಟೆ ಮುಂತಾದೆಡೆ ಸುತ್ತಾಡಿದ್ದರು. ಇದೀಗ ಅವರ ಸಂಪರ್ಕದಲ್ಲಿದ್ದವರೆಲ್ಲರಿಗೂ ಆತಂಕ ಆರಂಭವಾಗಿದೆ. ದಯವಿಟ್ಟು ವಿದೇಶದಿಂದ ಆಗಮಿಸಿದವರು ಕೊರೋನಾ ಸೊಂಕು ಇಲ್ಲದಿದ್ದರೂ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದು ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನಿದ್ದೆಯಿಂದ ಎಚ್ಚೆತ್ತುಕೊಳ್ಳದ ಕಡಬದ ಆರೋಗ್ಯ ಇಲಾಖೆ
ಕಡಬ ತಾಲೂಕು ಕೇಂದ್ರವಾದ ಬಳಿಕ ಕಡಬ ಸಮುದಾಯ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ, ಆದರೆ ಉತ್ತಮ ಕಟ್ಟಡ ರಚನೆಯಾಗಿ ಕಾರ್‍ಯಾಚರಿಸುತ್ತಿದ್ದರೂ ವೈದ್ಯರೂ ಹಾಗೂ ಸಿಬಂದಿ, ಸೌಲಭ್ಯಗಳ ಕೊರತೆಯಿಂದ ಮಾತ್ರ ನಲುಗುತ್ತಿದೆ, ಕಡಬದಲ್ಲಿ ಉತ್ತಮ ದರ್ಜೆಯ ಆಸ್ಪತ್ರೆ ಇಲ್ಲದೆ ಇಲ್ಲಿಯ ಜನತೆ ದೂರದ ಪುತ್ತೂರು ಮಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸರಿಯಾದ ವರ್ತನೆ ತೋರದಿರುವ ಬಗ್ಗೆಯೂ ದೂರು ವ್ಯಕ್ತವಾಗಿದೆ, ಕೆಲ ದಿನಗಳ ಹಿಂದೆ ಮಧ್ಯಾಹ್ನದ ವೇಳೆ ವಾಹನ ಅಪಘಾತದ ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ಕೊಂಡೊಯ್ದ ವೇಳೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಗೆ ಹೋಗುವ ಹೊರಗೇಟು ಸೇರಿದಂತೆ ಆಸ್ಪತ್ರೆಯ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದ ಕಾರಣದಿಂದಾಗಿ ಗಾಯಾಳುವನ್ನು ಹೊರಗೆ ಕುಳ್ಳಿರಿಸಿಕೊಂಡು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಗಾಯಾಳುವಿನ ಜೊತೆಗಿದ್ದವರು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿತ್ತು. ಹಾಗೆಯೇ ಸ್ಥಳೀಯ ಜನಪ್ರತಿನಿಧಿಯೊಬ್ಬರು ಸಕ್ಕರೆ ಕಾಯಿಲೆಯ ತಪಾಸಣೆಗಾಗಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ತೆರಳಿದ್ದಾಗ ಅಲ್ಲಿ ಅಗತ್ಯ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಕೆರಳಿ ಸಿಬ್ಬಂದಿಗಳನ್ನು ತರಾಟೆಗೆತ್ತಿಕೊಂಡು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿ ಮೂಲಕ ದೂರು ನೀಡಿದ ಘಟನೆಯೂ ನಡೆದಿತ್ತು. ಪದೇ ಪದೇ ಇಂತಹ ಘಟನೆಗಳು ಕಡಬ ಸರಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದರೂ ಈ ಬಗ್ಗೆ ಯಾರಲ್ಲಿ ದೂರಿಕೊಳ್ಳುವುದೆಂದು ತಿಳಿಯದೆ ಜನರೂ ಹಿಡಿಶಾಪ ಹಾಕುತ್ತಾ ತೆರಳುತ್ತಿದ್ದಾರೆ. ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.

ಕಡಬದಲ್ಲಿ ಅಧಿಕಾರಿಗಳ ನಿರ್ಲಕ್ಷ, ಜಿಲ್ಲಾಧಿಕಾರಿಗೆ  ಮಾಹಿತಿ ನೀಡಿದ್ದೇನೆ – ಸೈಯದ್ ಮೀರಾ ಸಾಹೇಬ್
ಇಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಯವರು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯಲ್ಲ, ವಿದೇಶದಿಂದ ಆಗಮಿಸಿದ್ದ ವ್ಯಕ್ತಿಯನ್ನು ಆತ ಊರಿಗೆ ಬಂದ ದಿನವೇ ಆಸ್ಪತ್ರೆಗೆ ಕರೆಯಿಸಿ ತಪಾಸಣೆಗೊಳಪಡಿಸಬೇಕಾಗಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ, ಮೂರು ದಿನಗಳ ಬಳಿಕ ಸಾರ್ವಜನಿಕರಿಂದ ಒತ್ತಡ ಬಂದ ಮೇಲೆ ಆತನನ್ನು ಆಸ್ಪತ್ರೆಗೆ ಕರೆತರಿಸಿದ್ದಾರೆ. ಒಂದು ವೇಳೆ ಆತನಿಗೆ ಕೊರೋನಾ ಸೋಂಕು ತಗಲಿದ್ದರೆ ಆತನ ಸಂಪರ್ಕದಲ್ಲಿದ್ದವರ ಗತಿಯೇನು?. ಈ ಬಗ್ಗೆ ನಾನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೂ ಮಾಹಿತಿ ನೀಡಿದ್ದೇನೆ. ಪ್ರಪಂಚದಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿರುವಾಗ ಕರ್ನಾಟಕ ರಾಜ್ಯ ಸರಕಾರವೇ ಮುಂಜಾಗೃತಾ ಕ್ರಮವಾಗಿ ಇಷ್ಟೆಲ್ಲ ಮುಂಜಾಗೃತಾ ಕ್ರಮ ವಹಿಸಿರುವಾಗ ಕಡಬದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.