ಇಟಲಿಯಿಂದ ಸ್ವದೇಶಕ್ಕೆ ವಾಪಸಾದ ಈಶ್ವರಮಂಗಲದ ಯುವತಿಗೆ ಕೊರೊನಾ ವದಂತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಟಲಿಯಿಂದ ಸ್ವದೇಶಕ್ಕೆ ವಾಪಸಾದ ಈಶ್ವರಮಂಗಲದ ಯುವತಿಯೋರ್ವರಿಗೆ ಕೊರೊನಾ ವೈರಸ್ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಮನೆಯಲ್ಲೇ ಐಸೋಲೇಶನ್ ಆರೈಕೆ ನೀಡಲಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಈಶ್ವರಮಂಗಲ ರಾಗಾಳಿ ನಿವಾಸಿ ಮೊದುಕುಂಞಿ ಎಂಬವರ ಪುತ್ರಿ ನಿಶಾ ಎಂಬವರು ಇಟಲಿಯಲ್ಲಿ ಆರ್ಕಿಟೆಕ್ಟ್ ಶಿಕ್ಷಣ ಕಲಿಯುತ್ತಿದ್ದು, ಕೊರೊನಾ ವೈರಸ್ ಜಗತ್ತಿನಾದ್ಯಂತ ಹಬ್ಬುತ್ತಿದ್ದ ಮಾಹಿತಿಯಿಂದ ಅವರು ಫೆ.29ಕ್ಕೆ ಸ್ವದೇಶಕ್ಕೆ ಮರಳಿದ್ದರು. ಭಾರತದಲ್ಲಿ ಕೊರೊನಾ ಮುನ್ನೆಚ್ಚರಿಕೆ ನಿಟ್ಟಿನಲ್ಲಿ ನಿಶಾ ಅವರನ್ನೂ ಮುಂಬಾಯಿ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದಾರೆ. ಬಳಿಕ ಮುಂಬಯಿ ಅಸ್ಪತ್ರೆಯಲ್ಲೂ ತರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದ್ದು, ವೈದ್ಯಕೀಯ ವರದಿಯಲ್ಲಿ, ಕೊರೊನಾ ಲಕ್ಷಣ ಇಲ್ಲದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು. ಕೇರಳ ಮೂಲಕ ಆಗಮಿಸಿದ ಆಕೆಯನ್ನು ಬಂದಿಯೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ತಪಾಸಣೆಗೊಳಪಡಿಸಲಾಗಿತ್ತು. ಕೊರೊನಾದ ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಂತರಾಗಿಯೇ ಇದ್ದ ಅವರನ್ನು ಅಲ್ಲಿಂದ ಮನೆಗೆ ಕಳುಹಿಸಲಾಗಿತ್ತು. ಆದರೂ ವಿದೇಶದಿಂದ ಬಂದವರು ಎಂಬ ಕಾರಣಕ್ಕಾಗಿ ಅವರಿಗೆ ಕೆಲವೊಂದು ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಅದರಂತೆ ತನ್ನ ಮನೆ ಈಶ್ವರಮಂಗಲ ರಾಗಾಳಿಗೆ ಬಂದವರು ಮನೆಯಲ್ಲೇ ಉಳಿದುಕೊಂಡಿದ್ದರು. ನಿಶಾ ಅವರು ಇಟಲಿಯಿಂದ ಬಂದಿರುವ ವಿಚಾರ ಪರಿಸರದಲ್ಲಿ ಸುದ್ದಿಯಾಗಿ ಸಾರ್ವಜನಿಕ ವಲಯದಲ್ಲಿ ಕೊರೊನಾ ಆತಂಕ ಸೃಷ್ಟಿಯಾಗಿತ್ತು. ನಿಶಾ ಅವರು ಕೂಡಾ ಮನೆಯಿಂದ ಹೊರಗೆ ಬಾರದಿರುವುದು ಸಾರ್ವಜನಿಕರನ್ನು ಮತ್ತಷ್ಟು ಗಾಬರಿ ಪಡಿಸುವಂತಾಯಿತು.
ಒಟ್ಟಾರೆಯಾಗಿ ಕೊರೊನಾದ ಯಾವುದೇ ಲಕ್ಷಣಗಳಿಲ್ಲದಿದ್ದರೂ, ಇಟಲಿಯಿಂದ ಊರಿಗೆ ಬಂದವರು ಎಂಬ ಕಾರಣಕ್ಕಾಗಿ ವಿದ್ಯಾರ್ಥಿನಿಯೋರ್ವರಿಗೆ ಕೊರೊನಾ ವೈರಸ್ ಸೋಂಕು ಹರಡಿದೆ ಎಂಬ ವದಂತಿಯಿಂದ ನಾಗರಿಕರು ಆತಂಕಕ್ಕೊಳಗಾಗಿರುವ ಮತ್ತು ಕೊರೊನಾ ಲಕ್ಷಣಗಳು ಇಲ್ಲ ಎಂದು ಸ್ಪಷ್ಟವಾಗುತ್ತಲೇ ಆತಂಕ ದೂರವಾದುದಂತೂ ಸತ್ಯ.

ಮನೆಯಲ್ಲೇ ಐಸೋಲೇಶನ್
ಕಳೆದ ೧೪ ದಿನಗಳಿಂದ ನಿಶಾ ಅವರಿಗೆ ಮನೆಯಲ್ಲೇ ಐಸೋಲೇಶನ್ ವ್ಯವಸ್ಥೆ ಮಾಡಲಾಗಿತ್ತು. ಊಟ, ತಿಂಡಿ ನೀಡಲೂ ಅವರ ತಂದೆ ಹೊರತು ಬೇರೆ ಯಾರೂ ಆಕೆಯಿದ್ದ ಕೊಠಡಿಗೆ ಹೋಗದೆ ಅಂತರ ಕಾಯ್ದುಕೊಂಡಿದ್ದರು. ವಿಚಾರ ತಿಳಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಲ್ಪ ಮತ್ತು ಸಿಬ್ಬಂದಿ ಮಾ.14ರಂದು ನಿಶಾ ಅವರ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅವರಿಗೆ ಯಾವುದೇ ರೋಗ ಲಕ್ಷಣ ಇಲ್ಲ ಎಂದು ವೈದ್ಯಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.

ಕೊರೊನಾ ವೈರಸ್ ಲಕ್ಷಣ ಇಲ್ಲ
ಈಶ್ವರಮಂಗಲ ರಾಗಾಳಿ ಮನೆಗೆ ಇಟಲಿಯಿಂದ ಬಂದಿರುವ ಯುವತಿಗೆ ಕೊರೊನಾ ರೋಗ ಲಕ್ಷಣವಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಮನೆಯಲ್ಲೇ ಐಸೋಲೇಶನ್ ಮಾಡುತ್ತಿದ್ದಾರೆ. ಅವರನ್ನು ಮುಂಬಯಿಯಲ್ಲೇ ವೈದ್ಯರು ತಪಾಸಣೆ ನಡೆಸಿದ್ದು, ಎಲ್ಲಾ ದಾಖಲೆಯೂ ಅವರಲ್ಲಿ ಇದೆ.
ಡಾ. ಅಶೋಕ್ ಕುಮಾರ್ ರೈ, ತಾಲೂಕು ಆರೋಗ್ಯಾಧಿಕಾರಿಗಳು

ನಮ್ಮ ಏರಿಯಾದಲ್ಲಿ ಕೊರೋನ ಇಲ್ಲ, ಆತಂಕ ಬೇಡ-ಡಾ.ಶಿಲ್ಪಾ
ಈ ಬಗ್ಗೆ `ಸುದ್ದಿ’ ಜೊತೆ ಮಾತನಾಡಿದ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಲ್ಪಾ ಅವರು ನಮ್ಮ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೊರೋನದಂತಹ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ವಿದ್ಯಾರ್ಥಿನಿಯೋರ್ವರು ಇಟಲಿಯಿಂದ ಬಂದಿರುವುದು ನಿಜ, ಆದರೆ ಅವರಿಗೆ ಕೊರೋನ ವೈರಸ್ ತಗುಲಿಲ್ಲ. ಅವರು ಆರೋಗ್ಯವಾಗಿದ್ದಾರೆ, ತಪ್ಪು ಸಂದೇಶಗಳಿಗೆ ಯಾರೂ ಕಿವಿಗೊಡಬಾರದು ಎಂದು ಹೇಳಿದರು. ವಿದ್ಯಾರ್ಥಿನಿ ವಿದೇಶದಿಂದ ಊರಿಗೆ ಬರುವಾಗ ಸಂಬಂಧಪಟ್ಟ ಸ್ಥಳಗಳಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ, ಕೇರಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಪರೀಕ್ಷೆಗೊಳಪಟ್ಟಿದ್ದಾರೆ, ಕೊರೋನದಂತಹ ಯಾವುದೇ ಕಾಯಿಲೆಗಳು ಇಲ್ಲ ಎಂಬುವುದು ಸ್ಪಷ್ಟವಾಗಿದೆ. ಮಾತ್ರವಲ್ಲ ವಿದ್ಯಾರ್ಥಿನಿ ಆರೋಗ್ಯವಾಗಿದ್ದು ಮನೆಗೆ ಬಂದ ಬಳಿಕವೂ ಕೈಗೊಳ್ಳಬೇಕಾದ ಮುಂಜಾಗ್ರತೆಯನ್ನು ಸರಿಯಾಗಿ ನಿಭಾಯಿಸಿದ್ದಾರೆ, ಯಾರೂ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ, ಕೊರೋನದಂತಹ ವಿಷಯವೇ ನಮ್ಮ ಏರಿಯಾದಲ್ಲಿ ಇಲ್ಲ ಎಂದು ಡಾ.ಶಿಲ್ಪಾ ಸ್ಪಷ್ಟಪಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.