ಅಪಪ್ರಚಾರಕ್ಕೆ ಬಲಿಯಾಯಿತೇ ಕೋಳಿ ಉದ್ಯಮ…!?

Puttur_Advt_NewsUnder_1
Puttur_Advt_NewsUnder_1

✍…ಸಿಶೇ ಕಜೆಮಾರ್

ಪುತ್ತೂರು: ವಿಶ್ವವನ್ನೆ ತಲ್ಲಣಿಸಿದ ಮಾರಕ ಕೊರೋನಾ ವೈರಸ್ ಭೀತಿ ಕುಕ್ಕುಟೋದ್ಯಮಕ್ಕೆ ತುಂಬಲಾರದ ನಷ್ಟವನ್ನು ತಂದೊಡ್ಡಿದೆ. ಕೋಳಿಗಳಿಂದ ಕೊರೋನಾ ವೈರಸ್ ಹರಡುತ್ತದೆ ಎಂಬ ಆಧಾರವಿಲ್ಲದ ಮಾಹಿತಿಗಳು ಕೋಳಿ ಸಾಕಾಣೆದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಂದು ಕಡೆ ಕೊರೋನಾವಾದರೆ ಕೇರಳ, ತಮಿಳುನಾಡು ಇತ್ಯಾದಿ ರಾಜ್ಯಗಳಲ್ಲಿ ಅಲ್ಲಲ್ಲಿ ಕಂಡು ಬಂದಿರುವ ಹಕ್ಕಿಜ್ವರ ಕೂಡ ಕೋಳಿ ಉದ್ಯಮಕ್ಕೆ ಬಲವಾದ ಹೊಡೆತ ನೀಡಿದೆ. ಕೋಳಿಗಳಿಗೆ ಬೆಲೆ ಕುಸಿತವಾದ ಹಿನ್ನೆಲೆಯಲ್ಲಿ ಫಾರಂದಾರರು ಸಾಕಿ ಬೆಳೆಸಿದ ಸಾವಿರಾರು ಕೋಳಿಗಳನ್ನು ಮಾರಣಹೋಮ ಮಾಡಬೇಕಾದ ಅನಿವಾರ‍್ಯತೆ ಸೃಷ್ಟಿಯಾಗಿರುವುದು ನಿಜಕ್ಕೂ ದುರಂತವೇ ಸರಿ.

ಕೊರೋನಾ ವೈರಸ್ ಭೀತಿ: ಕೊರೋನೊ ವೈರಸ್ ನೆಗಡಿ ಮತ್ತು ಶೀತದಿಂದ ಹರಡುತ್ತದೆ ಎಂಬುದು ಎಲ್ಲರಿಗೆ ತಿಳಿದ ವಿಚಾರ. ಅದೇ ರೀತಿ ಕೋಳಿಗಳಿಗೆ ನೆಗಡಿ, ಶೀತ ಆಗುವುದು ಮಾಮುಲು. ನಾವು ಫಾರಂ ಕೋಳಿಗಳನ್ನು ನೋಡಿದರೆ ಅವು ಶೀತದಿಂದ ಬಳಲುತ್ತಿರುವುದನ್ನು ಕಾಣಬಹುದಾಗಿದೆ. ಕೋಳಿಗಳಿಗೆ ಆಗುವ ಶೀತದಿಂದಲೂ ಕೊರೋನಾ ವೈರಸ್ ಹರಡುತ್ತದೆ ಎಂಬುದನ್ನು ಯಾರೋ ಅಪಪ್ರಚಾರ ಮಾಡಿ ಬಿಟ್ಟಿರುವುದೇ ಇಷ್ಟೊಂದು ದೊಡ್ಡ ಮಟ್ಟದ ನಷ್ಟಕ್ಕೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು. ಜನರಲ್ಲಿರುವ ಕೊರೋನಾ ವೈರಸ್ ಭೀತಿಯೇ ಕೋಳಿಗಳ ಸಾಮೂಹಿಕ ಹತ್ಯೆಗೆ ಪ್ರೇರಣೆಯಾಗಿದೆ. ಅದು ಬಿಟ್ಟರೆ ಕೋಳಿಯಿಂದ ಯಾವುದೇ ಕೊರೋನಾ ವೈರಸ್ ಹರಡುವುದಿಲ್ಲ ಎನ್ನುತ್ತಾರೆ ವೈದ್ಯರು.

ಕೋಳಿಗಳನ್ನು ಕೊಳ್ಳಲು ಜನರು ಬರುತ್ತಿಲ್ಲ: ಕೋಳಿಗಳಿಗೆ ಕೊರೋನಾ ಹರಡಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಯಾರು ಕೂಡ ಕೋಳಿಗಳನ್ನು ಕೊಳ್ಳಲು ಬರುತ್ತಿಲ್ಲ. ಕಡಿಮೆ ಬೆಲೆಗೆ ಕೋಳಿ ಮಾರಾಟಕ್ಕಿಟ್ಟರೂ ಕೂಡ ಕೋಳಿಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೋಳಿಗಳನ್ನು ಸಾಕಲಾಗದೆ, ಕಾರ್ಮಿಕರಿಗೆ ಸಂಬಳ ಕೊಡಲಾಗದೆ ಸಾಮೂಹಿಕವಾಗಿ ಹತ್ಯೆ ಮಾಡುತ್ತಿರುವ ಪ್ರಕರಣಗಳು ಕಂಡು ಬಂದಿವೆ. ಕೋಳಿ ಫಾರಂದಾರರು ಸಾಧ್ಯವಾದಷ್ಟು ಕೋಳಿಗಳನ್ನು ತಮ್ಮ ಸುತ್ತಮುತ್ತಲಿನ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಇನ್ನುಳಿದ ಕೋಳಿಗಳನ್ನು ಅನಿವಾರ‍್ಯವಾಗಿ ಸಾಯಿಸಬೇಕಾದ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಫಾರಂ ಮಾಲಕರು.

ಕೋಳಿಗಳಿಗೆ ಆಹಾರ ಕೊಡಲು ಸಾಧ್ಯವಾಗುತ್ತಿಲ್ಲ: ಫಾರಂನ ಒಂದು ಕೋಳಿಗೆ ದಿನಕ್ಕೆ ಕನಿಷ್ಠ 50 ರೂಪಾಯಿಯ ಆಹಾರ ಬೇಕಾಗುತ್ತದೆ. ಒಂದು ಕೆ.ಜಿ ಆಹಾರಕ್ಕೆ ಕನಿಷ್ಠ 39 ರೂಪಾಯಿ ಇದೆ. ಒಂದು ಕೋಳಿ ದಿನದಲ್ಲಿ 1.5ಕೆ.ಜಿ ಆಹಾರ ತಿನ್ನುತ್ತದೆ. ಸಾವಿರಾರು ಕೋಳಿಗಳನ್ನು ಬೆಳೆಸಬೇಕಾದರೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಹೀಗೆ ಖರ್ಚು ಮಾಡಿ ಸಾಕಿದರೂ ಕೋಳಿಗಳು ಮಾರಾಟವಾಗುತ್ತಿಲ್ಲ. ಅರ್ಧ ಕ್ರಯಕ್ಕೆ ಕೊಟ್ಟರೂ ಜನರಿಗೆ ಬೇಡ. ಇದರಿಂದ ಬೇಸತ್ತ ಫಾರಂ ಮಾಲಕರು ಅನಿವಾರ‍್ಯವಾಗಿ ಕೋಳಿಗಳನ್ನು ಸಾಯಿಸಬೇಕಾದ ಪ್ರಮೇಯ ಒದಗಿ ಬಂದಿರುವುದು ದುರಂತ.

ಕೋಳಿಗೂ ಕೊರೋನಾ ವೈರಸ್‌ಗೂ ಸಂಬಂಧವಿಲ್ಲ-ಜನ ಭಯಪಡಬೇಕಾಗಿಲ್ಲ
ಕೋಳಿಗಳಿಂದ ಕೊರೋನಾ ವೈರಸ್ ಹರಡುತ್ತದೆ ಎಂಬುದು ಅಪ್ಪಟ ಸುಳ್ಳು ಮಾಹಿತಿ. ಕೋಳಿಗಳಿಂದ ಯಾವುದೇ ರೀತಿಯಲ್ಲೂ ಕೊರೋನಾ ವೈರಸ್ ಹರಡುವುದಿಲ್ಲ ಎನ್ನುತ್ತಾರೆ ವೈದ್ಯರು. ಯಾವುದೇ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಮುಖ್ಯ. ಹಸಿ ಮಾಂಸ ಸೇವನೆ ಸರಿಯಲ್ಲ. ಕೋಳಿ ಮಾಂಸವನ್ನು ಕೂಡ ಚೆನ್ನಾಗಿ ಬೇಯಿಸಿ ತಿನ್ನಬೇಕು. ಇನ್ನು ದಕ್ಷಿಣ ಕನ್ನಡದಲ್ಲಿ ಎಲ್ಲಿಯೂ ಹಕ್ಕಿ ಜ್ವರ ಪತ್ತೆಯಾಗಿಲ್ಲ. ಒಟ್ಟಾರೆಯಾಗಿ ಏಕಾಏಕಿ ಜನರು ಕೋಳಿ ತಿನ್ನುವುದರಿಂದ ದೂರ ನಿಂತಿರುವುದು ಕೋಳಿ ಸಾಕಾಣೆದಾರರಿಗೆ ತುಂಬಲಾರದ ನಷ್ಟ ತಂದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಕೋಳಿಗಳು ಉಚಿತವಾಗಿ ಕೊಟ್ಟರೂ ಜನ ಬೇಡ ಎನ್ನುತ್ತಿರುವಾಗ ಅನಿವಾರ‍್ಯವಾಗಿ ಕೋಳಿಗಳನ್ನು ಸಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಫಾರಂ ಮಾಲಕರ ಅಭಿಪ್ರಾಯವಾಗಿದೆ. ಒಟ್ಟಾರೆಯಾಗಿ ಜನರಲ್ಲಿ ಉಂಟಾಗಿರುವ ಭೀತಿ ಕೋಳಿ ಉದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟದ್ದು ಮಾತ್ರ ಸತ್ಯ.

 ಕೊರೋನಾ ವೈರಸ್, ಹಕ್ಕಿಜ್ವರದ ಭೀತಿಯಿಂದ ತತ್ತರಿಸಿದ ಕೋಳಿ ಸಾಕಾಣೆದಾರರು
ಕೋಳಿಗೂ ಕೊರೋನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ. ಕೋಳಿಗಳಿಂದ ಕೊರೋನಾ ಹರಡುವುದಿಲ್ಲ. ಜನರು ಭಯಪಡುವ ಅಗತ್ಯವಿಲ್ಲ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಕೇರಳದ ತ್ರಿಶೂರ್ ಭಾಗದಲ್ಲಿ ಕೋಳಿ ಜ್ವರ ಇರುವ ಬಗ್ಗೆ ಪತ್ತೆಯಾಗಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಕೋಳಿಜ್ವರ ಪತ್ತೆಯಾಗಿಲ್ಲ-ಡಾ.ರಾಮಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ

ಕೋಳಿಗಳಿಂದ ಯಾವುದೇ ಕೊರೋನಾ ವೈರಸ್ ಹರಡುವುದಿಲ್ಲ. ಕೋಳಿಗಳಿಗೆ ಬರುವ ಹಕ್ಕಿ ಜ್ವರ ಕೂಡ ದಕ್ಷಿಣ ಕನ್ನಡದಲ್ಲಿ ಕಂಡು ಬಂದಿಲ್ಲ. ಜನರಲ್ಲಿ ಮೂಡಿರುವ ಅಪನಂಬಿಕೆ, ಅಪಪ್ರಚಾರದಿಂದಾಗಿ ಕೋಳಿಗಳನ್ನು ಸಾಯಿಸುತ್ತಿದ್ದಾರೆ-ಡಾ.ಪ್ರಕಾಶ್ ಎಂ.ಪಿ., ಮುಖ್ಯ ಪಶು ವೈದ್ಯಾಧಿಕಾರಿ ಪಾಣಾಜೆ

ಕೋಳಿಗಳಿಂದ ಯಾವುದೇ ರೀತಿಯಲ್ಲೂ ಕೊರೋನಾ ವೈರಸ್ ಹರಡುವುದಿಲ್ಲ. ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಹಸಿ ಮಾಂಸ ತಿನ್ನುವುದು ಸರಿಯಲ್ಲ. ಯಾವುದೇ ಅಪಪ್ರಚಾರಕ್ಕೆ ಬಲಿಯಾಗುವ ಮುಂಚೆ ಚೆನ್ನಾಗಿ ತಿಳಿದುಕೊಳ್ಳುವುದು ಮುಖ್ಯ-ಡಾ.ಅಶೋಕ್ ಕುಮಾರ್ ರೈ, ತಾಲೂಕು ವೈದ್ಯಾಧಿಕಾರಿ ಪುತ್ತೂರು

ಕೋಳಿಗಳಿಂದ ಯಾವುದೇ ವೈರಸ್ ಹರಡದಿದ್ದರೂ ಜನರು ಕೋಳಿಗಳನ್ನು ಕೊಳ್ಳುತ್ತಿಲ್ಲ. ಒಂದು ಕೋಳಿಗೆ ದಿನವೊಂದಕ್ಕೆ 5೦ ರೂಪಾಯಿಯ ಆಹಾರ ಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಳಿ ಸಾಕಿದರೂ ಅದು ಮಾರಾಟವಾಗದಿದ್ದರೆ ಏನು ಮಾಡಲು ಸಾಧ್ಯವಿದೆ. ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ-ನಿತಿನ್ ರೈ ಕೊಲ್ಲಾಜೆ, ಕೋಳಿ ಸಾಕಾಣೆದಾರರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.