ಕೊರೊನಾ: ಅನಗತ್ಯ ಭೀತಿ ಬೇಡ, ಜಾಗ್ರತೆಯಿಂದ ವರ್ತಿಸಿ, ಸ್ವಚ್ಛ ಜೀವನವನ್ನು ನಡೆಸಿ

Puttur_Advt_NewsUnder_1
Puttur_Advt_NewsUnder_1

ಡಾ. ರಾಮಮೋಹನ ಪುತ್ತೂರು, ಇಯನ್‌ಟಿ ವೈದ್ಯರು


ವೈರಸ್ ಎಂದರೆ ಜೀವಕೋಶಗಳ ಒಳಗೆ ಮಾತ್ರ ದ್ವಿಗುಣಗೊಳ್ಳಬಹುದಂತಹ ಸೂಕ್ಷ್ಮಕಣಗಳು. ಸಾಮಾನ್ಯ ಶೀತದಿಂದ ಶುರುವಾಗಿ ಮಾರಣಾಂತಿಕ ರೋಗಗಳನ್ನು ಕೂಡ ಈ ವೈರಸ್‌ಗಳು ಪ್ರಾಣಿಗಳಲ್ಲಿ, ಮನುಷ್ಯರಲ್ಲಿ ಉಂಟುಮಾಡಬಲ್ಲವು. ಪ್ರಪಂಚದ ಎಲ್ಲೆಡೆ ಇರುವಂತಹ ಸಾವಿರಾರು ಪ್ರಭೇದಗಳ ಮಿಲಿಯಾಂತರ ವೈರಸ್‌ಗಳಲ್ಲಿ ಈ ಕೊರೊನಾ ವೈರಸ್ ಕೂಡ ಒಂದು.

ಈ ಜನವರಿಯಲ್ಲಿ ಚೀನಾದ ವುಹಾನ್ ನಗರದಲ್ಲಿ ಹೊಸ ಮಾದರಿಯ ವೈರಸ್‌ಗಳು ಮನುಷ್ಯನಿಗೆ ರೋಗವನ್ನು ಹರಡಿದಾಗ ಸಿಕ್ಕಿ ಬಿದ್ದದ್ದೇ ಈ ಕೊರೊನಾ ವೈರಸ್‌ನ ಹೊಸ ಪ್ರಭೇದ ಇದಕ್ಕೆ ನೋವೆಲ್ ಕೊರೊನಾ ವೈರಸ್ (2019-ncov) ಎಂದು ಹೆಸರಿಡಲಾಗಿದೆ. ಪ್ರಾಣಿಗಳಿಂದ ಮನುಷ್ಯನಿಗೆ, ನಂತರ ಈಗ ಮನುಷ್ಯನಿಂದ ಮನುಷ್ಯನಿಗೆ ಇದು ವೇಗವಾಗಿ ಹರಡುತ್ತಾ ಇದೆ. ಪ್ರಪಂಚದ 125 ದೇಶಗಳಲ್ಲಿ ಈಗ ಕಳೆದ 2 ತಿಂಗಳುಗಳಲ್ಲಿ ಲಕ್ಷಕ್ಕಿಂತಲೂ ಅಧಿಕ ಜನರನ್ನು ಬಾಧಿಸಿದೆ. ಹತ್ತಿರ, ಹತ್ತಿರ 5೦೦೦ ಜನರನ್ನು ಬಲಿಯಾಗಿಸಿದೆ.

ಆದರೆ ಭಯದ ಅಗತ್ಯವಿಲ್ಲ ಏಕೆಂದರೆ ಈ ವೈರಸ್‌ನ್ನು ಬಹು ಸುಲಭವಾಗಿ ನಾಶ ಮಾಡಬಹುದಾಗಿದೆ ಯಾವುದೇ ಕ್ರಿಮಿನಾಶಕದಿಂದಲೂ ಸರಳ ಸೋಪ್‌ನಿಂದಲೂ, ನಾಶಪಡಿಸಲು ಸಾಧ್ಯ ಈ ವೈರಸ್‌ನ್ನು. ರೋಗಪೀಡಿತರಲ್ಲಿ 95% ಮನುಷ್ಯರೂ ಗುಣಮುಖರಾಗಿದ್ದಾರೆ. 2% ಮಾತ್ರ ಸಾವಿಗೀಡಗಿದ್ದಾರೆ.

ಕಾಳಜಿ ಏನೆಂದರೆ, ದೇಶದಿಂದ ದೇಶಕ್ಕೆ ಅತಿ ಶೀಘ್ರವಾಗಿ ಈ ವೈರಸ್ ಹರಡುತ್ತಾ ಇದೆ. ಚೀನಾ, ಇಟಲಿ, ದೇಶಗಳನ್ನು ಅಕ್ಷರಶಃ ಮಲಗಿಸಿದೆ. ವೈರಸ್ ಪೀಡಿತ ವ್ಯಕ್ತಿಯು ಉಸಿರಾಡುವ ಗಾಳಿಯಲ್ಲಿ, ಕೆಮ್ಮಿನ ಕಣಗಳಲ್ಲಿ ಈ ವೈರಸ್ ಇರುತ್ತದೆ. ಆದ ಕಾರಣ ಹರಡುವುದು ಅತಿ ಸುಲಭ ಜನನಿಭಿಡ ಪ್ರದೇಶಗಳಲ್ಲಿ, ಜನಸಂಖ್ಯೆ ತುಂಬಾ ಇರುವ ದೇಶಗಳಲ್ಲಿ ಹರಡತೊಡಗಿದರೆ, ನಿಯಂತ್ರಣ ತುಂಬಾ ಕಷ್ಟ. ಚೀನಾದಲ್ಲಿ ಆದದ್ದು ಇದುವೇ ನಮ್ಮ ದೇಶದಲ್ಲಿ ಅಲ್ಲಿ ಇಲ್ಲಿ ಕೊರೊನಾ ಪೀಡಿತರು ಕಾಣುತ್ತಿದ್ದಾರೆ. ವಿದೇಶಗಳಿಂದ ಬಂದವರ ಮೂಲಕ ಅದು ಇಲ್ಲಿಗೆ ಕಾಲಿಟ್ಟಿದೆ. ಅದು ನಮ್ಮಲ್ಲಿ ಹರಡದಂತೆ ನಾವು ಅತ್ಯಂತ ಜಾಗರೂಕತೆ ವಹಿಸುವುದು ಈಗ ಅತೀವ ಅವಶ್ಯ. ಕಣ್ಣೆದುರೇ ಚೀನಾದ ಉದಾಹರಣೆ ಇರುವಾಗ ನಾವು ಈಗ ಜಾಗರೂಕರಾಗದಿದ್ದರೆ ಅದು ಮೂರ್ಖತನವಾದೀತು. ದಿನದಿನವೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಜನರು ಗುಂಪುಗೂಡದಂತೆ ಸರಕಾರಗಳು ಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಅತ್ಯಂತ ಸೂಕ್ತ.

ಕೊರೊನಾ ಪೀಡಿತರಲ್ಲಿ ಇರುವ ಲಕ್ಷಣಗಳು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ನಿಧಾನವಾಗಿ ಶ್ವಾಸಕೋಶಗಳು ಹಾಳಾಗಿ ನ್ಯೂಮೋನಿಯ ಬರಬಲ್ಲದು ವೈರಸ್ ದೇಹಕ್ಕೆ ಪ್ರವೇಶಿಸಿ 2 ರಿಂದ 14 ದಿನಗಳಲ್ಲಿ ಲಕ್ಷಣಗಳು ಕಾಣಿಸತೊಡಗುತ್ತದೆ.

ಜಾಗ್ರತೆ ಹೇಗೆ?:

ಕೈಗಳನ್ನು ಸ್ವಚ್ಚವಾಗಿಸಿ ಆಗಾಗ ಸೋಪ್‌ನಿಂದ, ನೀರಿನಿಂದ ಕೈ ತೊಳೆದರೆ ಸಾಕು .ಆಗಾಗ ಮುಖವನ್ನು(ಕಣ್ಣು, ಕಿವಿ, ಮೂಗುಗಳನ್ನು) ಸ್ಪರ್ಶ ಮಾಡಬೇಡಿ. ಕಫವನ್ನು ಎಂಜಲನ್ನು ಅಲ್ಲಿ ಇಲ್ಲಿ ಉಗುಳಬೇಡಿ ತೆರೆದ ಬಾಯಿಯಿಂದ ಕೆಮ್ಮುವುದು ಸಾರ್ವಜನಿಕ ಸ್ಥಳಗಳಲ್ಲಿ ಸೀನುವುದು ಮಾಡಬೇಡಿ. ಕೆಮ್ಮು, ಸೀನು ಬಂದಾಗ ಮುಖವನ್ನು ಕರವಸ್ತ್ರದಿಂದ ಮರೆಮಾಡಿ ಇನ್ನೊಬ್ಬರಿಗೆ ಕಫದ ಕಣಗಳು ಹರಡದಂತೆ ಜಾಗ್ರತೆ ವಹಿಸಿ.

ಜನನಿಭಿಡ ಪ್ರದೇಶಗಳಿಗೆ ಹೋಗದೇ ಇರಿ ಯಾರಾದರೂ ಕೆಮ್ಮುತ್ತಾ, ಸೀನುತ್ತಾ ಇದ್ದರೆ ಅವರಿಂದ ಅತ್ಯಂತ ದೂರವಿರುವುದೇ ಸರಿ. ರೋಗವಿರುವ ವ್ಯಕ್ತಿಯ ಕೆಮ್ಮಿನ ಕಣಗಳು ಉಳಿದಂತಹ ವಸ್ತುಗಳ ಮೇಲೆ ಇರುವ ವೈರಸ್ ಕೂಡ ರೋಗವನ್ನು ಹರಡಬಲ್ಲದು. ಅಂಗಡಿ ಮುಂಗಟ್ಟುಗಳಲ್ಲಿ, ಸಾರ್ವಜನಿಕರು ಭೇಟಿ ನೀಡುವಲ್ಲಿ ಮೇಜುಗಳನ್ನು, ಕುರ್ಚಿಗಳನ್ನು ಆಗಾಗ ಸ್ವಚ್ಛ ಮಾಡಿ. ಆದ್ದರಿಂದ ಮನೆಗೆ ತಲುಪಿದ ಕೂಡಲೇ ಸ್ವಚ್ಛವಾಗಿ ಕೈ, ಕಾಲು ಮುಖಗಳನ್ನು ಸೋಪ್ ನೀರಿನಿಂದ ತೊಳೆಯಿರಿ, ವಸ್ತ್ರಗಳನ್ನು ಸ್ವಚ್ಛವಾಗಿ ತೊಳೆಯಿರಿ.

ವಿದೇಶಗಳಿಂದ ಬಂದ ವ್ಯಕ್ತಿಗಳು ತಮಗೆ ಶೀತ,ಕೆಮ್ಮು ಇದ್ದರೆ ತಾವೂ ಜಾಗ್ರತರಾಗಿರುವುದೇ ಸರಿ ನಮ್ಮ ಜನತೆಯಲ್ಲಿ ರೋಗ ಹರಡದಂತೆ ಅವರು ಜಾಗ್ರತೆ ವಹಿಸಬೇಕು. ಕೆಮ್ಮು, ಶೀತ ಇರುವ ವ್ಯಕ್ತಿಗಳು ಇನ್ನೂಬ್ಬರಿಗೆ ಅದು ಹರಡದಂತೆ ಮಾಸ್ಕ್ ಧರಿಸಿ ಆನಂತರ ಮಾಸ್ಕ್‌ಗಳನ್ನು ನಾಶಪಡಿಸಬೇಕು.

ಈ ವೈರಸ್‌ಗೆ ಸರಿಯಾದ ಔಷಧಿ ಇನ್ನೂ ಸಿಕ್ಕಿಲ್ಲ ವೈರಸ್ ಹರಡದಂತೆ ಈಗ ಜಾಗ್ರತೆ ಮಾಡಿದಲ್ಲಿ ಶ್ರೇಯಸ್ಸು. ಸ್ವಲ್ಪ ಕಷ್ಟವಾದರೂ ವೈರಸ್ ಹರಡದಂತೆ (ನಮ್ಮ ಕರ್ನಾಟಕವೂ ಸೇರಿದಂತೆ) ಕೆಲವು ರಾಜ್ಯಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿರುವುದು ಶ್ಲಾಘನೀಯ. ಜನರು ಅನಗತ್ಯ ಭೀತಿಗೆ ಒಳಪಡದೆ ದೇಶದಲ್ಲಿ ವೈರಸ್ ಹರಡದಂತೆ, ಶಾಂತಿಯಿಂದ ವರ್ತಿಸಬೇಕು ವೈರಸ್‌ನ ಬಗ್ಗೆ ಊಹಾಪೋಹಾಗಳನ್ನು ಹರಡದಿರಿ. ಜಾಲತಾಣದಲ್ಲಿ ಹರಡುತ್ತಿರುವ ಸುಳ್ಳುಸುದ್ದಿಗಳನ್ನು ನಂಬದಿರಿ.

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸರಕಾರಗಳು ನೀಡುವ ಮಾಹಿತಿಗಳನ್ನು, ಸಂದೇಶಗಳನ್ನು ಮಾತ್ರ ನಂಬಿ ಸೂಚಿಸಿರುವ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ದೇಶದ ಮೇಲೆ ಪ್ರೀತಿಯಿರಿಸಿ ಸ್ವಚ್ಛ ಜೀವನವನ್ನು ಅಭ್ಯಾಸ ಮಾಡಿ ಎಂದು ಕಳಕಳಿಯ ವಿನಂತಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.