ಪುತ್ತೂರು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮತ್ತೆ ವಿಘ್ನ! ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಿಗದಿಯಾಗಿದ್ದ ಮೀಸಲಾತಿಗೆ ಹೈಕೋರ್ಟ್ ಸ್ಟೇ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಚುನಾವಣೆ ನಡೆದು ಬರೋಬ್ಬರಿ ಒಂದೂವರೆ ವರ್ಷದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸಿದ್ಧವಾಗಿದ್ದ ಪುತ್ತೂರು ನಗರಸಭೆಗೆ ಮತ್ತೆ ವಿಘ್ನ ಎದುರಾಗಿದೆ.

2018ರ ಆಗಸ್ಟ್ 31ರಂದು ಚುನಾವಣೆ ನಡೆದು ಸೆಪ್ಟೆಂಬರ್ 3ರಂದು‌ ಫಲಿತಾಂಶ ಪ್ರಕಟ ಆದಾಗ ರಾಜ್ಯ ಸರಕಾರ ಪುತ್ತೂರು ನಗರಸಭೆಯ ಅಧ್ಯಕ್ಷ ಸ್ಥಾನವನ್ನು‌ ‘ಸಾಮಾನ್ಯ‌ ಮಹಿಳೆ’ ಮತ್ತು‌ ಉಪಾಧ್ಯಕ್ಷ ಸ್ಥಾನವನ್ನು‌ ‘ಪರಿಶಿಷ್ಟ ಜಾತಿ ಮಹಿಳೆ’ಗೆ ನಿಗದಿಗೊಳಿಸಿತ್ತು.‌ಈ ವೇಳೆ ರಾಜ್ಯದ ಹಲವೆಡೆಯ ಸ್ಥಳೀಯ ಸಂಸ್ಥೆಗಳ‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಹಲವರು ಕೋರ್ಟ್ ಮೆಟ್ಟಿಲೇರಿದ ಪರಿಣಾಮ‌ ಪುತ್ತೂರು ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಮೀಸಲಾತಿ‌ ನಿಗದಿಗೆ ತಡೆಯಾಜ್ಞೆ ನೀಡಲಾಗಿತ್ತು. ಇದರಿಂದಾಗಿ ಜನಪ್ರತಿನಿಧಿಗಳ‌ ಆಯ್ಕೆಯಾಗಿದ್ದರೂ ಅವರಿಗೆ ಆಡಳಿತ ಸಾಧ್ಯವಾಗಿರಲಿಲ್ಲ.‌ ಬಳಿಕ ಸರಕಾರ ಬದಲಾವಣೆಯಾಗಿ ಮೀಸಲಾತಿಯೂ ಬದಲಾಗಿ ಹೊಸ ಪಟ್ಟಿ ಪ್ರಕಟ ಆಗಿತ್ತು. ಪುತ್ತೂರು ನಗರಸಭೆಯ ಅಧ್ಯಕ್ಷ ಸ್ಥಾನ ‘ಸಾಮಾನ್ಯ ಮಹಿಳೆ’ಗೆ ಮತ್ತು ಉಪಾಧ್ಯಕ್ಷ ಸ್ಥಾನ‌ ‘ಪರಿಶಿಷ್ಟ ಪಂಗಡ’ಕ್ಕೆ‌ ನಿಗದಿಯಾಗಿತ್ತು.‌ ಪುತ್ತೂರು ನಗರಸಭೆಯ‌ 31 ಸ್ಥಾನಗಳ‌ ಪೈಕಿ‌ 25 ಸ್ಥಾನ‌ ಪಡೆದು ಬಹುಮತ ಹೊಂದಿರುವ ಬಿಜೆಪಿಯ ವಿದ್ಯಾ.ಆರ್ ಗೌರಿ, ಗೌರಿ ಬನ್ನೂರು, ಯಶೋದಾ ಹರೀಶ್, ದೀಕ್ಷಾ ಪೈ ಮತ್ತು ಶಶಿಕಲಾ ಸಿ.ಎಸ್.ರವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿ‌ ಬಂದಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶೀನಪ್ಪ ನಾಯ್ಕರವರು ಮಾತ್ರ ಅರ್ಹರಾಗಿದ್ದರು.‌ ಈ ಮಧ್ಯೆ ಪುತ್ತೂರು ನಗರಸಭೆಯ ಆಡಳಿತಾಧಿಕಾರಿಯಾಗಿರುವ ದ.ಕ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ರವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ‌ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆಗೆ ಮತ್ತೊಮ್ಮೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ತಡೆ ಬಿದ್ದಿದೆ. ಸಿಂಧನೂರು‌ ನಗರಸಭೆಯ ಅಧ್ಯಕ್ಷ ಸ್ಥಾನದ ಮೀಸಲು ಪ್ರಶ್ನಿಸಿ‌ ಆಲಂ‌ಭಾಷಾ ಎಂಬವರು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ಬಿಭಂತ್ರಿಯವರಿದ್ದ ಏಕ ಸದಸ್ಯ ಪೀಠವು ಸಿಂಧನೂರು ಸೇರಿದಂತೆ ಈಗಾಗಲೇ ನಿಗದಿಯಾಗಿರುವ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ‌ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಗೆ ತಡೆ‌ ನೀಡಿದೆ. ಇದರಿಂದಾಗಿ ಈಗಾಗಲೇ ‌ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸಿದ್ಧಗೊಂಡಿದ್ದ ರಾಜ್ಯದ 58 ನಗರಸಭೆ, 117 ಪುರಸಭೆ ಹಾಗೂ 93 ಪಟ್ಟಣ ಪಂಚಾಯತ್ ಗಳಲ್ಲಿ ಅಧಿಕಾರಿಗಳ ದರ್ಬಾರ್ ಮುಂದುವರಿಯುವಂತಾಗಿದೆ. ಇದರಲ್ಲಿ ಪುತ್ತೂರು ನಗರಸಭೆಯೂ ಸೇರಿದೆ. ಮುಂದಿನ ವಿಚಾರಣೆ ಹೈಕೋರ್ಟಲ್ಲಿ ಎಪ್ರಿಲ್ 1ರಂದು ನಡೆಯಲಿದ್ದು ಮುಂದಿನ‌ ಬೆಳವಣಿಗೆ ಕಾದು ನೋಡಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.