Breaking News

ಸಂಪ್ಯ ಠಾಣೆಯಲ್ಲಿ ಮನೆಗಣತಿಯ ಜಾಗೃತಿ ಸಭೆ

Puttur_Advt_NewsUnder_1
Puttur_Advt_NewsUnder_1
  • ಮನೆ ಗಣತಿಗೆ ಶಾಂತಿಯುತವಾಗಿ ಸಹಕರಿಸಿ, ತಿರಸ್ಕರಿಸಿದರೆ ಶಿಕ್ಷಾರ್ಹ ಅಪರಾಧ- ಎಸ್‌ಐ ಉದಯರವಿ

ಪುತ್ತೂರು:ಮನೆಯ ಸಂಖ್ಯೆ, ವಾಸದ ಮನೆಯ ಸ್ಥಿತಿಗತಿಗಳನ್ನು ತಿಳಿಯುವ ನಿಟ್ಟಿನಲ್ಲಿ ನಡೆಯುವ ಮನೆಗಣತಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಮನೆಗೆ ಬಂದು ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಮಾಹಿತಿ ನೀಡಬೇಕು. ಮನೆಗಣತಿಯನ್ನು ಯಾರೂ ವಿರೋಧಿಸುವಂತಿಲ್ಲ. ವಿರೋಧಿಸಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡಬಾರದು. ಗೊಂದಲಗಳು ಉಂಟಾದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸಂಪ್ಯ ಠಾಣಾ ಎಸ್.ಐ ಉದಯರವಿ ಎಂ.ವೈ ಹೇಳಿದರು.

ಎ.15ರಿಂದ ಮೇ.29ರ ತನಕ ನಡೆಯಲಿರುವ ಮನೆಗಣತಿಯ ಅಂಗವಾಗಿ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾ.18ರಂದು ಸಂಪ್ಯ ಠಾಣೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಜನಗತಿ 1948ರ ಕಾಯಿದೆಯಂತೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಗಣತಿ ಕಾರ್ಯವೂ ನಡೆಯುತ್ತಿದೆ. ಅದರಂತೆ ಈ ವರ್ಷ ಮನೆ ಗಣತಿ ಕಾರ್ಯ ನಡೆಯಲಿದ್ದು ಈ ಸಂದರ್ಭದಲ್ಲಿ ನಿಮ್ಮ ವಾಸದ ಮನೆಯ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಇದರ ಬಗ್ಗೆ ಯಾವುದೇ ಸಂದೇಹಗಳು ಬೇಡ. ಈ ಕಾಯಿದೆಯಂತೆ ಮನೆಗೆ ಬರುವ ಗಣತಿ ಅಧಿಕಾರಿಗಳಿಗೆ ಅವರು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡದ ತಿರಸ್ಕರಿಸುವಂತಿಲ್ಲ. ಅವರೊಂದಿಗೆ ಅನುಚಿತವಾಗಿ ವರ್ತಿಸುವುದು, ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ. ಅಂತಹ ಘಟನೆಗಳು ನಡೆದರೆ ಗಣತಿ ಕಾಯಿದೆಯ ಸೆಕ್ಷನ್ 11ರಡಿಯಲ್ಲಿ ಶಿಕ್ಷಾರ್ಹ ಅಪರಾಧಿಗಳಾಗುತ್ತಾರೆ. ಗಣತಿ ಅಧಿಕಾರಿಗಳು ಮನೆಯವರೊಂದಿಗೆ ಅನುಚಿತವಾಗಿ ವರ್ತಿಸಿದರೂ ಅವರ ವಿರುದ್ದವೂ ಕ್ರಮಕೈಗೊಳ್ಳಲು ಅವಕಾಶವಿದೆ. ಸರಕಾರ ನೇಮಿಸುವ ಜವಾಬ್ದಾರಿಯುತ ಅಧಿಕಾರಿಗಳು, ಮನೆ ಗಣತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಸ್ಥಳಿಯ ಶಾಲಾ ಶಿಕ್ಷಕರು. ಅಂಗನವಾಡಿ ಕಾರ್ಯಕರ್ತೆಯರು ಮನೆ ಗಣತಿ ಕಾರ್ಯದಲ್ಲಿ ಸಹಕರಿಸಲಿದ್ದು ಅವರು ನಿಮ್ಮ ಪರಿಸದವರೇ ಆಗಿದ್ದು ಆತಂಕ ಪಡಬೇಕಾಗಿಲ್ಲ. ಅವರೊಂದಿಗೆ ಶಾಂತಿಯುತವಾಗಿ ಸಹಕರಿಸುವಂತೆ ಅವರು ತಿಳಿಸಿದರು.

ಸಿಎಎ, ಎನ್‌ಆರ್‌ಸಿಗೂ ಸಂಬಂಧವಿಲ್ಲ:
ಮನೆ ಗಣತಿಯು ಜನಗಣತಿಯ ಒಂದು ಭಾಗ. ಇದು ಹೊಸತಲ್ಲ. 1891ರಿಂದ ನಡೆಯುತ್ತಾ ಬಂದಿರುತ್ತದೆ. ಇದು ಸಿಎಎ ಅಥವಾ ಎನ್‌ಆರ್‌ಸಿ ಆಗಿರಬಹುದೋ ಎಂಬ ಆತಂಕ ಬೇಡ. ಮನೆ ಗಣತಿಗೂ ಸಿಎಎ, ಎನ್‌ಆರ್‌ಸಿಗೂ ಸಂಬಂಧವಿಲ್ಲ. ಮನೆ ಗಣತಿಯಲ್ಲಿ ಮನೆಯ ಸ್ಥಿತಿಗತಿ, ಪರಿಸರ, ರೇಷನ್, ವಾಹನ, ಗ್ಯಾಸ್ ಇನ್ನಿತರ ಬಳಕೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಮನೆ ಗಣತಿಯ ಬಗ್ಗೆ ದೇವಸ್ಥಾನ, ಮಂದಿರ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಮಾಹಿತಿ ನೀಡಿ ಜನರಲ್ಲಿ ಅರಿವು ಮೂಡಿಸುವಂತೆ ಎಸ್.ಐಯವರು ವಿನಂತಿಸಿದರು.

ಕಾರ್ಯಕ್ರಮಗಳು ಸರಳ ರೀತಿಯಲ್ಲಿರಲಿ:
ಕೋರೋನಾ ವೈರಸ್‌ನಿಂದ ರಾಜ್ಯವೇ ಸ್ತಬ್ದವಾಗಿದೆ. ಈ ನಿಟ್ಟಿನಲ್ಲಿ ಸರಕಾರ ನೀಡಿರುವ ಸುತ್ತೋಲೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಜಾತ್ರೆ, ನೇಮೋತ್ಸವ, ಉರೂಸ್ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು, ಮದುವೆ, ಸಭೆ ಸಮಾರಂಭಗಳನ್ನು ಬೃಹತ್ ಮಟ್ಟದಲ್ಲಿ ನಡೆಸದೇ ಅದಷ್ಟು ಸರಳ ರೀತಿಯಲ್ಲಿ ಆಚರಿಸಬೇಕು. ಮಕ್ಕಳನ್ನು ಬೇಸಿಗೆ ಶಿಬಿರಗಳೊಳಗೆ ಕಳುಹಿಸದೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಅವರು ಹೇಳಿದರು.

ಸಂಚಾರಿ ನಿಯಮ ಪಾಲಿಸಿ:
ವಾಹನ ಚಲಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್, ಸೀಟ್ ಬೆಲ್ಟ್‌ಗಳನ್ನು ಧರಿಸುವುದು, ವಾಹನದ ದಾಖೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ಎನ್‌ಪಿಆರ್‌ಗೆ ನಮ್ಮ ಸಹಕಾರವಿಲ್ಲ;
ಮನೆ ಗಣತಿಗೆ ನಮ್ಮ ವಿರೋಧವಿಲ್ಲ. ಅದಕ್ಕೆ ನಮ್ಮ ಸಹಕಾರವಿದೆ. ಆದರೆ ಎನ್‌ಪಿಆರ್‌ಗೆ ನಾವು ಯಾವುದೇ ರೀತಿಯ ಸಹಕಾರ ನೀಡುವುದಿಲ್ಲ. ಸಿಎಎ, ಎನ್‌ಆರ್‌ಸಿಗೆ ಪೂರವಾದ ದಾಖಲೆಗಳು, ತಂದೆ ಹುಟ್ಟಿದ ದಿನಾಂಕಗಳು ಸೇರಿದಂತೆ ಇನ್ನಿತರ ಪ್ರಶ್ನೆಗಳಿಗೆ ನಾವು ಸಹಕರಿಸುವುದಿಲ್ಲ ಎಂದು ಎಸ್‌ಡಿಪಿಐ ಅಧ್ಯಕ್ಷ ಸಿದ್ದೀಕ್ ಹೇಳಿದರು.

ದಾಖಲೆಗಳು ಪಂಚಾಯತ್‌ನಲ್ಲಿದೆ:
ಒಂದು ಗ್ರಾಮದಲ್ಲಿರುವ ಮನೆ, ಅಲ್ಲಿ ವಾಸವಿರುವ ಜನಸಂಖ್ಯೆಗಳ ಕುರಿತಾದ ಮಾಹಿತಿಗಳು ಪಂಚಾಯತ್‌ನಲ್ಲಿದೆ. ಅಲ್ಲಿಂದ ಪಡೆದುಕೊಳ್ಳಬಹುದು ಎಂದು ಕೆದಂಬಾಡಿ ಗ್ರಾ.ಪಂ ಸದಸ್ಯ ಬೋಳೊಡಿ ಚಂದ್ರಹಾಸ ರೈ ತಿಳಿಸಿದರು.

ಮುಂಡೂರು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಲ್ನಾಡು ಗ್ರಾ.ಪಂ ಅಧ್ಯಕ್ಷ ವಿನಯ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ಬಡಗನ್ನೂರು ಗ್ರಾ.ಪಂ ಸದಸ್ಯ ಗುರುಪ್ರಸಾದ್ ರೈ, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ರಾಜೇಶ್ ರೈ ಪರ್ಪುಂಜ, ಪಿ.ಎಂ ಅಬ್ದುಲ್ ಖಾದರ್, ಇಬ್ರಾಹಿಂ ಮುಲಾರ್, ಇಸ್ಮಾಯಿಲ್, ಯೂಸುಫ್ ಗೌಸಿಯಾ, ಚೆನ್ನಪ್ಪ ಮರಿಕೆ, ಪ್ರಕಾಶ್ಚಂದ್ರ ರೈ, ಬಾಬು ಮರಿಕೆ, ನಿರಂಜನಕೆ., ಸದಾಶಿವ ರೈ, ಯೂಸುಫ್ ಹಾಜಿ ಕೈಕಾರ, ಸನತ್ ರೈ ಏಳ್ನಾಡು ಗುತ್ತು ಅದ್ರಾಮ ಹಾಜಿ, ಚಂದ್ರಶೇಖರ್ ಭಟ್ ಬಲ್ನಾಡು, ಸದಾಶಿವ ಭಂಡಾರಿ, ಪ್ರಾನ್ಸಿಸ್ ಡಿ.ಸೋಜ ಹಾಗೂ ಮುಂಡೂರು ಗ್ರಾಮಕರಣಿಕೆ ತುಳಸಿ ಸೇರಿದಂತೆ ಹಲವು ಮಂದಿ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.